ಮುಕ್ಕಾಲು ಎಕರೆ ಜಮೀನ್ದಾರ !

7

ಮುಕ್ಕಾಲು ಎಕರೆ ಜಮೀನ್ದಾರ !

Published:
Updated:

ಇರುವುದು ಅಲ್ಪ ಭೂಮಿ, ಸ್ವಲ್ಪ ನೀರು. ಇಷ್ಟರಲ್ಲೇ ವರ್ಷ ಪೂರ್ತಿ ತರಹೇವಾರಿ ತರಕಾರಿ ಬೆಳೆಯುತ್ತಿರುತ್ತಾರೆ. ಒಂದು ಬೆಳೆ ಕೈಕೊಟ್ಟರೆ, ಮತ್ತೊಂದು ಬೆಳೆ ಕೈ ಹಿಡಿಯುವಂತಹ ’ಬೆಳೆ ವಿನ್ಯಾಸ’ ಅಳವಡಿಸಿಕೊಂಡಿರುವ ಹೂವಿನಹಡಗಲಿ ತಾಲ್ಲೂಕಿನ ಮುದೇನೂರಿನ ನಂದಿಬೇವೂರುಮಠದ ವೀರಯ್ಯ ಗ್ರಾಮದ ಸುತ್ತಮುತ್ತ ’ಮುಕ್ಕಾಲು ಎಕರೆ ಜಮೀನ್ದಾರ’ ಎಂದೇ ಪರಿಚಿತ..!

ಏಳೆಂಟು ವರ್ಷಗಳಿಂದ ಮುಕ್ಕಾಲು ಎಕರೆ ಭೂಮಿಯಲ್ಲಿ ಬಹುವಿಧದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ ವೀರಯ್ಯ. ಕೇವಲ ಬೆಳೆಯುವುದಷ್ಟೇ ಅಲ್ಲ, ಸಂತೆಗಳಲ್ಲಿ ತಾವೇ ನಿಂತು ಮಾರಾಟ ಮಾಡುತ್ತಾರೆ. ಹೀಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದರಿಂದ, ಬಿಕರಿಯಾಗಿ ಬಂದ ಹಣವೆಲ್ಲವೂ ಇವರಿಗೆ ನೇರವಾಗಿ ತಲುಪುತ್ತದೆ. ತರಕಾರಿ ಬೇಸಾಯ ಆದಾಯ ನೀಡುವ ಕೃಷಿಯಾಗಿದೆ.

ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ರೈತರು ಈರುಳ್ಳಿ, ಟೊಮೆಟೊವನ್ನು ರಸ್ತೆಗೆ ಸುರಿದು ಪ್ರತಿಭಟಿಸುತ್ತಾರೆ. ಆದರೆ, ತರಕಾರಿ ಕೃಷಿಯನ್ನೇ ನೆಚ್ಚಿಕೊಂಡಿರುವ ವೀರಯ್ಯ ಎಂದೂ ಕೂಡ ಅಂಥ ನಷ್ಟ ಅನುಭವಿಸಿಲ್ಲ. ಅದಕ್ಕೆ ಅವರು ಅಳವಡಿಸಿಕೊಂಡಿರುವ ಬೆಳೆ ವಿನ್ಯಾಸವೇ ಮೂಲ ಕಾರಣ.

ವೀರಯ್ಯ, ಒಂದು ಬಾರಿಗೆ ಇರುವ ಹದಿಮೂರರಿಂದ ಹದಿನೈದು ವಿಧದ ತರಕಾರಿಗಳನ್ನು ಬೆಳೆಯುತ್ತಾರೆ. ಒಂದು ಬೆಳೆಯ ನಂತರ ಮತ್ತೊಂದು ಬೆಳೆ ಕೊಯ್ಲಿಗೆ ಬರುವಂತೆ ವಿನ್ಯಾಸ ಮಾಡಿರುತ್ತಾರೆ. ಹೀಗಾಗಿ ಒಂದು ತರಕಾರಿ ಕೈಕೊಟ್ಟರೂ, ಮತ್ತೊಂದು ತರಕಾರಿ ಅವರ ಕೈ ಹಿಡಿಯುತ್ತದೆ. ಅಷ್ಟೇ ಅಲ್ಲ, ಇಷ್ಟು ವಿಧದ ತರಕಾರಿಗಳನ್ನು ಬೆಳೆಸುತ್ತಿರುವುದರಿಂದ, ಇವರ ಜಮೀನಿನಲ್ಲಿ ವರ್ಷ ಪೂರ್ತಿ ತರಕಾರಿ ಬೆಳೆ ಇರುತ್ತದೆ. ಹಾಗೆಯೇ, ಕೆಲಸವೂ ಇರುತ್ತದೆ. ಸದ್ಯ ವೀರಯ್ಯ ಅವರ ಮುಕ್ಕಾಲು ಎಕರೆ ಜಮೀನಿನಲ್ಲಿ ಈರುಳ್ಳಿ, ಟೊಮೆಟೋ, ಮೆಣಸಿನಕಾಯಿ, ಪಡುವಲಕಾಯಿ, ಸೋರೆಕಾಯಿ, ಬದನೆ, ಜವಳಿ, ಬೆಂಡಿ, ಅವರೆ, ನುಗ್ಗೆ, ಲಿಂಬೆ ಸೇರಿ 15 ವಿಧದ ತರಕಾರಿ ಬೆಳೆಗಳಿವೆ. ಕೊತ್ತಂಬರಿ, ಕರಿಬೇವು, ಪಾಲಕ, ಹುಳಿಚಿಕ್ಕ, ಸಬ್ಬಗಸಗಿ ಸೊಪ್ಪು ನಳನಳಿಸುತ್ತಿದೆ.

ಗೊಬ್ಬರಕ್ಕಾಗಿ ಎರೆ ಹುಳು ತೊಟ್ಟಿ ಮಾಡಿಕೊಂಡಿದ್ದಾರೆ. ಆದರೂ, ಹೊರಗಿನಿಂದಲೂ ಬೀಜ, ಗೊಬ್ಬರ ಖರೀದಿಸುತ್ತಾರೆ. ಒಂದು ಕೊಳವೆಬಾವಿ ಇದೆ. ಆದರೆ, ಅದರಲ್ಲಿ ಒಂದೂವರೆ ಇಂಚು ನೀರು ಬರುತ್ತದೆ. ಅದೂ ಅನಿಶ್ಚಿತ. ಹೀಗಾಗಿ ಡ್ರಿಪ್‌ ಮೂಲಕ ನೀರು ಹನಿಸಿ ಕೃಷಿ ಮಾಡುತ್ತಾರೆ.


ಸಾಲುಗಳಲ್ಲಿ ಬೆಳೆದಿರುವ ಪಡುವಲಕಾಯಿ

ಈ ಬಾರಿ ಹೊಲದ ಒಂದು ಬದಿಯ ಐದು ಸಾಲುಗಳಲ್ಲಿ ಪಡುವಲ ಕಾಯಿ ಬೆಳೆದಿದ್ದಾರೆ. ಹಂದರಕ್ಕೆ ಹಬ್ಬಿರುವ ಬಳ್ಳಿಯಲ್ಲಿ ಮಾರುದ್ದದ ಪಡುವಲಕಾಯಿಗಳು ನೇತಾಡುತ್ತಿವೆ. ಪ್ರತಿ ಪಡುವಲಕಾಯಿ ₹ 8ರಿಂದ ₹10ಕ್ಕೆ ಮಾರಾಟ ಮಾಡುತ್ತಿದ್ದಾರೆ. ಬರೀ ಪಡುವಲಕಾಯಿಂದಲೇ ₹ 30 ಸಾವಿರ ಸಂಪಾದಿಸಿದ್ದಾರೆ. ಈ ಬೆಳೆ ಪೂರ್ಣಗೊಳ್ಳುವ ವೇಳೆಗೆ ₹70 ಸಾವಿರ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ. ‘ಪಡವಲಕ್ಕೆ ಹಾಕಿರುವ ಬಂಡವಾಳ ಐದಾರು ಸಾವಿರ ಮಾತ್ರ’ ಎನ್ನುತ್ತಾರೆ ವೀರಯ್ಯ.

ಶ್ರಮಜೀವಿ ವೀರಯ್ಯ ಅವರ ತರಕಾರಿ ಕೃಷಿಗೆ ಪತ್ನಿ ಭಾಗ್ಯಮ್ಮ ಹೆಗಲು ಕೊಟ್ಟು ದುಡಿಯುತ್ತಾರೆ. ಪತಿ ಪತ್ನಿಯರು ತರಕಾರಿ ಕೃಷಿ ಕೆಲಸವನ್ನು ಹಂಚಿಕೊಂಡು ಮಾಡುತ್ತಾರೆ. ಉಳುಮೆ, ಬೆಳೆ ನಾಟಿ ಇವರ ಕೆಲಸವಾದರೆ, ಬೆಳೆ ನಿರ್ವಹಣೆ, ನೀರು ಹರಿಸುವುದು, ತರಕಾರಿಗಳನ್ನು ಕೊಯ್ದು ಮಾರುಕಟ್ಟೆಗೆ ಸಿದ್ಧಪಡಿಸುವುದು ಭಾಗ್ಯಮ್ಯ ಅವರ ಕೆಲಸ. ಕೊಯ್ದ ತರಕಾರಿಗಳನ್ನು ವೀರಯ್ಯ ಟಿವಿಎಸ್‌ ಎಕ್ಸೆಲ್‌ ಮೇಲೆ ಹೇರಿಕೊಂಡು ಸಂತೆಗಳಿಗೆ ತೆರಳುತ್ತಾರೆ. ತಾಜಾ ತರಕಾರಿಗಳನ್ನು ಚೌಕಾಸಿ ದರಗಳಿಗೆ ನೀಡುವುದರಿಂದ ಹೂವಿನಹಡಗಲಿ, ಸೋಗಿ, ಇಟ್ಟಿಗಿ, ಹೊಳಗುಂದಿ ಸಂತೆಗಳಲ್ಲಿ ಇವರಿಗೆ ಕಾಯಂ ಗ್ರಾಹಕರಿದ್ದಾರೆ.  ‘ಕೂಲಿ ಮಾಡಿ ಜೀವಿಸುತ್ತಿದ್ದವರಿಗೆ ತರಕಾರಿ ಕೃಷಿ ಕೈಗೊಳ್ಳಲು ಅನುಕೂಲಗಳನ್ನ ಕಲ್ಪಿಸಿ, ದಾರಿ ತೋರಿಸಿದವರು ನಮ್ಮ ಗ್ರಾಮದ ಯುವ ಕೃಷಿಕ ಮಲ್ಲನಕೇರಿ ಹನುಮಂತಪ್ಪ’ ಎಂದು ವೀರಯ್ಯ ದಂಪತಿ ಸ್ಮರಿಸುತ್ತಾರೆ.

ತರಕಾರಿ ಕೃಷಿ ವೀರಯ್ಯ ಕುಟುಂಬಕ್ಕೆ ವರ್ಷಪೂರ್ತಿ ಆದಾಯ ನೀಡಿದೆ. ಇದರಿಂದ ಹಿಂದೆ ಸಂಕಷ್ಟದ ಸಮಯದಲ್ಲಿ ಮಾಡಿದ್ದ ಸಾಲಗಳನ್ನು ತೀರಿಸಿಕೊಂಡಿದ್ದಾರೆ. ಜತೆಗೆ, ಮನೆ ಕಟ್ಟಿಕೊಂಡಿದ್ದಾರೆ. ‘ಕಳೆದ ವರ್ಷ ಒಬ್ಬ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೇನೆ. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ. ಎಲ್ಲವೂ ಈ ಮುಕ್ಕಾಲು ಎಕರೆ ಭೂಮಿಯಿಂದಲೇ ಸಾಧ್ಯವಾಗಿದೆ’ ಎಂದು ವೀರಯ್ಯ ವಿಶ್ವಾಸದಿಂದ ನುಡಿಯುತ್ತಾರೆ. ಕಡಿಮೆ ಜಮೀನಿನಲ್ಲಿ ತರಕಾರಿ ಕೃಷಿ ಮಾಡುವ ಕುರಿತ ಮಾಹಿತಿಗಾಗಿ ಮುದೇನೂರಿನ ಎನ್‌.ಎಂ.ವೀರಯ್ಯ ಅವರನ್ನು (8722390284) ಸಂಪರ್ಕಿಸಬಹುದು.


ತರಹೇವಾರಿ ಸೊಪ್ಪಿನ ಮಡಿ

 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !