ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಪಲ್‌ ಯಾಮ್‌ ಎಂಬ ಮೋಹಕ ಗೆಡ್ಡೆ

ರೋಗ ನಿರೋಧಕತೆ ಹೆಚ್ಚಿಸುವ ಕಂದಮೂಲ
Last Updated 4 ಮೇ 2020, 20:00 IST
ಅಕ್ಷರ ಗಾತ್ರ
ADVERTISEMENT
""
""
""

ಕೊರೊನಾ ವೈರಸ್ ಎಲ್ಲೆಡೆ ಭಯ ಹುಟ್ಟಿಸಿದೆ. ಮೂಲತಃ ಇದೊಂದು ಸಾಮಾನ್ಯ ಜ್ವರ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟೂ ಕೋವಿಡ್ ರೋಗಕ್ಕೆ ತುತ್ತಾಗುವುದು ತಪ್ಪುತ್ತದೆ. ಹಾಗಾಗಿ ಈಗ ಎಲ್ಲರ ಆಸಕ್ತಿ ನೈಸರ್ಗಿಕ ಆಹಾರದತ್ತ.

ಎರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮನೆಗೆ ಬಂದಿದ್ದರು. ಮಾತುಕತೆ, ಊಟದ ನಂತರ ಹೊರಡುವಾಗ ತಮ್ಮ ಬ್ಯಾಗ್‌‌ನಿಂದ ಗೆಡ್ಡೆಯೊಂದನ್ನು ಹೊರತೆಗೆದು‘ಇದು ಕಂದಮೂಲ. ಅರಕುವ್ಯಾಲಿಯ ಗಿರಿಜನರು ಕೊಟ್ಟಿದ್ದು. ನನ್ನ ನೆನಪಿಗೆ ಇರಲಿ’ ಎಂದು ಕೊಟ್ಟರು.

ಗೆಡ್ಡೆಯ ಪೂರ್ವಾಪರ ಗೊತ್ತಿಲ್ಲದ ನಾವು, ಅದನ್ನು ಮನೆಯ ಪಕ್ಕದ ಜಾಗದಲ್ಲಿ ನೆಟ್ಟು ಮರೆತು ಬಿಟ್ಟಿದ್ದೆವು. ಮುಂಗಾರು ಮಳೆ ಶುರುವಾದದ್ದೇ ತಡ, ಈ ಗೆಡ್ಡೆ ಅದ್ಯಾವ ಮಾಯದಲ್ಲೋ ಬಳ್ಳಿಯಾಗಿ ಹಬ್ಬಿ ಮನೆಯ ತಾರಸಿ ಮುಟ್ಟಿತ್ತು. ಗೌರಿ ಹಬ್ಬದ ಹೊತ್ತಿಗೆ ಇಡೀ ಮನೆಗೆ ಬಳ್ಳಿಯ ಅಲಂಕಾರ!.

ದೀಪಾವಳಿ ಹೊತ್ತಿಗೆ ಹೂವಿನ ಗೊಂಚಲುಗಳು ಇಳಿ ಬಿದ್ದವು. ಆಗಾಗ ಗಾಳಿಯಲ್ಲಿ ತೇಲಿಬರುತ್ತಿದ್ದ ಆಹ್ಲಾದಕರ ಘಮಲು ಇಡೀ ಮನೆಯನ್ನು ತುಂಬುತ್ತಿತ್ತು. ಇದರ ಅಂದಕ್ಕೆ ಮರುಳಾಗಿ ಒಂದಷ್ಟು ಪೋಟೊತೆಗೆದು ವಾಟ್ಸ್‌ಆ್ಯಪ್‌ನ ಗುಂಪುಗಳಲ್ಲಿ ಪೋಸ್ಟ್‌ ಮಾಡಿದೆ. ‘ಓ! ಇದು ಪರ್ಪಲ್ ಯಾಮ್. ಕನ್ನಡದಲ್ಲಿ ನೀಲಿ ಕಾಚಲ್ ಎನ್ನುತ್ತಾರೆ’ ಹೆಗ್ಗಡದೇವನ ಕೋಟೆ ಕಾಡಿನ ಹಳ್ಳಿಗರ ಜೊತೆ ಕೆಲಸ ಮಾಡುವ ಗೆಳೆಯ ಚನ್ನರಾಜು ಪ್ರತಿಕ್ರಿಯಿಸಿದ್ದರು. ಅನಾಮಿಕ ಗೆಡ್ಡೆಗೊಂದು ಹೆಸರು ಸಿಕ್ಕಿತ್ತು.

ಸಂಕ್ರಾಂತಿ ಬರುವುದನ್ನೇ ಕಾದಿದ್ದು ಗೆಡ್ಡೆ ಕಿತ್ತೆವು. ಮಡದಿ ಸೀಮಾ ಇದರ ಗೆಡ್ಡೆಗಳಿಂದ ಹೊಸ ಪಾಕಗಳನ್ನು ತಯಾರಿಸಿ, ಆಲೂಗೆಡ್ಡೆಗೆ ಪರ್ಯಾಯವಾಗಿ ಬಳಸಬಹುದು ಎಂಬುದನ್ನು ಸಿದ್ಧ ಮಾಡಿ ತೋರಿಸಿದರು.

ಎಲ್ಲೆಲ್ಲಿದೆ ಈ ಗೆಡ್ಡೆ?

ಪರ್ಪಲ್ ಯಾಮ್, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಕರ್ನಾಟಕದ ಸೋಲಿಗ, ಇರುಳಿಗ ಮತ್ತು ಜೇನುಕುರುಬರು ಇದನ್ನು ಆಹಾರಕ್ಕಾಗಿ ಬೆಳೆಸುತ್ತಾರೆ. ಡಯೊಸ್ಕೋರಿಯಾ ಅಲಾಟ ಇದರ ವೈಜ್ಞಾನಿಕ ಹೆಸರು. ‘ಯಾಮ್’ ಎಂದು ಕರೆಸಿಕೊಳ್ಳುವ ಡಯೊಸ್ಕೋರಿಯಾ ಕುಟುಂಬದಲ್ಲಿ ಅನೇಕ ಬೇರು ಗೆಡ್ಡೆ ತಳಿಗಳಿವೆ.

ಹಸ್ತದಷ್ಟು ಅಗಲವಾದ ಎಲೆಗಳ ಇದರ ಬಳ್ಳಿ ನೋಡುವುದೇ ಒಂದು ಸೊಗಸು. ಅಲಂಕಾರಿಕ ಸಸ್ಯವಾಗಿ ನಗರಗಳ ಮನೆಯಂಗಳದಲ್ಲೂ ಬೆಳೆಸಬಹುದು. ಮಳೆಗಾಲದ ಆರಂಭದಲ್ಲಿ ಸಣ್ಣ ಗುಂಡಿ ಮಾಡಿ ಸಾಕಷ್ಟು ಗೊಬ್ಬರ ಕೊಟ್ಟು ನೆಟ್ಟರೆ ಡಿಸೆಂಬರ್‌ಗೆ ಕೊಯ್ಲಿಗೆ ಸಿದ್ದ. ಸರಿಯಾದ ಆರೈಕೆ ಸಿಕ್ಕರೆ ಬುಟ್ಟಿ ತುಂಬುವಷ್ಟು ಬೇರು ಗೆಡ್ಡೆಗಳು ಸಿಗುತ್ತವೆ.

ಬೆಳೆಸುವ ಬಗೆ ಹೀಗೆ

ಗೆಡ್ಡೆಗಳನ್ನು ಸಗಣಿ ಬಗ್ಗಡದಲ್ಲಿ ನೆನೆಸಿ ಒಣಗಿಸಿ ಮುಂದಿನ ಬಿತ್ತನೆಗೆ ಎತ್ತಿಡಬೇಕು. ಮುಂಗಾರಿನ ಮೊದಲ ಮಳೆಗೆ ಮೊಳಕೆ ಕಾಣಿಸಿಕೊಳ್ಳುತ್ತವೆ. ಸಗಣಿ ಬಗ್ಗಡಕ್ಕೆ ಬೂದಿ ಸೇರಿಸಿದ ದ್ರಾವಣದಲ್ಲಿ ಮೊಳಕೆ ಬಂದ ಗೆಡ್ಡೆಗಳನ್ನು ನೆನೆಸಿ, ನೆರಳಲ್ಲಿ ಒಣಗಿಸಿ. ಸಣ್ಣ ಗುಂಡಿ ತೆಗೆದು, ರಾಗಿ ಉಬ್ಬಲ ಅಥಾವ ಭತ್ತದ ಹೊಟ್ಟು ತಳಕ್ಕೆ ಹಾಕಿ, ಅದರ ಮೇಲೆ ಗೆಡ್ಡೆ ಇಟ್ಟು ಮಣ್ಣು ಮುಚ್ಚಿ. ನೆಟ್ಟ ಒಂದೆರೆಡು ದಿನಗಳಲ್ಲೇ ಬಳ್ಳಿ ಹರಿಯಲಾರಂಭಿಸುತ್ತದೆ.

ಕಂದು ಬಣ್ಣದ ಸಿಪ್ಪೆಯ ಗೆಡ್ಡೆಗಳನ್ನು ಕತ್ತರಿಸಿದರೆ ನೇರಳೆ ಬಣ್ಣದ ತಿರುಳು ಕಾಣುತ್ತದೆ. ಸಿಪ್ಪೆ ಸುಲಿದು, ತಿರುಳಿನ ಭಾಗವನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ ಅಡುಗೆಗೆ ಬಳಸುತ್ತಾರೆ. ಬೇಯಿಸಿದ ಯಾಮ್, ಆಲೂಗೆಡ್ಡೆಯಷ್ಟೇ ಮೃದು. ಪರ್ಪಲ್ ಯಾಮ್‌ನಿಂ‌ದ ಪಲ್ಯ, ಸಾಂಬಾರ್, ಬಿರಿಯಾನಿ, ಸಿಹಿ ತಿನಿಸು ಮಾಡಬಹುದು. ಎಣ್ಣೆಯಲ್ಲಿ ಕರಿದ ಇದರ ಕಬಾಬ್ ಬಲು ರುಚಿಕರ.

ಪೋಷಕಾಂಶಗಳ ಆಗರ

ಇದರ ಪರ್ಪಲ್ ಪುಡಿಯನ್ನು ಅನ್ನ, ಕೇಕ್, ಕ್ಯಾಂಡಿ, ಜಾಮ್‌ಗಳಿಗೆ ನೈಸರ್ಗಿಕ ಬಣ್ಣ ಕೊಡಲು ಬಳಸುತ್ತಾರೆ. ಇದರ ಐಸ್ ಕ್ರೀಂ ಬಹುರುಚಿ. ಪಿಷ್ಟ, ವಿಟಮಿನ್, ಖನಿಜಾಂಶ ಮತ್ತು ಆ್ಯಂಟಿಆಕ್ಸಿಡೆಂಟ್‌ನಿಂ‌ದ ಸಮೃದ್ದವಾದ ಪರ್ಪಲ್ ಯಾಮ್ ಆರೋಗ್ಯಕರ ನಿಸರ್ಗದತ್ತ ಆಹಾರ. ವಿಟಮಿನ್ ‘ಸಿ’ ಹೇರಳವಾಗಿರುವುದರಿಂದ ದೇಹದ ನಿರೋಧಕತೆ ವೃದ್ಧಿಸಲು ಸಹಕಾರಿ.

ನಾರಿನಿಂದ ಸಮೃದ್ದವಾದ ಈ ಗೆಡ್ಡೆಯ ನಿರಂತರ ಬಳಕೆಯಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಕ್ಯಾನ್ಸರ್ ಅನ್ನು ದೂರವಿಡಬಹುದು. ಜೀರ್ಣನಾಳವನ್ನು ಶುದ್ಧವಾಗಿಡುವ, ಅಸ್ತಮಾ ನಿವಾರಕ ಗುಣವಿದೆ.

ಪರ್ಪಲ್ ಯಾಮ್ ಹೆಚ್ಚಿನ ಆರೈಕೆ ಮತ್ತು ಸಾಗುವಳಿ ಖರ್ಚು ಬೇಡದ ಬೆಳೆ. ರೋಗ ಕೀಟಗಳ ಕೋಟಲೆಯಿಲ್ಲ. ಪೋಷಕಾಂಶಗಳಿಂದ ಸಮೃದ್ದವಾದ ಅಪ್ಪಟ ನಿಸರ್ಗದತ್ತ ಆಹಾರ. ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕೊರೊನಾ ಬೇಡವೆಂದರೆ ಪರ್ಪಲ್ ಯಾಮ್ ನೆಡಿ!.

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT