ಮಂಗಳವಾರ, ಮಾರ್ಚ್ 9, 2021
30 °C

ಮಾವಿಗೆ ಸೊಳ್ಳೆ ಪರದೆ!

ಅರಕಲಗೂಡು ವಿ ಮಧುಸೂದನ್ Updated:

ಅಕ್ಷರ ಗಾತ್ರ : | |

Deccan Herald

ಮಂಗನ ಕಾಟದಿಂದ ಬಾಳೆಗೊನೆ ರಕ್ಷಿಸಿಕೊಳ್ಳಲು ಉತ್ತರಕನ್ನಡದಲ್ಲಿ ಹಳೆಯ ಬಣ್ಣ ಬಣ್ಣದ ಬಟ್ಟೆಯನ್ನು ಗೊನೆಗೆ ಸುತ್ತುತ್ತಿದ್ದರು. ಕೋಳಿಗಳಿಂದ ಸೊಪ್ಪಿನ ಮಡಿ ರಕ್ಷಣೆಗೂ ಸೀರೆ ಕಟ್ಟುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ರೈತ, ಕೀಟಬಾಧೆಯಿಂದ ಮಾವಿನ ಫಸಲನ್ನು ರಕ್ಷಿಸಲು, ಮಾವಿನ ಮರಕ್ಕೇ ಸೊಳ್ಳೆಪರದೆ ಹೊದಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹರವಿಗೊಂಡನಹಳ್ಳಿಯ ಕೃಷಿಕ ಎಚ್. ಎಂ. ಯೋಗಾನಂದ ಮೂರ್ತಿ ಈ ಪ್ರಯೋಗಕ್ಕೆ ಮಾಡಿದ್ದಾರೆ. ಇವರ ತೋಟದಲ್ಲಿ  ನಾಲ್ಕೈದು ನೀಲಂ ತಳಿಯ ಮಾವಿನ ಮರಗಳಿವೆ. ಎಲ್ಲ ಮಾವಿನ ತಳಿಯಂತೆ, ಈ ವೆರೈಟಿ ಕೂಟ ಫೆಬ್ರುವರಿ – ಮಾರ್ಚ್‌ ತಿಂಗಳಲ್ಲೇ ಹೂವು ಬಿಡುತ್ತದೆ. ಆದರೆ, ಎಲ್ಲ ತಳಿಗಳ ಹಣ್ಣು ಬಿಡುವ ಸೀಸನ್ ಮುಗಿದು, ಎರಡು ತಿಂಗಳ ನಂತರ ಈ ಹಣ್ಣು ಬಿಡಲಾರಂಭಿಸುತ್ತದೆ.

ಪ್ರತಿ ವರ್ಷ ಈ ತಳಿಯ ಹಣ್ಣುಗಳಿಗೆ ರಸ ಹೀರುವ ಕೀಟಬಾಧೆ. ಇಲ್ಲವೇ ಪಕ್ಷಿ, ಅಳಿಲು, ಇಲಿಯಂತಹ ಪ್ರಾಣಿಗಳ ಹಾವಳಿ. ಇದರಿಂದ ಬೇಸತ್ತಿದ್ದ ಯೋಗಾನಂದ ಅವರು, ಹಣ್ಣನ್ನು ರಕ್ಷಿಸಿಕೊಳ್ಳಲು ಕೀಟನಾಶಕ, ಸೋಲಾರ್‍ಟ್ರ್ಯಾಪ್, ಎಲ್ಲೋಟ್ರ್ಯಾಪ್ ನಂತಹ ಸಮಗ್ರ ಕೀಟ ನಿಯಂತ್ರಣ ಕ್ರಮ ಅಳವಡಿಸಿದರು. ಆದರೂ ಕೀಟಬಾಧೆ ನಿಯಂತ್ರಣಕ್ಕೆ ಬರಲಿಲ್ಲ. ಹೀಗಾಗಿ ಕಟ್ಟ ಕಡೆಯದಾಗಿ ಮಾವಿನ ಮರಕ್ಕೆ ಸೊಳ್ಳೆಪರದೆ ಹೊದಿಸುವ ಪ್ರಯೋಗಕ್ಕೆ ಮುಂದಾದರು.

ಮರದ ಅಳತೆ, ಆಕಾರಕ್ಕೆ ಹೊಂದುವಂತೆ ಡಬಲ್ ಕಾಟ್, ತ್ರಿಪಲ್‍ಕಾಟ್ ಅಳತೆಯ ದೊಡ್ಡ ದೊಡ್ಡ ಸೊಳ್ಳೆಪರದೆಗಳನ್ನು ಖರೀದಿಸಿ ತಂದು ಗಿಡಕ್ಕೆ ಹೊದಿಸಿದದ್ದಾರೆ. ಪರಿಣಾಮವಾಗಿ ಈ ಪ್ರಯೋಗ ಮಾಡಿದ ಎಲ್ಲ ಮರಗಳ ಹಣ್ಣುಗಳು ಸುರಕ್ಷಿತವಾಗಿವೆ. ಸಕಾಲಿಕವಾಗಿ ಕೈಸೇರುತ್ತಿವೆ. ‘ಸೊಳ್ಳೆ ಪರದೆ ಪ್ರಯೋಗ ತುಸು ದುಬಾರಿಯೇ. ಆದರೆ, ಋತುಮಾನಕ್ಕೆ ಅನುಗುಣವಾಗಿ ದಾಳಿಂಬೆ, ಮಾವು, ಅಂಜೂರದಂತಹ ಹಣ್ಣುಗಳನ್ನು ರಕ್ಷಿಸಿಕೊಳ್ಳಲು, ಇದು ಸೂಕ್ತ ಮಾದರಿ ಎನ್ನಿಸುತ್ತಿದೆ. ಇದರಿಂದ ಹಣ್ಣುಗಳನ್ನು ಕೀಟದಿಂದ ರಕ್ಷಿಸುವುದು ಮಾತ್ರವಲ್ಲ, ದೂಳಿನಿಂದ ರಕ್ಷಿಸಬಹುದು. ಇದರಿಂದ ಹಣ್ಣು ಕೊಳೆಯುವುದನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ ಯೋಗಾನಂದಮೂರ್ತಿ.

ಕೆಲವು ಮರಗಳಿಗೆ ಸೊಳ್ಳೆಪರದೆ ಅಳತೆ ಸರಿ ಹೊಂದದಿದ್ದರೆ, ಅಂಥ ಮರಗಳ ರೆಂಬೆಗಳನ್ನು (ಪ್ರೂನಿಂಗ್ ಅಥವಾ ಚಾಟ್ನಿ) ಸವರುತ್ತಾರೆ. ಅಳಿಲುಗಳು ಸೊಳ್ಳೆಪರದೆ ಕತ್ತರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಜಮೀನಿನ ಗಡಿಯಲ್ಲೇ ಅವುಗಳಿಗೆ ಬೇಕಾದ ನೀರು ಮತ್ತು ಹಣ್ಣುಗಳನ್ನು ಸಿಗುವಂತೆ ಮಾಡಿದರೆ ಜಮೀನಿನೊಳಗಿನ ಹಣ್ಣಿನ ಗಿಡದ ಬಳಿ ಬರದಂತೆ ನಿಯಂತ್ರಿಸಬಹುದು. ಇದೊಂದು ಸವಾಲಿನ ಕೆಲಸವೇ. ಆದರೂ ಪ್ರಯತ್ನಿಸಬಹುದು ಎನ್ನುತ್ತಾರೆ ಅವರು. ಈ ಪ್ರಯೋಗದಿಂದ ಯಶಸ್ವಿಯಾಗಿರುವ ಅವರು ತೋಟದಲ್ಲಿರುವ ಅಂಜೂರ, ಸ್ಟಾರ್‌ಫ್ರೂಟ್‌, ಬೆಟ್ಟದ ನೆಲ್ಲಿ, ಕಿರುನೆಲ್ಲಿ, ದಾಳಿಂಬೆ, ಚೆರ್ರಿಫ್ರೂಟ್‌, ನೇರಳೆ, ಮಾವಿನ ವಿವಿಧ ತಳಿ, ದ್ರಾಕ್ಷಿ, ಸೇಬು ಹಣ್ಣಿನ ಗಿಡಗಳಿಗೂ ಈ ಪ್ರಯೋಗ ಅನುಸರಿಸುವ ಯೋಚನೆಯಲ್ಲಿದ್ದಾರೆ. ಯೋಗಾನಂದ ಮೂರ್ತಿಅವರ ಸಂಪರ್ಕಕ್ಕಾಗಿ: 9845381202

ಚಿತ್ರ: ಲೇಖಕರದ್ದು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು