ಆಹಾ... ಭಾಗ್ಯಲಕ್ಷ್ಮಿ ಗುಲ್ಕನ್

7

ಆಹಾ... ಭಾಗ್ಯಲಕ್ಷ್ಮಿ ಗುಲ್ಕನ್

Published:
Updated:
Prajavani

ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯದು. ಆ ರಸ್ತೆಯ ಆಸುಪಾಸಿನಲ್ಲೇ ಸಿಗುವ ವಸ್ತುಗಳ ಖರೀದಿಗೆ ಸಾವಿರಾರು ಮಂದಿ ಅಲ್ಲಿಗೆ ಬರುತ್ತಾರೆ. ಹಾಗೇ ಬಂದ ಬಹುತೇಕರು ವಸ್ತುಗಳನ್ನು ಕೊಂಡು ಹಾಗೇ ಹೋಗುವುದಿಲ್ಲ. ರಸ್ತೆಯ ಬದಿಯ ಪುಟಾಣಿ ಅಂಗಡಿಯೊಂದಕ್ಕೆ ಭೇಟಿ ನೀಡಿ ಗುಲಾಬಿ ರುಚಿ ಸವಿದು ಮನೆ ಕಡೆ ಹೆಜ್ಜೆಹಾಕುತ್ತಾರೆ.

ಯಾವುದಪ್ಪ, ಗುಲಾಬಿ ರುಚಿ ತೋರುವ ಅಂಗಡಿಯದು ಎಂದು ತಲೆಕೆರೆದುಕೊಳ್ಳಬೇಡಿ. ಆ ಅಂಗಡಿಯೇ ‘ಭಾಗ್ಯಲಕ್ಷ್ಮಿ ಬೆಣ್ಣೆ ಮತ್ತು ಗುಲ್ಕನ್ ಸ್ಟೋರ್’. ಇದು ಮಲ್ಲೇಶ್ವರದ ಸಂಪಿಗೆ ರಸ್ತೆ ಬದಿಯಲ್ಲಿರುವ ಪುಟಾಣಿ ಅಂಗಡಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಈ ಪುಟಾಣಿ ಅಂಗಡಿಯ ಖ್ಯಾತಿ ದೊಡ್ಡದು.

ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಗ್ರಾಹಕರಿಗೆ ಈ ಅಂಗಡಿಯ ಗುಲ್ಕನ್ ಅಂದರೆ ಬಲುಪ್ರೀತಿ. ಹೀಗಾಗಿಯೇ, ದೂರದೂರುಗಳಿಂದ ಇಲ್ಲಿಗೆ ಬಂದು ಅಥವಾ ತಾವಿರುವ ಜಾಗಕ್ಕೆ ಗುಲ್ಕನ್ ಅನ್ನು ಪಾರ್ಸೆಲ್ ತರಿಸಿಕೊಳ್ಳುತ್ತಾರೆ ಗ್ರಾಹಕರು.

ಇಳಿಸಂಜೆ ವೇಳೆ ಸಂಪಿಗೆ ರಸ್ತೆಯಲ್ಲಿ  ಜನರು ಗುಂಪು ಗುಂಪಾಗಿ ನಿಂತದ್ದು ಕಂಡಿತು. ತಡಮಾಡದೇ ಜನರ ನಡುವೆ ನುಸುಳಿ ‘ಡ್ರೈ ಫ್ರೂಟ್ಸ್ ಗುಲ್ಕನ್, ಐಸ್‌ ಕ್ರೀಮ್ ಹಾಗೂ ಬಾಳೆಹಣ್ಣು’ ಆರ್ಡರ್ ಮಾಡಿದೆ. ಗುಲ್ಕನ್, ಐಸ್ ಕ್ರೀಮ್ ಹಾಗೂ ಕತ್ತರಿಸಿದ ಬಾಣೆಹಣ್ಣನ್ನು ಒಂದು ತಟ್ಟೆಗೆ ಹಾಕಿ ಕೈಗಿಟ್ಟರು.

ಈ ಹಿಂದೆ ಗುಲ್ಕನ್ ತಿಂದಿದ್ದೆ. ಐಸ್‌ ಕ್ರೀಮ್ ಹಾಗೂ ಬಾಳೆಹಣ್ಣಿನೊಂದಿಗೆ ಯಾವತ್ತೂ ಗುಲ್ಕನ್ ತಿಂದಿರಲಿಲ್ಲ. ಹೀಗಾಗಿ, ಅದರ ಬಗ್ಗೆ ಕೊಂಚ ಕೂತುಹಲವಿತ್ತು. ಐಸ್‌ ಕ್ರೀಮ್ ಕೊಂಚ ಕರಗಿ ಗುಲ್ಕನ್‌ನೊಂದಿಗೆ ಬೆರೆತಿತ್ತು. ಅವೆರೆಡನ್ನು ಮಿಶ್ರಣ ಮಾಡಿ ಬಾಯಿಗಿಟ್ಟೆ. ಮತ್ತೊಮ್ಮೆ ಗುಲ್ಕನ್, ಐಸ್‌ ಕ್ರೀಮ್ ಹಾಗೂ ಬಾಳೆ ಹಣ್ಣನ್ನು ಬಾಯಿಗೇರಿಸಿದೆ. ಎರಡೂ ಬಾರಿಯೂ ಹಿಂದೆಂದೂ ಸವಿಯದ ವಿಶೇಷ ಸ್ವಾದವನ್ನೇ ನಾಲಿಗೆಗೆ ಪರಿಚಯಿಸಿತು.

ಬನ್‌ ಅನ್ನು ಎರುಡು ಹೋಳಾಗಿ ಮಾಡಿ ಬೆಣ್ಣೆಯನ್ನು ಸವರಿ, ಅದರ ಮೇಲೆ ಗುಲ್ಕನ್ ಹಾಕಿ ಕೊಟ್ಟರು. ಅದನ್ನು ಸವಿಯುವಾಗಲೇ ಹಳೆಯದ್ದೆಲ್ಲ ನೆನಪಿಗೆ ಬಂತು. ಹಾಗೇ ಗುಲ್ಕನ್ ಸವಿಯುತ್ತಿರುವಾಗಲೇ, ಚಿಕ್ಕವನಿದ್ದಾಗ ಅಂಗಡಿಗೆ ಹೋಗಿ ಬನ್ ಖರೀದಿಸಿ, ಅದನ್ನು ಎರಡು ಹೋಳಾಗಿ ಮಾಡಿ ಅದರ ನಡುವೆ ಗುಲ್ಕನ್ ಹಾಕಿಕೊಂಡು ತಿಂದು ಹಸಿವು ನೀಗಿಸಿದ್ದು ನೆನಪಿಗೆ ಬಂತು. ಅದನ್ನು ತಿಂದು ಮುಗಿಸಿದರೂ ಇನ್ನೂ ಬೇಕು ಎನಿಸುವ ಭಾವ ಮೂಡುತ್ತಿತ್ತು.

ಪಕ್ಕದಲ್ಲಿ ಕೂತಿದ್ದ ಅಂಗಡಿಯ ಮಾಲೀಕ ಟಿ.ಅಳಗಿರಿ ಸ್ವಾಮಿ, ‘ಸರ್, ನಮ್ಮ ತಂದೆ ಹೆಸರು ಎ.ತಿರುವೆಂಗಡಂ. ಅವರು ಈ ಅಂಗಡಿಯೇ ಜಾಗದಲ್ಲೇ ಹಿಂದೆ 1950ರಲ್ಲಿ ಪೆಟ್ಟಿಗೆ ಅಂಗಡಿಯೊಂದನ್ನು ಇಟ್ಟುಕೊಂಡು ವ್ಯಾಪಾರ ಆರಂಭಿಸಿದ್ದರು. ಕ್ರಮೇಣ ಬನ್ ಹಾಗೂ ಗುಲ್ಕನ್ ಮಾರಾಟ ಮಾಡುತ್ತಿದ್ದರು. ಅದೇ ವ್ಯಾಪಾರವನ್ನು ನಾನೂ ಮುಂದುವರೆಸಿಕೊಂಡು ಬಂದಿದ್ದೇನೆ’ ಎನ್ನುತ್ತಾರೆ ಅಳಗಿರಿ.

‘ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿಯೇ. ಈ ಅಂಗಡಿಯನ್ನು 1982ರಲ್ಲಿ ಆರಂಭಿಸಿದೆ. ಹೊಸಕೋಟೆ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನಿಂದ ಹಾಗೂ ರಾಜಸ್ಥಾನದ ಪುಷ್ಕರ್‌ನಿಂದ ಗುಲಾಬಿ ಖರೀದಿಸುತ್ತೇವೆ. ಅದರಿಂದ ಗುಲ್ಕನ್ ತಯಾರಿಸಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ.

‘25–30 ವರ್ಷಗಳಿಂದ ರೆಗ್ಯುಲರ್ ಗ್ರಾಹಕರು ನಮ್ಮ ಅಂಗಡಿಗೆ ಬರುತ್ತಾರೆ. ಕೆಲವರು ಇಲ್ಲಿ ಗುಲ್ಕನ್ ಖರೀದಿಸಿ, ವಿದೇಶಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಕಳುಹಿಸಿಕೊಡುತ್ತಾರೆ. ನಮ್ಮಲ್ಲಿ ಲಭ್ಯವಿರುವ ಗುಲ್ಕನ್ ವರ್ಷವಾದರೂ ಕೆಡುವುದಿಲ್ಲ. ನಿತ್ಯವು ಕನಿಷ್ಠ 500 ಮಂದಿಯಾದರೂ ಇಲ್ಲಿಗೆ ಬರುತ್ತಾರೆ. ₹10 ಸಾವಿರದಿಂದ ₹ 12 ಸಾವಿರದ ವರೆಗೆ ವ್ಯಾಪಾರ ಆಗುತ್ತದೆ. ದೇಹದ ಉಷ್ಣಾಂಶಕ್ಕೂ ಗುಲ್ಕನ್ ಒಳ್ಳೆಯದು. ರುಚಿ, ಗುಣಮಟ್ಟ ಹಾಗೂ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದೊಂದೆ ನನ್ನ ಗುರಿ’ ಎಂದರು.

ಗುಲ್ಕನ್ ವಿಶೇಷ ತಿನಿಸುಗಳು

ಬೆಣ್ಣೆ ಗುಲ್ಕನ್, ಬೆಣ್ಣೆ ಗುಲ್ಕನ್ ಬಾಳೆಹಣ್ಣು, ಬನ್ ಬೆಣ್ಣೆ ಗುಲ್ಕನ್, ಡ್ರೈ ಫ್ರೂಟ್ಸ್ ಬೆಣ್ಣೆ ಗುಲ್ಕನ್, ಬೆಣ್ಣೆ ಗುಲ್ಕನ್ ವೆನಿಲ್ಲಾ ಐಸ್‌ಕ್ರೀಮ್, ಬೆಣ್ಣೆ ಗುಲ್ಕನ್–ಹಣ್ಣು, ಡ್ರೈ ಫ್ರೂಟ್ಸ್ ಬೆಣ್ಣೆ ಗುಲ್ಕನ್–ಐಸ್‌ಕ್ರೀಮ್, ಬೆಣ್ಣೆ ಗುಲ್ಕನ್–ಬಟರ್ ಸ್ಕಾಚ್ ಐಸ್‌ಕ್ರೀಮ್, ಬೆಣ್ಣೆ ಗುಲ್ಕನ್ ಹಣ್ಣು –ಐಸ್ ಕ್ರೀಮ್.

**

ಭಾಗ್ಯಲಕ್ಷ್ಮಿ ಬೆಣ್ಣೆ, ಗುಲ್ಕನ್ ಸ್ಟೋರ್

ವಿಶೇಷ: ಗುಲ್ಕನ್‌ನೊಂದಿಗೆ ಐಸ್‌ಕ್ರೀಮ್ ಹಾಗೂ ಬಾಳೆಹಣ್ಣು

ಸಮಯ: ಬೆಳಿಗ್ಗೆ 10ರಿಂದ ರಾತ್ರಿ 9

ಒಬ್ಬರಿಗೆ: ₹30

ಸ್ಥಳ: ಮಲ್ಲೇಶ್ವರ ವೃತ್ತದ ಬಳಿ, ಸಂಪಿಗೆ ರಸ್ತೆ.

ಸಂಪರ್ಕ: 98455 80031

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !