‘ಗಾಂಧೀಜಿ ವಿರುದ್ಧ ದ್ವೇಷ ಸಲ್ಲದು’

ಬುಧವಾರ, ಏಪ್ರಿಲ್ 24, 2019
23 °C
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್‌ ಜನ್ಮ ದಿನಾಚರಣೆ

‘ಗಾಂಧೀಜಿ ವಿರುದ್ಧ ದ್ವೇಷ ಸಲ್ಲದು’

Published:
Updated:
Prajavani

ಬೆಂಗಳೂರು: ‘ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ನಡುವಿದ್ದ ಅಭಿಪ್ರಾಯಗಳ ಸಂಘರ್ಷಗಳನ್ನೇ ಮುಂದಿಟ್ಟುಕೊಂಡು ಶೋಷಿತ ಸಮುದಾಯದವರು ಗಾಂಧಿಯನ್ನು ದ್ವೇಷಿಸಬಾರದು, ಟೀಕಿಸಬಾರದು’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಂಬೇಡ್ಕರ್‌ 128ನೇ ಜನ್ಮ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವದ ದುಂಡು ಮೇಜಿನ ಸಭೆ ಮತ್ತು ಪುಣೆ ಒಪ್ಪಂದದ ವೇಳೆ ಗಾಂಧಿ ಮತ್ತು ಅಂಬೇಡ್ಕರ್‌ ಅವರ ನಡುವೆ ಕೆಲವೊಂದು ಭಿನ್ನಾಭಿಪ್ರಾಯಗಳು ಮೂಡಿದ್ದವು. ತದನಂತರ ಅಂಬೇಡ್ಕರ್‌ ಅವರ ಜನಪರ ಕಾಳಜಿ ಗಾಂಧೀಜಿಗೆ ಅರ್ಥವಾಯಿತು. ಆ ಬಳಿಕ ಗಾಂಧಿ ನೂರಾರು ಬಾರಿ ಬಾಬಾಸಾಹೇಬರನ್ನು ಪ್ರಶಂಸಿದ್ದಾರೆ. ಈ ಇಬ್ಬರು ಮಹನೀಯರನ್ನು ಸಮಾನವಾಗಿ ಗೌರವಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಅಂಬೇಡ್ಕರ್‌ ಪರಿಶಿಷ್ಟರಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಭಾವ ಬಹುತೇಕರಲ್ಲಿದೆ. ಅವರು ದಲಿತರ ಶ್ರೇಯೋಭಿವೃದ್ಧಿಗಿಂತ ಹತ್ತುಪಟ್ಟು ಹೆಚ್ಚು ಬಡವರು, ಮಹಿಳೆಯರು, ಕಾರ್ಮಿಕರು ಮತ್ತು ದಮನಿತರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ’ ಎಂದು ತಿಳಿಸಿದರು.

‘ಸಂವಿಧಾನ ರಚನೆಗಾಗಿ ಮಾತ್ರ ಬಾಬಾಸಾಹೇಬರನ್ನು ನೆನಪಿಟ್ಟುಕೊಂಡಿದ್ದೇವೆ. ಆದರೆ, ಅವರು ಭಾಕ್ರಾ-ನಂಗಲ್‌, ಹಿರಾಕುಡ್ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಕ್ಕೆ ಕಾರಣಕರ್ತರು. ಅವರ ದೂರದೃಷ್ಟಿಯಿಂದ ಬಂಗಾಳ, ಬಿಹಾರ, ಓಡಿಶಾದ ಸಾವಿರಾರು ಎಕರೆ ಜಮೀನು ನೀರಾವರಿಗೆ ಒಳಪಟ್ಟಿದೆ’ ಎಂದು ತಿಳಿಸಿದರು.

ಕುಲಪತಿ ಎಸ್‌.ಜಾಫೆಟ್‌, ‘ಜೀವಂತ ಪ್ರಜಾಪ್ರಭುತ್ವ ಸ್ಥಾಪಿಸಲು ಚಳುವಳಿಗಳು ಅಗತ್ಯ. ಆದರೆ, ಇಂದು ಚಳುವಳಿಗಳಿಲ್ಲ, ಜಾತಿ ಮತ್ತು ಸಮುದಾಯ ಕೇಂದ್ರಿತ ಪ್ರತಿಭಟನೆಗಳು ನಿತ್ಯ ನಡೆಯುತ್ತವೆ’ ಎಂದು ಬೇಸರಿಸಿದರು.

‘ಯುವ ಸಮೂಹಕ್ಕೆ ರಾಜಕೀಯ ಮತ್ತು ಸಾಮಾಜಿಕ ಪ್ರಕ್ರಿಯೆಯಲ್ಲಿ ಆಸಕ್ತಿಯಿಲ್ಲ. ಸ್ವಯಂ ಕೇಂದ್ರಿತ ಸೆಲ್ಫಿ ಮನಸ್ಥಿತಿ ಹೆಚ್ಚುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ’ ಎಂದರು.

ಲೇಖಕಿ ಅನುಸೂಯ ಕಾಂಬ್ಳೆ,‘ಭಾರತದ ಸಂವಿಧಾನ ಜನ ಬದುಕಿನ ಮಹಾಕಾವ್ಯ. ‘ಅದನ್ನು ಬದಲಾಯಿಸಲು ಬಂದಿದ್ದೇವೆ’ ಎಂದು ಯಾರಾದರೂ ಹೇಳಿದರೆ, ಅವರು ಸಮಾನತೆಯನ್ನೇ ನಾಶ ಮಾಡಲು ಹೊರಟಿದ್ದಾರೆಂದು ಭಾವಿಸಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !