‘ಈಡಿಗ ಸಮುದಾಯದ ಎಲ್ಲಾ ಉಪಜಾತಿಗಳು ಒಂದುಗೂಡಬೇಕು’

7
ಅಭಿನಂದನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕರೆ

‘ಈಡಿಗ ಸಮುದಾಯದ ಎಲ್ಲಾ ಉಪಜಾತಿಗಳು ಒಂದುಗೂಡಬೇಕು’

Published:
Updated:
ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್, ಶಾಸಕರು ಉಮಾನಾಥ್‌ ಕೋಟ್ಯಾನ್, ಎಸ್‌.ಕುಮಾರ್‌ ಬಂಗಾರಪ್ಪ, ಎಚ್‌. ಹರತಾಳು ಹಾಲಪ್ಪ, ಸುಭಾಷ್‌ ಆರ್‌. ಗುತ್ತೇದಾರ್, ಸುನಿಲ್‌ ನಾಯ್ಕ (ಕುಳಿತವರು ಎಡದಿಂದ) ಅವರನ್ನು ಸನ್ಮಾನಿಸಲಾಯಿತು. ಸಂಘ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಬಿ.ಕೆ.ಶಿವರಾಮ್ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಒಕ್ಕಲಿಗ, ಲಿಂಗಾಯತ ಸ್ವಾಮೀಜಿಗಳು ಒಂದಾದರೆ ಸರ್ಕಾರ ನಡುಗುತ್ತದೆ. ಆದರೆ, ನಮ್ಮ ಸ್ವಾಮೀಜಿಗಳು ಒಟ್ಟಾಗುವುದಿಲ್ಲ. ಒಂದು ವೇಳೆ ಆದರೂ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬೇಸರದಿಂದ ನುಡಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಎಲ್ಲಾ ಈಡಿಗ ಉಪಜಾತಿಗಳ ಸಹಯೋಗದಲ್ಲಿ ನೂತನ ಸಚಿವರು ಮತ್ತು ಶಾಸಕರಿಗೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಕರಾವಳಿ ಭಾಗದಲ್ಲಿ ಯಾವ ರಾಜಕಾರಣಿಯೂ ಬಿಲ್ಲವರ ಮತಗಳನ್ನು ನಿರ್ಲಕ್ಷಿಸಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ. ಆದ್ದರಿಂದ ಈಡಿಗ ಸಮುದಾಯದ ಎಲ್ಲಾ ಉಪ ಜಾತಿಗಳು ಸಂಘಟಿತರಾಗಬೇಕು. ನಮ್ಮ ಸಮುದಾಯದ ಜನಸಂಖ್ಯೆ 40 ಲಕ್ಷವಿದೆ. ಆದರೆ, ಸಂಘಟನೆಯ ಕೊರತೆಯಿಂದ ನಮ್ಮ ಶಕ್ತಿ ಕ್ಷೀಣಿಸುತ್ತಿದೆ’ ಎಂದರು.

‘ನಮ್ಮ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಳಿತಕ್ಕೊಳಗಾಗಿತ್ತು. ದಿನಕಳೆದಂತೆ ಪರಿಸ್ಥಿತಿ ಬದಲಾಯಿತು. ದಾಖಲೆಗಳ ಸರದಾರರನ್ನು ನಮ್ಮ ಸಮುದಾಯ ಸಮಾಜಕ್ಕೆ ನೀಡಿದೆ. ಜನಾರ್ದನ ಪೂಜಾರಿ, ಎಸ್.ಬಂಗಾರಪ್ಪ, ಡಾ.ರಾಜ್‌ಕುಮಾರ್, ಆರ್.ಎಲ್.ಜಾಲಪ್ಪ ಅವರ ಸಾಧನೆ ಅನನ್ಯ’ ಎಂದು ಸ್ಮರಿಸಿದರು.

‘ನಾನು 8 ವರ್ಷದವನಿದ್ದಾಗ ನಮ್ಮೂರಿನ ದೇವಸ್ಥಾನದ ಹೊರಗೆ ತೆಂಗಿನ ಕಾಯಿ ಇಟ್ಟರೆ, ಅರ್ಚಕ ಅದಕ್ಕೆ ತೀರ್ಥ ಪ್ರೋಕ್ಷಣೆ ಮಾಡಿ, ಒಳಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಮುಜರಾಯಿ ಇಲಾಖೆ ಸಚಿವನಾದಾಗ ಅದೇ ದೇವಸ್ಥಾನದ ಒಳಗೆ ನನ್ನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋದರು. ಅಷ್ಟರಮಟ್ಟಿಗೆ ಸಮಾಜದಲ್ಲಿ ಬದಲಾವಣೆಯಾಗಿದೆ. ಇಚ್ಛಾಶಕ್ತಿ ಇದ್ದರೆ ನಾವೇನಾದರೂ ಸಾಧಿಸಬಹುದು’ ಎಂದು ತಿಳಿಸಿದರು.

‘ಕರಾವಳಿ ಜಿಲ್ಲೆಗಳ ಜೈಲುಗಳಲ್ಲಿರುವ ಬಹುತೇಕರು ನಮ್ಮ ಸಮುದಾಯದವರಾಗಿದ್ದಾರೆ’ ಎಂದು ವಿಷಾದಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಯುವಕರು ಅಪರಾಧ ಜಗತ್ತಿನೆಡೆಗೆ ಆಕರ್ಷಿತರಾಗದಂತೆ ತಡೆಯಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಯುವಜನರನ್ನು ಪ್ರಚೋದಿಸಬಾರದು. ಅವರನ್ನು ಸರಿದಾರಿ ತೋರುವ ಹೊಣೆ ಎಲ್ಲಾ ಪಕ್ಷದ ರಾಜಕಾರಣಿಗಳ ಮೇಲಿದೆ ಎಂದು ಹೇಳಿದರು.

ಸಾಗರ ಶಾಸಕ ಕುಮಾರ್‌ ಬಂಗಾರಪ್ಪ,‘ಸಮಾಜದಲ್ಲಿ ರಾಜಕೀಯ ಕ್ಷೇತ್ರ ಚಿಕ್ಕ ಬಿಂದುವಷ್ಟೇ. ರಾಜಕಾರಣಕ್ಕೆ ಬಂದ ನಂತರ ಸಂಘ ಅವರನ್ನು ಗೌರವಿಸುವುದಕ್ಕಿಂತ ನಮ್ಮ ಸಮುದಾಯದವರನ್ನು ಒಗ್ಗೂಡಿಸುವುದು ಹಾಗೂ ಸಮಾಜದೊಳಗಿನ ಒಳಗಿನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಸಂಘ ಮಾಡಬೇಕು’ ಎಂದರು.

ಬಿಲ್ಲವ ಸಮಾಜದ ಅಧ್ಯಕ್ಷ ವೇದಕುಮಾರ್, ‘ಸಮುದಾಯದ ಸಮಸ್ಯೆಗಳ ನಿವಾರಣೆಗೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶ್ರಮಿಸಬೇಕು. ಈ ಬಾರಿ ವಿಧಾನಸಭೆಗೆ ಸಮುದಾಯದ 6 ಮಂದಿ ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 4 ಸಂಸದರನ್ನು ಆಯ್ಕೆಯಾಗಲು ನಾವು ಶ್ರಮಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !