ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡರ್ಬಾನ್‌ನಲ್ಲಿ ಗಾಂಧಿ ಸ್ಮರಣೆ: ಗಾಂಧೀಜಿ ಅವರನ್ನು ರೈಲಿನಿಂದ ತಳ್ಳಿದ ಘಟನೆಗೆ 130 ವರ್ಷ

Published 18 ಜೂನ್ 2023, 0:18 IST
Last Updated 18 ಜೂನ್ 2023, 0:18 IST
ಅಕ್ಷರ ಗಾತ್ರ

ಎನ್.ಆರ್. ವಿಶುಕುಮಾರ್

ದಕ್ಷಿಣ ಆಫ್ರಿಕಾದ ಮ್ಯಾರಿಟ್‌ ಬರ್ಗ್‌ನಲ್ಲಿ ಗಾಂಧೀಜಿ ಅವರನ್ನು ರೈಲಿನಿಂದ ಹೊರತಳ್ಳಿದ ಘಟನೆ ನಡೆದು 130 ವರ್ಷಗಳಾಗಿವೆ. ದಕ್ಷಿಣ ಆಫ್ರಿಕಾದಲ್ಲಿನ ಭಾರತ ರಾಯಭಾರ ಕಚೇರಿ, ಪೀಟರ್ ಮ್ಯಾರಿಟ್ ಬರ್ಗ್ ಗಾಂಧಿ ಫೌಂಡೇಶನ್ ಸಹಯೋಗದಲ್ಲಿ ಈ ಅಪೂರ್ವ ಘಟನೆಯನ್ನು ಸ್ಮರಿಸಿಕೊಳ್ಳಲು ಒಂದು ವಿಶೇಷ ಕಾರ್ಯಕ್ರಮ ರೂಪಿಸಿತ್ತು. ಅಲ್ಲಿನ ಅನುಭವ ಬರಹ ಇದು.

ಜೂನ್ 7. 1893. ದಕ್ಷಿಣ ಆಫ್ರಿಕಾ. ಇಂಡಿಯಾದ ವಕೀಲ ಮೋಹನದಾಸ ಕರಮಚಂದ ಗಾಂಧಿ ಡರ್ಬಾನ್ ನಗರದಿಂದ ದಕ್ಷಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾಕ್ಕೆ  ಪ್ರಯಾಣಿಸುತ್ತಿದ್ದ  ರೈಲು ರಾತ್ರಿ  9ಕ್ಕೆ ನಟಾಲ್ ಪ್ರಾಂತ್ಯದ ಮ್ಯಾರಿಟ್ ಬರ್ಗ್ ನಿಲ್ದಾಣ ತಲುಪಿತು. ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗಾಂಧಿಯನ್ನು ಅಲ್ಲಿನ ರೈಲ್ವೆ ಅಧಿಕಾರಿ, ಅವರು ಕಪ್ಪು ಬಣ್ಣದವರು ಎನ್ನುವ ಕಾರಣಕ್ಕಾಗಿ ರೈಲಿನಿಂದ ಆಚೆಗೆ ದೂಡಿ ಅವಮಾನಗೊಳಿಸಿದ್ದರು.

ಆ ನಟ್ಟ ನಡುರಾತ್ರಿ ಮೈ ಕೊರೆಯುವ ಚಳಿಯಲ್ಲಿ ಒಬ್ಬಂಟಿಯಾಗಿ ರೈಲು ನಿಲ್ದಾಣದಲ್ಲಿ ನಡುಗುತ್ತಾ ಕುಳಿತಿದ್ದ ಗಾಂಧಿ ತಮ್ಮ ಮನಸ್ಸಿನಲ್ಲಿ ಆದ ತುಮುಲಗಳನ್ನು ತಮ್ಮ ಆತ್ಮ ಕಥೆ ‘My experiments with truth’ನಲ್ಲಿ ಮನ ಕಲಕುವಂತೆ ನಿರೂಪಿಸಿದ್ದಾರೆ.

ಈ ಘಟನೆ ನಡೆದ 130 ವರ್ಷಗಳ ನಂತರ, 2023ರ ಜೂನ್ 7 ರಂದು ಬೆಳಿಗ್ಗೆ ನಾವು ದಕ್ಷಿಣ ಆಫ್ರಿಕಾದ ಮ್ಯಾರಿಟ್ ಬರ್ಗ್ ರೈಲ್ವೆ ನಿಲ್ದಾಣದಲ್ಲಿದ್ದೆವು. ದಕ್ಷಿಣ ಆಫ್ರಿಕಾದಲ್ಲಿನ ಭಾರತ ರಾಯಭಾರ ಕಚೇರಿ, ಪೀಟರ್ ಮ್ಯಾರಿಟ್ ಬರ್ಗ್ ಗಾಂಧಿ ಫೌಂಡೇಶನ್ ಸಹಯೋಗದಲ್ಲಿ ಈ ಅಪೂರ್ವ ಘಟನೆಯನ್ನು ಸ್ಮರಿಸಿಕೊಳ್ಳಲು ಒಂದು ವಿಶೇಷ ಕಾರ್ಯಕ್ರಮ ರೂಪಿಸಿತ್ತು . ಇದರ ಅಂಗವಾಗಿ ಡರ್ಬಾನ್ ನಗರದಿಂದ ಒಂದು ವಿಶೇಷ ರೈಲು ಹೊರಟು ಬೆಳಿಗ್ಗೆ ಹತ್ತು ಗಂಟೆಗೆ ಮ್ಯಾರಿಟ್ ಬರ್ಗ್ ನಿಲ್ದಾಣಕ್ಕೆ ಸಿಳ್ಳೆ ಹಾಕುತ್ತಾ ಆಗಮಿಸಿತು. ಭಾರತ ಮತ್ತು ಅಮೆರಿಕದಿಂದ ಈ ವಿಶೇಷ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಭಾರತೀಯರು ಮತ್ತು ಭಾರತ ನೌಕಾದಳದ ಸೇನಾ ಅಧಿಕಾರಿಗಳು ಹಾಗೂ ದಕ್ಷಿಣ ಆಫ್ರಿಕಾದ ಕಪ್ಪುಜನರ ಹೋರಾಟಗಾರರೆಲ್ಲರೂ ಕೈ ಚಪ್ಪಾಳೆ ತಟ್ಟಿ ಈ ರೈಲನ್ನು ಸ್ವಾಗತಿಸಿದರು. ರಿಚರ್ಡ್ ಅಟನ್‌ಬರೋ ನಿರ್ದೇಶನದ ‘ಗಾಂಧಿ’ ಚಿತ್ರದಲ್ಲಿ ಗಾಂಧಿಯನ್ನು ರೈಲಿನಿಂದ ಆಚೆಗೆ ತಳ್ಳುವ ದೃಶ್ಯದ ತುಣುಕು ತೆರೆಯ ಮೇಲೆ ಮೂಡಿಬಂತು. ನಂತರ ಭಾರತೀಯ ನೌಕಾದಳದ ಬ್ಯಾಂಡ್‌ನವರು ದಕ್ಷಿಣ ಆಫ್ರಿಕಾ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಾರತ ನೌಕಾದಳದ ಯುದ್ಧ ನೌಕೆ ‘ಐಎನ್‌ಎಸ್ ತ್ರಿಶೂಲ್’ ಈ ಸ್ಮರಣ ಕಾರ್ಯಕ್ರಮಕ್ಕಾಗಿಯೇ ಮುಂಬೈನಿಂದ ವಿಶೇಷವಾಗಿ ಡರ್ಬಾನ್ ಬಂದರಿಗೆ ಬಂದಿಳಿದಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ರಾಜತಾಂತ್ರಿಕ ಸಂಬಂಧಗಳು ಶುರುವಾಗಿ 30  ವರ್ಷ ತುಂಬುತ್ತಿರುವ ಸ್ಮರಣೆಗಾಗಿ ವರ್ಷಪೂರ್ತಿ ಇಂಥ ಹಲವಾರು ಕಾರ್ಯಕ್ರಮಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಭಾರತ ನೌಕಾದಳದ ಬ್ಯಾಂಡ್‌ನವರು ಗಾಂಧೀಜಿಯವರ ನೆಚ್ಚಿನ ಭಜನೆ ‘ವೈಷ್ಣವ ಜನತೋ ತೇನೆ ಕಹಿಯೇ’ ಗೀತೆಯನ್ನು ನುಡಿಸಿ, ನೆರೆದಿದ್ದ ಭಾರತೀಯ ಜನರ ಭಾವ ತುಂಬಿಸಿದರು.

ಈ ಕಾರ್ಯಕ್ರಮದಲ್ಲಿ ಚಾಲನಾ ಭಾಷಣ ಮಾಡಿದ ಕಪ್ಪು ಜನರ ಹೋರಾಟಗಳ ಇತಿಹಾಸ ತಜ್ಞ  ಪ್ರೊ. ರೆವೆರೆಂಡ್ ಅಲನ್ ಬೊಸಾಕ್  ‘1893 ರ ಜೂನ್ 7ರಂದು  ಗಾಂಧೀಜಿಯವರನ್ನು ಮ್ಯಾರಿಟ್ ಬರ್ಗ್ ನಿಲ್ದಾಣದಲ್ಲಿ ರೈಲಿನಿಂದ ಹೊರದೂಡಿದ ಘಟನೆ ಈಗ ಚಾರಿತ್ರಿಕ ದಿನವಾಗಿದೆ. ಗಾಂಧಿ ರೈಲಿನಿಂದ ಹೊರ ದಬ್ಬಿಸಿಕೊಂಡ ಆ ಕ್ಷಣ ಈಗ ಐತಿಹಾಸಿಕ ಕ್ಷಣವಾಗಿದೆ. ಬಿಳಿಯರ ವರ್ಣ ದ್ವೇಷದ ಕಾರಣದಿಂದಾಗಿ ಅವಮಾನಿತರಾದ ಗಾಂಧಿ ಅದರ ವಿರುದ್ಧ ಹೋರಾಟ ಮಾಡಬೇಕೆನ್ನುವ ನಿರ್ಣಾಯಕ ನಿರ್ಧಾರವನ್ನು ಅಂದು ತೆಗೆದುಕೊಂಡು ಈಗ ವಿಶ್ವಮಾನ್ಯರಾಗಿದ್ದಾರೆ. ಜಗತ್ತಿನಾದ್ಯಂತ ನಡೆದಿರುವ ಕಪ್ಪು ಜನರ ಹೋರಾಟಗಳಿಗೆ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟವೇ ಸ್ಫೂರ್ತಿಯ ಸೆಲೆ. ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರುಗಳು ಗಾಂಧೀಜಿಯವರ ಅಹಿಂಸಾ ಮಾರ್ಗವನ್ನೇ ಹಿಡಿದು  ಗೆಲುವು ಸಾಧಿಸಿದ್ದಾರೆ’ ಎಂದು ಬಣ್ಣಿಸಿದರು.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ 21 ವರ್ಷಗಳ ಸುದೀರ್ಘ ಹೋರಾಟವನ್ನು 130 ವರ್ಷಗಳ ನಂತರವೂ ದಕ್ಷಿಣ ಆಫ್ರಿಕಾದ ಪ್ರಜ್ಞಾವಂತ ಜನರು ಈಗಲೂ ಪ್ರೀತಿ ವಿಶ್ವಾಸದಿಂದ ನೆನೆಸಿಕೊಳ್ಳುತ್ತಾರೆ. ಇಲ್ಲಿನ ಪ್ರಾಥಮಿಕ ಪಠ್ಯದಲ್ಲಿ ಈಗಲೂ ಗಾಂಧೀಜಿಯವರ ಕುರಿತ  ಪಠ್ಯ ಇದೆ. ಹಾಗೆ ನೋಡಿದರೆ ಗಾಂಧೀಜಿ ಭಾರತದ ನೆಲದಲ್ಲಿ ನಡೆಸಿದ ಹೋರಾಟಕ್ಕಿಂತಲೂ ದಕ್ಷಿಣ ಆಫ್ರಿಕಾದ ನೆಲದಲ್ಲಿ ನಡೆಸಿರುವ ಹೋರಾಟವೇ ಬಹಳ ಮಹತ್ವದ್ದು. ಇಲ್ಲಿ ಭಾರತದಲ್ಲಿ ಗಾಂಧೀಜಿ ಜೊತೆ ಹೋರಾಡಲು ಎರಡನೇ ಹಂತದ ನೂರಾರು ನಾಯಕರಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಏಕಾಂಗಿ ಹೋರಾಟಗಾರ. ಬಿಳಿಯರು ನಡೆದಾಡುವ ರಸ್ತೆಯಲ್ಲಿ ಕಪ್ಪು ಬಣ್ಣದವರು ಕಾಲಿಡುವಂತಿಲ್ಲ. ಅವರು ವಾಸ ಮಾಡುವ ಜಾಗದಲ್ಲಿ ಇಣುಕಿ ನೋಡುವಂತಿಲ್ಲ ಎನ್ನುವ ಕೆಟ್ಟ ಪರಿಸ್ಥಿತಿ ಆಗ ದಕ್ಷಿಣ ಆಫ್ರಿಕಾದಲ್ಲಿತ್ತು. ಇಂಥ ಸನ್ನಿವೇಶದಲ್ಲಿ ಗಾಂಧಿ ನಡೆಸಿದ ದಿಟ್ಟ ಹೋರಾಟವನ್ನು ಅಂದಿನ ಕಾಲಮಾನ ಮತ್ತು ಅಂದಿನ ಬರ್ಬರ ವರ್ಣಭೇದ ನೀತಿಯ ದೃಷ್ಟಿಯಿಂದ ನೋಡಿದರೆ ಗಾಂಧೀಜಿಯವರ ಬಗ್ಗೆ ಅಭಿಮಾನ ಉಕ್ಕಿ ಹರಿಯುತ್ತದೆ. ಗಾಂಧಿಯವರ ಅಂದಿನ ಹೋರಾಟದ ಬಗ್ಗೆ ಇಂದಿನ ಆಫ್ರಿಕಾದ ಕಪ್ಪು  ಜನ ನಾಯಕರು ಬಹಳ ಅಭಿಮಾನದಿಂದ ಮಾತನಾಡುತ್ತಾರೆ. ಅವರ ಮಾತುಗಳನ್ನು ಆಲಿಸಿದ ನಂತರ ಮತ್ತು ದಕ್ಷಿಣ ಆಫ್ರಿಕಾದ ಕಪ್ಪು ಜನರು ತಮ್ಮ ನೆಲದಲ್ಲಿ ಸ್ವಾತಂತ್ರ್ಯದ ಸವಿ ಅನುಭವಿಸುತ್ತಿರುವ ನೋಟವನ್ನು ಕಣ್ಣಾರೆ ನೋಡಿದ ನಂತರ ಗಾಂಧೀಜಿ ಬಗೆಗಿನ ನಮ್ಮ ನೋಟ ಇನ್ನೂ ಸುಂದರವಾಗಿದೆ.  

ರವೀಂದ್ರನಾಥ್ ಟ್ಯಾಗೋರ್ ಅವರು ಗಾಂಧೀಜಿಯನ್ನು ಮಹಾತ್ಮ ಎಂದು ಸಂಬೋಧಿಸಿ ಗೌರವಿಸಿದರು. ಆದರೆ ಈಗ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಗಾಂಧೀಜಿ ನಮ್ಮ ಕಣ್ಣಿಗೆ ‘ದೇವದೂತ’ರಂತೆ ಕಾಣಿಸುತ್ತಿದ್ದಾರೆ. ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಹೇಳಿರುವ ‘ರಕ್ತ ಮಾಂಸಗಳಿಂದ ಕೂಡಿದ ಇಂಥ ಮನುಷ್ಯ ಈ ಭೂಮಿಯ ಮೇಲೆ ನಡೆದಾಡಿದರು ಎನ್ನುವ ವಿಷಯವನ್ನು ಮುಂದಿನ ಪೀಳಿಗೆಯ ಜನ ನಂಬುವುದು ಬಹಳ ಕಷ್ಟ’ ಎನ್ನುವ ಮಾತುಗಳು ಉತ್ಪ್ರೇಕ್ಷೆಯಲ್ಲ ಎಂದೆನ್ನಿಸುತ್ತಿದೆ.

ವಕೀಲ ಗಾಂಧಿ ಮಹಾತ್ಮ ಗಾಂಧೀಜಿ-ಎರಡೂ ಪ್ರತಿಮೆಗಳ ಅಪರೂಪದ ನೋಟ
ವಕೀಲ ಗಾಂಧಿ ಮಹಾತ್ಮ ಗಾಂಧೀಜಿ-ಎರಡೂ ಪ್ರತಿಮೆಗಳ ಅಪರೂಪದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT