ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಯಾನ ಜೀವನಯಾನವಾಗುತ್ತ...

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ನೆಲದ ಬೇರು ನಭದ ಬಿಳಲು
ಲೇ: ಎಸ್. ಮಂಜುನಾಥ್
ಪು: 408; ಬೆ: ರೂ. 250
ಪ್ರ: ಅಂಕಿತ ಪುಸ್ತಕ, ನಂ.53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-
560 004.
ಎಸ್. ಮಂಜುನಾಥ್ ಅವರು ಈ ತನಕ ಬರೆದ ಎಲ್ಲ ಕವಿತೆಗಳು `ನೆಲದ ಬೇರು ನಭದ ಬಿಳಲು~ ಸಂಕಲನದಲ್ಲಿ ಒಟ್ಟಾಗಿ ಸೇರಿ ಪ್ರಕಟವಾಗಿವೆ. ಇದು ಅವರ ಇಲ್ಲಿಯವರೆಗಿನ ಸಮಗ್ರಕಾವ್ಯ. `ಹಕ್ಕಿ ಪಲ್ಟಿ~, `ಸುಮ್ಮನಿರುವ ಸುಮ್ಮಾನ~, `ಬಾಹುಬಲಿ~, `ನಂದಬಟ್ಟಲು~, `ಮೌನದ ಕಣಿವೆ~, `ಕಲ್ಲ ಪಾರಿವಾಳಗಳ ಬೇಟ~, `ಮಗಳು ಸೃಜಿಸಿದ ಸಮುದ್ರ~ ಮತ್ತು `ಜೀವಯಾನ~- ಈ ಸಂಕಲನಗಳಲ್ಲಿದ್ದ ಮಂಜುನಾಥರ ಎಲ್ಲ ಕವನಗಳೂ ಇಲ್ಲಿವೆ.

ಇವರು ಈಗಾಗಲೇ ಸಾಕಷ್ಟು ಹೆಸರು ಮಾಡಿ ಖ್ಯಾತಿ ಗಳಿಸಿದ ಕವಿ. ಹೀಗಾಗಿ ಇವರ ಕಾವ್ಯದ ಓದು ಮತ್ತು ಅಭ್ಯಾಸ ನಮ್ಮ ವರ್ತಮಾನ ಕಾವ್ಯದ ಒಂದು ಪಾರ್ಶ್ವವನ್ನು ನಮಗೆ ತೆರೆದು ತೋರಿಸುತ್ತವೆ. `ಸುಮ್ಮನಿರುವ ಸುಮ್ಮಾನ~ ಕವನ ಸಂಕಲನದಲ್ಲಿ ಲಾವೋತ್ಸೆ ಮತ್ತು ಚುವಾಂಗತ್ಸೆಯವರ ಕವನಗಳ ಭಾವಾನುವಾದಗಳಿವೆ.

ಇಲ್ಲಿಯವರೆಗಿನ ಸಮಗ್ರ ಕಾವ್ಯಕ್ಕೆ ಕವಿಯು `ಕವಿತೆಯ ಅಲೆ ಹಾಯ್ದು~ ಎಂಬ ಶಿರೋನಾಮೆಯಲ್ಲಿ ಕಾವ್ಯ ಮತ್ತು ಜೀವನದ ಬಗೆಗಿನ ತಮ್ಮ ಧೋರಣೆಗಳನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅತಿ ಸ್ಪಷ್ಟವಾದ ಚಿಂತನೆಯನ್ನು ಹೊಂದಿದವರು ಪ್ರಾಯಶಃ ಕಾವ್ಯವನ್ನು ರಚಿಸಲಾರರು!

ಕವಿ ಸಹಜವಾದ ಕೆಲವು ಗೊಂದಲಗಳು ಮತ್ತು ವೈರುಧ್ಯಗಳು ಕವಿ ಚಿಂತನೆಯ ಅವಿಭಾಜ್ಯ ಅಂಗಗಳೇ. ಈ ದೃಷ್ಟಿಯಿಂದಲೇ ಅವರ ಪ್ರಾರಂಭದ ಮಾತುಗಳನ್ನು ಗಮನಿಸಬೇಕು, “ಕವಿತೆಯಲ್ಲಿ ಅಸಾಧಾರಣವಾದ್ದಕ್ಕಿಂತಲು ಸಾಮಾನ್ಯವಾದ ಅನುಭವ, ಉದ್ರೇಕಕ್ಕಿಂತಲು ಸಮಾಧಾನದ್ದು ನನಗೆ ಮೆಚ್ಚುಗೆ” ಎನ್ನುತ್ತಾರೆ ಕವಿ.
 
ಈ ಮಾತನ್ನು ಅವರ ಹೆಚ್ಚಿನ ಕವನಗಳು ಸಮರ್ಥಿಸುತ್ತವೆ. “ಅಹಂಕಾರವನ್ನು ಸಂಪೂರ್ಣ ಇಲ್ಲವಾಗಿಸಿಕೊಳ್ಳುವುದು ಅಧ್ಯಾತ್ಮದ ಆದರ್ಶ, ಕವಿತೆಯದಲ್ಲ. ಕ್ಷಿತಿಜದ ಗೆರೆಯ ಮೇಲೆ ಓಡಾಡುವ ದೋಣಿಯಂತೆ ಕಾಣುವುದು ಅದು- ಕವಿತೆಯಲ್ಲಿ”. ಅಧ್ಯಾತ್ಮದ ಈ ಆದರ್ಶವೇ ಭಕ್ತಿ ಪಂಥದ ಹಲವಾರು ಕವಿಗಳ ಆದರ್ಶವೂ ಆಗಿರುವುದರಿಂದ ಮಂಜುನಾಥರ ಈ ಮಾತನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

“ದೇವರು ಇದ್ದಾನೆ ಎಂಬ ನಿಲುವಿಗಿಂತ ಇರುವಿಕೆಯೇ ದೇವರು ಎಂಬ ಭಾವನೆ ಸಂಪೂರ್ಣವಾಗಿ ಭಿನ್ನವಾದದ್ದು” ಎನ್ನುತ್ತಾರೆ. ಮೂಲದಲ್ಲಿ ಇದು ಜೆ. ಕೃಷ್ಣಮೂರ್ತಿಯವರ ಮಾತು. ಇರುವಿಕೆಯಲ್ಲಿ ದೇವರನ್ನು ಕಾಣುವುದು ಹೇಗೆ ಕೆಲವರಿಗೆ ಮುಖ್ಯವೋ ಹಾಗೆಯೇ ಸಕಲದಲ್ಲೂ ದೇವರನ್ನು ಕಾಣುವುದು ಭಕ್ತಿಪಂಥದ ಕವಿಗಳಿಗೆ ಮುಖ್ಯವಾದುದು.
 
ಹೀಗಾಗಿ ಮಂಜುನಾಥರು ಭಕ್ತಿಯನ್ನು ಕುರಿತಾಗಿ ಬರೆದ ಪದ್ಯಗಳಲ್ಲಿ ಅವರು, ಸಾಧನೆಯ ಬಲ ಉಳ್ಳ ಕವಿಯಾಗಿ ಕಾಣುವುದಿಲ್ಲ. ಆತ್ಮ ಮತ್ತು ಮನಸ್ಸನ್ನು ಕುರಿತು ಕಾವ್ಯ ರಚಿಸುತ್ತಿರುವ ನಮ್ಮ ಕಾಲದ ಕವಿಗಳ ದೊಡ್ಡ ಸಮಸ್ಯೆಯೆಂದರೆ ಅವರಿಗೆ ಸಾಧನೆಯ ಬಲವಿಲ್ಲದಿರುವುದೇ ಆಗಿದೆ. ಪುಟ್ಟಪ್ಪ ಮತ್ತು ಬೇಂದ್ರೆಯಂಥ ಕವಿಗಳಿಗೆ ಆಧ್ಯಾತ್ಮಿಕ ಸಾಧನೆಯ ಬೆಂಬಲವಿದ್ದುದರಿಂದಲೇ ಅವರ ಕಾವ್ಯದಲ್ಲಿ ಪದಗಳು ಭವಭೂತಿ ಹೇಳಿದ ಹಾಗೆ ಹೊಳೆಯತೊಡಗುತ್ತವೆ.

`ಹಕ್ಕಿ ಪಲ್ಟಿ~ ಕವನ ಸಂಕಲನದಲ್ಲಿ ಮಂಜುನಾಥರು ಗದ್ಯಕ್ಕೆ ಹೆಚ್ಚು ಸಮೀಪವಾದ ಭಾಷೆ ರೂಢಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಅಲ್ಲಿಯ `ಗುಬ್ಬಿ~ ಎನ್ನುವ ಪದ್ಯದ ಪ್ರಾರಂಭದ ಸಾಲುಗಳನ್ನು ಗಮನಿಸಬಹುದು:

ಪುಟ್ಟ ಹಕ್ಕಿ ಗುಬ್ಬಿಯ ಬಗ್ಗೆ ಸಂಗತಿಗಳನ್ನ ಕ್ರೋಢೀಕರಿಸೋದಾದರೆ-
ಅದರ ರೇಖಾಚಿತ್ರ ಅಗದೀ ಸುಲಭ, ಆದರೆ
ಗುಬ್ಬಿಯಂತೆ ಯಥಾವತ್ ಎಳೆಯುವುದು
ಮಹಾನ್ ಕಲಾವಿದನಿಗೆ ಮಾತ್ರ ಸಾಧ್ಯ
............................

ಹಾಗೆ ಮೂಡುವುದರಲ್ಲಿ ಮಹಾನ್ ಕಲಾವಿದನಿಗೂ ಸಿಕ್ಕದ ಜಾಣ್ಮೆ ಮತ್ತು ಅನಹಂಕಾರ
ಇದೆ ಅನ್ನಿಸತ್ತೆಒಂದು ಕೃತಿಯು ಮೂಡಬೇಕಾದರೆ ಅದರಲ್ಲಿ ನಮ್ಮ ಅರಿವಿನ ಆಚಿನ `ಅನಹಂಕಾರ~ ಇರಬೇಕು ಎಂದು ಕವಿಯು ಬಯಸುತ್ತಾರೆಂಬುದು ಸ್ಪಷ್ಟ. ದೇಹದಲ್ಲಿದ್ದೂ ವಿದೇಹಿಯಾಗುವ ಸಂತನ ಸ್ಥಿತಿಯೂ ಇದೇ ಆಗಿರುತ್ತದೆ.

“ಸುಮ್ಮನಿರುವ ಸುಮ್ಮಾನ” ಸಂಕಲನದ ಭಾವಾನುವಾದಗಳು ಮಂಜುನಾಥರ ಕಾವ್ಯದ ದಿಕ್ಕನ್ನು ಬದಲಿಸಿದಂತೆ ತೋರುತ್ತದೆ. ಜೆನ್ ತತ್ವಜ್ಞಾನ, ವರ್ತಮಾನದ ಗಳಿಗೆಯಲ್ಲಿಯ ಬದುಕನ್ನು ಸೆರೆಹಿಡಿಯಬೇಕೆಂಬ ಅಭಿಲಾಷೆ ಮತ್ತು ಹೇಳುವುದನ್ನು ಚತುರತೆಯಿಂದ ಹೇಳುವುದು ಇವೆಲ್ಲ ಈ ಭಾವಾನುವಾದಗಳ ಪರಿಣಾಮಗಳೆ.

ಕಾವ್ಯ ಕಾಳಜಿಗಳು ಎಷ್ಟು ಹಿಗ್ಗಿದವು ಈ ಘಟ್ಟದಲ್ಲಿ ಎಂಬ ಪ್ರಶ್ನೆ ಕೂಡ ಬರುತ್ತದೆ. ಕವಿಯ ಮೊದಲಿನ ಕವನ ಸಂಕಲನದಲ್ಲಿ ಕಾವ್ಯಕಾಳಜಿ ಬದಲಾದದ್ದರ ಲಕ್ಷಣಗಳಿವೆಯೇ ಹೊರತು ಅದರ ವಿಸ್ತಾರದ ಬಗ್ಗೆ ಭರವಸೆ ಹುಟ್ಟಿಸುವ ಪ್ರಯತ್ನಗಳಿಲ್ಲ.

ಭಾವಾನುವಾದಗಳ ನಂತರ ಬಂದ `ಬಾಹುಬಲಿ~ ಕವನ ಸಂಕಲನದ ಪದ್ಯಗಳಲ್ಲಿ ಚತುರತೆಯಿಂದ ಕಾವ್ಯ ವಸ್ತುವನ್ನು ಅಭಿವ್ಯಕ್ತಿಸುವ ಕ್ರಮವನ್ನು ಕವಿಯು ಸಾಧಿಸಿಕೊಳ್ಳುತ್ತಾರೆ. ದೊಡ್ಡ ಕವಿಯಾಗುವುದು ದೊಡ್ಡ ಕಾವ್ಯ ಕಾಳಜಿಗಳಿಂದಾಗಿಯೆ. ಕ್ಷಣಿಕತೆಯೂ ಅಂಥ ಕಾವ್ಯಕಾಳಜಿ ಆಗಬಹುದು.

ಇಲ್ಲಿಯೇ ಕವಿಯು ಉಳಿದ ಸಹ ಲೇಖಕರಿಗಿಂತ ಭಿನ್ನವಾಗಿ ಕಾಣಲು ಪ್ರಾರಂಭಿಸಬಹುದು. ಈ ದೃಷ್ಟಿಯಿಂದ `ಬಾಹುಬಲಿ~ ಕವನ ಸಂಕಲನ ಮಹತ್ವವನ್ನು ಪಡೆಯುತ್ತದೆ. ಈ ಸಂಕಲನದಲ್ಲಿಯ `ಕಡುಚೆಲ್ವೆಯೊಬ್ಬಳು ಕವಯತ್ರಿಯಾದರೆ~ ಮತ್ತು `ಕವಿ ಪಾಡು~ ಕವಿತೆಗಳಲ್ಲಿ ಕವಿಯು ಒಂದು ಗಂಭೀರ ವಿಷಯವನ್ನು ಕೈಗೆತ್ತಿಕೊಂಡೂ ಕೊನೆಗೆ ಚಮತ್ಕಾರಿಕ ಭಾಷೆಗೆ ಶರಣಾಗುವುದನ್ನು ನೋಡಬಹುದು: ಮೊದಲಿನ ಕವನದ ಕೊನೆ ಹೀಗಿದೆ:

ಅನ್ಯಕವಿಗಳ ಹಾಗೆ ರಸಿಕ ಜನವೂ
ಇವಳ ಗಂಡನ ಹಾಗೆ ಇವಳ ಕವಿತೆಗಳೂ
ಬರೇ ಇವಳತ್ತಲೇ ನೋಡುತ್ತಿವೆ

ಇನ್ನು ಎರಡನೇಯ ಕವನ ಹೀಗೆ ಕೊನೆಯಾಗುತ್ತದೆ:

ಕಲ್ಲಾದ ಕವಿ ಹೃದಯದೊಳಗೆ
ಎಷ್ಟೇ ಉರಿದರೂ ಆವಿಯಾಗದೆ ಉಳಿದ
ಒಂದು ಹನಿ ಕಂಬನಿ
ಪಾಪ ಅವರಿಗೇನು ಗೊತ್ತು
ಕವಿಗಷ್ಟೇ ಗೊತ್ತು.

ಹೀಗೆ ಮಂಜುನಾಥರು ಕೂಡ ಅತಿಭಾವುಕತೆಗೆ ಒಳಗಾಗುತ್ತಾರೆ. ಕಣ್ಣು ತಿಕ್ಕಿಕೊಂಡು ಒಂದು ವಸ್ತುವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿ ಅದು ಹೇಗೆ ಕಾಣುತ್ತದೆಂಬುದು ಕವಿತೆಯಾಗಬೇಕೆಂಬುದೇನೊ ನಿಜ. ಆದರೆ ಎಲ್ಲ ಅಂಥ ವಸ್ತುಗಳಿಗೂ ಕವಿತೆಯಾಗುವ ಶಕ್ತಿ ಇದೆ ಎಂದು ನಂಬಿ ದೊಡ್ಡವೇ ಕಷ್ಟ ಪ್ರಾರಂಭವಾಗುತ್ತದೆ.
 
`ನಂದಬಟ್ಟಲು~, `ಮೌನದ ಕಣಿವೆ~, `ಕಲ್ಲ ಪಾರಿವಾಳಗಳ ಬೇಟ~ ಮತ್ತು `ಮಗಳು ಸೃಜಿಸಿದ ಸಮುದ್ರ~- ಈ ಸಂಕಲನಗಳಲ್ಲಿ `ಸುಮ್ಮನಿರುವ ಸುಮ್ಮಾನ~ದಲ್ಲಿ ಮಾಡಿದ ಭಾವಾನುವಾದಗಳಿಂದ ಬಿಡುಗಡೆ ಪಡೆಯುವ ಒಂದು ಪ್ರಕ್ರಿಯೆಯೇ ಇದೆ. ಈ ಕಾರಣಕ್ಕಾಗಿಯೇ ಮಂಜುನಾಥ ಸದಾ ತಮ್ಮ ಕಾವ್ಯ ಭಾಷೆಯ ಬಗ್ಗೆ ಯೋಚಿಸುವ ಕವಿಯಾಗಿ ಕಾಣುತ್ತಾರೆ.

ಈ ಕವಿಯ `ಜೀವಯಾನ~ ಸಂಕಲನ ನಿಸ್ಸಂಶಯವಾಗಿ ಅವರ ಇಲ್ಲಿಯವರೆಗಿನ ಕವನ ಸಂಕಲನಕ್ಕಿಂತ ಭಿನ್ನವಾಗಿದೆ ಮತ್ತು ಮಹತ್ವದ್ದಾಗಿದೆ. ಇಲ್ಲಿ ಅವರು ಬರೆದ ಅಕ್ಕ ಮತ್ತು ಅಮ್ಮನ ಮೇಲಿನ ಪದ್ಯಗಳು ಅವರ ಕಾವ್ಯ ಪ್ರತಿಭೆಗೆ ಸಾಕ್ಷಿಯಾಗಿವೆ. ಒಂದು ರೀತಿಯಲ್ಲಿ ಇದು ಅವರ ಆತ್ಮಚರಿತ್ರೆ.

ಅತಿಭಾವುಕವಾಗುವುದಕ್ಕೆ ಈ ಕವಿಯ ವಿರೋಧವಿಲ್ಲ. ಒಮ್ಮಮ್ಮೆ ಅವರು ಅದರಲ್ಲೇ ಹೆಚ್ಚು ಆರಾಮದಾಯಕವಾಗಿ ಕಾಣುತ್ತಾರೆ. ಅಂಥ ಕಡೆ ಅವರು ಚಮತ್ಕಾರಿಕ ಭಾಷೆಯಿಂದ ವಿಸ್ಮಯವಾಗುವಂತೆ ಹೊರಬರುತ್ತಾರೆ. ಆಗ ಅತ್ಯಂತ ಅಮುಖ್ಯವಾದ ವಿಷಯ ಮತ್ತು ವಸ್ತುಗಳು ಕೂಡ ಜೀವನದ ಅವಿಭಾಜ್ಯ ಅಂಗ ಎಂಬಂತೆ ಮನೋಜ್ಞವಾಗಿ ಇಲ್ಲಿ ಕವಿತೆಯ ರೂಪ ಪಡೆಯುತ್ತವೆ.

ಇಲ್ಲಿಯವರೆಗೆ ಅವರು ಕೈಗೊಂಡ ಕಾವ್ಯಯಾನ ಜೀವಯಾನವನ್ನು ಅಭಿವ್ಯಕ್ತಿಸುವಲ್ಲಿ ಪೂರಕವಾಗಿ ಇಲ್ಲಿ ಮೈದಾಳಿದೆ. ಈ ಕಾರಣಕ್ಕಾಗಿಯೇ ಮಂಜುನಾಥರು ನಮ್ಮ ಕಾಲದಲ್ಲಿ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರಾಗಿ ಕಾಣುತ್ತಾರೆ. -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT