ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | KKR vs SRH: ಪವರ್‌ ಹಿಟ್ಟರ್‌ಗಳ ಹಣಾಹಣಿಗೆ ವೇದಿಕೆ ಸಜ್ಜು

ಅಹಮದಾಬಾದ್‌ನಲ್ಲಿ ಮೊದಲ ಕ್ವಾಲಿಫೈಯರ್‌ l ಕೋಲ್ಕತ್ತ– ಹೈದರಾಬಾದ್ ಸೆಣಸಾಟ ಇಂದು
Published 21 ಮೇ 2024, 2:26 IST
Last Updated 21 ಮೇ 2024, 2:26 IST
ಅಕ್ಷರ ಗಾತ್ರ

ಅಹಮದಾಬಾದ್: ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಮತ್ತು ಅನಿಶ್ಚಿತ ಆಟವಾಡುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು, ‘ಪವರ್‌ ಹಿಟ್ಟರ್‌’ಗಳ ಹಣಾಹಣಿ ಎನಿಸಿರುವ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

ಈ ಸಲದ ಆವೃತ್ತಿಯಲ್ಲಿ ಕೆಕೆಆರ್‌, ಪ್ಲೇಆಫ್‌ಗೆ ಸ್ಥಾನ ಖಚಿತಪಡಿಸಿಕೊಂಡ ಮೊದಲ ತಂಡವೆನಿಸಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಭಾನುವಾರ ಕೊನೆಯ ಲೀಗ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಹೈದರಾಬಾದ್, 17 ‍ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

ಹೈದರಾಬಾದ್ ತಂಡವು, ಪಂಜಾಬ್ ಕಿಂಗ್ಸ್‌ ವಿರುದ್ಧ ಅಮೋಘ ಜಯ ಸಾಧಿಸಿತ್ತು. ಅದರ ಪಂದ್ಯ ಮಳೆಯಿಂದ ಬಾಧಿತವಾಗಿರಲಿಲ್ಲ. ಆದರೆ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ತಂಡದ ಎರಡು ಪಂದ್ಯಗಳು ಮಳೆಯ ಪಾಲಾಗಿದ್ದವು. ಮೇ 11ರಂದು ಅದು ಕೊನೆಯ ಬಾರಿ ಪೂರ್ಣ ಪಂದ್ಯ ಆಡಿತ್ತು. ಆದರೆ ತಂಡ 20 ಪಾಯಿಂಟ್‌ಗಳೊಂದಿಗೆ ಲೀಗ್‌ ವ್ಯವಹಾರವನ್ನು ಮೊದಲ ಸ್ಥಾನದಲ್ಲಿ ಮುಗಿಸಿದೆ.

ಮಳೆಯಿಂದ ಎರಡು ಪಂದ್ಯಗಳು ಕೊಚ್ಚಿಹೋಗುವ ಮೊದಲು ಶ್ರೇಯಸ್‌ ಅಯ್ಯರ್ ಬಳಗ ತನ್ನ ಕೊನೆಯ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿತ್ತು. ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿರುವ ವಿಕೆಟ್ ಕೀಪರ್ ಫಿಲ್ ಸಾಲ್ಟ್‌ (435 ರನ್‌) ಅವರು ಟಿ20 ವಿಶ್ವಕಪ್‌ಗೆ ಸಜ್ಜಾಗಲು ತವರಿಗೆ ಮರಳಿರುವ ಕಾರಣ ಆ ಸ್ಥಾನ ತುಂಬುವ ಸವಾಲು ಕೋಲ್ಕತ್ತಕ್ಕೆ ಇದೆ.

ಸಾಲ್ಟ್ ಮತ್ತು ಸುನಿಲ್‌ ನಾರಾಯಣ್ (461) ನೀಡಿರುವ ಸಿಡಿಲಬ್ಬರದ ಆರಂಭದಿಂದ ತಂಡಕ್ಕೆ ಸಾಕಷ್ಟು ಲಾಭವಾಗಿದೆ. ಮಧ್ಯಮ ಸರದಿಯಲ್ಲಿ ಶ್ರೇಯಸ್ ಅಯ್ಯರ್ (287) ಯಶಸ್ಸು ಗಳಿಸುತ್ತಿದ್ದಾರೆ.

ಸಾಲ್ಟ್‌ ಬದಲಿಗೆ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ರಹಮಾನುಲ್ಲಾ ಗುರ್ಬಾಝ್ ಅವರಿಗೆ ಮಳೆಯಿಂದಾಗಿ ಅಭ್ಯಾಸದ ಅವಕಾಶ ತಪ್ಪಿಹೋಯಿತು. ನಿತೀಶ್ ರಾಣಾ ಅವರು ಲಯದಲ್ಲಿರುವುದು ಕೆಕೆಆರ್‌ಗೆ ಬಲ ಮೂಡಿಸಿದೆ. ಆ್ಯಂಡ್ರೆ ರಸೆಲ್‌ ಕೊನೆಯಲ್ಲಿ ವೇಗವಾಗಿ ರನ್ ಗಳಿಸಬಲ್ಲ ಸಮರ್ಥ.

ಬೀಸಾಟದ ವಿಷಯದಲ್ಲಿ ಸನ್‌ರೈಸರ್ಸ್‌, ಹೆಚ್ಚುಕಮ್ಮಿ ಕೋಲ್ಕತ್ತಕ್ಕೆ ಸರಿಸಮನಾಗಿಯೇ ಇದೆ. ಹೀಗಾಗಿ ಕಾಗದದ ಮೇಲಂತೂ ಒಳ್ಳೆಯ ಹೋರಾಟ ನಿರೀಕ್ಷಿಸಬಹುದು.

ಎಡಗೈ ಆಟಗಾರ ಟ್ರಾವಿಸ್ ಹೆಡ್‌ ಮತ್ತು ಅಭಿಷೇಕ್ ಶರ್ಮಾ ಜೋಡಿ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದೆ. ಇವರಿಬ್ಬರೂ 200ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳನ್ನು ಗಳಿಸುತ್ತಿದ್ದಾರೆ. ಆ ಹಾದಿಯಲ್ಲಿ ದಾಖಲೆಗಳನ್ನು ಮುರಿದಿದ್ದಾರೆ. ಹೆಡ್‌ ಅವರಂತೂ ಒಂದು ಶತಕ, ನಾಲ್ಕು ಅರ್ಧ ಶತಕಗಳಿರುವ 533 ರನ್ ಬಾಚಿದ್ದಾರೆ. ಅವರ ನಿರ್ಭೀತಿಯ ಆಟ, ಉದಯೋನ್ಮುಖ ಆಟಗಾರ ಅಭಿಷೇಕ್ (467 ರನ್) ಅವರ ಬ್ಯಾಟಿಂಗ್‌ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಭಿಷೇಕ್ ಹಾಲಿ ಐಪಿಎಲ್‌ನಲ್ಲಿ ಸರ್ವಾಧಿಕ 41 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಕೆಲವು ಪಂದ್ಯಗಳಲ್ಲಿ ಕಳೆಗುಂದಿದಂತೆ ಕಂಡಿದ್ದ ಹೆನ್ರಿಚ್‌ ಕ್ಲಾಸೆನ್‌ ಆಟ ಭಾನುವಾರ ಮತ್ತೆ ಅರಳಿದೆ. ಅವರು ಪಂಜಾಬ್ ವಿರುದ್ಧ ಬಿರುಸಿನ 42 ರನ್ ಗಳಿಸಿದ್ದರು.

ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ಆತಿಥ್ಯ ವಹಿಸಿದ್ದ ಅಹಮದಾಬಾದಿನಲ್ಲಿ ಎರಡನೆಯದಾಗಿ ಆಡುವ ತಂಡ ಹೆಚ್ಚು ಯಶಸ್ಸು ಕಂಡಿದೆ. ಪೂರ್ಣಗೊಂಡ ಐಪಿಎಲ್‌ನ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಎರಡನೇಯದಾಗಿ ಆಡಿದ ತಂಡಗಳು ಯಶಸ್ವಿಯಾಗಿ ಗುರಿಮುಟ್ಟಿವೆ.

ರನ್ನುಗಳ ಗುಡ್ಡೆಹಾಕಿ ಎದುರಾಳಿಗಳನ್ನು ಕಂಗೆಡಿಸುವ ಇತ್ತಂಡಗಳ ಶೈಲಿಗೆ ವಿರುದ್ಧವಾಗಿ, ಈ ಮೈದಾನದಲ್ಲಿ ಕಳೆದ 12 ಇನಿಂಗ್ಸ್‌ಗಳಲ್ಲಿ ಎರಡು ಸಲ ಮಾತ್ರ ತಂಡಗಳು 200 ಅಥವಾ ಹೆಚ್ಚಿನ ಮೊತ್ತ ಗಳಿಸಿವೆ. ಇದರರ್ಥ ಬೌಲರ್‌ಗಳಿಗೂ ಇಲ್ಲಿ ಮಿಂಚುವ ಅವಕಾಶಗಳಿವೆ.

ಮಿಚೆಲ್‌ ಸ್ಟಾರ್ಕ್‌ ನೇತೃತ್ವದ ವೇಗಿಗಳಿಗೆ ಬೆಂಬಲ ನೀಡಲು, ಕೆಕೆಆರ್‌ ಬಳಿ ಪರಿಣಾಮಕಾರಿ ಸ್ಪಿನ್ನರ್‌ಗಳ ಬ್ಯಾಟರಿ ಇದೆ. ಆದರೆ ಪ್ಯಾಟ್‌ ಕಮಿನ್ಸ್ ಬಳಗ ಬೌಲರ್‌ಗಳ ಸಾಂಘಿಕ ಪ್ರದರ್ಶನ ನೆಚ್ಚಿಕೊಂಡಿದೆ.

ಮಾರ್ಚ್‌ನಲ್ಲಿ ಈ ಬಾರಿ ಈ ತಂಡಗಳ ಏಕೈಕ ಮುಖಾಮುಖಿಯಲ್ಲೂ ರನ್‌ ಹೊಳೆ ಹರಿದಿದ್ದು, ಕೆಕೆಆರ್‌ ನಾಲ್ಕು ರನ್‌ಗಳಿಂದ ಎಸ್‌ಆರ್‌ಎಚ್‌ ಮೇಲೆ ಜಯಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT