ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ: ಪ್ರಜ್ವಲ್ ವಿರುದ್ಧ ಮೂರನೇ ಎಫ್‌ಐಆರ್

ಎಚ್‌.ಡಿ. ರೇವಣ್ಣ ಮನೆಯಲ್ಲಿ ಎಸ್‌ಐಟಿ ಮಹಜರು
Published 10 ಮೇ 2024, 16:16 IST
Last Updated 10 ಮೇ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಅದರ ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡು ಬೆದರಿಕೆಯೊಡ್ಡುತ್ತಿದ್ದ’ ಆರೋಪದಡಿ ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಇದು ಅವರ ಮೇಲಿನ ಮೂರನೇ ಪ್ರಕರಣವಾಗಿದೆ.

ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿತ್ತು. ಇದಾದ ನಂತರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿದ್ದ ದೂರಿನಡಿ ಪ್ರಜ್ವಲ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಾಗಿತ್ತು.

ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ್ದ ಆರೋಪದಡಿ ಎಚ್‌.ಡಿ.ರೇವಣ್ಣ ಹಾಗೂ ಇತರರ ವಿರುದ್ಧ ಕೆ.ಆರ್.ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಇದರ ತನಿಖೆಯನ್ನೂ ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಸಿಐಡಿ ಠಾಣೆಯಲ್ಲಿ ಎಫ್‌ಐಆರ್: ‘ಪ್ರಕರಣದ ಸಂತ್ರಸ್ತೆಯೊಬ್ಬರು ಎಸ್‌ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ. ಅದೇ ಹೇಳಿಕೆ ಆಧರಿಸಿ ಪ್ರಜ್ವಲ್‌ ವಿರುದ್ಧ ಸಿಐಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಜ್ವಲ್ ವಿರುದ್ಧ ಸಿಐಡಿ ಠಾಣೆಯಲ್ಲಿ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ’ ಎಂದು ಮೂಲಗಳು ಹೇಳಿವೆ.

‘ಐಪಿಸಿ 376 –2ಎನ್‌ (ಮಹಿಳೆ ಮೇಲೆ ಬಲವಂತದಿಂದ ನಿರಂತರ ಅತ್ಯಾಚಾರ), ಐಪಿಸಿ 354–ಎ (ಲೈಂಗಿಕ ಕಿರುಕುಳ), ಐಪಿಸಿ 354–ಬಿ (ಮಹಿಳೆಯನ್ನು ಬಲವಂತದಿಂದ ವಿವಸ್ತ್ರಗೊಳಿಸಿ ಚಿತ್ರೀಕರಣ ಮಾಡಿಕೊಳ್ಳುವುದು) ಹಾಗೂ ಐಪಿಸಿ 506 (ಜೀವ ಬೆದರಿಕೆ) ಆರೋಪದಡಿ ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪ ಸಾಬೀತಾದರೆ, ಗರಿಷ್ಠ 10 ವರ್ಷ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ’ ಎಂದು ತಿಳಿಸಿವೆ.

ರೇವಣ್ಣ ಮನೆಯಲ್ಲಿ ಮಹಜರು: ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಆರೋಪಿ ಎಚ್‌.ಡಿ.ರೇವಣ್ಣ ಅವರ ಬಸವನಗುಡಿ ಮನೆಯಲ್ಲಿ ಶುಕ್ರವಾರ ಎರಡನೇ ಸುತ್ತಿನ ಮಹಜರು ನಡೆಸಿದರು.

‘ವಿಡಿಯೊ ಅಳಿಸಲು ಸಂತ್ರಸ್ತೆಯರ ಮನವಿ’

ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ದೂರು ಆಲಿಸಲು ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ (6360938947) ಆರಂಭಿಸಿದ್ದಾರೆ. ನಿತ್ಯವೂ ಸಹಾಯವಾಣಿಗೆ ಕರೆ ಮಾಡುತ್ತಿರುವ ಹಲವು ಸಂತ್ರಸ್ತೆಯರು ಹಾಗೂ ಅವರ ಸಂಬಂಧಿಕರು, ‘ದಯವಿಟ್ಟು ವಿಡಿಯೊಗಳನ್ನು ಅಳಿಸಿ ಹಾಕಿ. ನಮ್ಮ ಮರ್ಯಾದೆ ಕಾಪಾಡಿ’ ಎಂದು ಮನವಿ ಮಾಡುತ್ತಿದ್ದಾರೆ.

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನಿತ್ಯವೂ 10ರಿಂದ 20 ಕರೆಗಳು ಬರುತ್ತಿದ್ದು, ಪ್ರತಿಯೊಬ್ಬರ ಮಾತುಗಳನ್ನು ಸಿಬ್ಬಂದಿ ಆಲಿಸುತ್ತಿದ್ದಾರೆ. ಜೊತೆಗೆ, ಸಂತ್ರಸ್ತೆಯರ ಒಪ್ಪಿಗೆ ಪಡೆದು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಹೇಳಿಕೆ ನೀಡಲು ಇಚ್ಛಿಸದ ಸಂತ್ರಸ್ತೆಯರಿಗೆ ಸಿಬ್ಬಂದಿ ಧೈರ್ಯ ತುಂಬುತ್ತಿದ್ದಾರೆ. ಯಾವುದೇ ಸಮಯದಲ್ಲಾದರೂ ಕರೆ ಮಾಡಿ ಹೇಳಿಕೆ ನೀಡುವಂತೆ ಕೋರುತ್ತಿದ್ದಾರೆ.

‘ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆಡೆ ವಿಡಿಯೊಗಳು ಹರಿದಾಡುತ್ತಿವೆ. ಅವುಗಳನ್ನು ನೋಡಿದ ಪರಿಚಯಸ್ಥರು ಹಾಗೂ ಸಂಬಂಧಿಕರು, ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ತೀವ್ರ ಬೇಸರವಾಗಿದ್ದು, ಮಾನಸಿಕವಾಗಿ ಕುಗ್ಗಿದ್ದೇವೆ. ದಯವಿಟ್ಟು ಎಲ್ಲ ಕಡೆ ಇರುವ ವಿಡಿಯೊಗಳನ್ನು ಡಿಲೀಟ್ ಮಾಡಿಸಿ’ ಎಂದು ಕೆಲ ಸಂತ್ರಸ್ತೆಯರು ಮನವಿ ಮಾಡಿದ್ದಾರೆ.

ಸಂತ್ರಸ್ತೆಯೊಬ್ಬರ ಕುಟುಂಬಸ್ಥರು, ‘ವಿಡಿಯೊಗಳಿಂದ ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ. ರಸ್ತೆ ಹಾಗೂ ಮಾರುಕಟ್ಟೆಯಲ್ಲೆಲ್ಲ ಅವಮಾನ ಮಾಡುತ್ತಿದ್ದಾರೆ. ಹಲವರ ಮೊಬೈಲ್ ಹಾಗೂ ಕಂಪ್ಯೂಟರ್‌ಗಳಲ್ಲಿ ವಿಡಿಯೊಗಳಿವೆ. ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳಿ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT