ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಪ್ರಯೋಗದಲ್ಲಿ ‘ಈ ಕೆಳಗಿನವರು’

Last Updated 14 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕೊಳೆಗೇರಿಯಲ್ಲಿನ ಜನರಿಗೆ ಬಡತನವಿದ್ದರೂ ಅವರ ಸಂತೋಷಕ್ಕೆ ಬರವಿಲ್ಲ. ಸಿರಿವಂತಿಕೆ, ಸಾಮಾಜಿಕ ಸ್ಥಾನಮಾನದ ಕೊರತೆಯ ನಡುವೆ ಆ ವರ್ಗ ನೋವು– ನಲಿವು ಎರಡಕ್ಕೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಸಂತೋಷ– ದುಃಖ ಎರಡೂ ಅವರ ನಿತ್ಯದ ದಿನಚರಿಯ ಭಾಗ...

ಇದು ಮ್ಯಾಕ್ಸಿಂ ಗಾರ್ಕಿ ಅವರ ‘ದಿ ಲೋವರ್ ಡೆಪ್ತ್ಸ್‌’ ನಾಟಕದ ಕಥೆ. ಈ ನಾಟಕವೀಗ ‘ಈ ಕೆಳಗಿನವರು’ ಹೆಸರಿಲ್ಲಿ ರಂಗರೂಪಕ್ಕೆ ಬರಲು ಸಿದ್ಧವಾಗಿದೆ.

‘ದೊಡ್ಡ ಕೊಳೆಗೇರಿಯೊಂದರಲ್ಲಿ ನಡೆಯುವ ಘಟನಾವಳಿಗಳೇ ನಾಟಕದ ಕಥೆ. ಇಲ್ಲಿ ಎಲ್ಲಾ ನಾಟಕಗಳಂತೆ ನಿರ್ದಿಷ್ಟ ಮಾದರಿಯ ಕಥೆ ಇರುವುದಿಲ್ಲ. ಇಲ್ಲಿನ ಜನರು ಸಾವಿಗೂ, ದುಃಖಕ್ಕೂ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ತಾವಿರುವ ರೀತಿಯೇ ಅಪ್ಯಾಯಮಾನ. ಬದಲಾಗಲು ಬಯಸದ ಜೀವನದಲ್ಲಿ ಅಜ್ಜನ ಪ್ರವೇಶವಾಗುತ್ತದೆ. ತುಸು ಬದಲಾವಣೆಗೆ ತೆರೆದುಕೊಳ್ಳುವ ಈ ಜನರು ಕೊನೆಗೂ ತಮ್ಮನ್ನು ಬದಲಾಯಿಸಿಕೊಳ್ಳಲು ಬಯಸದೇ ಉಳಿದುಬಿಡುತ್ತಾರೆ’ ಎನ್ನುತ್ತಾರೆ ‘ಈ ಕೆಳಗಿನವರು’ ನಾಟಕದ ನಿರ್ದೇಶಕ ಗೋಪಾಲಕೃಷ್ಣ ದೇಶಪಾಂಡೆ.

‘ಸಾಮಾನ್ಯವಾಗಿ ನಾವು ಬಡವರು ಅಂದಾಕ್ಷಣ ಅವರ ಜೀವನದಲ್ಲಿ ಸಂತೋಷವೇ ಇರುವುದಿಲ್ಲ ಅಂತ ಭಾವಿಸುತ್ತೇವೆ. ನಿಜ ಹೇಳಬೇಕೆಂದರೆ ಅವರು ತಮ್ಮ ಬದುಕಿಗೆ ಹೊಂದಿಕೊಂಡುಬಿಟ್ಟಿರುತ್ತಾರೆ. ಅದರಲ್ಲೇ ತಮ್ಮದೇ ಆದ ಸಂತೋಷ, ಉತ್ಸಾಹವನ್ನೂ ಕಂಡುಕೊಂಡಿರುತ್ತಾರೆ.

ಅವರು ಬದುಕನ್ನು ಅನುಭವಿಸುವ ರೀತಿಯೇ ಭಿನ್ನವಾಗಿರುತ್ತದೆ. ಅಂಥ ಭಿನ್ನತೆಯ ಬದುಕನ್ನು ಅನೇಕ ವರ್ಷಗಳ ಹಿಂದೆ ಮ್ಯಾಕ್ಸಿಂ ಗಾರ್ಕಿ ತನ್ನ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನೇ ರಂಗರೂಪದಲ್ಲಿ ತಂದಿದ್ದೇನೆ’ ಎನ್ನುತ್ತಾರೆ ಅವರು.

ನಮಗೆ ಸರಿಕಂಡದ್ದು, ಮತ್ತೊಬ್ಬರಿಗೆ ಸರಿಕಾಣಬೇಕಿಲ್ಲ. ಅಂತೆಯೇ ಬೇರೊಬ್ಬರಿಗೆ ಸರಿಕಂಡದ್ದು, ನಮಗೆ ಸರಿಕಾಣಬೇಕಿಲ್ಲ. ಅವರವರ ಭಾವದಲ್ಲಿ ಅವರವರ ಭಕುತಿಯಲ್ಲಿ ಎಂಬಂತೆ ಈ ನಾಟಕ ಸಾಗುತ್ತದೆ. ಅದುವೇ ಈ ನಾಟಕದ ವಿಶೇಷ ಗುಣ.

======

‘ಈ ಕೆಳಗಿನವರು’ ನಾಟಕ ಪ್ರದರ್ಶನ: ಪ್ರಸ್ತುತಿ– ಅಭಿನಯ ತರಂಗ. ಮೂಲ– ಮ್ಯಾಕ್ಸಿಂ ಗಾರ್ಕಿ. ಕನ್ನಡಕ್ಕೆ– ಬಿ.ಟಿ.ದೇಸಾಯಿ. ನಿರ್ದೇಶನ– ಗೋಪಾಲಕೃಷ್ಣ ದೇಶಪಾಂಡೆ, ಕಾಳಿಪ್ರಸಾದ್, ವಿನ್ಯಾಸ– ಭಾಸ್ಕರ್ ನಾಗಮಂಗಲ, ಕಿರಣ್ ನಾಯಕ್, ಹೇಮಂತಕುಮಾರ್. ಸ್ಥಳ– ಭಾನು ನೆನಪಿನ ನಾಣಿ ಅಂಗಳ, ಸುಚಿತ್ರ ಫಿಲಂ ಸೊಸೈಟಿ ಆವರಣ, ಬನಶಂಕರಿ 2ನೇ ಹಂತ. ನ. 15ರಿಂದ 18ವರೆಗೆ ಪ್ರತಿದಿನ ರಾತ್ರಿ 7ಕ್ಕೆ. ಟಿಕೆಟ್ ದರ ₹ 100. bookmyshow.comನಲ್ಲೂ ಟಿಕೆಟ್ ಬುಕ್ ಮಾಡಬಹುದು.

======

ರಂಗಭೂಮಿ ಬಿಟ್ಟಿಲ್ಲ

ಧಾರಾವಾಹಿ, ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ರಂಗಭೂಮಿಯ ನಂಟನ್ನು ಬಿಟ್ಟಿಲ್ಲ. ನಾವು ‘ಥೇಟರ್ ತತ್ಕಾಲ್’ ಅನ್ನುವ ತಂಡವೊಂದನ್ನು ಮಾಡಿಕೊಂಡಿದ್ದೇವೆ. ಇದರಲ್ಲಿ ನಟ ಅಚ್ಯುತಕುಮಾರ್, ನೀನಾಸಂ ಸತೀಶ, ಕಿರಣ್ ನಾಯಕ್, ರಾಘು ಶಿವಮೊಗ್ಗ ಸೇರಿದಂತೆ ಹಲವರು ಇದ್ದಾರೆ. ನಾವೆಲ್ಲಾ ರಂಗಭೂಮಿಯ ಜತೆಜತೆಗೇ ಧಾರಾವಾಹಿ, ಸಿನಿಮಾಗಳಲ್ಲೂ ತೊಡಗಿಕೊಂಡಿದ್ದೇವೆ.

–ಗೋಪಾಲಕೃಷ್ಣ ದೇಶಪಾಂಡೆ, ನಟ, ನಿರ್ದೇಶಕ

======

ಅಭಿನಯತರಂಗ ವಿದ್ಯಾರ್ಥಿಗಳ ನಾಟಕ

ಅಭಿನಯತರಂಗದ 38ನೇ ಬ್ಯಾಚ್‌ನ ವಿದ್ಯಾರ್ಥಿಗಳು ಅಭಿನಯಿಸುತ್ತಿರುವ ನಾಟಕವಿದು. ಒಂದು ವರ್ಷದ ನಾಟಕ ಡಿಪ್ಲೊಮಾದಲ್ಲಿ ವಿದ್ಯಾರ್ಥಿಗಳು ನಾಟಕ, ಕಿರುಚಿತ್ರವನ್ನು ಪ್ರಾಯೋಗಿಕವಾಗಿ ಕಲಿಯುತ್ತಾರೆ.

ಈ ಹಿಂದೆ ಇದೇ ವಿದ್ಯಾರ್ಥಿಗಳು ಖುಷ್ವಂತ್ ಸಿಂಗ್ ಅವರ ‘ಟ್ರೈನ್ ಟು ಪಾಕಿಸ್ತಾನ್‌’ ನಾಟಕವನ್ನು ಮಾಡಿ ಯಶಸ್ವಿಯಾಗಿದ್ದರು. ಇದು ಶಂಕರನಾಗ್ ಉತ್ಸವ ಸೇರಿದಂತೆ ಅನೇಕ ಕಡೆ ಪ್ರದರ್ಶನ ಕಂಡಿದೆ. ‘ಈ ಕೆಳಗಿನವರು’ ಫೈನಲ್ ಪ್ರೊಡಕ್ಷನ್. ನಾಟಕವಲ್ಲದೇ ಮೂರು ಕಿರುಚಿತ್ರಗಳಲ್ಲೂ ಈ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಪ್ರಕಾಶ್ ರೈ, ಬಿ. ಸುರೇಶ, ರವೀಂದ್ರ ಪೂಜಾರಿ, ಶಶಿಕಾಂತ ಯಡಹಳ್ಳಿ, ಮೈಕೋ ಶಿವು, ಜಯತೀರ್ಥ ಸೇರಿದಂತೆ ಹಲವರು ಇಲ್ಲಿಯೇ ಕಲಿತವರು. ನಟರಷ್ಟೇ ಅಲ್ಲ ಕನ್ನಡ ಸಿನಿಮಾ ರಂಗದ ಅನೇಕ ನಿರ್ದೇಶಕರು ಅಭಿನಯತರಂಗದಿಂದ ಬಂದವರು ಎಂಬುದು ಹೆಮ್ಮೆಯ ಸಂಗತಿ.

–ಗೌರಿದತ್ತು, ಪ್ರಾಂಶುಪಾಲರು, ಅಭಿನಯತರಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT