ಮತ್ತೆ ಬಂತು ‘ಆರ್ಟ್ ಬೆಂಗಳೂರು’

7

ಮತ್ತೆ ಬಂತು ‘ಆರ್ಟ್ ಬೆಂಗಳೂರು’

Published:
Updated:

ಮನ ಸೆಳೆಯುವ ರೇಖಾ ಚಿತ್ರಗಳು, ಹುಬ್ಬೇರುವಂತೆ ಮಾಡುವ ತೈಲವರ್ಣ ಪಟಗಳು, ಆಕರ್ಷಿಸುವ ಆಳೆತ್ತರದ ಕಲಾಕೃತಿಗಳು, ಅಪರೂಪದ ಛಾಯಾಚಿತ್ರಗಳು... ಕಲಾಸಕ್ತರ ಮನ ತಣಿಸುವ ಇಂತಹ ಹತ್ತು ಹಲವು ಚಿತ್ತಾರಗಳನ್ನು ಕಣ್ತುಂಬಿಕೊಳ್ಳಲು, ಆರ್ಟ್‌ ಬೆಂಗಳೂರು ಉತ್ಸವದ 8ನೇ ಆವೃತಿಯ ಅಂಗವಾಗಿ ಯುಬಿ ಸಿಟಿ ವೇದಿಕೆ ಕಲ್ಪಿಸಿದೆ. 

ನಗರದ ನಾಗರಿಕರಲ್ಲಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವೇದಿಕೆ ನಿರ್ಮಿಸಲಾಗಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲನ್ ನಂಬಿಯಾರ್, ಗುರುದಾಸ್ ಶೆಣೈ, ಕವಿತಾ ಜೈಸ್ವಾಲ್, ವಿಪ್ತ ಕಪಾಡಿಯಾ, ಆಶಿಷ್ ದುಬೆ, ಪಲೂನ್ ದಾರುವಾಲಾ ಸೇರಿದಂತೆ ಒಟ್ಟು 17 ಕಲಾವಿದರು ತಮ್ಮ ಕಲಾಕೃತಿಗಳನ್ನಿಲ್ಲಿ ಪ್ರದರ್ಶನಕ್ಕಿರಿಸಿದ್ದಾರೆ.

 ಕಲಾವಿದ ಸಂಜು ಕುನ್ಹನ್‌ ಅವರ 30X8 ಅಡಿ ಗಾತ್ರದ ತೈಲವರ್ಣ ಚಿತ್ರವನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.  2011ರಲ್ಲೇ ಈ ಕಲಾಕೃತಿ ರಚಿಸಿದ್ದರೂ ಸೂಕ್ತ ವೇದಿಕೆ ಸಿಗದೇ ಇದ್ದುದರಿಂದ ಪ್ರದರ್ಶನಕ್ಕೆ ಇಟ್ಟಿರಲಿಲ್ಲ. 

‘ಕಲಾಕೃತಿಗಳೂ ಕೆಲವು ರೋಗಗಳಿಗೆ ಚಿಕಿತ್ಸೆಯಾಗಬಲ್ಲವು ಎಂಬುದನ್ನು ಹಲವು ಅಧ್ಯಯನಗಳು ನಿರೂಪಿಸಿವೆ. ಸದಾ ಒತ್ತಡದ ಬದುಕಿನಲ್ಲೇ ಮುಳುಗಿ ಹೋಗಿರುವ ನಗರವಾಸಿಗಳಿಗೆ ಈ ಪ್ರದರ್ಶನ ಸ್ವಲ್ಪಮಟ್ಟಿಗಾದರೂ ಖುಷಿ ನೀಡಲಿ ಎಂಬುದು ನಮ್ಮ ಆಶಯ. ನಮ್ಮ ಭಾವನೆಗಳನ್ನು ಮಾತುಗಳಿಂದಷ್ಟೇ ಅಲ್ಲ, ವಿವಿಧ ರೂಪಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿದೆ ಎಂಬುದನ್ನು ಈ ಪ್ರದರ್ಶನದ ಮೂಲಕ ತೋರಿಸಿಕೊಡುವುದು ನಮ್ಮ ಧ್ಯೇಯ’ ಎನ್ನುತ್ತಾರೆ ಆರ್ಟ್ ಬೆಂಗಳೂರು ಕಾರ್ಯಕ್ರಮದ ಆಯೋಜಕರಾದ ಉಜ್ಮಾ ಇರ್ಫಾನ್‌.

ಜಿಲ್ಲೆಗೊಂದು ಗ್ಯಾಲರಿ ಬೇಕು
‘ಪ್ಯಾರಿಸ್ ನಗರ ಬೆಂಗಳೂರಿಗಿಂತ ಸ್ವಲ್ಪ ದೊಡ್ಡದಿರಬಹುದು. ನನಗೆ ತಿಳಿದಿರುವ ಪ್ರಕಾರ ಅಲ್ಲಿ ಸುಮಾರು 400 ಗ್ಯಾಲರಿಗಳಿವೆ. ಇಲ್ಲಿ 10–12 ಇರಬಹುದೇನೊ. ಅಲ್ಲಿನವರಿಗೆ ತಮ್ಮ ನಗರ, ಸಂಸ್ಕೃತಿ, ಭವ್ಯ ಪರಂಪರೆ ಬಗ್ಗೆ ಹೆಮ್ಮೆ ಇದೆ. ಆ ನಗರಕ್ಕೆ ಒಮ್ಮೆ ಭೇಟಿ ನೀಡಿದ್ದಾಗ ಮ್ಯೂಸಿಯಂ ಒಂದರ ಮುಂದೆ ಟಿಕೆಟ್‌ಗಾಗಿ ಒಂದೂವರೆ ಕಿಲೋಮೀಟರ್‌ ಉದ್ದ ನಿಂತಿದ್ದ ಕಲಾಸಕ್ತರ ಸರತಿ ಸಾಲು ನನ್ನ ಗಮನ ಸೆಳೆಯಿತು. ವಿಚಾರಿಸಿದರೆ, ಹೊಯ್ಸಳ ಮತ್ತು ಚಾಲುಕ್ಯರ ಕಾಲದ ಶಿಲ್ಪ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಅವರು ಕಾತುರದಿಂದ ಕಾಯುತ್ತಿದ್ದರು. ನಮ್ಮಲ್ಲಿ ಇಂತಹ ಮನೋಭಾವದವರು ಬೆರಳೆಣಿಕೆಯಷ್ಟು ಮಾತ್ರ. 

‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲು ಸರಿಯಾದ ವೇದಿಕೆಗಳಿಲ್ಲ. ಅಭಿವೃದ್ಧಿ ಎಂದರೆ, ಕೇವಲ ಆರ್ಥಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿಯಲ್ಲ, ಜನರ ಮನಸ್ಸನ್ನು ಮುಟ್ಟುವಂತಹ ಕಲಾರಂಗದ ಕಡೆಗೂ ಗಮನ ಹರಿಸಬೇಕಿದೆ. 

‘ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳು ಎಲ್ಲರಿಗೂ ಪರಿಚತರೇ, ನಮ್ಮಂತಹ ಕಲಾವಿದರು ಎಷ್ಟು ಜನಕ್ಕೆ ಗೊತ್ತಿರುತ್ತಾರೆ ಹೇಳಿ? ಎಂತಹ ಪರಿಸ್ಥಿತಿ ದೂರವಾಗಬೇಕು.

‘ಹಲವು ಕಲಾವಿದರ ಶ್ರಮದಿಂದಾಗಿ ವೆಂಕಟಪ್ಪ ಆರ್ಟ್‌ ಗ್ಯಾಲರಿ ನಿರ್ಮಾಣವಾಗಿದೆ. ಇಂತಹ ಗ್ಯಾಲರಿಗಳು ಜಿಲ್ಲೆಗೊಂದು ಬೇಕು. ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಆಸೆ ಪಡುವವರು ಬೆಂಗಳೂರಿಗೆ ಬರುವ ಅನಿವಾರ್ಯ ಪರಿಸ್ಥಿತಿ ಬೇಡ ಎಂಬುದು ನನ್ನ ಅಭಿಪ್ರಾಯ.

ಕಲಾವಿದರ ಗೌರವ, ಘನತೆ ಎತ್ತಿಹಿಡಿಯುವಂತಹ ಕೆಲಸವನ್ನು ಆರ್ಟ್‌ ಬೆಂಗಳೂರು ಮಾಡಿದೆ. ಇಂತಹ ವ್ಯವಸ್ಥಿತ ಮತ್ತು ಆಕರ್ಷಕ ಪ್ರದರ್ಶನವನ್ನು ಭಾರತದಲ್ಲಿ ನೋಡುತ್ತಿರುವುದು ಇದೇ ಮೊದಲು. ಚಿತ್ರಸಂತೆ ಮಾಡಿ ರಸ್ತೆಯಲ್ಲಿ ಪ್ರದರ್ಶನಕ್ಕೆ ಇಟ್ಟರೆ ಕಲಾವಿದನ ಕಿಸೆಗೆ ಒಂದಿಷ್ಟು ಕಾಸು ಹೋಗಬಹುದು. ಆದರೆ ಅವರು ಹೇಳಲು ಇಚ್ಛಿಸುತ್ತಿರುವ ವಿಷಯ ಪರಿಣಾಮಕಾರಿಯಾಗಿ ಮುಟ್ಟುವುದು ಕಷ್ಟ.
–ಗುರುದಾಸ್ ಶೆಣೈ, ಕಲಾವಿದ.

***
‘ಶಾಲಾ ದಿನಗಳಿಂದಲೇ ಕಲೆಯ ಬಗ್ಗೆ ಎಲ್ಲಿಲ್ಲದ ಕಾಳಜಿ. ಸುಮಾರು 25 ವರ್ಷಗಳಿಂದ ಈ ಕ್ಷೇತ್ರದಲ್ಲೇ ದುಡಿಯುತ್ತಿದ್ದೇನೆ. ಈ ವರೆಗೆ 18ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದೇನೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನನ್ನ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇನೆ. ಮಾಲ್‌ ಎಂದರೆ ಜನ ಬರುತ್ತಾರೆ. ನಮ್ಮ ಪ್ರತಿಭೆಯನ್ನು ತೋರಿಸಲು ಇದು ಉತ್ತಮ ವೇದಿಕೆ. ಇಂತಹ ವೇದಿಕೆಗಳಿದ್ದರೆ ಕಲೆಯ ಕಡೆಗೆ ಎಂಥವರಿಗಾದರೂ ಆಸಕ್ತಿ ಮೂಡುತ್ತದೆ. 

ಬೆಂಗಳೂರಿನಂತಹ ಸುಂದರ ನಗರದಲ್ಲಿ ನನ್ನ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಇದಕ್ಕೆ ಆರ್ಟ್ ಬೆಂಗಳೂರು ಸಂಸ್ಥೆಯವರಿಗೆ ಧನ್ಯವಾದ ಹೇಳಬೇಕು. ಇಂತಹ ಮತ್ತಷ್ಟು ಪ್ರದರ್ಶನಗಳನ್ನು ನೀಡುವ ಆಸೆ ಇದೆ.
–ವಿಕ್ತ ಕಪಾಡಿಯಾ ಕಲಾವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !