ಆಗುವುದೆಲ್ಲಾ ಒಳ್ಳೆಯದಕ್ಕೇ!

7

ಆಗುವುದೆಲ್ಲಾ ಒಳ್ಳೆಯದಕ್ಕೇ!

Published:
Updated:
Deccan Herald

ಹಾಗೆಂದು ನಾವೂ ಬಹಳ ಸಲ ಹೇಳುತ್ತೇವೆ.

ವಿಶೇಷವಾಗಿ ಬೇರೆಯವರು ತಮ್ಮ ಕಷ್ಟವನ್ನು ನಮ್ಮಲ್ಲಿ ಹೇಳಿಕೊಂಡಾಗ ಅವರಿಗೆ ಸಾಂತ್ವನ ಹೇಳಲಿಕ್ಕಾಗಿ, ‘ಗಾಬರಿಯಾಗಬೇಡಿ, ಆಗುವುದೆಲ್ಲಾ ಒಳ್ಳೆಯದಕ್ಕೇ! ಹಾಗೆಂದು ನಂಬಿಕೊಳ್ಳಿ. ಕಷ್ಟವೆಲ್ಲ ಕರಗುತ್ತದೆ. ಯಾರಿಗೆ ಸಮಸ್ಯೆ ಇಲ್ಲ ಹೇಳಿ? ಬಂದಿದ್ದನ್ನು ಎದುರಿಸಬೇಕು. ಧೈರ್ಯಗೆಡಬಾರದು. ಕಷ್ಟವನ್ನು ಕೊಡುವವನೂ ಅವನೇ. ಅದನ್ನು ಎದುರಿಸುವ ಶಕ್ತಿಯನ್ನು ಅವನೇ ಕೊಡುತ್ತಾನೆ. ಹಾಗೆಯೇ ಕಷ್ಟವನ್ನು ಕರಗಿಸುತ್ತಾನೆ. ಸಮಸ್ಯೆಗಳು ನಮ್ಮಂತಹ ಮನುಷ್ಯರಿಗಲ್ಲದೇ ಮರಗಳಿಗೆ ಬರುತ್ತಾ...?’ ಹೀಗೇ ಪುಂಕಾನುಪುಂಕವಾಗಿ ಸಲಹೆ ಕೊಡುತ್ತೇವೆ. ಎದುರಿನ ವ್ಯಕ್ತಿಗೆ ಧೈರ್ಯ ತುಂಬುತ್ತೇವೆ. ಅವನ ಕಷ್ಟಕ್ಕೆ ಮರುಗುತ್ತೇವೆ. ಅವನ ಕಷ್ಟ ಪರಿಹಾರವಾಗಲಿ ಎಂದೂ ಹಾರೈಸುತ್ತೇವೆ. ಇನ್ನೂ ಆತ್ಮೀಯರಾದರೆ ಅವರಿಗಾಗಿ ಪ್ರಾರ್ಥಿಸುತ್ತೇವೆ.

ಎಲ್ಲವೂ ನಿಜ. ಎಲ್ಲವೂ ಒಳ್ಳೆಯದು.

ಆದರೆ ಕಷ್ಟವೊಂದು ಆಕಸ್ಮಿಕವಾಗಿ ನಮಗೇ ಬಂದಾಗ ನಾವು ಗಾಬರಿಯಾಗುತ್ತೇವೆ. ಕಂಗಾಲಾಗುತ್ತೇವೆ. ಬದುಕಿನ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುತ್ತೇವೆ. ನನಗೇಕೆ ಇಂಥ ಕಷ್ಟ ಬಂತೆಂದು ಹಳಹಳಿಸುತ್ತೇವೆ. ಬೇರೆಯವರಿಗೆ ನಾವೇ ಹೇಳಿದ ಬುದ್ಧಿ ಮಾತುಗಳು ನಮಗೇ ನೆನಪಾಗುವುದಿಲ್ಲ. ನಮ್ಮಲ್ಲಿದೆ ಎಂದುಕೊಂಡ ಧೈರ್ಯ ನಮ್ಮ ನೆರವಿಗೆ ಬರುವುದಿಲ್ಲ. ಸಂಕಷ್ಟದ ರಾತ್ರಿ ಕರಗಿ ಸಂತೋಷದ ಬೆಳಕು ಮೂಡುವುದೇ ಇಲ್ಲವೇನೋ ಎನ್ನುವ ಹಾಗೆ ಗೋಳಿಡುತ್ತೇವೆ. ಯಾರಾದರೂ ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ನಮಗೆ ಸಹಾಯ ಮಾಡಲಿ ಎಂದು ನಿರೀಕ್ಷಿಸುತ್ತೇವೆ. ‘ಆಗಿದ್ದೆಲ್ಲಾ ಒಳ್ಳೆಯದಕ್ಕೇ’ ಎಂದುಕೊಳ್ಳುವುದಿಲ್ಲ.

ಅಂಥ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಹಾಗೆಯೇ ಮಾಡುತ್ತೇವೆ. ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ ಎನ್ನುವುದು ಕಷ್ಟದಲ್ಲಿರುವ ನಮಗೆ ಅರ್ಥವಾಗುವುದಿಲ್ಲ. ಇತರರು ಹೇಳುವ ಸಾಂತ್ವನವೂ ಅಷ್ಟಾಗಿ ನಮ್ಮ ಮೇಲೆ ಪರಿಣಾಮವನ್ನು ಉಂಟುಮಾಡುವುದಿಲ್ಲ. ಕತ್ತಲಲ್ಲಿ ಕಣ್ಮುಚ್ಚಿ ಕುಳಿತುಕೊಂಡು ಬೆಳಕನ್ನು ತಂದು, ಕೈಹಿಡಿದು ನಡೆಸುವವರಿಗಾಗಿ ಕಾಯುತ್ತಿರುವವನ ಮನಃಸ್ಥಿತಿಯಲ್ಲಿರುತ್ತೇವೆ.

ಆತ್ಮೀಯರು ದುರ್ಮರಣಕ್ಕೀಡಾದಾಗ, ವ್ಯಾಪಾರದಲ್ಲಿ ನಷ್ಟವಾದಾಗ, ಪ್ರೇಯಸಿಯು ಬಿಟ್ಟು ಹೋದಾಗ, ಪತ್ನಿಗೆ ಪರಸಂಗವಿರುವುದು ಗೊತ್ತಾದಾಗ, ನಂಬಿದವರು ಮೋಸ ಮಾಡಿದಾಗ, ಮಗ ಕೆಟ್ಟ ಚಟಗಳಿಗೆ ಬಲಿಯಾದಾಗ, ಎಷ್ಟೇ ಕೆಲಸವನ್ನು ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗದಿರುವಾಗ – ಹೀಗೇ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ, ಅನಿರೀಕ್ಷಿತವಾಗಿ ಕಷ್ಟಗಳು ಬಂದೆರಗುತ್ತವೆ. ಅವುಗಳನ್ನು ಬಂದಹಾಗೆಯೇ ಎದುರಿಸುವ ತಾಳ್ಮೆ, ಜಾಣ್ಮೆ ಎಲ್ಲರಿಗೂ ಇರುವುದಿಲ್ಲ. ಇರಬೇಕಾದಷ್ಟು ಸಹನೆಯೂ ಇರುವುದಿಲ್ಲ. ಹಾಗಾಗಿಯೇ ಅಂಥ ಸಂದರ್ಭಗಳಲ್ಲಿ ಬಹಳಷ್ಟು ಅನಾಹುತಗಳು ನಡೆದುಹೋಗುತ್ತವೆ. ಬಂಗಾರದ ಜಿಂಕೆ ಇರುವುದು ಸಾಧ್ಯವಿಲ್ಲ ಎನ್ನುವುದು ತಿಳಿದಿದ್ದರೂ ಸೀತೆಯ ಒತ್ತಾಸೆಯಿಂದ ಶ್ರೀರಾಮನು ಅಂಥ ಜಿಂಕೆಯನ್ನು ಹಿಡಿದುಕೊಂಡು ಬರಲಿಕ್ಕೆ ಹೋದನಷ್ಟೆ! ಶ್ರೀರಾಮನೇ ಬಂಗಾರದ ಜಿಂಕೆಗಾಗಿ ಹೊರಡುತ್ತಾನಾದರೆ, ಸಮಸ್ಯೆಗಳ ಸುಳಿಯಲ್ಲಿರುವ ಸಾಮಾನ್ಯರ ಮನಃಸ್ಥಿತಿಯು ಹೇಗಾಗಿರಬೇಡ?
ಜೀವನದಲ್ಲಿ ಬರುವ ಕಷ್ಟಗಳು ನಮಗೆ ಸಾಕಷ್ಟು ಜೀವನಪಾಠಗಳನ್ನು ಕಲಿಸುತ್ತವೆ. ಕಲಿಯುವ ಕುತೂಹಲವನ್ನು ಇರಿಸಿಕೊಂಡವರಿಗೆ ಅಂಥ ಕಲಿಕೆ ಸಾಧ್ಯವೂ ಆಗುತ್ತದೆ. ಕಷ್ಟವನ್ನೂ ಸುಖವನ್ನೂ ಸಮಾನವಾಗಿ ಸ್ವೀಕರಿಸುವ ಮನಃಸ್ಥಿತಿಯನ್ನು ಸಾಧಿಸುವುದು ಎಲ್ಲರಿಗೂ ಸುಲಭವೇನಲ್ಲ. ತಮಗೆ ಬಂದ ಕಷ್ಟನಷ್ಟಗಳನ್ನು ಎದುರಿಸಿ ಮುಂದುವರೆದವರೇ ಜೀವನದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಮನುಷ್ಯನಲ್ಲಿರುವ ಅಪರಿಮಿತವಾದ ಧೀಶಕ್ತಿಯನ್ನು ಸದುಪಯೋಗಪಡಿಸಿಕೊಂಡವರ ಸಾಲಿನಲ್ಲಿ ಅವರೆಲ್ಲರೂ ಮಿಂಚುತ್ತಿದ್ದಾರೆ. ಅದೇ, ಸಮಸ್ಯೆಗಳಿಗೆ ಹೆದರಿಕೊಂಡವರು ಜೀವನದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.

ಜೀವನದಲ್ಲಿ ಎಂಥದ್ದೇ ಕಷ್ಟಗಳು ಬಂದರೂ ಎದೆಗುಂದಬಾರದು. ಮೌಲ್ಯಗಳನ್ನು ಬಿಡಬಾರದು. ಸಮಸ್ಯೆಯ ಪರಿಹಾರಕ್ಕಾಗಿ ಅಡ್ಡದಾರಿಯನ್ನು ಹಿಡಿಯಬಾರದು. ಅನೈತಿಕವಾದ ದಾರಿಯು ಮೊದಲಿಗೆ ರಾಜಬೀದಿಯಂತೆ ಕಂಡರೂ ಅದರಲ್ಲಿ ಸ್ವಲ್ಪವೇ ಮುಂದುವರೆದರೂ ನಂತರ ನಿತ್ಯನರಕವನ್ನು ಅನುಭವಿಸುವಂತೆ ಮಾಡಿಬಿಡುತ್ತದೆ.  ಜೀವನಮೌಲ್ಯಗಳ ಅನುಷ್ಠಾನದಲ್ಲಿ ರಾಜಿಮಾಡಿಕೊಳ್ಳದೇ ದಿನಗಳನ್ನು ಎದುರಿಸಬೇಕು. ತನ್ನದಲ್ಲದ ತಪ್ಪುಗಳಿಗಾದರೂ ಮಹಾರಾಜನಾಗಿದ್ದ ಸತ್ಯಹರಿಶ್ಚಂದ್ರನು ಪಡಬಾರದ ಕಷ್ಟಗಳನ್ನು ಅನುಭವಿಸಬೇಕಾಯಿತಲ್ಲವೇ? ಎಷ್ಟೇ ಕಷ್ಟಬಂದರೂ ಅವನು ಸತ್ಯವನ್ನು ಬಿಡಲಿಲ್ಲ.
ನಮ್ಮನ್ನು ಹೆದರಿಸುವ ಕಷ್ಟ ಬಂದಾಗ, ಅದನ್ನು ಆತ್ಮೀಯರ ಹತ್ತಿರ ಹೇಳಿಕೊಳ್ಳಬೇಕು. ಹಾಗೆ ಹೇಳಿಕೊಳ್ಳುವುದರಿಂದ ಅವರ ಮುಂದೆ ನಾವು ಸಣ್ಣವರಾಗುತ್ತೇವೆ ಎನ್ನುವ ಆಲೋಚನೆಯನ್ನು ಮಾಡಬಾರದು. ನಮ್ಮ ಬದುಕಿನಲ್ಲಿ ಅವರು ಆತ್ಮೀಯರಾಗಿರುವುದು ಕೂಡ ನಮ್ಮ ಅದೃಷ್ಟ ಎಂದು ನಂಬಿಕೊಳ್ಳಬೇಕು. ವ್ಯವಸ್ಥೆಯೇ ನಮಗೆ ನೆರೆಹೊರೆಯವರನ್ನು, ಸ್ನೇಹಿತರನ್ನು, ಸಂಬಂಧಿಕರನ್ನು ಕೊಟ್ಟಿದೆ. 

ಬಹಳಷ್ಟು ಕಷ್ಟಗಳು ನಮ್ಮ ತಪ್ಪಿನಿಂದಲೇ ಬರುತ್ತವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತ ಇರುವವನ ಜೀವನದಲ್ಲಿ ಕಷ್ಟಗಳು ಬಹಳ ಕಡಿಮೆ ಎನ್ನುವುದನ್ನು ಗಮನಿಸಬೇಕು. ನಮ್ಮದಲ್ಲದ ತಪ್ಪಿನಿಂದಲೂ ಬರುವ ಕಷ್ಟನಷ್ಟಗಳನ್ನು ಕೂಡ ನಮ್ಮ ಪ್ರಾಮಾಣಿಕತೆಯಿಂದ, ನಿತ್ಯಪ್ರಯತ್ನದಿಂದ ಕರಗಿಸಿಕೊಳ್ಳಲಿಕ್ಕೆ ಸಾಧ್ಯವಿದೆ. ಪ್ರಾಮಾಣಿಕವಾದ ಪ್ರಯತ್ನದಿಂದ ಸಾಧಿಸಿದ ಯಶಸ್ಸಿನ ಮತ್ತು ಸುಖದ ಆಯುಸ್ಸು ಹೆಚ್ಚಾಗಿರುತ್ತದೆ.

ಆಗಿದ್ದೆಲ್ಲವೂ ಒಳ್ಳೆಯದಕ್ಕೇ – ಎನ್ನುವಂಥ ಬಹಳಷ್ಟು ಸಣ್ಣ ಪುಟ್ಟ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತವೆ. ಅದರ ಅರಿವಾಗುವುದು ಮಾತ್ರ ಕೊನೆಯಲ್ಲಿ. ಹಾಗಾಗಿ ಏನೇ ಬರಲಿ, ಎದುರಿಸುವ ಧೈರ್ಯವಿರಲಿ. ಎಷ್ಟೇ ಕಷ್ಟ ಬರಲಿ, ಅದನ್ನು ಸುಖವನ್ನಾಗಿ ಪರಿವರ್ತಿಸಿಕೊಳ್ಳುವ ಮನಃಸ್ಥಿತಿ ಇರಲಿ ಎಂದುಕೊಳ್ಳಬೇಕು. ಕಷ್ಟಗಳ ಮಳೆ ಸುರಿದಾಗ ಮಾತ್ರ ಮನುಷ್ಯನಲ್ಲಿರುವ ನಿಜವಾದ ಅಂತಃಸತ್ವವು ಹೊರಗೆ ಬರಲಿಕ್ಕೆ ಸಾಧ್ಯ.


ಡಿ. ಎಂ. ಹೆಗಡೆ

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !