ಶ್ರೀಲಂಕಾ: ರಾಜಪಕ್ಸೆ ವಿರುದ್ಧ ಅವಿಶ್ವಾಸ ಅಂಗೀಕಾರ

7
ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ಮತ್ತೊಂದು ಆಘಾತ

ಶ್ರೀಲಂಕಾ: ರಾಜಪಕ್ಸೆ ವಿರುದ್ಧ ಅವಿಶ್ವಾಸ ಅಂಗೀಕಾರ

Published:
Updated:
Deccan Herald

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್‌, ಪ್ರಧಾನಿ ಮಹಿಂದ ರಾಜಪಕ್ಸೆ ವಿರುದ್ದ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಬುಧವಾರ ಅಂಗೀಕರಿಸಿದೆ.

ಪ್ರಧಾನಿಯಾಗಿದ್ದ ರನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಆ ಸ್ಥಾನಕ್ಕೆ ರಾಜಪಕ್ಸೆ ಅವರನ್ನು ನೇಮಿಸಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಇದರಿಂದ ಮತ್ತೊಂದು ಹಿನ್ನಡೆಯಾದಂತಾಗಿದೆ.

ಸಿರಿಸೇನಾ ಅವರು ಸಂಸತ್ತನ್ನು ವಿಸರ್ಜಿಸಿ, ಚುನಾವಣೆ ಘೋಷಿಸಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ಮಂಗಳವಾರವಷ್ಟೇ ರದ್ದು ಮಾಡಿತ್ತು.

ಅಕ್ಟೋಬರ್‌ 26ರಂದು ಸಂಸತ್ ಅಮಾನತುಗೊಂಡ ನಂತರ ಬುಧವಾರ ನಡೆದ ಅಧಿವೇಶನದಲ್ಲಿ 225 ಸದಸ್ಯರ ಪೈಕಿ 122 ಸದಸ್ಯರು ರಾಜಪಕ್ಸೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪರವಾಗಿ ಮತ ಹಾಕಿದರು.

ಈ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದ ಸ್ಪೀಕರ್‌ ಕರು ಜಯಸೂರ್ಯ, ಸೂಕ್ತ ಕ್ರಮಕ್ಕಾಗಿ ಅಧ್ಯಕ್ಷ ಸಿರಿಸೇನಾ ಅವರಿಗೆ ಪತ್ರ ರವಾನಿಸಿದರು.

ಮರು ಸ್ಥಾಪನೆ: ಅವಿಶ್ವಾಸ ಗೊತ್ತುವಳಿ ಅಂಗೀಕಾರಗೊಂಡ ನಂತರ ಮಾತನಾಡಿದ ಪದಚ್ಯುತ ಪ್ರಧಾನಿ ವಿಕ್ರಮಸಿಂಘೆ, ‘ಸಂವಿಧಾನಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡು, ಅಧ್ಯಕ್ಷ ಸಿರಿಸೇನಾ ನನ್ನನ್ನು ಪದಚ್ಯುತಗೊಳಿಸಿದ್ದರು. ಆದರೆ, ಇಂದು ನನ್ನ ನೇತೃತ್ವದ ಸರ್ಕಾರ ಮರುಸ್ಥಾಪನೆಯಾಗಿದೆ’ ಎಂದರು.

‘ಅ. 26ಕ್ಕಿಂತಲೂ ಮೊದಲಿದ್ದ ಸರ್ಕಾರವೇ ಮುಂದುವರಿಯುವುದು. ಜನರ ಆಶಯಕ್ಕೆ ವಿರುದ್ಧವಾಗಿ ರಚನೆಯಾಗಿದ್ದ ಈ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪಾಲನೆ ಮಾಡಬಾರದು’ ಎಂದು ಅವರು ಸರ್ಕಾರಿ ನೌಕರರಿಗೆ ಹಾಗೂ ಪೊಲೀಸರಿಗೆ ತಾಕೀತು ಮಾಡಿದರು.

‘ಸ್ಪೀಕರ್‌ ನಡೆ ಕಾನೂನುಬಾಹಿರ’

‘ಬಹುಮತ ಸಾಬೀತು ಪಡಿಸುವ ಸಲುವಾಗಿ ಸಂಸತ್‌ ಅಧಿವೇಶನ ನಡೆಸಿರುವುದು ಕಾನೂನುಬಾಹಿರ. ರಾಜಪಕ್ಸೆ ಅವರೇ ಪ್ರಧಾನಿಯಾಗಿ ಮುಂದುವರಿಯುವರು’ ಎಂದು ರಾಜಪಕ್ಸೆ ನಿಷ್ಠ ಹಾಗೂ ವಸತಿ ಸಚಿವ ವಿಮಲ್‌ ವೀರವಂಸ ಹೇಳಿದ್ದಾರೆ.

ಹಿರಿಯ ನಾಯಕರಾದ ದಿನೇಶ್‌ ಗುಣವರ್ಧನ ಹಾಗೂ ವಾಸುದೇವ ನನಯಕ್ಕಾರ ಸಹ ಸ್ಪೀಕರ್‌ ನಡೆಯನ್ನು ಟೀಕಿಸಿದ್ದು, ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕರಿಸಿರುವುದು ಕಾನೂನುಬಾಹಿರ ಎಂದಿದ್ದಾರೆ.

ರಾಜಕೀಯ ಸ್ಥಿರತೆ ಶೀಘ್ರ: ಚೀನಾ

ಬೀಜಿಂಗ್‌: ಶ್ರೀಲಂಕಾದಲ್ಲಿ ಶೀಘ್ರವೇ ರಾಜಕೀಯ ಸ್ಥಿರತೆ ಕಂಡುಬರಲಿದೆ ಎಂದು ಚೀನಾ ಆಶಯ ವ್ಯಕ್ತಪಡಿಸಿದೆ. ಶ್ರೀಲಂಕಾದಲ್ಲಿ ಚೀನಾ ₹ 5,785 ಕೋಟಿಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆ ಮಾಡಿದೆ. ಹೀಗಾಗಿ, ಚೀನಾ ಪರ ಒಲವುಳ್ಳ ರಾಜಪಕ್ಸೆ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿರುವುದು ಆ ದೇಶದ ಆತಂಕಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !