ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರಿ ರುಮಾಲು

ಕಥೆ
Last Updated 24 ಅಕ್ಟೋಬರ್ 2015, 19:40 IST
ಅಕ್ಷರ ಗಾತ್ರ

ಧಾರವಾಡ ಊರನ್ನೋದು ದೊಡ್ಡ ಶಹರಾ, ಆಗೇತಿ ಜಾಹೀರಾ
ಎಲ್ಲಿ ಬೇಕೆಂದರಲ್ಲಿ ಅದರ ಹೆಸರಾ
ಕುಂತ ಕೇಳೋ ಮಂದಿಗೆ ನಮಸ್ಕಾರಾ
ಹೊಟ್ಟಿಯೊಳಗ ಹಾಕ್ಕೊಳ್ರಿ ನಮ್ಮ ಚೂರುಪಾರು ಕಸರಾ


ಅಂತ ಶಿವಲಿಂಗಪ್ಪ ಶಿಬಾರಗಟ್ಟಿ ಬಯಲಾಟ ಸುರು ಮಾಡಿದನಂದ್ರ ಕೂಡಿದ ಮಂದಿ ಆಗಿಂದಾಗ ಕ್ಯಾಕಿ ಹೊಡ್ಯಾಕ ಸುರು ಮಾಡಾವ್ರು. ನೋಡಾಕ ಕೂಡಿದ ಜನ ಆದ್ರೂ ಏನಂತೀರಿ? ಸಭಾ ತುಂಬಿ ತುಳುಕುತ್ತಿತ್ತು. ಉಕ್ಕಿ ಬೀಳತಿತ್ತು. ಕಟ್ಟಕಡಿ ಸುಖದೊಳಗ ತೇಲತಿತ್ತು. ಇಡೀ ಹೈಸ್ಕೂಲು ಬಯಲಿನ್ಯಾಗ ಇರಿವಿ ಕೂಡ ಅಡ್ಡಾಡಲಾರದಂಗ ಜನ ಹತ್ತೆತ್ತಿ ಕೂತಿರತಿದ್ರು. ನಿದ್ದಿ ಹತ್ತಿದವರ ಮೂಗಾ, ಮಾರಿ ನೋಡಲಾರದ ಕೆಲವರು ಕಚಪಚ ತುಳೀತಾ ಅಡ್ಡಾಡ್ತಿದ್ರು.

ಇಂತಹ ತುಳಿತ–ತಳ್ಳಾಟಗಳಿಂದಲೆ ಕಿಸಮೂಗು, ಕೋಡುಮೂಗು, ವಾರೆಮೂಗು, ಡೊಂಕಮೂಗು, ಡೊಣ್ಣೆಮೂಗು, ಮೇಲ್‌ಮೂಗು, ಮೊಂಡಮೂಗುಗಳು ತಮ್ಮ ಆಕಾರವನ್ನೂ ಅಂದವನ್ನೂ ಮತ್ತಷ್ಟು ಹೆಚ್ಚಿಸಿಕೊಂಡಿದ್ವು. ಕುಡಿನೋಟ, ಕಿರುನೋಟಗಳು ಹಲವು ಸನ್ನೆಗಳನ್ನು ಕೊಡಲು ಸುರು ಮಾಡಿದ್ವು.

ಕಿಸಗಣ್ಣು, ಪಿಸರಗಣ್ಣುಗಳಿಂದ ನಿದ್ದೆಗೆಟ್ಟ ಕಣ್ಣುಗಳ ಬಣ್ಣಗಳನ್ನು ತಿಳೀಬಹುದಿತ್ತು. ಹುಬ್ಬು ಹಾರುವುದಕ್ಕೆ, ಕಣ್ಣು ಮಿಟುಕುವುದಕ್ಕೆ, ಮೂಗಿನ ಹೊಳ್ಳೆ ನಿಮಿರುವುದಕ್ಕೆ ಈ ಸಣ್ಣಾಟ ಅನೇಕ ಅಂತರ್ಲಯಗಳನ್ನು ಹುಡುಕಿಕೊಟ್ಟಿತ್ತು. ಸ್ಟೇಜ್ ಹಾಕಲಿಕ್ಕೆ ಗಳ, ಕಂಬ ಅಗಸಿಗೆ ಬಂದು ಬಿದ್ದೂವಂದ್ರ ಸಾಕು, ಮಂದಿಗೆ ಬರೇ ಅದರದ ಕನಸು. ತಾಲೀಮಿನಿಂದ ಹಿಡಿದು ಚಿಮಣಾ ಯಾರು ಅನ್ನೋ ವಿಚಾರದಾಗ ಊರು ತಿಂಗಳಗಟ್ಟಲೆ ಮುಳುಗಿರತಿತ್ತು. ಮುಳುಮುಳಗಿ ಎದ್ದಿರತಿತ್ತು. ಪರದೆ ಮ್ಯಾಲ ಯಾವಾಗ ಸರಿದೀತು ಅಂತ ಕಾಯುತಿತ್ತು.

ನಾಟಕ ಯಾವಾಗ ಸುರುವಾದೀತಂತ ನೆಟ್ಟಗಣ್ಣೀಲೆ ಕಾಯಾವ್ರ ಬಾಳ ಮಂದಿ. ಬ್ಯಾಸಗಿ ದಿವಸಕ್ಕ ಸೆಕಿ ಅನ್ನೋದು ಹೊಗಿ ಹಾದಂಗ ಹಾಯತಿತ್ತು. ಮೈಯಿಗೆ ಮೈ ಬೆಸತಿರತಿದ್ವು. ಒಬ್ಬರ ತೊಡಿ ಮತ್ತೊಬ್ಬರ ಮ್ಯಾಲ ಆಗಿರತಿತ್ತು. ಪ್ರೇಕ್ಷಕರಿಗೆ ಒಮ್ಮೊಮ್ಮೆ ಕಣ್ಮುಂದ ನಡೆಯೋ ಆಟ ನೋಡೋ ಬದಲು ಬೆವರು ಬಂದು ಮರಗಟ್ಟಿದ ತೊಡಿ ತೆಗೆಯೋದ ದೊಡ್ಡ ಒಜ್ಜೆ ಕೆಲಸ ಆಗತಿತ್ತು.

ಒಂದೊಂದ ಸಲ ಹಿಂಗೂ ಆಗತ್ತಿತ್ತಲ್ಲ– ರಾತ್ರಿ ಕವನೆಳ್ಳಾಗ ಏನ ಗೊತ್ತಾಗ್ತೈತಿ ಅಂತ ಉಪಾಯ ಮಾಡಿ ಹೆಂಗಸರ ಗುಂಪಿನ್ಯಾಗ ಸೀರಿ ಉಟ್ಟಕೊಂಡ ಗಂಡಸರೂ ಕುತ್ಕೊಂಡ ಪ್ರಸಂಗ ನಡೀತಿತ್ತು. ಮಂದಿಗೆ ಪ್ರಿಯಕರ ಕಂಡಗಿಂಡಾನಂತ ಮುಖದ ಮ್ಯಾಲಿನ ಬೆಳಕ ಹೆಚ್ಚಾದಾಗ ಗೆಳತಿ ಗೆಣೆಯನನ್ನ ಸೆರಗಲೆ ಮುಚ್ಚತಿದ್ಲು. ಮುಂದ ತಮ್ಮ ಟೈಮಿನ್ಯಾಗೂ ಸಹಾಯ ಅದೀತಂತ ಅಕ್ಕಪಕ್ಕದವರು ಸಹಕರಿಸತಿದ್ರು. ಕಣ್ಣಾರೆ ನೋಡಿದ್ರೂ ಏನೂ ನೋಡಿಲ್ಲದವರಂಗ, ಇದಿರಿಗೆ ಕಂಡ್ರೂ ಯಾವುದೋ ಕನಸು ಕರಗಿ ಹೋದಂಗ, ಆ ಮಾತು ಈ ಮಾತು ಕೇಳಬಾರದ ಮಾತು ಕೇಳಿಸಿದ್ರೂ ಕೇಳಿಲ್ಲದವರಂಗ ಇರೋವ್ರು ಸುತ್ತಮುತ್ತ ಇದ್ದ ಇರತಿದ್ರು.

ಅಷ್ಟೊತ್ತಿಗೆ ‘ಕಾಂತಾ ಕೇಳೋ ನನ್ನೆದೆಯ ಮಾತು’ ಅಂತ ಮಿರಿಮಿರಿ ಮಿಂಚುವ ಎದೆಯನ್ನು ಮುಂದು ಮಾಡಿ ಚಿಮಣಾ ಸ್ಟೇಜ್ ಮ್ಯಾಲ ಬಂದ್ರಂತೂ ಮುಗೀತು... ಮಂದಿ ವಕಾ ವಕಾ ಬಾಯಿ ಬಿಡತಿದ್ರು. ಅವರ ಎದಿಯೊಳಗಿನ ಮಾತು ಸಳ್‌ಸಳ್ ಕುದಿತಿದ್ವು. ಕೆಲವರು ಎದ್ದನಿಂತು ದಗ್ಗದಗ್ಗ ಕುಣೀತಿದ್ರು. ಕೆಲವರು ಹೆಗಲ ಮ್ಯಾಲಿನ ಟಾವೆಲ್ ಬೀಸತಿದ್ರು. ಆ ಕುಣಿಯೋ ಕಡತಕ್ಕ ಭೂಮಿ ಒಂದ ನಮೂನಿ ಗರಾಗರಾ ತಿರುಗಿದಂಗ ಅನಸ್ತಿತ್ತು. ಇಡೀ ಊರಿಗೆ ಊರು ಪ್ರೇಮಕ್ಕ ಪರವಶ ಆಗ್ತಿತ್ತು. ವಿಸ್ಮಯದ ಒಂದ ಮಾಯಾಲೋಕದಾಗ ಊರು ಹೊರಳಾಡತಿತ್ತು. ‘ಜರದ ಶಲ್ಲೆ ಹಾಸಲೇನು ನಿನ್ನ ಪಾದ ಬುಡಕ’ ಅಂತ ಅನ್ನೋ ಧ್ವನಿಗಳು ಮುಗಿಲಿಗೇರತಿದ್ವು. ಈ ಹೆಬ್ಬಳ್ಳಿ ಅಗಸಿ ಮಂದಿ, ಅಷ್ಟ ಅಲ್ಲದ ಇಡೀ ಊರಿನ ಕಿವಿ ಇತ್ತಾಗ ನೆಟ್ಟಿರತಿದ್ವು.

ಶಿವಲಿಂಗಪ್ಪನ ಧ್ವನಿ ಕೇಳಿರೇನು ನೀವು? ಬಹುಶಃ ಕೇಳಿರಬೇಕು. ಆಂವ ದನಿಯೆತ್ತಿ ಹಾಡಿದರ ಗುಡ್ಯಾಗಿನ ಗಂಟಿ ನಾಚ್ಗೊಬೇಕು. ಕಂಟ್ಯಾಗಿನ ಕೋಗಿಲಾ ಸ್ವಲ್ಪ ಹೊತ್ತು ಹಾಡೂದ ಬಿಡಬೇಕು. ’‘ಂಗಿ ಹೇಳುತ್ತೇನೆ ಕೇಳುವಂತಹವಳಾಗು’ ಎಂದು ಅಂವ ಕುಣೀಲಿಕ್ಕೆ ಸುರು ಮಾಡಿದ್ರ ದೂರದಿಂದ ಬಂದ ಚಿಮಣಾಗೋಳಿಗೆ ಅವನ ಜೊತೆ ಕುಣೀಲಿಕ್ಕೆ ಸಾಕಸಾಕಾಗುತ್ತಿತ್ತು. ಕೊನಿಗೆ ತೋಳು ಜಗ್ಗಿಯೋ, ಕೈ ಬಡಿಸಿಯೋ ಅವನ ಕಾಲನ್ನು ಜೋರಾಗಿ ತುಳಿದೋ ಅವರು ಅವನ ಉತ್ಸಾಹದ ಭಂಗಿಯನ್ನು ನಿಲ್ಲಿಸ್ತಾಯಿದ್ರು.

ನಾಟಕ ಆಡುವ ಊರ ಅಗಸಿಗೆ ಹೊಂದಿಕೊಂಡಂಥ ಈ ಹಳೇ ಸರಕಾರಿ ಹೈಸ್ಕೂಲಿಗೆ ಒಂದು ದೊಡ್ಡ ಇತಿಹಾಸನ ಐತಿ. ಆದರ ಚರಿತ್ರೆಯ ಪುಟ ತೆಗೆದು ನೋಡಾವ್ರು ಬಾಳ ಕಮ್ಮಿ ಆಗ್ಯಾರನ್ನೋದು ಅದು ಇದ್ದ ಸ್ಥಿತಿ ನೋಡೇನ ಹೇಳಬಹುದಿತ್ತು. ಇದ್ದುಳ್ಳವರು, ಸ್ಥಿತಿವಂತರು ಊರಾಗಿನ ಹೊಸ ಸಾಲಿಗೆ ಹೋಗಾಕ ಸುರು ಮಾಡಿದ ಮ್ಯಾಲ ಈ ಹೈಸ್ಕೂಲಿಗೆ ದೈನೇಸಿ ಪರಿಸ್ಥಿತಿ ಬಂದಿತ್ತು. ಸರಕಾರಿ ಸಾಲ್ಯಾಗ ಫೀ ಕಡಿಮಿ ಅಂತ್ಹೇಳಿ ಬರ್ತಿದ್ರೆ ಹೊರತು ಪೂರಾ ಮನಸ್ಸಿನಿಂದ ಬಂದವರು ಕಡಿಮಿ.

ವಿದ್ಯಾರ್ಥಿಗಳು ಹೋಗಲಿ, ಶಿಕ್ಷಕರು ಸೈತ ಸಾಲಿ ಗ್ವಾಡಿಗಿದ್ದ ಈ ಊರ ಸ್ವಾತಂತ್ರ್ಯಯೋಧರ ಪಟ್ಟೀನ ನೋಡಿರಲಿಲ್ಲ. ಈ ಭಾಗದಿಂದ ಉಪ್ಪಿನ ಸತ್ಯಾಗ್ರಹಕ್ಕೆ ಹೋದವರ ಹೆಸರು ಸೈತ ಅಲ್ಲಿದ್ವು. ಆದರ ಆ ಅಕ್ಷರಗಳೆಲ್ಲ ಮಳಿಗೆ ಮತ್ತ ಬಿಸಿಲಿಗೆ ಅಳಿಸಿ ಹೊಂಟಿದ್ವು. ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕ ಹೋಗೋ ವ್ಯಾಳೇಕ್ಕ ಈ ಹೈಸ್ಕೂಲು ಕಟ್ಟೀಮ್ಯಾಲ ಸ್ವಲ್ಪ ಹೊತ್ತು ಕೂತು ದಣಿವು ಆರಿಸ್ಕೊಂಡು ಹೋಗಿದ್ರಂತ.

ಈ ಊರಿಗೊಂದು ಸಾಲಿ ಆಗಬೇಕು ಅಂತ ಅಗದೀ ಸಣ್ಣ ದನಿಲೇ ಅವರು ತಮ್ಮ ಆಸೇನ ಹೊರಗ ಹಾಕಿದ್ರು. ಅವರು ಹೇಳಿದ್ದಕ್ಕ ಮಂದಿ ಬಡಾಬಡಾ ರೊಕ್ಕ ಕೂಡಿಸಿ ಬರೇ ಎಂಭತ್ತೇಳು ರೂಪಾಯಿದಾಗ ಇಷ್ಟ ದೊಡ್ಡ ಬಿಲ್ಡಿಂಗ್ ಕಟ್ಟಿಸಿದರಂತ. ಈಗ ಇದರ ಕಿಮ್ಮತ್ತು ಕಮ್ಮೀತಕಮ್ಮಿಯಂದ್ರೂ ಹತ್ತು ಕೋಟಿ ಆದೀತು. ಹಂಗಂತ ಸರಕಾರ ಇದನ್ನ ಮಾರಾಕ ನಿಂತಿಲ್ಲ. ‘ನೀವು ಮಾರ್ರಿ, ಬೇಕಾದ್ರ ಬಿಡ್ರಿ. ನಾವು ಮಾತ್ರ ಒಂದಿಲ್ಲೊಂದು ದಿನಾ ಈ ಜಾಗಾನ್ನ ನುಂಗಿ ನೀರು ಕುಡಿತೀವಿ’ ಅಂತ ಬಾಜೂಕಿನ ದಲಾಲಿ ಅಂಗಡಿಯವರು, ಆಚಿ ಕಡೆ ಕಿರಾಣಿ ಅಂಗಡಿಯವರು, ಬಯಲಿಗೆ ಹೊಂದಿಕೊಂಡು ಉಸುಕಿನ ಟ್ರಕ್ ನಿಲ್ಲಿಸೋ ಹರಿಹರ ಉಸುಕು ಮಾರೋ ಸಟ್ಟಾ ವ್ಯಾಪಾರಿಗಳು ಒಂಟಿಗಾಲ ಮ್ಯಾಲ ನಿಂತಾರು.

ಕಲ್ಲು–ಮಣ್ಣು ಹೆಂಗ ಮಾಯ ಆಗ್ತಾವ ಅನ್ನೋ ಮಾಯಾ ನೀವು ಇಲ್ಲಿ ನೋಡಬಹುದು. ಒಳಗಿಂದೊಳಗ ಹಗಲಿ ಒಂದ ಕಲ್ಲು, ರಾತ್ರಿ ಎರಡು ಕಲ್ಲು ತೆಗೆದು ಗ್ವಾಡಿ ಅದ್ರ ಮಾಡ್ಲಿಕ್ಕೆ ಹತ್ತ್ಯಾರು. ಹಗಲಿ ನಿಚ್ಚಣಿಕಿಯ ಒಂದು ಹಲ್ಲು, ರಾತ್ರಿ ಎರಡು ಹಲ್ಲು ಏರಿ ಮ್ಯಾಲಿನ ಹಂಚು ಒಡೀಲಿಕ್ಕೆ ಹತ್ತ್ಯಾರು. ರಾತ್ರಿ ಅಲ್ಲದ ಹಗಲೂ ಕೂಡ ಕಾಣದ ಕಲ್ಲು ಬೀಳಬೇಕಾದ್ರ, ರೂಪಗಳು ರೂಪಾಂತರ ಆಗತಿರಬೇಕಾದ್ರ ಇಲ್ಲಿ ಅಸನರಿ ದೆವ್ವ ವಾಸ ಇರಲಿಕ್ಕಿಲ್ಲ, ಬಹುಶಃ ಬ್ರಹ್ಮಪಿಶಾಚಿನ ಇರಬೇಕು ಅಂತ್ಹೇಳಿ ಇದ್ದಬಿದ್ದ ಶಿಕ್ಷಕರು ಬ್ಯಾರೆ ಕಡೆ ವರ್ಗ ಆಗೋತನಕ ನಿದ್ದೀನ ಮಾಡಂಗಿಲ್ಲ. ರಾತ್ರಿ ನಿದ್ದಿ ಸರಿ ಆಗಲಿಲ್ಲಂದ್ರ ಹಗಲಿ ಪಾಠ ಹೆಂಗ ಮಾಡ್ತಾರು ಹೇಳ್ರಿ.

‘ಮಾಸ್ತರಗಳು ಸರಿ ಕಲಿಸಾಂಗಿಲ್ಲ, ಇನ್ನ ಹುಡುಗರನ್ನ ಸಾಲಿಗೆ ಹೆಂಗ ಕಳಿಸಬೇಕು’ ಅಂತ ಅಪ್ಪ–ಅವ್ವ ಒಂದು ಕಡೆ ಹೇಳಿದರ ಇನ್ನೊಂದು ಕಡೆ ‘ಹುಡುಗರು ಸಾಲಿಗೆ ಬರದೇ ಇದ್ರ ನಾವೇನು ಹಾಳಗ್ವಾಡಿಗೆ ಒದರೂನನ’ ಅಂತ ಶಿಕ್ಷಕರು ಹೇಳ್ತಾ ಇದ್ರು. ಶಿಕ್ಷಕರದು ತಪ್ಪೋ ಇಲ್ಲಾ ವಿದ್ಯಾರ್ಥಿಗಳದ್ದು ತಪ್ಪೋ ಒಟ್ಟಿನ್ಯಾಗ ಅತ್ತ ಬಿಡಿಸಲಾರದ ಇತ್ತ ಕೆಡಿಸಲಾರದ ಕಗ್ಗಂಟಾಗಿತ್ತು. ಕೊಳ್ಳಾಗ ತಾಳಿ ಇದ್ರ ಗಂಡ ಇದ್ದಾಂಗ, ಮೈಮ್ಯಾಲ ಹಸನಾದ ಅರಿವಿ ಹಾಕ್ಕೊಂಡಿದ್ರ ಮನ್ಯಾಗ ಹೆಂಡತಿ ಇದ್ದಾಂಗ ಅನ್ನೋ ಲೆಕ್ಕದಾಗ ನಾಕೈದು ಹುಡುಗೋರು ಸಾಲಿಯೊಳ್ಗ ಸತತ ಇರತಿದ್ರು. ಮಾಸ್ತರರನ್ನ ನಂಬಿ ಹುಡುಗೋರು, ಹುಡುಗೋರನ್ನು ನಂಬಿ ಮಾಸ್ತರರು ಸಾಲಿ ಹಿಂದಿನ ಕಾಲದಾಗ ನಡೆದಿತ್ತು. ಈಗಲೂ ನಡೀತಾ ಇದೆ. ಮುಂದನೂ ನಡದ ನಡೀತೈತಿ ಅನ್ನೋದಕ ಖಾತ್ರಿ ಬೇಕೇನು? ಊರ ಮುಂದಿನ ಹೊಳಿ ಹರದ ಹರೀತಿತ್ತು. ಈಸ್ಯಾಡವ್ರು ಈಸ್ಯಾಡತಿದ್ರು. ಸಾಲಿ ಕೆಲವು ದಿನ ಬಂದ್ ಇರೋದು ಚುಲೋ ಇತ್ತು. ಯಾಕಂದ್ರ ವಾರದಾಗ ಮೂರ್ನಾಲ್ಕ ದಿನ ಸೂಟಿ ಮಾಡ್ಕೊಂಡು ಪಿರಿಪಿರಿ ತಿರಗೋ ಮಾಸ್ತರರನ್ನ, ಸಾಲಿ ಇದ್ರೂ ಆತು, ಇರದಿದ್ರು ಆಯ್ತು ಲುಂಗುಲುಂಗು ಓಡುವ ಹುಡಗರನ್ನ ಹಿಡಿದಿಡೋದು ಕಷ್ಟ ಇತ್ತು.

ಆದರ ಒಂದ ಸಲ ಹೆಡ್‌ಮಾಸ್ತರಿಗೆ ಭೆಟ್ಟಿ ಆಗಿ ಒಂದು ದಿನದ ಮಟ್ಟಿಗೆ ಸಾಲಿ ಗ್ರೌಂಡ್ ನಾಟಕ ಮಾಡಾಕ ಕೊಡ್ರಿ ಅಂತ ಚಾಲಿ ಉರದು ಸಾಲಿ ಕಡೆ ಅಡ್ಡ ಮಳಿಗಿ ಹಳ್ಳ ಹರದ ಬಂದಂಗ ಊರ ಮಂದಿ ಹರದ ಬರೂವಂಗ ಮಾಡಿದೋನು ಶಿವಲಿಂಗಪ್ಪ. ಸಾಲಿ ಹುಡುಗೋರು ಬರಲಿಲ್ಲಂದ್ರೂ ದೊಡ್ಡವರು ಬಂದ್ರು. ಮಕದ ಮ್ಯಾಲ ಮೀಸಿ ಮೂಡಿದವರು ಬಂದ್ರು. ಕೂದಲು ಬೆಳ್ಳಗಾದವರು ಬಂದ್ರು.

ಬಕ್ಕತಲೆಯವರು ಬಂದ್ರು. ಗಡ್ಡಬಿಟ್ಟವರು ಬಂದ್ರು. ತಲಿ ಕೆದರಿದವರು ಬಂದ್ರು ಮತ್ತು ತಲಿ ಕೆಟ್ಟವರೂ ಬಂದ್ರು. ಹುಬ್ಬಳ್ಳಿ, ಬೈಲಹೊಂಗಲ, ಬೆಳಗಾವಿ ಮತ್ತು ಗೋಕಾಕ ಊರುಗಳ ಚಿಮಣಾಗೋಳು ಬಂದು ವಾರಿನೋಟ ಬೀರಿದ್ರ ಹುಡುಗರ ತೆಲಿ ಕೆಡದ ಇರತೈತೇನು? ಅವರ ಮಾರಿ ಮ್ಯಾಲ ನಗೀನವಿಲು ಕುಣಿದ್ರ ಇವರು ಬಯಲೊಳಗ ಕುಣಿಲಾರದ ಇರ್ತಾರೇನು? ಶಿವಲಿಂಗಪ್ಪನಂತಹ ಚೆಲುವ ಹುಬ್ಬು ಹಾರಿಸಿದ್ರ ನೋಡುವವರ ಹೃದಯ ಹಾರದ ಇರತೈತೇನು? ಅಂತೂ ವರ್ಷದಾಗ ಒಂದ ದಿನಾ, ಎರಡ ದಿನಾ, ನಾಕೈದು ದಿನ ಅಂತ ಸುರುವಾಗಿದ್ದು ಹತ್ತು–ಹನ್ನೆರಡ ದಿನ ಬಯಲಾಟ ಉತ್ಸವ ನಡೀಯುವಷ್ಟು ಪ್ರಸಿದ್ಧಿಯನ್ನು ಈ ಊರು ಪಡೀಲಿಕ್ಕೆ ಹತ್ತ್ಯು.

ಮೊನ್ನಿಮೊನ್ನಿತನಕ ರಿಕಾಮಿ ತಿರಗತಿದ್ದ ಶಿವಲಿಂಗಪ್ಪ ನೋಡನೋಡೊದರಾಗ ಒಂದು ತಂಡ ಕಟ್ಟೇಬಿಟ್ಟ. ಇಂವೇನು ಮಾಡ್ಯಾನು, ಹೆಂಡತಿಗೆ ಏನ ದುಡದ ಹಾಕ್ಯಾನು, ತಂದಿ–ತಾಯಿ ಏನ ನೋಡ್ಕೊಂಡಾನು ಅಂತ ಅಂವನ್ನ ಹೀಗಳೆದವರೆ ಜಾಸ್ತಿಯಿದ್ದರು. ಯಾಕಂದ್ರ ಆಂವ ಮ್ಯಾಟ್ರಿಕ್ ಪರೀಕ್ಷೆ ನಾಕೈದು ಸಲ ಕುಂತು ನಪಾಸಾಗಿದ್ದ. ನಪಾಸಾದ್ರೂ ಸೈತ ಪಾಸಾಗಿದ್ದವರಿಗಿಂತ ಜಾಸ್ತಿ ಕಳಾ ಅವನ ಮಾರಿ ಮ್ಯಾಲ ಇತ್ತು. ಪ್ರತಿಸಲ ಫೇಲ್ ಆದ ಕೂಡ್ಲೆ ಆಂವ ಇಷ್ಟ ಚಂದ ನಗತಿದ್ದಂದ್ರ ಕಲೆಕ್ಟರ್ ನೌಕರಿ ಪಾಸಾದವರು ಸೈತ ಅಷ್ಟ ಚೆಂದ ನಗ್ತಿರಲಿಲ್ಲ. ಕಾರಣ ಕೇಳಿದ್ರ ‘ನಾ ಫೇಲ್ ಆಕ್ಕೇನಿ ಅಂತ ನನಗ ಮೊದಲ ಗೊತ್ತಿತ್ತು, ಅದು ಸುಳ್ಳಾಗಲಿಲ್ಲ ಅಂತ ಖುಷಿಯಾಗೇತಿ’ ಅಂತ ಅನ್ನಾಂವ.

ಆಂವನ ಜೋಡಿ ಇದ್ದ ಗೆಳ್ಯಾರು ಅಲ್ಲಿ ಇಲ್ಲಿ ಕಾಲೇಜ ಕಲೀಲಿಕ್ಕೆ ಹೋದ್ರ ಇಂವ ಇಲ್ಲೆ ಊರಾಗ ನಾಕೈದು ಸುತ್ತ ಹಾಕಿ ಟೈಮ್‌ಪಾಸ್ ಮಾಡಾಂವ. ‘ಏ ಯಬರೇಶಿ ಮಗನ, ಎಷ್ಟ ದಿನಾ ಅಂತ ಹೀಂಗ ಅಡ್ಡಾಡಾಂವ. ಅತ್ಲಾಗ ಸಾಲಿಗೂ ಹತ್ತಲಿಲ್ಲ. ಇತ್ಲಾಗ ಹೊಲಕ್ಕೂ ದಕ್ಕಲಿಲ್ಲ. ನಮ್ಮ ಮನಿತನದ ಕಿಮ್ಮತ್ತ ಕಳಿದೀ ನೀನು’ ಅಂತ ಅಪ್ಪ ಒಂದೆರಡ ಸಲ ಕೂಗಾಡಿದ್ದ. ಮಗ ಒಂದ ಸಲ ತಡಕೊಂಡ. ಎರಡ ಸಲ ತಡಕೊಂಡ. ಬೆನ್ನು ಗ್ವಾಡಿಗಿ ಹತ್ತೂತನಕ ತಡಕೊಂಡ. ಮುಸ್‌ಮುಸ್ ಅಂತ ಹೋರಿ ಮಾಲಿಕಗ ಹೊಳ್ಳಿ ನಿಂತಂಗ ಶಿವಲಿಂಗಪ್ಪ ಒಂದ ಸಲ ತಂದಿಗಿ ತಿರುಗಿ ನಿಂತ. ಎಲ್ಲ್ಯೊ ಕಲಿತಿದ್ದ ಟಬರ್ ಹೊರಗ ಹಾಕಿದ. ‘ನಿನ್ನ ಹೊಲ-ಮನಿ ನೀನ ಇಟ್ಕೋ. ನನಗೇನ ಬ್ಯಾಡ’ ಅಂತ ತಂದಿಗಿ ತಿರುಗಿ ಅಂದು ಊರು ಬಿಟ್ಟಾಂವ ಹೋಗಿದ್ದು ಸ್ವಾದರಮಾಂವನ ಊರು ಬೈಲಹೊಂಗಲಕ.

‘ನೀ ತಿರುಗಿ ಊರಿಗೆ ಕಳಿಸ್ತೇನಂದ್ರ ನಾ ಇಲ್ಲೇ ನಯಾನಗರ ಡ್ಯಾಮಿನ ಮ್ಯಾಲಿಂದ ಜಿಗದ ಬಿಡ್ರೇನಿ ನೋಡು’ ಅಂತ ಮಾಂವಗ ಹೇಳಿದ. ಹೆಂಗಾದ್ರೂ ಇಂವ ತನ್ನ ಅಳಿಯ ಆಗಾಂವ. ಅಂವನ್ಯಾಕ ಬ್ಯಾಸರಪಡಿಸಬೇಕು ಅಂತ ಅವನು ಇವನ ಅಪ್ಪ ಅವ್ವನಿಗೆ ನಿಮ್ಮ ಮಗ ಆರಾಮ ಇದ್ದಾನ ಅಂತ ಸುದ್ದಿ ಮುಟ್ಟಿಸಿದ.

ಹೊಂಗಲದಾಗ ಖಾಲಿ ಅಡ್ಡಾಡ್ತಾ ಇದ್ದ ಶಿವಲಿಂಗಪ್ಪಗ ಬಾಜೂಮನ್ಯಾಕ ನಡೀತಾ ಇದ್ದ ‘ಸಂಗ್ಯಾಬಾಳ್ಯಾ’ ಆಟದ ತಾಲೀಮು ನೋಡಿ ಮಜಾ ಅನಿಸ್ತು. ದಿನಾ ಸಂಜಿ ಮುಂಜಾನಿ ಅಲ್ಲೇ ಹೋಗಿ ಕುಂಡ್ರಾವ. ಪೆಟಿಗಿ ಮಾಸ್ತರ್ ನಾಟಕದ ಪುಸ್ತಕ ಇಂವನ ಕೈಯಾಗ ಕೊಟ್ಟು ಪಾತ್ರದವರು ಮಾತು ಸರಿ ಹೇಳ್ತಾರೋ ಇಲ್ಲೋ ನೋಡಸ್ತಿದ್ದ. ‘ನಾ ಒಂದ ಪಾರ್ಟ ಮಾಡ್ತೇನಿ’ ಅಂತ ಇಂವ ಅಂದ್ರ ‘ಮೀಸಿ ಸರಿಯಾಗಿ ಮೂಡ್ಲಿ ತಗೋ’ ಅಂತಿದ್ದ. ತನಗ ಪಾರ್ಟ ಕೊಡ್ಲಿ ಅಂತ ಇಂವ ಮಾಸ್ತರ್‌ನ್ನ ಹೊಟೇಲಿಗೆ ಕರ್ಕೊಂಡು ಹೋಗಾಂವ.

ಒಂದೊಂದು ಸಲ ಮಾಂವನ ಮನಿಗೆ ಕರ್ಕೊಂಡು ಹೋಗಿ ಹೋಳಿಗಿ–ತುಪ್ಪ ಊಟ ಮಾಡಸಾಂವ. ಪಾಪ! ಇಷ್ಟೆಲ್ಲ ಮಾಡ್ತಾನಂತ ಸ್ಟೇಜಿನಲ್ಲಿ ದೇವರ ಮೂರ್ತಿ ಇಡೋ ಮುಂದ ಇಲ್ಲಾ ಮಂಗಳಾರತಿ ಸಮಯದಲ್ಲಿ ಕೈ ಮುಗಿಯೋ ಹೊತ್ತಿಗೋ ಇಲ್ಲಾ ಮಾತಿಲ್ಲದೆ ಸುಮ್ಮನೆ ಬಂದು ಹೋಗೋ ಪಾತ್ರಗಳನ್ನು ಕೊಡಾಕ ಸುರು ಮಾಡ್ದ. ಶಿವಲಿಂಗಪ್ಪ ಸತತ ಕೇಳಾಂವ. ‘ಮಾಸ್ತರ ನಾ ಸಂಗ್ಯಾನ ಪಾರ್ಟ ಮಾಡಾಂವ. ದಯವಿಟ್ಟು ಕೊಡ್ರಿ, ಬೇಕಾದ್ರ ಅಷ್ಟೂ ಡೈಯಲಾಗ್ ಕೇಳ್ರಿ. ಹೇಳ್ಲೇನು ಬಾಯಿಪಾಠ? ಕುಣಿಲೇನು ನೆಲ ಅದರೂವಂಗ’.


ಡೈಲಾಗ್ ಬಂದ್ರ ನಾಟಕ ಮಾಡಾಕ ಬಂದಂಗಲ್ಲ. ಪ್ರೀತಿ-ಪ್ರೇಮ ತಿಳ್ಕೋಳಾಗ ನಿನಗ ಇನ್ನೂ ಟೈಮ್ ಹಿಡಿತೇತಿ. ಆ ಭಾವನಾ ಸ್ಟೇಜ್ ಮ್ಯಾಲ ಬರಬೇಕಾಗತೇತಿ. ಅದು ಯಾರನ್ನಾರ ಪ್ರೀತಿ ಮಾಡಿದ್ರ ಬರತೈತಿ ಹೊರತು ಸುಮ್ಮಸುಮ್ಮನ ಅಲ್ಲ.

ಮಾಸ್ತರ್ ಹಂಗಂದ ಕೂಡಲೆ ಶಿವಲಿಂಗಪ್ಪಗ ಇಕ್ಕಟ್ಟಿನ್ಯಾಗ ಸಿಕ್ಕೋಂಡಂಗ ಆತು. ‘ನನಗ ಗೊತ್ತಿಲ್ಲೇನು?’ ಅಂತ ವಿಚಾರ ಮಾಡಿದಂವನ ಮಾಂವನ ಮಗಳು ಲಲಿತಾಳನ್ನ ಮಾತಾಡಿಸಲಿಕ್ಕೆ ಸುರು ಮಾಡಿದ. ಆಕಿ ಎಷ್ಟು ಬೇಕೋ ಅಷ್ಟು ಮಾತಾಡಿ ಹಿಂದ ಸರ್ಯಾಕಿ. ಕಾಲೇಜಿಗೆ ಹೋಗ್ತಿದ್ದ ಅವಳನ್ನು ಬಾಳ ಸೊಕ್ಕಿನಾಕಿ ಅಂತ ಇಂವ ಮೊದ್ಲು ಮಾತಾಡಸೋದ ಬಿಟ್ಟಿದ್ದ. ಆದರ ಈಗ ಇಂವನ ಅವತಾರ ನೋಡಿ ‘ನನ್ನ ಸನೇಕ ಬಂದ್ರ ಪಾಡ ಹರ್ಯಾಕಿಲ್ಲ ಮತ್ತ?’ ಅಂತ ಒಂದು ಸಲ ಅಂದ್ರ, ಮತ್ತೊಮ್ಮೆ ‘ನನಗ್ಯಾಗ ಗಂಟ ಬಿದ್ದೀಯೋ, ನಿನ್ನ ಲೇವಲ್ ಯಾರೂ ಸಿಗಲಿಲ್ಲೇನ?’ ಎಂದು ಅವನು ಫೇಲಾದುದನ್ನು ಮತ್ತಮತ್ತ ನೆನಪ ಮಾಡ್ತಿದ್ಲು. ಆದರ ಆಕಿ ಅಪ್ಪ ಮಾತ್ರ ಬ್ಯಾರೆ ವಿಚಾರ ಮಾಡ್ತಿದ್ದ.

ಬಾಳ ಜಮೀನು ಇದ್ದಾವ್ರು ತನ್ನ ಮಗಳನ್ನು ಮದವಿ ಮಾಡ್ಕೊಂಡಾರೋ, ಇಲ್ಲೊ ಅಂತ ಹೆದರಿಕೆಯಿಂದ ಇದ್ದ ಅಂವನು ಅಳಿಯ ಜಾಸ್ತಿ ದಿನ ತಮ್ಮ ಮನೆಯಲ್ಲಿ ಇದ್ದಷ್ಟು ಒಳ್ಳೆಯದೆ ಅಂತ ಲೆಕ್ಕ ಹಾಕ್ತಿದ್ದ. ‘ಇದೇನಿಂವಾ, ಮಂಗ್ಯಾನಂಗ ಮಾಡ್ತಾನು’ ಅಂತ ಲಲಿತಾ ಅಪ್ಪ ಅವ್ವನಿಗೆ ಹೇಳುವ ಧೈರ್ಯ ಸಾಲದೆ ಕೊನೆಗೆ ಶಿವಲಿಂಗಪ್ಪನಿಗೆ ಒಂದು ಚೀಟಿ ಕೊಟ್ಟಳು. ಅಂತೂ ಪ್ರೇಮ ಒಲಿಯಿತು ಎಂದು ಇವನು ಕಾತರದಿಂದ ಪತ್ರ ಒಡೆದರೆ ಅದರಲ್ಲಿ ಹೀಂಗ ಬರದಿತ್ತು:

‘‘ಪ್ರೀತಿಯ ಸೋದರಮಾಂವನಾದ ಶಿವಲಿಂಗಪ್ಪನಿಗೆ ನಮಸ್ಕಾರ. ನಿನ್ನ ಕಾಲಿಗೆ ಬಿದ್ದು ಬೇಡುತ್ತೇನೆ. ಇತ್ತೀಚಿನ ನಿನ್ನ ನಡವಳಿಕೆಯಿಂದ ನಾನು ನಿದ್ದೆಯನ್ನೇ ಮಾಡಿಲ್ಲ. ನಿನ್ನ ಬಗ್ಗೆ ನನಗೆ ಪ್ರೀತಿಯ ಭಾವನೆಯೇ ಇಲ್ಲ. ಮೊದಲಿನಿಂದಲೂ ನಾವು ಕೂಡಿ ಬೆಳೆದಿದ್ದೇವೆ. ನಾನು ನಿನ್ನನ್ನು ಅಣ್ಣನ ತರಹ ನೋಡಿದ್ದೇನೆಯೆ ಹೊರತು ಬೇರೆ ದೃಷ್ಟಿಯಿಂದ ನೋಡಿಲ್ಲ. ನನ್ನನ್ನು ನಂಬು. ಯಾವತ್ತೂ ನಾ ನಿನ್ನ ಆ ದೃಷ್ಟಿಯಿಂದ ನೋಡಿಲ್ಲ. ಇಷ್ಟು ದಿನ ನೀನು ಒಳ್ಳೆಯವನಿದ್ದಿ. ನನಗೆ ನೀನು ಸಹಾಯ ಮಾಡುತ್ತಿ ಎಂದು ನಂಬಿದ್ದೆ. ಈಗಲೂ ನಂಬಿರುವೆ.

ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ. ಅವನು ಯಾರೆಂದು ನಿನಗೂ ಗೊತ್ತಿದೆ. ನಿಮ್ಮ ನಾಟಕ ಮಾಸ್ತರರನ್ನು ನಾನು ಬಹಳಷ್ಟು ಮೆಚ್ಚಿಕೊಂಡಿದ್ದೇನೆ. ನನ್ನ ಸಲುವಾಗಿಯೆ ನೀನು ಅವನನ್ನು ಇಷ್ಟು ದಿನ ನಮ್ಮ ಮನೆಗೆ ಕರೆದುಕೊಂಡು ಬರುತ್ತಿದ್ದಿಯೆಂದು ನಾನು ತಿಳಿದುಕೊಂಡಿದ್ದೆ. ಆ ಮಾಸ್ತರರ ಧ್ವನಿ, ಹಾಡು ಬಿಟ್ಟಿರಲು ನನಗೆ ಸಾಧ್ಯವಾಗದು. ದಯವಿಟ್ಟು ಮನೆಯಲ್ಲಿ ಯಾರಿಗೂ ಹೇಳಬೇಡ’’.

ಆ ಘಟನೆ ಸಂಭವಿಸಿ ಈಗ ಕನಿಷ್ಠ ಇಪ್ಪತ್ತ ವರ್ಷ ಆದ್ರೂ ಆಗಿರಬೇಕು. ಆ ಪತ್ರ ಓದಿ ಇಂವ ನಾಕ ದಿನ ಜ್ವರಾ ಬಂದು ಮಲಗೇಬಿಟ್ಟಿದ್ದ.
ಏನೇನೋ ಬಡಬಡಸಾಂವ. ಎಚ್ಚರ ತಪ್ಪಿ ಇಂವ ಎಲ್ಲ್ಯಾದ್ರೂ ಹೇಳಿಗಿಳ್ಯಾನು ಅಂತ ಲಲಿತ ಹೊಳ್ಳೊಳ್ಳಿ ಇಂವನ ಮುಖಾನ ನೋಡಾಕಿ. ಅದು ಅಂವಗೂ ಅರ್ಥ ಆಗಿರಬೇಕು. ಉರಿಯೋ ಚಿಮಣಿಗಿ ಹಿಡಿದು ಆ ಪತ್ರ ಸುಟ್ಟ. ಆಕಿಗಿ ನಿರಾಳ ಅನ್ನಿಸಿತು. ನಾಟಕನೂ ಬ್ಯಾಡ, ಪ್ರೀತಿ-ಪ್ರೇಮನೂ ಬ್ಯಾಡ ಅಂತ ಇಂವ ಏಕಾಏಕಿ ಊರಿಗೆ ಹೊಂಟಬಂದ.

ಮುಂದ ನಾಕದಿನದಾಗ ಒಂದ ಸುದ್ದಿ ಏನ ಗೊತ್ತಾತಂದ್ರ ಆ ನಾಟಕ ಮಾಸ್ತರ್ ಒಬ್ಬ ಹೈಸ್ಕೂಲು ಮಾಸ್ತರತಿ ಜೋಡಿ ಓಡಿ ಹೋದ ಅನ್ನೋದು. ಮಾಸ್ತರ ಯಾವಾಕಿ ಜೊತೆಯಾದ್ರೂ ಓಡಿಹೋಗ್ಲಿ, ಲಲಿತಾ ಹೋಗಲಿಲ್ಲ ಅನ್ನೋ ಖುಶಿ. ಲಲಿತಾ ಮ್ಯಾಲ ಇಂವಗ ಸಿಟ್ಟಿದ್ರೂ ಒಳಗಿಂದೊಳಗ ಪುಣ್ಯೇಕ ಆಕಿ ಓಡಿಹೋಗಲಿಲ್ಲ ಅನ್ನೋ ಸಮಾಧಾನ ಆತು. ಶಿವಲಿಂಗಪ್ಪ ಹೊಂಗಲದಾಗ ಕಲಿತಿದ್ದ ಆಟಾನ ನಾಲಿಗಿ ಅಷ್ಟು ಲಗೂ ಕಳಕೊಳ್ಳಲಿಲ್ಲ. ಕಣ್ಣಾಗ ಕುಂತ ಆಟದ ಗೊಂಬಿಗಳು ಅಷ್ಟ ಲಗೂ ಮರೆಯಾಗಲಿಲ್ಲ. ಅಂವನೊಳಗ ತಾನ ಯಾಕ ಒಂದು ಗುಂಪು ಕಟ್ಕೋಬಾರದು, ತಾನ ಯಾಕ ಆಟ ಆಡಿಸಬಾರದು ಅನ್ನೋ ಹುಕಿ ಹೊಕ್ಕಿತು. ನಾಲಿಗಿ ಮ್ಯಾಲಿದ್ದ ಅಕ್ಷರಗಳನ್ನು ಆಗಿಂದಾಗ ಹಾಳ್ಯಾಗ ಇಳಿಸಿದ. ನಾಕೈದು ಹುಡುಗರನ್ನ ಕರಕೊಂಡು ತಾಲೀಮು ಸುರು ಆತು.

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ....

ಅಂತ ಪ್ರಾರಂಭ ಆಗಿದ್ದು ಅನೇಕ ಆಪತ್ತು, ವಿಪತ್ತುಗಳನ್ನು ಹೆಂಗ ದಾಟ್ತು ಅಂತ ನೆನೆದಾಗ ಶಿವಲಿಂಗಪ್ಪಗ ಇಂದೂ ಆಶ್ಚರ್ಯ ಆಕ್ಕೇತಿ. ‘ಆಂವ ಹೆಸರ ಕೆಡಸಕೊಂಡಾನ, ಎಲ್ಲೆಲ್ಲ್ಯೋ ಇರ್ತಾನ. ಯಾರ್ಯಾರ ಜೊತೆಗೋ ಅಡ್ಡಾಡ್ಯಾನ. ಅಂವನೇನ ಮದ್ವಿ ಆಗ್ತೀ’ ಅಂತ ಆಕಿ ಅಪ್ಪ–ಅವ್ವ ಬ್ಯಾಡ ಅಂದ್ರೂ ಲಲಿತಾ ತಪಾ ಕೂತು ಶಿವಲಿಂಗಪ್ಪನ ಮದ್ವಿಯಾದ್ಲು.

‘ನನಗ ಆವಾಗ ಏನೂ ತಿಳಿತಿರಲಿಲ್ಲ. ಖರೆ, ಅದನ್ನ ಮನಸ್ಸಿನ್ಯಾಗ ಇಟ್ಕೊಬ್ಯಾಡ್ರಿ’ ಅಂತ ಆಗಿಂದಾಗ ಹೇಳಾಕಿ. ಆಂವ ಮನಸಾರೆ ನಕ್ಕು ಸುಮ್ನ ಹೋಗಾಂವ. ಆಟ ಆಡ್ತಾ ಹೋದಾ ಅಂದ್ರ ಅಂವಗ ಮನಿ ಖಬರ ಇರ್ತಿರಲಿಲ್ಲ. ಮಂದಿ ಅಂವನ ಬಗ್ಗೆ ಏನೇನೋ ಗುಜುಗುಜು ಮಾತಾಡಾವ್ರು. ಒಂದೊಂದು ಸಲ ಲಲಿತಾಳ ಪ್ರೇಮದ ಪರಿಮಳ ನೆನಪಾಗಿ ಬರಾಂವ. ಸಿಟ್ಟಾಗಿದ್ದವಳನ್ನ ಸೆಟಗೊಂಡಿದ್ದವಳನ್ನ ಏನೇನಾರ ಹೇಳಿ ನಗಿಸಾಂವ. ‘ನಿನ್ನ ನಾಟಕ ಮಾಸ್ತರ ಸಿಕ್ಕೇನು? ಮತ್ತ ಪತ್ರ ಬರಿದಿ ಏನು’ ಅಂತ ಅಂದ್ರ ಆಕಿ ಕೂಡ ಮನಸಾರೆ ನಕ್ಕಬಿಡಾಕಿ. ಮುಂದೊಂದು ದಿನ ಆ ಓಡಿ ಹೋದ ಮಾಸ್ತರನೂ ಈ ಊರಿಗೆ ಬಂದು ಶಿವಲಿಂಗಪ್ಪನ ಜೊತೆ ಆಟ ಆಡಿದ. ಹಿಂದಿನ ಕತೆ ಕೇಳಿ ನಕ್ಕ.

‘ಲಲಿತವ್ವ, ನಾಟಕ ಅಗದೀ ಸರಳ ಅಂತ ಮಂದಿ ತಿಳ್ಕೊಂಡಾರ. ಆದರ ಅದು ಅಷ್ಟ ಸರಳ ಅಲ್ಲ. ನಮ್ಮ ಜೀವನ ಅಲ್ಲಿ ತೆರೆದ ಇಡೋದು ಬಾಳ ಕಠಿಣ ಇರತೈತಿ. ಬದುಕು ಮತ್ತು ಆಟ ಹೊಂದಿಸೋದು ಕತ್ತಿ ಮೊನಿ ಮ್ಯಾಲ ನಡೆದಂಗ. ಇದರಾಗ ನಾ ಸೋತಹೋದ್ನಿ. ಶಿವಲಿಂಗಪ್ಪ ಮಾತ್ರ ಗೆದ್ದಬಿಟ್ಟ. ಗಂಟಲ್ಲಾಗ ಗರಳ ಹಿಡಿಯೋದು ಅಷ್ಟು ಸುಲಭದ ಮಾತಲ್ಲ. ಮೈ ನೀಲಿ ಮಾಡ್ಕೊಂಡು ಜೀವಂತ ಇರೋದೈತಲ್ಲಾ ಅದು ಎಲ್ಲಾರಿಗೂ ಬರೂದಿಲ್ಲ’. ಆಂವ ಅಂತ ಸತ್ತುಹೋದ ತನ್ನ ಮಾಸ್ತರತಿ ಹೇಂತಿ ನೆನದು ಕಣ್ಣೀರಿಟ್ಟ. ‘ನಾ ನಾಟಕ ಮಾಡೂದ ಬಿಟ್ಟಿದ್ದೆ. ಶಿವಲಿಂಗಪ್ಪ ಕರ್ಕೊಂಡು ಬಂದ. ಶಿಷ್ಯಾ ಗುರುವನ್ನು ಬದುಕಿಸಿದ’.

‘ಲಲಿತವ್ವ, ಇನ್ನೊಂದ ಮಾತ ಹೇಳ್ತೀನಿ. ನಿನ್ನ ಗಂಡ ಬಾಳ ಕರುಳಿನ ಮನಶ್ಯಾ. ಬಹುಶಃ ಎಲ್ಲ ನಾಟಕ ಆಡೋ ಮಂದಿ ಹೆಂಗರುಳಿನವರು ಇರ್ತಾರ. ಇಲ್ಲಾಂದ್ರ ಅವರ ಕಣ್ಣಾಗ ನೀರ ಬರ್ತಾವೇನ? ಕಳ್ಳ ಚುರ್ ಅಂತೈತೇನು? ಅದೇನೋ ಅಂತಾರಲ್ಲ, ಕಳ್ಳ ಇಲ್ಲದವರು ಕೊಳ್ಳಾಗ ಬಿದ್ದು ಅತ್ತರೂ ಕಣ್ಣೀರು ಬರಾಂಗಿಲ್ಲ ಅಂತ....’. ಅಂವಗ ಏನನಿಸಿತೇನೋ ಸ್ವಲ್ಪ ಹೊತ್ತು ಬಿಟ್ಟು ತಲೀ ಪಟಗಾ ತೆಗೆದ.  ತುಸು ಮಾಸಿದ್ದರೂ ಲಕಲಕ ಹೊಳೀತಿದ್ದ, ಬಂಗಾರದ ಎಳೀ ಪೋಣಿಸಿದ್ದ ತನ್ನ ಕಲಾಬತ್ತಿನ ರುಮಾಲನ್ನು ಶಿವಲಿಂಗಪ್ಪನಿಗೆ ತೊಡಿಸಿ ಶಿಷ್ಯನನ್ನು ತಬ್ಬಿಕೊಂಡ. ಶಿವಲಿಂಗಪ್ಪ ರುಮಾಲ್ ಆದ್ರ, ಲಲಿತಾ ಅದರೊಳಗಿನ ಚಿನ್ನದ ಎಳಿ ಇದ್ದಂಗ. ಪಟಗಾ ಕಿಮ್ಮತ್ತು ಅದರ ಕಲಾಬತ್ತಿನಿಂದ... ಅಲ್ಲ? ಆವತ್ತು ಶಿವಲಿಂಗಪ್ಪ ಕುಣಿದದ್ದೆ ಕುಣಿದದ್ದು.
***
ದಿನಾ ಕಳದಂಗ ಆಟಕ್ಕ ಜೀಂವಾ ತೇಯವ್ರು ಕಡಿಮಿ ಆದ್ರು. 

‘ಆಟ ಆಡಿ ಏನ ಸಾಧಿಸಾಂವಾ ಆದಿ ನೀನು. ಈಗ ನಿನಗ ಚಿಮಣಾಗೋಳು ಎಲ್ಲಿ ಸಿಗ್ತಾರ? ಪರದೆ ಎಲ್ಲಿ ಸಿಗ್ತಾವು?’ ಅಂತ ಹಿಂಬಾಲ್ಯಾವರು ಕೇಳಿದ ಕೂಡಲೆ ಏನ ಹೇಳಬೇಕಂತ ತಿಳೀಲಾರದೆ ಶಿವಲಿಂಗಪ್ಪ ಒದ್ದಾಡ್ತಿದ್ದ. ಏನೇನೋ ಗೇಣಿಸ್ತದ್ದ. ಹಳೇ ನಾಟಕ ಮಾಸ್ತರನಿಗೆ ಊಟ, ವಸತಿ ಕೊಟ್ಟಿದ್ದಕ್ಕ ಕೆಲವರು ಮಾಸ್ತರನ ವಿರುದ್ಧ ಹೇಳಿಕೊಡತಿದ್ರು. ಮತ್ತೂ ಕೆಲವರು ‘ಮುದುಕ ತನ್ನ ಹಳೇ ಪ್ರೇಯಸಿ ಲಲಿತಾ ನೆನಪಾಗಿ ಬಂದಾನ’ ಅಂತಲೂ ಅನ್ನತಿದ್ರು. ಶಿವಲಿಂಗಪ್ಪನ ಮಕ್ಕಳಿಗಂತೂ ಸಿಟ್ಟು ಬಂದಿತ್ತು. ಯಾರ ಮೇಲಾದರೂ ಹಾಸಿ ಮ್ಯಾಲಿಂದ ಮ್ಯಾಲ ಅಂವಗ ಅಪಮಾನ ಮಾಡ್ತಿದ್ರು. ಅಂವನ ಪಾತ್ರೆ-ಪಗಡಿ, ಜಮಖಾನ-ಸಂದಕದಾಗ ಕೈಯಾಡಿಸಿ ಕಳುವು ಮಾಡ್ತಿದ್ರು. ಶಿವಲಿಂಗಪ್ಪ ಮಕ್ಕಳಿಗೆ ಒದರಿ ಹೇಳಿದ, ಸಿಟ್ಟು ಮಾಡಿಕೊಂಡು ಹೇಳಿದ, ಹಂಗ ಮಾಡಬ್ಯಾಡ್ರೊ ಅಂತ ವಿನಂತಿ ಮಾಡಕೊಂಡ. ಕೊನಿಗಿ ತಾನ ಮನಿ ಬಿಟ್ಟು ಹೋಗ್ತೇನಂದ.

‘ಅಷ್ಟು ಮಾಡು. ಎಲ್ಲರಿಗೂ ಆರಾಮ’ ಅಂತ ಅಂದರು ಮಕ್ಕಳು. ತನ್ನ ಸಲುವಾಗಿ ಇವರಿಗ್ಯಾಕೆ ಇಷ್ಟು ತೊಂದರಿ, ತನ್ನ ಸಲುವಾಗಿ ತಂದಿ–ಮಕ್ಕಳು ಯಾಕ ಜಗಳ ಮಾಡಬೇಕು ಅಂತ ನಾಟಕ ಮಾಸ್ತರ್ ಒಂದು ಮುಂಜಾನೆ ಯಾರಿಗೂ ಹೇಳದಂಗ ಹೊರಟು ಹೋಗಿದ್ದ. ಮಾಸ್ತರ್ ಎಲ್ಲಿ ಹ್ವಾದ ಅಂತ ಇಂವ ಹುಡುಕಾಡೇ ಹುಡುಕಾಡಿದ. ಗುಡಿ-ಗುಂಡಾರ ಅಲೆದಾಡಿದ. ಗುಡ್ಡ-ದಿನ್ನಿ ಹತ್ತಿ ಇಳಿದ. ಕೆರಿ-ಬಾಂವಿ ಹಣಿಕಿ ಹಾಕಿದ. ಕೊನಿಗಿ ಬಸವಳಿದು ಕಟ್ಟೀಮ್ಯಾಲ ಕೂತವನು ಮತ್ತ ಮನೆ ಒಳಗೆ ಹೋಗಲಿಲ್ಲ. ಲಲಿತಾ ಗಂಡನ ರುಮಾಲನ್ನು ಮಾತ್ರ ತಂದಳು. ಇಂತಹ ಗಟಾಂಗಟಿ ಪಾತ್ರಧಾರಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಅಂತ ಕಟ್ಟೀಮ್ಯಾಲ ಕುಂತವರು, ಅಗಸಿಯೊಳಗ ನಿಂತವರು, ನಿದ್ದಿ ಬರದ ಹೊರಳಾಡುವವರು, ರಿಕಾಮಿ ತಿರಾಗ್ಯಾಡುವವರು ಅಂದೇ ಅಂದರು. ಊರ ದ್ಯಾಮವ್ವನ ಗುಡಿ ಕಟ್ಟಿಗೆ ಶಿವಲಿಂಗಪ್ಪ ಮತ್ತು ಲಲಿತಕ್ಕ ಕುಂತದ್ದ ನೋಡಿ ಎಷ್ಟೋ ಮಂದಿ ಕಳ್ಳು ಚುರ್ ಅಂತಿದ್ವು. ಆದರ ‘ಅದಕ್ಕೆ ನಾವೇನ ಮಾಡ್ಲಿಕ್ಕೆ ಆಗ್ತದ’ ಅಂತ ಕೈಚೆಲ್ಲತಿದ್ರು.

‘ಊರಾಗ ಎಲ್ಲಾರೂ ಕೆಟ್ಟವರ ಇರಂಗಿಲ್ಲ’ ಅನ್ನೋ ಶಿವಲಿಂಗಪ್ಪನ ಮಾತು ಖರೇ ಅನ್ನೂಹಂಗ ಅಂಗಡಿ ಸಿದ್ದಪ್ಪ ಮತ್ತು ಮಾವಿನಕಾಯಿ ಗುತ್ತಿಗಿ ಹಿಡಿದು ಮಾರೋ ನಿಂಗಪ್ಪ ಸಂಜೀಮುಂದ ಬಂದು ‘ನಡೀರಿ ನಮ್ಮ ಮನಿಗೆ. ನೀವೇನು ಪರದೇಸಿ ಅಲ್ಲ’ ಅಂತ ಮುದುಕನ ನಾಕೈದು ಸಲ ಒತ್ತಾಯ ಮಾಡಿದ್ರು. ‘ಗುಡಿ-ಗುಂಡಾರ ನನಗ ಹೊಸ ವಿಷಯ ಅಲ್ಲ. ನಾನು ಬಯಲೊಳಗ ಬಂದೇನಿ. ಬಯಲೊಳಗ ಹೊಕ್ಕೇನಿ’ ಅಂತ ಶಿವಲಿಂಗಪ್ಪ ಅಂದರೂ ಅವರು ಹಟ ಹಿಡಿದು, ನಾಟಕದ ತಾಲೀಮ ನಡಿಸತಿದ್ದ ಮನೀನ ಮುದುಕನ ಸಲುವಾಗಿ ಬಿಟ್ಟಕೊಡ್ತೇವಿ ಅಂತ ವಚನಕೊಟ್ರು.

ಮನಿ ಮತ್ತು ಮಕ್ಕಳನ್ನು ಬಿಟ್ಟಿದ್ದು ಶಿವಲಿಂಗಪ್ಪಗ ಒಂದ ರೀತಿ ಒಳ್ಳೇದ ಆಯ್ತು. ಈಗ ಅಂವನ ಹಾಡಿಗೆ ಯಾಂವ ತೊಂದರೀನೂ ಇರಲಿಲ್ಲ. ಓಣ್ಯಾನ ಕೆಲವು ಹುಡುಗರು ಹಗಲ-ರಾತ್ರಿ ಅನ್ನದ ಇವರ ಮನಿಗೆ ಬಂದು ಪಡಸಾಲ್ಯಾಗ ಕುಂತು ದನಿಯೇರಿಸತಿದ್ದ ಮುದಕನ್ನ ಬೆರಗಿನಿಂದ ನೋಡತಿದ್ರು. ಆದರ ಶಿವಲಿಂಗಪ್ಪನ ಮಕ್ಕಳು ಮಾತ್ರ ಅಪ್ಪ-ಅವ್ವಗ ಮುಂಜಾನಿ ತಪ್ಪಿದರ ಸಂಜೀಕ  ಇಲ್ಲಾ ಸಂಜೀಕ ತಪ್ಪಿದರ ಮುಂಜಾನಿ ಬ್ಯೆಯ್ದ ಬೈಯತಿದ್ರು:

‘‘ಈ ಆಟದ ಸಲುವಾಗಿ ನಮ್ಮಪ್ಪ ಹೊಲ ಕಳದ. ನಾವು ಅಡ್ಡಾಗಲಿಲ್ಲಂದ್ರ ನಮ್ಮನ್ನ ಬೀದಿಪಾಲ ಮಾಡ್ತಿದ್ದ’’. ಆದರ ಲಲಿತವ್ವ ಮಕ್ಕಳು ಭೆಟ್ಟಿಯಾದಾಗೊಮ್ಮೆ ಅಂಗಲಾಚತಿದ್ಲು: ‘‘ತಂದಿಗಿ ಹಂಗ ಅನ್ನಬ್ಯಾಡ್ರೊ. ಹೊರಗ ದುನಿಯಾದಾಗ ಹೋಗಿ ನೋಡ್ರಿ. ನಿಮ್ಮಪ್ಪಗ ಎಷ್ಟ ಹೆಸರ ಐತಿ ಅಂತ. ಆಟ ಅಂದ್ರ ಸರಳ ಅನಕೋಬ್ಯಾಡ್ರಿ. ಉಸಿರು ಹೋಗಿ ಉಸಿರು ಬರತೇತಿ. ಅದರ ಸಲುವಾಗಿ ನಾವು ಎಷ್ಟ ಸಲ ಸತ್ತು ಎಷ್ಟು ಸಲ ಬದುಕಿದೇವಿ ಅನ್ನೋದು ಗೊತ್ತೈತೇನು? ಸರಕಾರ ಈ ಊರಾಗ ಒಂದು ಸಣ್ಣಾಟದ ಸಾಲಿ ಸುರು ಮಾಡತೈತಂತ. ಆ ಸಾಲಿಗೆ ನಿಮ್ಮಪ್ಪನೆ ಮಾಸ್ತರ್ ಅಂತ’’. ಹಂಗ ಅನ್ನೋವಾಗ ಹೆಂಡತಿಯ ಕಣ್ಣಾಗ ಹೊಳಪು ಮೂಡತಿತ್ತು. ಆಕಿ ದನಿಯೊಳಗ ಒಂದ ರೀತಿ ಕೊರಗು ಮತ್ತೊಂದು ರೀತಿ ಸಂಭ್ರಮ ಇರತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT