ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಗಳ ಮುಕ್ತಿಗೆ ಸೋಲಾರ್ ಬೆಳಕು

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ರೈತರಿಗೆ ಕಂಟಕಪ್ರಾಯವಾಗಿರುವುದು ಕೀಟಗಳು. ಬೆಳೆದ ಬೆಳೆಗಳನ್ನು ಹೆಚ್ಚಾಗಿ ಹಾಳು ಮಾಡುವ ಕೀಟಗಳ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಹಲವು ಔಷಧಗಳಿವೆ. ಅವುಗಳಲ್ಲಿ ಹೆಚ್ಚಿನವು ಕೀಟಗಳನ್ನು ನಾಶಮಾಡಿದರೂ ಬೆಳೆಗಳ ಮೇಲೆ ವಿಷವನ್ನು ಸೂಸುತ್ತವೆ. ಇದರಿಂದ ಕೀಟಗಳ ಮೇಲಷ್ಟೇ ಅಲ್ಲದೇ ಬೆಳೆ ಸೇವಿಸುವ ಮನುಷ್ಯರ ಆರೋಗ್ಯದ ಮೇಲೂ ಈ ಕೀಟನಾಶಕ ಗಂಭೀರ ಪರಿಣಾಮ ಬೀರುತ್ತವೆ.

ಸಾವಯವ ವಿಧಾನದಲ್ಲಿ ಕೀಟಗಳನ್ನು ನಾಶ ಮಾಡಬಲ್ಲ ಕೆಲವು ಔಷಧಗಳನ್ನು ಕಂಡುಹಿಡಿಯುತ್ತಿರುವ ನಡುವೆಯೇ, ಇಲ್ಲೊಬ್ಬ ದಾಳಿಂಬೆ ಬೆಳೆಗಾರ ಸೋಲಾರ್‌ ಕೀಟ ನಾಶಕ ಯಂತ್ರಗಳನ್ನು ಕಂಡುಹಿಡಿದಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಇದನ್ನು ಅಳವಡಿಸಿರುವ  ಅವರು  ಕೀಟಗಳ ಉಪಟಳವಿಲ್ಲದೇ ಪೂರ್ಣ ಫಲವನ್ನು ಪಡೆಯುತ್ತಿದ್ದಾರೆ. ಸೋಲಾರ್‌ ಬೆಳಕು ಹರಿಸಿ ಕೀಟಗಳನ್ನು ದೂರಮಾಡುವ ತಂತ್ರಜ್ಞಾನವಿದು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಗ್ರಾಮದ ರೈತ ಕರಿಬಸಪ್ಪ ಎಂ.ಜಿ. ಈ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಕೀಟನಾಶಕ ಔಷಧಿಗಾಗಿ ಸಹಸ್ರಾರು ರೂಪಾಯಿಗಳನ್ನು ಖರ್ಚು ಮಾಡಿದರೂ ಮತ್ತೆ ಮತ್ತೆ ತೊಂದರೆ ಕೊಡುವ ಕೀಟಗಳಿಂದ ಬೇಸತ್ತ ಅವರು ಇಂಥದ್ದೊಂದು ನೂತನ ಯಂತ್ರದ ಆವಿಷ್ಕಾರ ಮಾಡಿದ್ದಾರೆ.

‘ನಾನು ಜಮೀನಿನಲ್ಲಿ 28ಜಾತಿಯ ಹಣ್ಣುಗಳನ್ನು ಬೆಳೆಯುತ್ತಿದ್ದೇನೆ. ಈ ಹಣ್ಣುಗಳ ಪೈಕಿ ಅರ್ಧ ಪಾಲು ಕೀಟಗಳ ಪಾಲಾಗುತ್ತಿತ್ತು. ಕಾಯಿ ಬೆಳೆದು ಕೊಯ್ಲಿಗೆ ಬರುವ ಒಳಗೆ ಹುಳುಗಳು ಹಾಳು ಮಾಡುತ್ತಿದ್ದವು. ಅವುಗಳನ್ನು ನಿಯಂತ್ರಿಸಲು ಏನಾದರೊಂದು ಉಪಾಯ ಕಂಡುಹಿಡಿಯಬೇಕು ಎಂದುಕೊಂಡಾಗ ಜಪಾನ್‌ ಮಾದರಿ ನನ್ನ ನೆರವಿಗೆ ಬಂತು’ ಎನ್ನುತ್ತಾರೆ ಕರಿಬಸಪ್ಪ.

ಕಾರ್ಯ ನಿರ್ವಹಣೆ ಹೀಗೆ: ಸೋಲಾರ್‌ ಮಾದರಿಯಲ್ಲಿ ಸೋಲಾರ್ ಬ್ಯಾಟರಿ ಬಳಸಲಾಗಿದೆ. ಗ್ಲಾಸಿನ ಒಂದು ಬಾಕ್ಸ್ ಮಾಡಿದ್ದು, ಅದರ ಕೆಳಗೆ ಸೋಲಾರ್ ಬೆಳಕನ್ನು ಇಡಲಾಗಿದೆ. ಗ್ಲಾಸಿನ ಬಾಕ್ಸ್‌ನಲ್ಲಿ ಒಂದು ಇಂಚಿನಷ್ಟು ನೀರು ಮತ್ತು ಸೋಡಾ ಮಿಶ್ರಣ ಮಾಡಿ ಹಾಕಲಾಗುತ್ತದೆ. ಬೆಳಕಿಗೆ ಆಕರ್ಷಿತವಾಗಿ ಬರುವ ಕೀಟಗಳು ನೀರಿನಲ್ಲಿ ಬಿದ್ದು ಸಾಯುತ್ತವೆ.

ಸೋಲಾರ್ ಬೆಳಕಿಗೆ ರಾತ್ರಿಯ ಸಮಯದಲ್ಲಿ ಆಕರ್ಷಿತವಾಗಿ ಕೀಟಗಳು ಬರುತ್ತವೆ. ಹಾಗೆ ಸೋಲಾರ್ ಬೆಳಕಿನ ಪಕ್ಕದಲ್ಲಿ ಇಟ್ಟಿರುವ ಕೊಳೆತ ಬಾಳೆ, ಪಪ್ಪಾಯಿ ಹಣ್ಣಿನ ವಾಸನೆಗೆ ಆಕರ್ಷಿತವಾಗಿ ಹಾರುತ್ತಾ ಬಂದು ಅದರ ಕೆಳಗೆ ಇಟ್ಟಿರುವ ಬೇಸಿನ್‌ನಲ್ಲಿ ಬಿದ್ದು ಸಾಯುತ್ತವೆ. ಸ್ವಯಂಚಾಲಿತ ಆನ್ ಮತ್ತು ಆಫ್ ಅಳವಡಿಸಿರುವುದರಿಂದ ಕತ್ತಲಾದಾಗ ಆನ್ ಆಗುತ್ತದೆ.

ಬೆಳಿಗ್ಗೆ ಅದಾಗಿಯೇ ಆಫ್ ಆಗುತ್ತದೆ. ಸೋಲಾರ್ ಬೆಳಕಿನ ಮಾದರಿ ಮತ್ತು ಸೋಲಾರ್ ಮಾದರಿಗಳೆಂಬ ಎರಡು ಮಾದರಿಗಳನ್ನು ಕರಿಬಸಪ್ಪ ಅವರು ತಯಾರಿಸಿದ್ದಾರೆ. ‘ರೈತ ಮಾರುಕಟ್ಟೆಯಲ್ಲಿ ಇದೇ ಮಾದರಿ ಕಂಪೆನಿಯ ಸೋಲಾರ್ ಕೀಟನಿಯಂತ್ರಣ ಸಾಧನವನ್ನು ಕೊಂಡುಕೊಳ್ಳಲು 35 ಸಾವಿರ ಖರ್ಚಾಗುತ್ತದೆ. ಆದ್ದರಿಂದ ನಾನೇ ರೈತರಿಗೆ ಕಡಿಮೆ ಖರ್ಚಿನಲ್ಲಿ ತಯಾರಿಸಿಕೊಡುತ್ತಿದ್ದೇನೆ. ಗ್ಲಾಸ್ ಮಾದರಿ ಸೋಲಾರ್‌ಗೆ 4500 ರೂಪಾಯಿ ಇದ್ದು, ಇನ್ನೂ ಎರಡು ಮಾದರಿಗೆ 5,400–10,500 ರೂಪಾಯಿ ವೆಚ್ಚ ತಗುಲುತ್ತದೆ’ಎನ್ನುತ್ತಾರೆ ಅವರು. 

‘ಸೋಲಾರ್ ಪ್ಯಾನೆಲ್‌ಗಳಿಗೆ 10 ವರ್ಷಗಳ ವಾರೆಂಟಿ, ಬ್ಯಾಟರಿಗೆ ಒಂದು ವರ್ಷ ವಾರೆಂಟಿ ಇದೆ. ಈಗ ಒಂದು ಲೀಟರ್‌ ಕೀಟನಾಶಕಕ್ಕೆ ಬಳಸುವ ಹಣದಿಂದಲೇ ಈ ಯಂತ್ರ ಖರೀದಿಸಿದರೆ ಹತ್ತಾರು ವರ್ಷ ಬಳಸಬಹುದು. ಅಷ್ಟೇ ಅಲ್ಲದೇ ದಾಳಿಂಬೆ ಬೆಳೆಗೆ ಸಿಂಪಡಿಸುವ ಒಂದು ಲೀಟರ್ ಔಷಧಿ ಬೆಲೆ 11ಸಾವಿರ ರೂಪಾಯಿ ಇದೆ.

ಕೇವಲ ಇಪ್ಪತ್ತು ದಿನ ಕೆಲಸ ಮಾಡುವ ಔಷಧಿ ಬದಲು ಸೋಲಾರ್ ಕೀಟ ನಿಯಂತ್ರಣ ಸಾಧನ ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಿದರೆ 20 ವರ್ಷ ಬಾಳಿಕೆ ಬರುತ್ತದೆ’ ಎಂಬ ಅಂಕಿಅಂಶ ನೀಡುತ್ತಾರೆ. ಗುಜರಾತಿನ ‘ನ್ಯಾಷನಲ್ ಇನೊವೇಷನ್ ಫೌಂಡೇಶನ್ ಇಂಡಿಯಾ(ಎನ್‌ಐಎಫ್)’ಗೆ ಕರಿಬಸಪ್ಪನವರು ತಯಾರಿಸಿರುವ ಸೋಲಾರ್ ಕೀಟನಿಯಂತ್ರಣ ಯಂತ್ರದ ಮಾಹಿತಿಯನ್ನು ಪಡೆದು ಅದರ ವೀಕ್ಷಣೆಗೆ ಬರಲಿದ್ದಾರೆ.

ಮಿಶ್ರ ಬೆಳೆಗಳು: ಜಮೀನಿನ ಸುತ್ತಲೂ ಅರಣ್ಯ ಸಸ್ಯಗಳನ್ನು ಬೆಳೆಸುತ್ತಿದ್ದು, ಅಡಿಕೆ, ತೆಂಗು, ಏಲಕ್ಕಿ, ಶ್ರೀಗಂಧ ಗಿಡಗಳು, ತೇಗ, ಹೆಬ್ಬೇವು, ರಕ್ತ ಚಂದನ, ಅತ್ತಿ, ಆಲ, ಬಿಲ್ವ, ರುದ್ರಾಕ್ಷಿ, ನಾಗಲಿಂಗ ಪುಷ್ಪ, ಅಶೋಕ ವೃಕ್ಷ, ನೇರಳೆ, ನೆಲ್ಲಿ, ಹುಣಸೆ... ಹೀಗೆ ಹಲವಾರು ಬಗೆಯ ಗಿಡ ಮರಗಳು ಇವರ ತೋಟದಲ್ಲಿದೆ. 1,200 ದಾಳಿಂಬೆ ಗಿಡವನ್ನು ಬೆಳೆಸಿದ್ದಾರೆ. ಹಿಂದಿನ ವರ್ಷ 16 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. 

ಎಲ್ಲಾ ಗಿಡ–ಮರಗಳಿಗೂ ವರ್ಷದಲ್ಲಿ ಒಂದು ಸಾರಿ 20ಕೆ.ಜಿ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಜೈವಿಕ ಗೊಬ್ಬರ ಅವರೇ ತಯಾರಿಸಿ ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೇ ಜೀವಾಮೃತ ತಯಾರಿಸಿ ವಾರಕ್ಕೆ ಒಂದು ಬಾರಿ  ನೀರಿಗೆ ಸೇರಿಸಿ ಬೆಳೆಗೆ ನೀಡುತ್ತಿದ್ದಾರೆ. ‘ಗಿಡಗಳು ನೂರರಲ್ಲಿ 95 ಭಾಗ ನೀರು ಹಾಗೂ ಸೂರ್ಯನ ಕಿರಣಗಳಿಂದ ಆಹಾರ ತಯಾರಿಸುತ್ತವೆ ಎಂದು ಓದಿದ ನೆನಪಿದೆ.

ಅದು ಅಕ್ಷರಶಃ ಸತ್ಯ. ಇಲ್ನೋಡಿ ಈ ಬಾಳೆಯದು ಮೂರನೆಯ ಕೂಳೆ ಬೆಳೆ, ಗೊನೆ ಬಿಟ್ಟಿದೆ. ಹೆಚ್ಚು ಕಡಿಮೆ 40 ಕಾಯಿಗಳಿವೆ. ನೀರಿನ ಹೊರತು ಇನ್ನೇನನ್ನೂ ಹಾಕಿಲ್ಲ’ ಎನ್ನುತ್ತಾ ತಮ್ಮ ಕೃಷಿಯ ಗುಟ್ಟು ಹೇಳುತ್ತಾರೆ. ‘ರೈತರು ಸಾಲ ಮಾಡಿ ಔಷಧಿಗಳನ್ನು ತಂದು ಕೀಟಗಳಿಗೆ ಹೊಡೆದರೆ ಏನು ಪ್ರಯೋಜನ ಕಾಣುತ್ತಿಲ್ಲ. ಆದ್ದರಿಂದ ಕಡಿಮೆ ಖರ್ಚಿನ ಈ ಸರಳ ಮಾದರಿಯನ್ನು ಅಳವಡಿಸುವುದು ಉತ್ತಮ’ ಎನ್ನುತ್ತಾರೆ  ಅವರು.

ವರ್ತಕರ ಮೋಸದ ಕುರಿತು ಕರಿಬಸಪ್ಪ ವಿವರಿಸುವುದು ಹೀಗೆ: ‘ನಾನು 30 ಕ್ವಿಂಟಾಲ್‌ ದಾಳಿಂಬೆ ಹಣ್ಣನ್ನು ವರ್ತಕರಿಗೆ ಮಾರಲೆಂದು ಒಯ್ದಿದ್ದೆ. ಕೆ.ಜಿಯೊಂದಕ್ಕೆ 60 ರೂಪಾಯಿಯಂತೆ ಖರೀದಿಸಿದ್ದ ಆತ ಕಾಲು ಕೆ.ಜಿಗೆ 40 ರೂಪಾಯಿಗಳಂತೆ ಮಾರುತ್ತಿದ್ದ. ಹಣ್ಣಿನ ವ್ಯಾಪಾರಿಗೆ ಇದರಿಂದ ಪ್ರತಿ ಕೆ.ಜಿಗೆ 160 ರೂಪಾಯಿ ದೊರೆಯಿತು. ಒಂದು ವರ್ಷ ಬೆವರು ಸುರಿಸಿ ತಾಳ್ಮೆಯಿಂದ ದುಡಿದ ರೈತನಿಗೆ ಕೆ.ಜಿಗೆ 60 ರೂಪಾಯಿ ದೊರೆತರೆ, ವರ್ತಕನಿಗೆ 160ಕೆ.ಜಿ. ಎಂಥ ಮೋಸ...’

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು: 9880973218. (ಸಂಜೆ ಸಮಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT