ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಕುದುರಿಸಿ ವ್ಯಾಪಾರ

Last Updated 8 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹಣ್ಣುಗಳ ನೇರ ಮಾರುಕಟ್ಟೆ ಮಾಡುವುದು ಹೇಗೆ? ಗದಗ ಜಿಲ್ಲೆಯ ಹುಲಕೋಟಿಯ ರವೀಂದ್ರ ಎನ್ ರಂಗನಗೌಡರ್‌ ಅವರ ಬಳಿ ಉತ್ತರವಿದೆ. ನೀವು ಈ ಪ್ರಶ್ನೆ ಕೇಳಿದರೆ ಒಂದು ಕ್ಲಾಸ್ ತೆಗೆದುಕೊಳ್ಳುತ್ತಾರೆ ಅವರು. ಯಾಕೆಂದರೆ ಅವರು ಎಂ.ಬಿ.ಎ ಓದಿರುವವರು. ಮಾರುಕಟ್ಟೆ ಮಾಡುವುದು ಹೇಗೆಂದು ಅಧ್ಯಯನ ಮಾಡಿ ಬಂದವರು. ಬರೀ ಅಧ್ಯಯನ ಅಷ್ಟೇ ಮಾಡಿದ್ದಲ್ಲ. ಅದನ್ನು ಅಳವಡಿಸಿಕೊಂಡಿದ್ದಾರೆ ಕೂಡ.

ಮಾವಿನ ಹಣ್ಣಿನ ಸೀಸನ್‌ನಲ್ಲಿ ಅವರು ಅದರ ಮಾರುಕಟ್ಟೆ ಮಾಡಿದ ಪರಿಯೇ ವಿಶೇಷ. ‘ಅನನ್ಯ ಆಲ್ಫೊನ್ಸೋ’ ಅನ್ನುವುದು ಅವರು ಬೆಳೆದ ಮಾವಿನ ತಳಿ. ಇದರ ಸೀಸನ್‌ನಲ್ಲಿ ಅವರು ಬಸ್ಸು, ರೈಲಿನಲ್ಲಿ ಪ್ರಯಾಣಿಸುತ್ತಾರೆಂದರೆ ಕೈಯಲ್ಲಿ ಒಂದು ಚೀಲ ಇರುತ್ತದೆ. ಅದರ ತುಂಬಾ ತಮ್ಮ ತೋಟದ ಬಾದಾಮಿ ಮಾವಿನ ಹಣ್ಣು ತುಂಬಿರುತ್ತಾರೆ.

ಚೀಲದಿಂದ ಹಣ್ಣು ತೆಗೆದು ಕತ್ತರಿಸಿ ಸಹಪ್ರಯಾಣಿಕರಿಗೆಲ್ಲಾ ಒಂದೊಂದು ತುಂಡು ಕೊಟ್ಟು ‘ರುಚಿ ನೋಡಿ. ಇದು ನನ್ನ ತೋಟದ ಹಣ್ಣು’ ಅಂತ ಪರಿಚಯಿಸಿಕೊಳ್ಳುತ್ತಾರೆ. ಒಂದು ತುಂಡು ತಿಂದವರು ‘ಮಾರಾಟಕ್ಕಿದೆಯಾ’ ಅಂತ ಕೇಳಿಯೇ ಕೇಳುತ್ತಾರೆ ಅನ್ನುವುದು ಅವರಿಗೆ ಗೊತ್ತು. ಅವರಿಗೆಲ್ಲಾ ತಮ್ಮ ‘ವಿಸಿಟಿಂಗ್ ಕಾರ್ಡ್’ ಕೊಡುತ್ತಾರೆ. ಅವರ ವಿಳಾಸವನ್ನೂ ಇವರು ಪಡ್ಕೊಳ್ಳುತ್ತಾರೆ.

ಒಂದು ವಾರದೊಳಗೆ ಅವರೆಲ್ಲರ ವಿಳಾಸಕ್ಕೆ ಮಾವಿನ ಹಣ್ಣಿನ ಪಾರ್ಸೆಲ್ ಕಳುಹಿಸುತ್ತಾರೆ. ಬಿಲ್ ಹಾಕಿ ಎಷ್ಟು ಹಣ ಅಂತ ಬರೆದಿರುತ್ತಾರೆ. ಹಣ ಪಾವತಿಗಾಗಿ ಬ್ಯಾಂಕ್ ಖಾತೆ ನಂಬರ್ ಕೂಡಾ ನಮೂದಿಸಿರುತ್ತಾರೆ. ನಂತರ ಹಣ್ಣಿನ ಸೀಸನ್ ಮುಗಿಯುವವರೆಗೂ ಅಷ್ಟೂ ಜನ ಗ್ರಾಹಕರೂ ಇವರ ಸಂಪರ್ಕದಲ್ಲಿರುತ್ತಾರೆ.

ಒಳ್ಳೆಯ ಗುಣಮಟ್ಟದ ಉತ್ಪನ್ನವಿದ್ದರೆ ಗ್ರಾಹಕರನ್ನು ಹಿಡಿಯುವುದು ಕಷ್ಟವಲ್ಲ ಅನ್ನುವುದೇ ರವೀಂದ್ರರವರ ಮಾರುಕಟ್ಟೆಯ ತಂತ್ರ. ಅದಕ್ಕಾಗಿ ಅವರು ತಮ್ಮ ಐದೂವರೆ ಎಕರೆ ಭೂಮಿಯಲ್ಲಿ 357 ಬಾದಾಮಿ ಮಾವಿನ ಗಿಡ ನೆಟ್ಟಿದ್ದಾರೆ. ಈಗ ಆ ತೋಟಕ್ಕೆ ಒಂಬತ್ತು ವರ್ಷ. ಐದು ವರ್ಷದಿಂದ ಇಳುವರಿ ಸಿಗುತ್ತಿದೆ. ಕಳೆದ ವರ್ಷ 15 ಟನ್ ಮಾವು ಸಿಕ್ಕಿದೆ. ಇದೇ ರೀತಿ ವ್ಯಾಪಾರ ಕುದುರಿಸಿ ನಾಲ್ಕೂವರೆ ಲಕ್ಷ ರೂಪಾಯಿ ಲಾಭ ಆಗಿದೆ. ಈ ವರ್ಷ ಇಪ್ಪತ್ತೆರಡು ಟನ್ ಮಾವಿನಿಂದ ಹತ್ತು ಲಕ್ಷ ರೂಪಾಯಿ ಆದಾಯ ಕಂಡಿದ್ದಾರೆ !

ಮಾವು ಅಂದರೆ ಒಣಭೂಮಿ ಬೆಳೆ ಅನ್ನುವುದು ತಪ್ಪು ಕಲ್ಪನೆ ಅನ್ನುತ್ತಾರೆ ರವೀಂದ್ರರವರು. ಅವರು ಮಾವಿಗೆ ನೀರು ಹಾಯಿಸುತ್ತಾರೆ. ಆದರೆ ಅತಿಯಾಗಿ ನೀರು ಹಾಯಿಸಿದರೆ ಮಾವು ಸಹಿಸುವುದಿಲ್ಲ. ಹೂವು ಬಿಡುವ ಸಮಯದಲ್ಲಿ ಮುಖ್ಯವಾಗಿ ನೀರು ಬೇಕು. ಬೆಳವಣಿಗೆಯ ಹಂತದಲ್ಲಿ ನೀರುಣಿಸಿದರೆ ಹಣ್ಣಿನ ಗಾತ್ರ ಹೆಚ್ಚುತ್ತದೆ. ಹಣ್ಣು ಹೆಚ್ಚು ರಸವತ್ತಾಗುತ್ತದೆ. ಆದರೆ ಕೊಯಿಲಿನ ಸಮಯದಲ್ಲಿ ನೀರು ಕೊಟ್ಟರೆ ಸಿಹಿ ಮತ್ತು ರುಚಿ ಕಡಿಮೆಯಾಗುತ್ತದೆ.

ಮಾವಿಗೆ ಪ್ರತಿ ವರ್ಷ ಕೋಳಿ ಮತ್ತು ಕುರಿ ಗೊಬ್ಬರ ಕೊಡುತ್ತಾರೆ. ಜಿಪ್ಸಂ ಮತ್ತು ಬೋರಾನ್ ಕೊಡಲೇ ಬೇಕು. ಅಲ್ಲದೇ ಪ್ರತೀ ಮರಕ್ಕೂ ವರ್ಷಕ್ಕೊಮ್ಮೆ ಕಾಲು ಕೇಜಿ ರಾಸಾಯನಿಕ (ಎನ್‌ಪಿಕೆ) ಗೊಬ್ಬರ ಹಾಕುವುದು ಅವರ ಪ್ಯಾಕೇಜ್‌ನಲ್ಲಿದೆ. ಇವೆಲ್ಲಾ ಕ್ರಮ ಪ್ರಕಾರ ಮಾಡಿದರೆ ಮಾತ್ರ ಒಳ್ಳೆಯ ಗುಣಮಟ್ಟದ ಮಾವು ಪಡೆಯಲು ಸಾಧ್ಯ ಅನ್ನುತ್ತಾರೆ ಅವರು.

ತಮ್ಮ ಈ ಪ್ಯಾಕೇಜಿನಂತೆ ಸುತ್ತುಮುತ್ತಲಿನ ರೈತರನ್ನೂ ಮಾವು ಬೆಳೆಯಲು ಅವರು ಪ್ರೋತ್ಸಾಹಿಸುತ್ತಿದ್ದಾರೆ. ಅಂಥವರ ಮಾವು ಖರೀದಿಸಿ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಯಾಕೆಂದರೆ ಅವರ ಗ್ರಾಹಕರಿಗೆ ಈಗ ಅವರ ತೋಟದ ಮಾವು ಮಾತ್ರ ಸಾಕಾಗುತ್ತಿಲ್ಲ. ಬೆಂಗಳೂರಿನ ಮಾಲ್‌ಗಳೂ ಈಗ ಇವರ ಮಾವಿಗೆ ಗ್ರಾಹಕರಾಗಿದ್ದಾರೆ. ಇದರಿಂದಲೇ ಇವರೀಗ ‘ಮ್ಯಾಂಗೋ ರವಿ’ ಆಗಿದ್ದಾರೆ.

ಮಾವಿನ ಹಣ್ಣು ನೋಡಲೂ ಚೆನ್ನಾಗಿರಬೇಕು. ಅದಕ್ಕಾಗಿ ಬೆಳಿಗ್ಗೆ ತಂಪು ಹೊತ್ತಿನಲ್ಲಿ ಮಾವಿನಕಾಯಿ ಕೀಳುತ್ತಾರೆ. ನೀರಿನಲ್ಲಿ ತೊಳೆದು ನಂತರ ‘ಕಪ್ಪತ ಗುಡ್ಡ’ದ ಹುಲ್ಲಿನಲ್ಲಿ ಮುಚ್ಚಿ ಮಾಗಿಸುತ್ತಾರೆ. ಯಾವುದೇ ರಾಸಾಯನಿಕ ಬಳಸುವುದಿಲ್ಲ. ಕಿತ್ತು ನಾಲ್ಕೇ ದಿವಸಗಳಲ್ಲಿ ಹಣ್ಣು ಮಾರಾಟಕ್ಕೆ ತಯಾರಾಗುತ್ತದೆ. ಬಣ್ಣ, ಪರಿಮಳ ಮತ್ತು ರುಚಿ ಇವು ಮೂರೂ ಉತ್ತಮವಾಗಿರುವಂತೆ ನೋಡಿಕೊಂಡರೆ ಗ್ರಾಹಕರನ್ನು ಹಿಡಿದಿಡಲು ಸಾಧ್ಯ ಅನ್ನುವುದು ಅವರ ವ್ಯಾಪಾರದ ಗುಟ್ಟು.

ಪಂಚಾಯಿತಿ ಸದಸ್ಯ
ಬೆಂಗಳೂರಿನಲ್ಲಿ ಅಧ್ಯಯನ ಮುಗಿಸಿ ಮನೆಗೆ ಬಂದಾಗ ರವೀಂದ್ರರವರಿಗೆ ಅಚ್ಚರಿ ಕಾದಿತ್ತು. ಅವರನ್ನು ಹತ್ತಿರದಿಂದ ಬಲ್ಲ ರಾಜಕಾರಣಿಯೊಬ್ಬರು ಅವರ ಹೆಸರನ್ನು ಪಂಚಾಯಿತಿ ಚುನಾವಣೆಯ ಸ್ಪರ್ಧೆಗೆ ಸೂಚಿಸಿದ್ದರು. ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಚುನಾವಣೆ ಪ್ರಚಾರಕ್ಕಿಳಿದರು. ಗೆದ್ದೂ ಬಿಟ್ಟರು. ಪಂಚಾಯತ್ ಸದಸ್ಯನಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದರು.

‘ನಾನು ನನ್ನ ಬಗ್ಗೆ ಮಾತ್ರ ಚಿಂತಿಸಿದರೆ ಸಾಲದು. ನಮ್ಮ ಊರಿನವರ ಬಗ್ಗೆ ಕೂಡಾ ತಲೆಕೆಡಿಸಿಕೊಳ್ಳಬೇಕು ಅನ್ನುವುದು ನನ್ನ ಮನಸ್ಸಿಗೆ ಬಂತು. ಹಾಗಾಗಿ ನೌಕರಿಗೆ ಹೋಗುವುದು ಬೇಡಾಂತ ತೀರ್ಮಾನ ಮಾಡಿದೆ...’ ಹೀಗೆ ತಮ್ಮ ಮಾವಿನ ಮಾರುಕಟ್ಟೆಯ ಹಿಂದಿನ ಚಿತ್ರಣ ಬಿಡಿಸುತ್ತಾರೆ.
ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ಇಲ್ಲಿಯ ವಾತಾವರಣ ಮಾವು ಬೆಳೆಗೆ ಸೂಕ್ತವಲ್ಲವೆಂಬ ನಂಬಿಕೆಯಿತ್ತು. ಆದರೆ ಹುಲಕೋಟಿಯ ‘ಕೆ.ಎಚ್.ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ’ದವರು ಮಾವು ಬೆಳೆಯಲು ಮಾರ್ಗದರ್ಶನ ನೀಡಿದರೆಂಬುದನ್ನು ನೆನೆಯುತ್ತಾರೆ ಅವರು.

‘ನಾನು ಎಂ.ಬಿ.ಎ ಮಾಡಿದ್ದರಿಂದ ಈ ವ್ಯವಹಾರದಲ್ಲಿ ಸಾಕಷ್ಟು ಅನುಕೂಲವಾಗಿದೆ. ತೋಟದಲ್ಲಿ ಫಸಲು ಬರುವುದಕ್ಕೆ ಮೊದಲು ಒಂದು ಹಾರ್ಡ್‌ ವೇರ್ ಅಂಗಡಿ ಹಾಕಿದ್ದೆ. ಅದರಲ್ಲಿ ನಾನು ತಲೆ ಖರ್ಚು ಮಾಡುವಂಥದ್ದು ಏನೂ ಇರಲಿಲ್ಲ. ಆದರೆ ಮಾವಿನ ವ್ಯಾಪಾರದಲ್ಲಿ ಸಾಕಷ್ಟು ತಲೆ ಓಡಿಸಿದೆ. ನನಗೆ ಇಂಗ್ಲಿಷ್ ಭಾಷೆ ಗೊತ್ತಿದ್ದರಿಂದ ಬೆಂಗಳೂರಿನಲ್ಲಿ ವ್ಯವಹರಿಸಲು ಸುಲಭವಾಯಿತು. ಒಂದು ಬಾರಿ ಇಂಗ್ಲೆಂಡ್‌ನ ಮಹಿಳೆಯೊಬ್ಬರು ನಾನು ಕೊಟ್ಟ ಸ್ಯಾಂಪಲ್ ತಿಂದು ಇಡೀ ಲಾಟ್ ಖರೀದಿಸಲು ಮುಂದಾದರು. ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬ್ಯಾಂಕ್ ವ್ಯವಹಾರ ಕೂಡಾ ನನಗೆ ಕಷ್ಟ ಅನಿಸಲಿಲ್ಲ. ಹೆಚ್ಚಿನ ಗ್ರಾಹಕರನ್ನು ನಾನು ‘ಇ ಮೇಲ್’ ಮೂಲಕ ಸಂಪರ್ಕಿಸುತ್ತೇನೆ. ಅವರೂ ಮೇಲ್ ಮೂಲಕವೇ ಇಂತಹ ದಿನಾಂಕಕ್ಕೆ ಹಣ್ಣು ಬೇಕೆಂದು ತಿಳಿಸುತ್ತಾರೆ’ ಎಂದು ವಿವರಿಸಿದರು.

‘ರೈತರು ತಾವು ಬೆಳೆದ ವಸ್ತುವನ್ನು ಮಾರಾಟ ಮಾಡುವುದರಲ್ಲಿ ಕೀಳರಿಮೆ ತೋರಿಸಬಾರದು. ಗ್ರಾಹಕರನ್ನು ಸೆಳೆಯುವಂತೆ ತಮ್ಮ ಉತ್ಪನ್ನವನ್ನು ಸಜ್ಜುಗೊಳಿಸಬೇಕು. ನೇರ ಮಾರುಕಟ್ಟೆಗೆ ಮೊದಲ ಆದ್ಯತೆ ಕೊಡಬೇಕು. ಲಾಭದ ಗಂಟನ್ನು ಹೆಚ್ಚಿಸಿಕೊಳ್ಳಲು ಇದೊಂದೇ ಮಾರ್ಗ’ ಅನ್ನುತ್ತಾರೆ ಅವರು. ಇವರದ್ದು ಮಾವಿನ ಕಥೆ. ಆದರೆ ಇದೇ ರೀತಿ ರೈತರು ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನೂ ಕುದುರಿಸಿಕೊಳ್ಳಬಹುದು ಅಲ್ಲವೇ? ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಅವರ ದೂರವಾಣಿ ಸಂಖ್ಯೆ 9901872373.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT