ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಪ್ರಜ್ವಲ್ ಸುಳಿವು: ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಸಿದ್ಧತೆ?

Published 11 ಮೇ 2024, 16:14 IST
Last Updated 11 ಮೇ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಹಾಸನ  ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು(ಎಸ್‌ಐಟಿ) ಅವರ ಪತ್ತೆಗೆ ‘ರೆಡ್‌ ಕಾರ್ನರ್‌’ ನೋಟಿಸ್‌ ಜಾರಿಗೆ ಸಿದ್ಧತೆ ನಡೆಸಿದೆ.

ಈಗಾಗಲೇ ಬ್ಲೂ ಕಾರ್ನರ್‌ ನೋಟಿಸ್ ಹೊರಡಿಸಲಾಗಿದ್ದರೂ ಅವರ ಸುಳಿವು ದೊರೆತಿಲ್ಲ. ರೆಡ್‌ ಕಾರ್ನರ್‌ ನೋಟಿಸ್ ಜಾರಿ ಸಂಬಂಧ ಎಸ್‌ಐಟಿ ಅಧಿಕಾರಿಗಳು, ಸಿಬಿಐ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ರೆಡ್ ಕಾರ್ನರ್‌ ನೋಟಿಸ್ ಹೊರಡಿಸಬೇಕಾದರೆ, ಸಿಬಿಐ ಅಧಿಕಾರಿಗಳು ಇಂಟರ್‌ಪೋಲ್ ಸಂಪರ್ಕಿಸಿ ಬೇಡಿಕೆ ಸಲ್ಲಿಸಬೇಕು. ಸಿಬಿಐ ಒಪ್ಪಿಗೆ ಸೂಚಿಸಿದರೆ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿ ತಲೆಮರೆಸಿಕೊಂಡಿರುವ ದೇಶದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಿದ್ದಾರೆ. ನಂತರ, ರೆಡ್‌ ಕಾರ್ನರ್‌ ನೋಟಿಸ್ ಜಾರಿ ಮಾಡಿದ ದೇಶಕ್ಕೆ ಆರೋಪಿಯನ್ನು ಹಸ್ತಾಂತರಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಪ್ರಕರಣವು ಸೂಕ್ಷ್ಮವಾಗಿದ್ದು, ತನಿಖಾ ತಂಡದಿಂದ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರು ತಂಡದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

₹1 ಲಕ್ಷ ಬಹುಮಾನ!:


ಮತ್ತೊಂದೆಡೆ ಪ್ರಜ್ವಲ್‌ ರೇವಣ್ಣ ಅವರನ್ನು ಹುಡುಕಿ ಕೊಟ್ಟವರಿಗೆ ₹1 ಲಕ್ಷ ಬಹುಮಾನ ಹಾಗೂ ಸನ್ಮಾನ ಮಾಡುವುದಾಗಿ ಹೇಳಿ ಜನತಾ ಪಕ್ಷದ ಮುಖಂಡ ನಾಗೇಶ್ ನೇತೃತ್ವದಲ್ಲಿ ನಗರದ ಹಲವೆಡೆ ಶನಿವಾರ ಪೋಸ್ಟರ್ ಅಭಿಯಾನ ನಡೆಯಿತು. ಅಲ್ಲದೇ ಪ್ರಜ್ವಲ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಪೋಸ್ಟರ್ ಅಭಿಯಾನ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ನಾಗೇಶ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಬಳಿಕ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಎಲ್ಲೆಲ್ಲಿ ಅಭಿಯಾನ?:‌


ಶಿವಾನಂದ ವೃತ್ತ, ಆನಂದ್‌ರಾವ್ ವೃತ್ತ, ಶೇಷಾದ್ರಿಪುರದ ಕೆಲವೆಡೆ ‘ವಾಂಟೆಡ್ ಪ್ರಜ್ವಲ್’ ಎಂಬ ಪೋಸ್ಟರ್ ಅಂಟಿಸಿ, ಹಂಚಿದರು.

‘ಪ್ರಜ್ವಲ್‌ ಅವರನ್ನು ಬಂಧಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ. ಹೀಗಾಗಿ, ಪ್ರಜ್ವಲ್‌ ಸುಳಿವು ನೀಡಿದರೆ ನಾವೇ ಬಹುಮಾನ ನೀಡುತ್ತೇವೆ’ ಎಂದು ನಾಗೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT