ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲನು ತೆರೆದು

ಕಥೆ
Last Updated 28 ಜೂನ್ 2014, 19:30 IST
ಅಕ್ಷರ ಗಾತ್ರ

ಫೇಕ್ ಪ್ರೊಫೈಲ್ ಪಿಕ್ಚರ್ ಹಾಕಿಕೊಂಡು ಚಾಟ್ ಮಾಡುವುದನ್ನು ವಿರೋಧಿಸಿ ಅವಳಿಗೆ ಬಯ್ಯುತ್ತಿದ್ದೆ. ತುಂಬಾ ಒತ್ತಾಯ ಮಾಡಿ ಕೇಳಿದಾಗ ಬಾಯಿ ಬಿಟ್ಟಳು– ‘ಇಲ್ಲ, ನಾನು ನೋಡೋಕ್ಕೆ ಚೆನಾಗಿಲ್ಲ. ಅದಿಕ್ಕೆ ಹಿಂಗೆ ಮಾಡ್ತಾ ಇದ್ದೀನಿ’. ‘ಅದರಲ್ಲೇನು? ಭೂಮಿ ಮೇಲೆ ಎಷ್ಟೊಂದ್ ಜನ ಚೆನ್ನಾಗಿಲ್ಲ, ಹಂಗಂತ ಅವರನ್ನೆಲ್ಲ ಗೋಣಿಚೀಲಕ್ಕೆ ತುಂಬಿ ಸಮುದ್ರಕ್ಕೆ ಎಸಿಯೋಕಾಗುತ್ತ?’

‘ಹಂಗಲ್ಲ... ಒಬ್ಳೆ ಇದ್ದೀನಿ, ಅಪ್ಪ ನಮ್ಮನ್ನ ಬಿಟ್ಟೋಗಿ ಇನ್ನೊಂದ್ ಸಂಸಾರ ನಡೆಸ್ತಾ ಸುಮಾರು ವರ್ಷಗಳೇ ಕಳೆದವು... ನಂಗೆ ಅವನ್ನ ಅಪ್ಪ ಅಂತ ಕರೆಯೋಕು ಅಸಹ್ಯ. ಅಮ್ಮನಿಗೆ ನಂಗೆ ಮದ್ವೆ ಮಾಡೋ ತಾಕತ್ತಿಲ್ಲ. ನಾನೂ ಕೂಡ ಸ್ವಾಭಿಮಾನಿ. ಹಿಂಗೆ ಇಲ್ಲೊಂದು ‘ಮಧು ಕಂಪ್ಯೂಟರ್ಸ್’ ಅನ್ನೋ ಸೈಬರ್ ಸೆಂಟರ್ ಅಲ್ಲಿ ಕೆಲಸ ಮಾಡ್ತಾ ಇದ್ದೀನಿ. ಸಂಬಳ ಎರಡೂವರೆ ಸಾವಿರ.

ಅಮ್ಮನೂ ಅಲ್ಲಿ ಇಲ್ಲಿ ದುಡಿತಾರೆ... ಹೆಂಗೋ ಆಗ್ತಾ ಇದೆ. ಒಳ್ಳೆ ಹುಡ್ಗ ಯಾರಾದ್ರು ಸಿಕ್ತಾನೇನೋ ಅನ್ಸುತ್ತೆ. ಅದಿಕ್ಕೆ ಈ ರೀತಿ ಟ್ರೈ ಮಾಡ್ತಾ ಇದ್ದೀನಿ. ಎಲ್ಲೋ ಓದಿದ ನೆನಪು. ಮುಖ ನೋಡದೆ ಚಾಟ್ ಮಾಡಿ, ಎಷ್ಟೋ ವರ್ಷ ಆದಮೇಲೆ ತಾನು ಚಾಟ್ ಮಾಡ್ತಿದ್ದ ಹುಡುಗಿ ಕಾಲಿಲ್ಲದವಳು ಅಂತ ಗೊತ್ತಾದರೂ... ಹುಡ್ಗ ಅವಳನ್ನ ಮದ್ವೆ ಆಗಿದ್ದ ಅಂತ. ಅದೇ ರೀತಿ ನಂಗೂ ಯಾರಾದ್ರು... ಮದ್ವೇನೆ ಆಗಬೇಕೂ ಅಂತಾನೂ ಅಲ್ಲ, ಕೊನೆ ಪಕ್ಷ ಒಳ್ಳೆ ಗೆಳೆಯನಾದ್ರು ಆಗಲಿ ಅಂತ’.

ತಮ್ಮ ಗುರುತಿಲ್ಲದಿದ್ದರೆ ಎಲ್ಲಾ ಮನುಷ್ಯರು ಎಷ್ಟು ಆರಾಮಾಗಿ ನಿಜ ಹೇಳ್ತಾ ಇರ್ತಾರೆ ಅನಿಸಿತು. ಆ ಕಡೆಯಿಂದ ಬಂದ ಮೆಸೇಜ್‌ಗೆ ಏನು ಉತ್ತರ ಕೊಡಬೇಕು ಅಂತ ಗೊತ್ತಾಗಲಿಲ್ಲ. ಹಾಗೆಯೇ ಅವಳನ್ನು ಸಮಾಧಾನಿಸಿದೆ. ಮತ್ತೆ ಕೇಳಿದೆ. ‘ಸರಿ. ನಿನ್ನ ಆ ಹುಡುಗ ಸಿಕ್ತಾನೆ ಅಂತಿಟ್ಕೋ. ಕೊನೆಗೆ ಒಂದಿನ ನಿಜ ಗೊತ್ತಾದ್ಮೇಲೆ ಮೋಸ ಅನ್ಸಲ್ವಾ?’ ‘ಹ್ಞೂ... ಇರ್ಬೋದು... ಹ್ಞೂ... ಹಂಗಲ್ಲ...’
‘ಇಲ್ಲ, ಒಂದು ಸಾರಿ ಒರಿಜಿನಲ್ ಪಿಕ್ಚರ್ ಹಾಕಿ ಟ್ರೈ ಮಾಡು’ ಅಂದೆ.

‘ಟ್ರೈ ಮಾಡಿಲ್ಲ... ಆದರೆ ತುಂಬಾ ಚಾಟ್ ಮಾಡಿ ಮಾಡಿ ಫ್ರೆಂಡ್ ಆದ ಒಬ್ಬ ಒಂದಿನ ಮೀಟ್ ಮಾಡೋಕ್ಕಂತ ಮನೆಗೆ ಕರೆದ. ನಾನು ಎಷ್ಟೊಂದು ಬೇಡ ಬೇಡ ಅಂದರೂ, ಪರವಾಗಿಲ್ಲ ಬಾ ಅಂದ. ನಾನು ನೋಡಲು ಚೆನ್ನಾಗಿಲ್ಲ ಅಂದೆ. ಅದಕ್ಕವನು ನಿನ್ನ ಚೆಂದ ನಂಗೆ ಇಂಪಾರ್ಟೆಂಟ್ ಅಲ್ಲ. ನಾನು ಎಲ್ಲರಂಥಲ್ಲ, ಬಾ ಅಂದ. ನಾನು ತುಂಬಾ ಹುಮ್ಮಸ್ಸಿನಿಂದ ಅವನ ಮನೆ ಹುಡುಕಿಕೊಂಡು ಹೊರಟೆ.

ಮನೆ ಹತ್ತಿರವಾಗುತ್ತಿದ್ದಂತೆಯೇ... ಅವನ ಕಿಟಕಿಯಿಂದ ನನ್ನನ್ನೇ ಯಾರೋ ಗಮನಿಸುತ್ತಿದ್ದಂತಿತ್ತು. ನಾನು ಅದನ್ನು ಹಂಗೇ ಅಬ್ಸರ್ವ್ ಮಾಡುತ್ತಾ ಮನೆಯ ಬಾಗಿಲು ಬಡಿಯಲು ಪ್ರಾರಂಭಿಸಿದೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆಯಲೇ ಇಲ್ಲ. ಆಮೇಲೆ ಗೊತ್ತಾಯಿತು– ಅವನು ಒಳಗಿದ್ದುಕೊಂಡೇ ಕಿಟಕಿಯಿಂದ ನನ್ನ ಸೌಂದರ್ಯ ನೋಡಿ ಅವಾಯ್ಡ್ ಮಾಡಿದ್ದ. ನಾನು ತುಂಬಾ ಹೊತ್ತು ಅಲ್ಲೇ ಅಳುತ್ತ ನಿಂತಿದ್ದು, ತಲೆ ತಗ್ಗಿಸಿ ಅಲ್ಲಿಂದ ಹೊರಟುಬಿಟ್ಟೆ’.

ಅವಳ ಕಥೆ ಕೇಳಿ ತುಂಬಾ ನೋವಾಯಿತು. ‘ಆಯ್ತು ಬಿಡು, ನಾನಿದೀನಲ್ಲ ಈಗ. ಒಳ್ಳೆ ಸ್ನೇಹಿತ... ಕೊನೆಯವರೆಗೂ... ಈಗ ಒಂದು ಕೆಲಸ ಮಾಡು, ನಿನ್ನ ಒರಿಜಿನಲ್ ಪಿಕ್ಚರ್ ಹಾಕು ಏನಾಗುತ್ತೆ ನೋಡೋಣ’ ಎಂದೆ. ಆಯಿತು ಎಂದು ಅವಳು ಮೊದಲ ಬಾರಿ ತನ್ನ ಒರಿಜಿನಲ್ ಪಿಕ್ಚರ್ ಹಾಕಿದಳು... ಮುನ್ನೂರರ ಗಡಿ ದಾಟಿರುತ್ತಿದ್ದ ಅವಳ ‘ಲೈಕ್ಸು’ ಅವತ್ತು ಮೂವತ್ತನ್ನೂ ದಾಟಿರಲಿಲ್ಲ. ಮರುದಿನ ಮತ್ತೊಂದು ಪಿಕ್ಚರ್‌ಗೆ ಬಿದ್ದ ಲೈಕ್ಸುಗಳ ಸಂಖ್ಯೆ ಎಂಟು.

ನನ್ನ ಒಂದು ಲೈಕ್ ತೆಗೆದರೆ ಏಳೇ ಏಳು. ಆಮೇಲೆ ಅವಳಿಗೆ ಸುಮ್ಮನಿರಲು ಹೇಳಿದೆ. ‘ನಾನಿದೇನಲ್ಲ, ಬೇರೆ ಯಾರಾದರೂ ಯಾಕಾದರೂ ಲೈಕ್ ಮಾಡಬೇಕು ಅಲ್ವಾ?’ ಎಂದೆ. ಅವಳಿಗೆ ಈಗ ಎಲ್ಲವೂ ಅರ್ಥವಾಗಿತ್ತು. ಜೊತೆಗೆ ತನ್ನನ್ನು ತಾನಿದ್ದಂತೆಯೇ ಇಷ್ಟಪಡುವ ಒಬ್ಬನಾದರೂ ಸಿಕ್ಕಿದನಲ್ಲ ಎಂಬ ಖುಷಿ.

ಇತ್ತೀಚೆಗೆ ತುಂಬಾ ಖುಷಿಯಾಗಿರುತ್ತಿದ್ದಳು. ನನ್ನ ಜೊತೆ ಚಾಟ್ ಮಾಡಿದ ಮೇಲಂತೂ ಅವಳಿಗೆ ‘ಫೇಸ್‌ಬುಕ್‌’ ಸ್ವರ್ಗದ ಬಾಗಿಲು! ಸುಮಾರು ಒಂದು ವಾರಗಳಷ್ಟು ದಿನ ನಡೆದ ಚಾಟಿಂಗ್‌ನಿಂದ ನಾವು ತುಂಬಾ ಹತ್ತಿರವಾಗಿದ್ದೆವು. ಒಂದು ದಿನ ನಾನೂ ಕೂಡ ಮನೆಗೆ ಕರೆದೆ. ಅವಳಿಗೆ ಕಸಿವಿಸಿಯಾಯಿತು. ನಾನು ಅರ್ಥ ಮಾಡಿಕೊಂಡೆ. ಅವಳಿಗೆ ಹೇಳಿದೆ... ‘ನಾನು ನಿನ್ನ ಹಿಂದಿನ ಗೆಳೆಯನ ರೀತಿ ಅಲ್ಲ... ಟ್ರಸ್ಟ್ ಮಿ. ನೀನು ಬಂದ ತಕ್ಷಣ ಬಾಗಿಲು ತೆರೆಯುತ್ತೆ.

ಸಾಧ್ಯವಾದರೆ ನಿನಗಾಗಿ ಹಳೆಯ ಕನ್ನಡ ಚಿತ್ರಗೀತೆಯೊಂದನ್ನು ಹುಡುಕಿ ಪ್ಲೇ ಮಾಡ್ತಾ ಇರ್ತೀನಿ... ಬಾ... ‘ತೆರೆದಿದೆ ಮನ ಮನೆ ಓ ಬಾ ಅತಿಥಿ', ಆದರೆ ಕಾಯಿಸಬೇಡ. ನಂಗೆ ತುಂಬಾ ಸಿಟ್ಟು ಬರುತ್ತೆ’. ಅವಳು ನನ್ನನ್ನು ನಂಬಿದ್ದಕ್ಕೆ ಖುಷಿಯಾಯಿತು. ಅವಳಿಗೋ ಸ್ವರ್ಗಕ್ಕೆ ಒಂದೇ ಮೆಟ್ಟಿಲು. ಎಲ್ಲ ಕೆಲಸವನ್ನು ಆಕಾಶಕ್ಕೆ ತೂರಿ, ಮೂರುಗಂಟೆಗಳ ಕಾಲ ರೆಡಿ ಆಗಿ, ಮನೆ ಅಡ್ರೆಸ್ ತೆಗೆದುಕೊಂಡು ಹುಡುಕಿಕೊಂಡು ಬಂದಳು.

ನನ್ನ ಮನೆ ಸಿಕ್ಕೇ ಬಿಟ್ಟಿತು ಅವಳಿಗೆ! ಜೊತೆಗೆ ಮನೆಯ ಕಿಟಕಿಯಲ್ಲಿ ಯಾರೂ ಇಣುಕುತ್ತಿರಲಿಲ್ಲ! ಅವಳು ಬಾಗಿಲ ಮುಂದೆ ನಿಂತಳು. ಕಣ್ಣಲ್ಲೇ ನಗುತ್ತಿದ್ದ ಅವಳು ನಿಜವಾಗಲೂ ನೋಡಲು ಕುರೂಪಿಯೇ ಆಗಿದ್ದಳು. ಆದರೆ ಅವಳ ಭಾವನೆಗಳು ಅತ್ಯಂತ ಸುಂದರವಾಗಿದ್ದವು! ನಿಧಾನವಾಗಿ ಬಾಗಿಲು ಬಡಿದಳು.

ನಾ ಒಳಗೆ ಮಲಗಿದ್ದೆ. ಹಾಡು ಹಾಕಿಕೊಂಡು ಕಾಯುತ್ತಿದ್ದ ನನಗೆ ನಿದ್ರೆ ಯಾವಾಗ ಬಂದಿತ್ತೋ ಗೊತ್ತಿರಲಿಲ್ಲ. ಎಚ್ಚರವಾಗಿದ್ದೇ ಹೊರಗಡೆಯಿಂದ ಜೋರಾಗಿ ಬಾಗಿಲು ಬಡಿಯುವ ಶಬ್ದ ಕೇಳಿ... ಈಗ ಎಚ್ಚರವಾಯಿತು... ಮತ್ತೂ ಎಚ್ಚರವಾಗಿ ಎದ್ದು ಕೂತೆ. ಛೆ! ಎಂಥ ಕನಸು... ಹೌದು ಮಟ ಮಟ ಮದ್ಯಾಹ್ನದ ಕನಸು! ಆದರೆ... ಆದರೆ... ಆ ಕನಸಿನ ಹುಡುಗಿ? ...ಛೆ! ಪಾಪಿ ನಾನು, ನಾನೂ ಕೂಡ ಅವಳನ್ನು ನೋಯಿಸಿದೆ... ಅವಳು ಇನ್ನೂ ಬಾಗಿಲು ಬಡಿಯುತ್ತಲೇ ಇದ್ದಾಳೇನೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT