ಗುರುವಾರ , ಮಾರ್ಚ್ 4, 2021
29 °C
american visky

ರೋಹನ್‌ಗೆ ಚಿಯರ್ಸ್‌ ಹೇಳಿದ ಕಾಕ್‍ಟೈಲ್ ಚಾಲೆಂಜ್

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Prajavani

ಮಹಾನಗರಿ ಮುಂಬೈಯಿಂದ ಬೆಂಗಳೂರಿಗೆ ಬಂದು ಬಾರ್‌ಟೆಂಡರ್‌ ವೃತ್ತಿ ಆರಂಭಿಸಿದ ಯುವಕ ರೋಹನ್‌ ಮಟ್ಮರಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ 3ನೇ ಆವೃತ್ತಿಯ ‘ಬ್ರೌನ್-ಫೋರ್‍ಮನ್ ಅಮೆರಿಕನ್ ವಿಸ್ಕಿ ಲೆಗೆಸಿ ಕಾಕ್‍ಟೈಲ್ ಚಾಲೆಂಜ್- 2019’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದೇಶದ 300 ಸ್ಪರ್ಧಿಗಳ ನಡುವೆ ಸರ್ಜಾಪುರ ರಸ್ತೆಯಲ್ಲಿರುವ ‘ಬೈಜಿ ಬ್ರೆವಿಸ್ಕಿ ಬ್ರೆವಿಂಗ್ ಕಂಪನಿ’ಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರೋಹನ್ ಚಾಂಪಿಯನ್‌ ಆದರು. ನಗರದಿಂದ ಒಟ್ಟು ನಾಲ್ಕು ಮಂದಿ ಸ್ಪರ್ಧಿಸಿದ್ದರು.

ನವದೆಹಲಿಯಲ್ಲಿ ನಡೆದ ಅದ್ದೂರಿ ಫೈನಲ್‍ನಲ್ಲಿ ತಮ್ಮ ವಿಶಿಷ್ಟ ಕಾಕ್‍ಟೈಲ್‍ಗಳ ಮೂಲಕ ಕೌಶಲವನ್ನು ಪ್ರದರ್ಶಿಸಿದರು. ಪೈನಾಪಲ್‌, ಬೆಲ್ಲ ಬಳಸಿದ  ‘ಲಿಲ್ಲಿಯನೇರ್’ ಮತ್ತು ದಾಸವಾಳ ಹೂ ಬಳಸಿ ತಯಾರಿಸಿದ ‘ಅಝಟೆಕ್ ಮುಳೆ ಕಾಕ್‍ಟೈಲ್‍’ಗಳ ಮೂಲಕ ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯ ಗೆದ್ದರು.

ಇವರಿಗೆ ಟೆನ್ನೆಸ್ಸಿಯ ಲಿಂಚ್‍ಬರ್ಗ್‍ನಲ್ಲಿರುವ ಆಕರ್ಷಕ ಜಾಕ್ ಡೇನಿಯಲ್ ಡಿಸ್ಟಿಲರಿ ಹಾಗೂ ಅಮೆರಿಕದ ವರ್ಸಿಲೆಸ್ ಕೆಂಟುಕಿಯಲ್ಲಿರುವ ದ ವುಡ್‍ಫೋರ್ಡ್ ರಿಸರ್ವ್ ಡಿಸ್ಟಿಲರಿಗೆ ಪ್ರವಾಸ ಕೈಗೊಳ್ಳುವ ಅವಕಾಶ ಲಭಿಸಿದೆ. ಈ ಡಿಸ್ಟಿಲರಿಗಳ ಜತೆಗೆ ಅವರು ಬ್ರೂಕ್ಲಿನ್‍ನಲ್ಲಿ ನಡೆಯುವ ಅಗ್ರಗಣ್ಯ ಅಂತರರಾಷ್ಟ್ರೀಯ ಮಟ್ಟದ ಬಾರ್ ಮತ್ತು ಬೇವರೇಜ್ ವ್ಯಾಪಾರ ಮೇಳ ಎನಿಸಿದ ಬಾರ್ ಕಾನ್ವೆಂಟ್‍ಗೆ ಕೂಡ ಭೇಟಿ ನೀಡುವ ಅವಕಾಶವಿದೆ. ಜಾಗತಿಕ ಮಟ್ಟದಲ್ಲಿ ತಜ್ಞ ಬಾರ್‌ ಟೆಂಡರ್‌ಗಳ ಜೊತೆ ಬೆರೆಯುವ ಅವಕಾಶ ಕೂಡಾ ದೊರಕಲಿದೆ.

ಮುಂಬೈನಲ್ಲಿ ಹುಟ್ಟಿದ ರೋಹನ್‌ ಬನ್ನೇರುಘಟ್ಟದ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ತರಬೇತಿ ಪಡೆದಿದ್ದಾರೆ. ನಂತರ ವಿದೇಶದಲ್ಲಿಯೂ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ರೋಹನ್‌ ಅಚ್ಚ ಕನ್ನಡಿಗರಂತೆ ಕನ್ನಡ ಮಾತನಾಡುತ್ತಾರೆ. ಇಲ್ಲಿ ಕೆಲಸಕ್ಕೆ ಬೆಲೆ ಇದೆ. ಹಾಗಾಗಿ ಇಲ್ಲಿಯೇ ಮುಂದುವರಿಯಬೇಕು ಎಂದಿದ್ದೇನೆ ಎನ್ನುತ್ತಾರೆ ರೋಹನ್‌.

‘ಮದ್ಯವನ್ನು ಹಾಗೆಯೇ ಕುಡಿಯುವುದಕ್ಕಿಂತ ಹಣ್ಣಿನ ರಸ ಮಿಶ್ರಣ ಮಾಡಿ ತಯಾರಿಸುವ ಕಾಕ್‌ಟೇಲ್‌ ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಬೆಂಗಳೂರಿನ ಜನ ಇದನ್ನು ನಿಧಾನಕ್ಕೆ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ಬಗೆಯ ಕಾಕ್‌ಟೇಲ್‌ ತಯಾರಿಸುತ್ತಿರುತ್ತೇನೆ. ಫ್ಲೇವರ್‌ ಕೂಡಾ ಬದಲಾಯಿಸುತ್ತಿರುತ್ತೇನೆ. ಬಾರ್‌ಗೆ ಬಂದ ಜನ ಮೆನು ಕಾರ್ಡ್‌ ನೋಡಿ ಮದ್ಯ ಖರೀದಿಸುವುದು ಕಡಿಮೆ. ಮೆನು ನೋಡಿ ಕಾಕ್‌ಟೇಲ್‌ ಆರ್ಡರ್‌ ಮಾಡಿದರೆ ಬಹಳ ಖುಷಿಯಾಗುತ್ತದೆ. ನಮ್ಮ ಕೆಲಸಕ್ಕೆ ಬೆಲೆಯೂ ಸಿಗುತ್ತದೆ’ ಎನ್ನುತ್ತಾರೆ.

ಸ್ಪರ್ಧೆಯಲ್ಲಿ ಅಮೆರಿಕನ್ ವಿಸ್ಕಿಗಳಾದ ಜಾಕ್ ಡೆನಿಯಲ್ಸ್‍ನ ಓಲ್ಡ್ ನಂ.7, ವುಡ್‍ಫೋರ್ಡ್ ರಿಸರ್ವ್, ಜೆಂಟಲ್‍ಮನ್ ಜಾಕ್ ಮತ್ತು ಡೇನಿಯಲ್ಸ್‌ನ ಸಿಂಗಲ್ ಬ್ಯಾರಲ್ ಬಳಸಿಕೊಂಡು ತಮ್ಮ ವಿಶಿಷ್ಟ ಕಾಕ್‍ಟೈಲ್ ರಿಸಿಪಿ ಸಿದ್ಧಪಡಿಸಲು ಸೂಚಿಸಲಾಗುತ್ತದೆ.

ದೆಹಲಿ, ಚಂಡೀಗಢ, ಗುರುಗ್ರಾಮ, ಪುಣೆ, ಮುಂಬೈ, ಗೋವಾ, ಚೆನ್ನೈ ಮತ್ತು ಬೆಂಗಳೂರಿನ 300ಕ್ಕೂ ಹೆಚ್ಚು ಬಾರ್‌ಟೆಂಡರ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ 100 ಮಂದಿ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದಿದ್ದರು. ಮೂರು ತಿಂಗಳ ಕಠಿಣ ಎಲಿಮಿನೇಷನ್ ಪ್ರಕ್ರಿಯೆ ಬಳಿಕ 17 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. 

ರೋಹನ್‌ ಸ್ಪರ್ಧೆಯಲ್ಲಿ ಗೆದ್ದಿರುವುದು ಇದೇ ಮೊದಲಲ್ಲ. ‘ಪ್ರತಿ ವರ್ಷ ಐದಾರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಕಳೆದ ವರ್ಷವೂ ಎರಡು ಸ್ಪರ್ಧೆಗಳಲ್ಲಿ ಗೆದ್ದಿದ್ದೇನೆ. ಬೆಂಗಳೂರಿನಲ್ಲಿ ಈ ವೃತ್ತಿಗೆ ಉತ್ತಮ ಪ್ರೋತ್ಸಾಹ ಮತ್ತು ಗೌರವ ಸಿಗುತ್ತಿದೆ. ಹೀಗಾಗಿ ಇದು ಸಾಧ್ಯವಾಗಿದೆ’ ಎನ್ನುತ್ತಾರೆ ರೋಹನ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.