ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಎಲ್ಲವೂ ನೈಸರ್ಗಿಕ

Last Updated 17 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಇವರ ಬಳಿ ಇರುವುದು ಕೇವಲ 29 ಗುಂಟೆ ಜಾಗ. ಆದರೆ ಅದರಲ್ಲಿಯೇ ಎಕರೆಗಟ್ಟಲೆ ಜಮೀನನ್ನು ಮೀರಿಸುವಷ್ಟು ‘ನೈಸರ್ಗಿಕ’ ಫಸಲು ತುಂಬಿ ಹೋಗಿವೆ. ತೆಂಗು, ಅಡಿಕೆ, ಏಲಕ್ಕಿ, ಮೆಣಸು, ಮೂಸಂಬಿ, ಕಾಫಿ, ವೀಳ್ಯದೆಲೆ, ದಾಲ್ಚಿನ್ನಿ, ಅರಿಶಿಣ, ಚಕ್ಕೋತಾ, ಪನ್ನೀರು, ಹಲಸು, ಕಿತ್ತಳೆ... ಹೀಗೆ ಹತ್ತು ಹಲವಾರು ಬಗೆಯ ಬೆಳೆಗಳು ಅಲ್ಲಿವೆ.

ಇಂಥ ಒಂದು ವೈವಿಧ್ಯ ಬೆಳೆಗಳನ್ನು ನೋಡಬೇಕೆಂದರೆ ಮಂಡ್ಯದ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ರೈತ ಬಸವರಾಜು ಅವರ ತೋಟಕ್ಕೆ ಬರಬೇಕು. ನೈಸರ್ಗಿಕ ಕೃಷಿಕ ಸುಭಾಷ ಪಾಳೇಕಾರ್ ಅವರ ಕೃಷಿ ಪರಿಕಲ್ಪನೆಯನ್ನು ತಮ್ಮ ತೋಟಕ್ಕೆ ಅಳವಡಿಸಿಕೊಂಡು ಲಾಭದತ್ತ ಮುಖಮಾಡಿದ್ದಾರೆ ಬಸವರಾಜು. ಅಸಂಖ್ಯ ರೈತರ ಆತ್ಮಹತ್ಯೆಯಿಂದಾಗಿ, ಆತ್ಮಹತ್ಯೆ ನಗರಿ ಎಂದೇ ಕಪ್ಪುಚುಕ್ಕೆಗೆ ಒಳಗಾಗಿರುವ ಮಂಡ್ಯದ ರೈತರಿಗೆ ಇವರು ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಚೂರೇ ಚೂರು ರಾಸಾಯನಿಕವನ್ನೂ ಭೂಮಿಗೆ ಸೋಕಿಸದ ಬಸವರಾಜು ಅವರು ಮೇಲೆ ತಿಳಿಸಿರುವ ವೈವಿಧ್ಯ ಬೆಳೆಗಳನ್ನು ಬೆಳೆದಿದ್ದಾರೆ. ಆ ಪೈಕಿ ಹದಿನೈದು ಬಗೆಯ ಬೆಳೆಗಳು ಭರಪೂರ ಫಲ ನೀಡಿವೆ. ಈ ಬೆಳೆಗಳಿಗೆ ಪೂರಕವಾಗಿ ತೋಟದ ನಡುವೆ ಜೇನು ಸಾಕಣೆ ಕೂಡ ಮಾಡಿ ಅದರಲ್ಲಿಯೂ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.

‘ಮೊದಲು ಎಲ್ಲರಂತೆಯೇ ನಾನೂ ರಾಸಾಯನಿಕದ ಮೊರೆ ಹೋದವನೇ. ಸುಮಾರು ಹತ್ತು ವರ್ಷಗಳ ಹಿಂದೆ ಸೂತ್ತೂರಿನಲ್ಲಿ ರಾಜ್ಯ ರೈತ ಸಂಘ ಆಯೋಜಿಸಿದ್ದ ಸುಭಾಷ್ ಪಾಳೇಕಾರ್ ಅವರ ನೈಸರ್ಗಿಕ ಬೇಸಾಯದ ಕಾರ್ಯಗಾರ ಏರ್ಪಡಿಸಿತ್ತು. ಅದರಿಂದ ಪ್ರೇರಿತರಾಗಿ ನಾನು ಅಂದೇ ಒಂದು ದೇಶಿ ಹಸು ಖರೀದಿಸಿದೆ. ಆ ದಿನವೇ ರಾಸಾಯನಿಕ ಗೊಬ್ಬರಗಳಿಗೆ ವಿದಾಯ ಹೇಳಿದೆ. ಅಂದಿನಿಂದ ಶುರುವಾದ ನನ್ನ ನೈಸರ್ಗಿಕ ಕೃಷಿ ಕಾರ್ಯ ಇಂದು ಇಂಥ ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದೆ’ ಎಂದು ಹೇಳುತ್ತಾರೆ ಬಸವರಾಜು.

‘ಬಯಲು ಸೀಮೆ ಮಂಡ್ಯದ ನೆಲದಲ್ಲಿ ಒಂದೇ ಬೆಳೆ ನೆಚ್ಚಿಕೊಂಡು ಹತಾಶರಾಗುವುದು ಸರಿಯಲ್ಲ. ಮಿಶ್ರ ಬೆಳೆ ಬೇಸಾಯ ಪದ್ಧತಿಯಿಂದ ಒಂದಲ್ಲಾ ಒಂದು ಬೆಳೆಯಿಂದ ಲಾಭಗಳಿಸಬಹುದು. ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಕಿವಿಮಾತು ಹೇಳುತ್ತಾರೆ. ತಮ್ಮ ತೋಟದಲ್ಲಿ ದೊರೆಯುವ ತೆಂಗಿನ ಕಾಯಿಗಳನ್ನು ಪಾಂಡವಪುರ ಸಂತೆಯಲ್ಲಿ ಮಾರುತ್ತಾರೆ, ಅಡಿಕೆಯನ್ನು ಗೋಟು ಮಾಡಿ ಮಂಗಳೂರಿಗೆ ಹೋಗಿ ಮಾರಾಟ ಮಾಡುತ್ತಾರೆ. ಕಳೆದ ವರ್ಷದಿಂದ ಏಲಕ್ಕಿ ಬೆಳೆ ಬಂದು ಅದನ್ನು ಮೈಸೂರಿನ ಸಾವಯವ ಅಂಗಡಿಗೆ ಪ್ರತಿ ಕೆ.ಜಿಗೆ ₹1800 ರಂತೆ ಮಾರಾಟ ಮಾಡಿದ್ದಾರೆ. ಮೆಣಸು ಮತ್ತು ಇತರೇ ಹಣ್ಣುಗಳು ಸದ್ಯಕ್ಕೆ ಮನೆ ಬಳಕೆಗಾದರೆ ಇತರೆ ಕೃಷಿ ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರದೆ ನೇರ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಪಡೆದುಕೊಳ್ಳುತ್ತಿದ್ದಾರೆ.

ತಮ್ಮ ಜಮೀನಿನಲ್ಲೇ ಜೀವಾಮೃತ ತಯಾರಿಸುತ್ತಾರೆ. ಮನೆ ಮತ್ತು ಗದ್ದೆಗೆ ತಿರುಗಾಡಲು ಒಂಟೆತ್ತಿನ ಗಾಡಿ ಇಟ್ಟುಕೊಂಡಿದ್ದಾರೆ. ಅಲ್ಲದೆ ತಮ್ಮ ಜಮೀನು ಉಳುಮೆಗೆ ಬರೀ ಒಂಟಿ ಎತ್ತನ್ನೇ ಬಳಸುತ್ತಾರೆ, ತಮ್ಮ ತೋಟದ ಬಹುತೇಕ ಎಲ್ಲಾ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ,  ಹೆಚ್ಚಿನ ಕೆಲಸವಿದ್ದಾಗ ಮಾತ್ರ ಕೂಲಿ ಆಳುಗಳನ್ನು ಅವಲಂಬಿಸುತ್ತಾರೆ. ವಾರ್ಷಿಕವಾಗಿ ತೋಟದ ಖರ್ಚು ₹20 ಸಾವಿರ ಬರುತ್ತಿದ್ದರೆ, ಲಾಭ ಒಂದೂವರೆ ಲಕ್ಷ ಎಂದು ಲೆಕ್ಕಾಚಾರ ವಿವರಿಸುತ್ತಾರೆ ಬಸವರಾಜು.

ಕೀಟ ನಿಯಂತ್ರಣಕ್ಕೆ...
ಬೆಳೆಗಳಿಗೆ ತಗಲುವ ಕೀಟಗಳ ನಿಯಂತ್ರಣಕ್ಕೆ ಬೇವು, ಹಾಗಲಕಾಯಿ, ವೀಳ್ಯದೆಲೆ, ಹೊಂಗೆ, ಸೀಬೆ, ಸೀತಾಫಲ, ದತ್ತೂರಿ ಹಾಗೂ ಪರಂಗಿ ಎಲೆಗಳನ್ನು ಒನಕೆಯಲ್ಲಿ ಕುಟ್ಟಿ, ಕೊಳೆಸಿ ಅದಕ್ಕೆ ನಾಟಿ ಹಸುವಿನ ಮಜ್ಜಿಗೆ ಜೊತೆ ಜೀವಾಮೃತ ಸೇರಿಸಿ ರೋಗ ಪೀಡಿತ ಗಿಡಗಳಿಗೆ ಸಿಂಪಡಿಸುತ್ತಾರೆ. ತಿಂಗಳಿಗೆ ನಾಲ್ಕು ಬಾರಿ ಮಾತ್ರ ನೀರು ಹರಿಸುತ್ತಾರೆ.  ಇವರ ತೋಟದಲ್ಲಿ ತೆಂಗು, ಅಡಿಕೆ ಫಲಕಚ್ಚಿ ತೂಗಾಡುತ್ತಿವೆ. ಏಲಕ್ಕಿ ಜೊಂಪೆ- ಜೊಂಪೆಯಾಗಿ ತೂಗುತ್ತ ಭಾರಕ್ಕೆ ಭೂಮಿಯ ಮೇಲೆ ಮಲಗಿದಂತೆ ಕಾಣಿಸುತ್ತದೆ.  ಇಡೀ ತೋಟವನ್ನು ಕಳೆ ಇಲ್ಲದೆ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಾರೆ. 

ಹಣ್ಣು ಬಾಳೆಗೆ ಹೀಗೆ ಮಾಡಿ
ಒಂದು ಬಾಳೆ ಗೊನೆಗೆ ಎರಡೂವರೆ ಚದರ ಅಡಿ ಸ್ಥಳ ದೊರೆಯುವಂತೆ  4 ಅಡಿ ಎತ್ತರ ನಾಲ್ಕು ದಿಕ್ಕಿನಲ್ಲಿ ಗೋಡೆಕಟ್ಟಿ. ಅಲ್ಲಿ ಬಾಳೆ ಗೊನೆಗಳು ನಿಲ್ಲುವಂತೆ ಜೋಡಿಸಿ. ಒಂದು ಮೂಲೆಯಲ್ಲಿ 2 ಅಡಿ ಜಾಗ ಬಿಟ್ಟು 1–2 ತೆಂಗಿನ ಕೊಬ್ಬರಿ ತೆಗೆದ ನಾರು ಸಿಪ್ಪೆ ಸಹಿತ ಬೆಂಕಿ ಮಾಡಿ ಇಡಿ. ತೊಟ್ಟಿ ಮುಚ್ಚುವಂತೆ ಪ್ಲೈವುಡ್‌ ಷೀಟ್‌ ಅಥವಾ ತಗಡು ಮುಚ್ಚಿ ಸಂದಿಯಿಲ್ಲದಂತೆ ಹಸಿ ಸೆಗಣಿ ಅಥವಾ ಹಸಿ ಮಣ್ಣಿನಿಂದ ಮುಚ್ಚಿ. 20 ಗಂಟೆ ನಂತರ ತೆಗೆದು ನೋಡಿದರೆ ಬಾಳೆಕಾಯಿ ಹಣ್ಣಾಗಿರುತ್ತದೆ.

ಇವರಸಂಪರ್ಕ ಸಂಖ್ಯೆ: 9538120461         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT