ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿನ ಕಾಫಿಯ ಪರಿಮಳ

ಪ್ರವಾಸದಲ್ಲಿ ಸ್ವಾರಸ್ಯ
Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ನಾವು ಜರ್ಮನಿಯಲ್ಲಿದ್ದಾಗ ಪ್ರತಿವಾರದ ಕೊನೆಗೆ, ನಮ್ಮ ಮಗ ನಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಎಲ್ಲಾದರೂ ಸುತ್ತಾಡಿಸಿಕೊಂಡು ಬರುತ್ತಿದ್ದ. ಒಂದು ಸಲ ವುಪ್ಪರ್‌ಟಾಲ್‌ಗೆ ಹೋದೆವು. ಅಲ್ಲಿಯ ವಿಶೇಷ ಎಂದರೆ, ಅಲ್ಲಿ ರೇಲ್ವೆ ಹಳಿಗಳು ನೆಲದಮೇಲಿರುವುದಿಲ್ಲ; ನೆಲ ಬಿಟ್ಟು ಮೇಲೆ ಎತ್ತರದಲ್ಲಿ ಇರುತ್ತವೆ! ಟ್ರೇನು ಆ ಹಳಿಗಳಿಗೆ ಜೋತುಬಿದ್ದು ಚಲಿಸುತ್ತದೆ! (ಸಸ್ಪೆನ್‌ಶನ್ ಟ್ರೇನ್). ಈ ಬಗೆಯ ಮೊದಲ ಟ್ರೇನ್‌ ಎನ್ನುವುದು 1901ರಲ್ಲಿ ಕಾರ್ಯಾರಂಭ ಮಾಡಿದ ಇದರ ಹೆಗ್ಗಳಿಕೆ.

ವುಪ್ಪರ್‌ಟಾಲ್ ಟೌನ್ ನೋಡಲಿಕ್ಕೂ ಆಕರ್ಷಕ. ಸ್ವಚ್ಛ ರಸ್ತೆಗಳು, ಶಿಸ್ತುಬದ್ಧ ಸಾರಿಗೆ ವ್ಯವಸ್ಥೆ, ಅಚ್ಚುಕಟ್ಟಾದ ಕಟ್ಟಡಗಳು– ಮತ್ತವುಗಳ ಅಲಂಕಾರ ಮನಸೆಳೆಯುತ್ತದೆ. ವಿಶೇಷವಾಗಿ ನನ್ನ ಗಮನ ಸೆಳೆದುದೆಂದರೆ ಅಲ್ಲಿಯ ಕಾಫಿಯ ಪರಿಮಳ! ಅಲ್ಲಿಯವರ ಕಾಫಿಯ ಮೋಹ ಕಂಡು ಬೆರಗಾಗಿಬಿಟ್ಟೆ. ರೆಸ್ಟುರಾಗಳಲ್ಲಿ ಮಗ್ಗುಗಟ್ಟಲೆ ಕಾಫಿ ಇಟ್ಟುಕೊಂಡು ಕುಡಿಯುತ್ತ ಕುಳಿತುಬಿಡುತ್ತಾರೆ. ಅದವರಿಗೆ ಸಂಭ್ರಮ!

ನನಗೂ ಆ ಸಂಭ್ರಮ ಹೊಂದಬೇಕೆನಿಸಿತು. ಮಗನಿಗೆ ಹೇಳುವುದಷ್ಟೇ ತಡ, ಕರೆದುಕೊಂಡು ಹೋಗಿಯೇಬಿಟ್ಟ ಒಂದು ರೆಸ್ಟುರಾಕ್ಕೆ. ನನ್ನವಳು ಕಾಫಿಪ್ರಿಯೆಯಲ್ಲ. ಮಗ ಸೊಸೆ ಕೂಡ ‘ಕಾಫಿ ಬೇಡ, ಬೇರೆ ಏನಾದರೂ ತಿನ್ನಲು ತೆಗೆದುಕೊಳ್ಳೋಣ’ ಎಂದರು. ಮೊಮ್ಮಗ ಐಸ್‌ಕ್ರೀಮ್ ಬೇಕೆಂದ. ‘ಮಗ್ಗುಗಟ್ಟಲೆ ಕಾಫಿ ಕುಡಿಯುವುದು ನನ್ನಿಂದ ಆಗದು, ಒಂದು ಕಪ್ ಸಾಕು’ ಎಂದೆ.

ಅಲ್ಲೆಲ್ಲಾ ಸ್ವಯಂಸೇವಾ ಪದ್ಧತಿ. ಹಣಕೊಟ್ಟು ಮಗ ತಿನಿಸುಗಳನ್ನು ಹಾಗೂ ನನ್ನ ಕಾಫಿಯನ್ನು ತಂದು ಟೇಬಲ್ ಮೇಲಿಟ್ಟ. ಕಪ್ ತುಂಬ ಕಾಫಿ, ಪರಿಮಳವೋ ಪರಿಮಳ. ಬಿಸಿ ಬಿಸಿ ಕಾಫಿ, ಆದರೆ ಸಕ್ಕರೆ ಹಾಕಿರುವುದಿಲ್ಲ. ಅದನ್ನು ನಾವೇ ಹಾಕಿಕೊಳ್ಳಬೇಕು, ನಮಗೆಷ್ಟು ಬೇಕೋ ಅಷ್ಟು. ಬಸಿಯಲ್ಲಿ ಕಪ್ಪಿನ ಪಕ್ಕದಲ್ಲಿ ಸಕ್ಕರೆಯ ಚೀಟು ಇರುತ್ತದೆ, ಕೊಳವೆಯಾಕಾರದಲ್ಲಿ. ಮೇಲ್‌ಭಾಗ ಕಟ್ ಮಾಡಿ ಸಕ್ಕರೆ ಹಾಕಿಕೊಳ್ಳಬೇಕು. ಹಾಕಿಕೊಂಡೆ. ಸಕ್ಕರೆಯಲ್ಲದು, ಸಕ್ಕರೆಯ ಪುಡಿಯೂ ಅಲ್ಲ, ಸಕ್ಕರೆಯ ಹುಡಿ!  ಕಪ್ಪಿನಲ್ಲಿ ಕೆಳಗಿಳಿಯಲೇ ಇಲ್ಲ. ಬುರುಗಿಗೇ ಅಂಟಿಕೊಂಡಿತು, ಒಂದಷ್ಟು ಬುರುಗಿನ ಮೇಲೇ ಸವಾರಿ ಮಾಡಿ ಕುಳಿತುಕೊಂಡುಬಿಟ್ಟಿತು. ಅದನ್ನು ಕೆಳಗಿಳಿಸಲು ಚಮಚೆ ಬೇಕು. ಮಗನಿಗೆ ನನ್ನ ಸಮಸ್ಯೆ ಅರ್ಥವಾಗಿ ಒಂದು ಪ್ಲಾಸ್ಟಿಕ್ ಗಟ್ಟಿ ಕೊಳವೆ ತಂದುಕೊಟ್ಟ.

ಸಕ್ಕರೆಯ ಹುಡಿಯನ್ನು ತಳ ಸೇರಿಸಲು ಪ್ರಯತ್ನಿಸತೊಡಗಿದೆ. ಎಷ್ಟೋ ಹೊತ್ತು ಹಿಡಿಯಿತು. ಆ ನಂತರ ಹಾಲು ಹಾಕಿಕೊಳ್ಳಬೇಕು. ತಂಪು ತಂಪಾಗಿರುವ ಪುಟ್ಟದೊಂದು ಪ್ಲಾಸ್ಟಿಕ್ ಕಪ್ಪಿನ ಬಾಯಿಬಿಚ್ಚಿ ಹಾಲು ಸುರುವಿಕೊಂಡೆ. ಬಿದ್ದದ್ದು ಹನ್ನೆರಡು ಹನಿಗಳು! ಅದನ್ನೂ ಅಲುಗಾಡಿಸಿ ಅಲುಗಾಡಿಸಿ ಕಾಫಿ ಕುಡಿಯಲು ಕಪ್ ಎತ್ತಿದೆ. ಬುರುಗಿನೊಳಗಿಂದ ಹಾಯ್ದು ಬಂತು ಮೊದಲ ಗುಟುಕು. ಎಲ್ಲಿದೆ ಬಿಸಿ? ಮಟಾಮಾಯ! ಕಾಫಿಯಾದರೂ ಎಷ್ಟು? ಮತ್ತೆರಡು ಗುಟುಕು ಅಷ್ಟೆ! ಮುಗಿಯಿತು ಕಾಫಿ ಕಥೆ! ಪರಿಮಳ ಸೇವಿಸಿದ್ದೇ ಭಾಗ್ಯ!

ಕಥೆ ಮುಗಿದರೂ ಹೋಗುತ್ತದೆಲ್ಲಿ ಸ್ವಭಾವ, ಮೆಂಟಾಲಿಟಿ? ಮೂರು ಪಟ್ಟು ದುಬಾರಿಯಿರುವ ಕೋಲ್ಡ್‌ಕಾಫಿಯನ್ನು ಸಾದಾ ಕಾಫಿ ರೇಟಿನಲ್ಲೇ ಕುಡಿದೆ ಎಂದು ಹೆಮ್ಮೆಯಿಂದಲೇ ಹೊರಬಂದೆ ರೆಸ್ಟುರಾದಿಂದ!
- ಹ.ಶಿ. ಭೈರನಟ್ಟಿ,  ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT