ಕಿರುತೆರೆ ಮಕ್ಕಳನ್ನು ಪ್ರಭಾವಿಸುವ ಪರಿಣಾಮಕಾರಿ ಮಾಧ್ಯಮ. ಆದರೆ, ಕಿರುತೆರೆಯಲ್ಲಿ ಪ್ರಸಾರಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ನೋಡಿದರೆ, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಮಾಧ್ಯಮಗಳೇ ಅವರ ಹಕ್ಕನ್ನು ಹತ್ತಿಕ್ಕುತ್ತಿವೆ ಎನ್ನಿಸದೆ ಇರದು. ಜಾಹೀರಾತು ಕೇಂದ್ರಿತ ‘ಹುಸಿ’ ಜಗತ್ತನ್ನು ಮಾದರಿ ಎನ್ನುವಂತೆ ಬಿಂಬಿಸುವ ಮೂಲಕ ಮಕ್ಕಳಲ್ಲಿ ಕೀಳರಿಮೆಯನ್ನು ಬಿತ್ತುತ್ತಿವೆ. ಕನ್ನಡದ ಬಹುತೇಕ ವಾಹಿನಿಗಳಲ್ಲಿ ಮಗು ಪ್ರಧಾನ ಪಾತ್ರದಲ್ಲಿರುವ ಕಥೆಯನ್ನು ಧಾರಾವಾಹಿಗಳ ರೂಪದಲ್ಲಿ ನಿರೂಪಿಸಲಾಗುತ್ತಿದೆ. ಅಲ್ಲಿ ಮಗು, ಮಗು ಆಗಿರದೆ ಭೂತ–ಪ್ರೇತದ ಪಾತ್ರವನ್ನೂ ನಿರ್ವಹಿಸುತ್ತಿದೆ.

ಇದು ಅಪರಾಧ, ಅನೈತಿಕತೆ ಎಂಬ ಪ್ರಜ್ಞೆ ಧಾರಾವಾಹಿಯ ಕಥೆಗಾರರಿಗೆ ಮತ್ತು ನಿರ್ದೇಶಕರಿಗೆ ಏಕೆ ಕಾಡುವುದಿಲ್ಲ. ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನು ಇದ್ದಾಗ್ಯೂ ಮನೋರಂಜನೆಯ ದೃಶ್ಯಮಾಧ್ಯಮದಲ್ಲಿ ಏಕೆ ಅದನ್ನು ಉಲ್ಲಂಘಿಸಲಾಗುತ್ತಿದೆ? ಮಕ್ಕಳನ್ನು ದುಡಿಸಿಕೊಂಡ ತಪ್ಪಿಗೆ ಪ್ರಾಯಶ್ಚಿತ್ತ ಪಡಬೇಕಾದ ಮಾಧ್ಯಮಗಳು ಅದನ್ನು ಹೆಮ್ಮೆಯ ಸಂಗತಿ ಎಂದು ಹೇಳಿಕೊಳ್ಳುತ್ತಿವೆ. ಮಕ್ಕಳ ಹಕ್ಕು ರಕ್ಷಣೆಗೆಂದೇ ಸರ್ಕಾರ ಸ್ಥಾಪಿಸಿದ ಯಾವ ಸಂಸ್ಥೆಯೂ ಈವರೆಗೆ ಅದನ್ನು ಪ್ರಶ್ನಿಸಿಲ್ಲ. ಕನಿಷ್ಠ ಪಕ್ಷ ಒಂದು ಎಚ್ಚರಿಕೆ ಪತ್ರವನ್ನೂ ಕೊಟ್ಟಿಲ್ಲ.

ದೃಶ್ಯಮಾಧ್ಯಮದಲ್ಲಿನ ಬಾಲಪ್ರತಿಭೆಗಳ ಶೋಷಣೆಯ ಬಗ್ಗೆ ಮುದ್ರಣ ಮಾಧ್ಯಮ ಕೂಡ ಗಮನಹರಿಸುತ್ತಿಲ್ಲ. ಮಕ್ಕಳಿಗೆ ನಟನೆ, ನೃತ್ಯ, ಸಂಗೀತ ಹೊರೆಯಾಗುತ್ತಿರಬಹುದು ಎಂದು ಯೋಚಿಸುವವರು ಕಡಿಮೆ. ಮಕ್ಕಳ ಮನೋವೈಜ್ಞಾನಿಕ ತಳಹದಿಯಲ್ಲಿ ರೂಪಿಸಿದ ಶಾಲಾಪಠ್ಯವೇ ಭಾರ ಆಗಿರುವ ಸಂದರ್ಭವಿದು.

ಮಕ್ಕಳಿಗೆ ಪುಸ್ತಕದ ತೂಕ ಕಡಿಮೆ ಮಾಡುವ ಸಲಹೆಯನ್ನು ನ್ಯಾಯಾಲಯಗಳೂ ನೀಡಿವೆ. ಆದರೆ ಮಗು ಶಾಲೆಯ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಶಿಕ್ಷಣವನ್ನೂ ಕಲಿಯಬೇಕು. ಆ ಸಂಸ್ಕಾರ ನೀಡುವ ಪೋಷಕರ ಜವಾಬ್ದಾರಿ ‘ಅಕಾಲಿಕ’ ಎಂದು ಅವರಿಗೆ ಅನ್ನಿಸುತ್ತಿಲ್ಲ. ಅದೇ ನಮಗೆ ಆಕರ್ಷಣೆ ಆಗುತ್ತಿರುವುದರಿಂದ ಮಕ್ಕಳ ಸ್ವಾತಂತ್ರ್ಯ ನಾಶವಾಗುತ್ತಿದೆ.

ಎಳೆಯರ ರಿಯಾಲಿಟಿ ಷೋ ಸ್ಪರ್ಧೆಯ ಕಣದಲ್ಲಿ ಮುಗ್ಧ ಮಕ್ಕಳು ಪೈಪೋಟಿಗೆ ಇಳಿಯಬೇಕು. ಟೀವಿಯಲ್ಲಿ ಮಿಂಚಿ ಮರೆಯಾಗುವ ನಾಲ್ಕು ದಿನದ ಕಾರ್ಯಕ್ರಮಗಳಿಗಾಗಿ ತಮ್ಮ ಬಾಲ್ಯವನ್ನೇ ಅಡವಿಡಬೇಕು. ಎಲಿಮಿನೇಷನ್ಗೆ ಒಳಗಾಗುವ ಮಗುವಿನ ಮನೋವ್ಯಾಪಾರದ ಏರಿಳಿತ ಯಾರ–ಯಾವ ಲೆಕ್ಕಕ್ಕೆ ಸಿಗಲು ಸಾಧ್ಯ? ಮಕ್ಕಳಲ್ಲಿನ ಕ್ರೀಡಾ ಮನೋಭಾವ ಇಲ್ಲಿ ಹೇಗೆ ಉಳಿಯುತ್ತದೆ. ಆಡುವ ವಯಸ್ಸಿನಲ್ಲಿ ಪ್ರತಿಷ್ಠೆಯ ಪರಾಕಾಷ್ಠೆಯ ಪೈಪೋಟಿ ಮಕ್ಕಳಿಗೆ ಬೇಕೆ?

ಸ್ವಲ್ಪ ಹಿಂದೆ ಝೀ ಕನ್ನಡದಲ್ಲಿ ‘ಡ್ರಾಮಾ ಜ್ಯೂನಿಯರ್’ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಮಕ್ಕಳ ನಟನೆ, ವಿಷಯ ಮಂಡನೆ ದೊಡ್ಡವರಿಗೂ ಆದರ್ಶವಾಗುತ್ತಿತ್ತು. ನವರಸಗಳ ವಿವಿಧ ಕಥಾ ವಸ್ತುವನ್ನು ಇಟ್ಟುಕೊಂಡು ಆ ಷೋನಲ್ಲಿ ಮಕ್ಕಳು ಸಹೃದಯರನ್ನು ರಂಜಿಸಿದ್ದರು. ಅವರು ನಿರ್ವಹಿಸಿದ ಪಾತ್ರಗಳು ಭಾರತದ ಜ್ವಲಂತ ಸಮಸ್ಯೆಗಳನ್ನು ಪ್ರತಿನಿಧಿಸಿದ್ದವು. ಜಾತಿ ಅಸಮಾನತೆ, ಲಿಂಗ ರಾಜಕಾರಣ, ಕಾರ್ಮಿಕರ ಸಮಸ್ಯೆ, ಭಯೋತ್ಪಾದನೆ, ರಾಷ್ಟ್ರ, ನಾಡಿನ ರಕ್ಷಣೆ ಸೇರಿದಂತೆ ಹಿರಿಯ ನಾಗರಿಕ ಸಮಸ್ಯೆ, ನಗರದಲ್ಲಿ ಮಕ್ಕಳ ಸ್ವಾತಂತ್ರ್ಯ ಹನನವನ್ನು ಅವರು ಮನೋಜ್ಞವಾಗಿ ಅಭಿನಯಿಸಿದ್ದರು.

ಅವರ ‘ಡ್ರಾಮಾ’ ನಟನಾ ತಂಡ ಅತ್ಯಂತ ಜನಪ್ರಿಯತೆ ಗಳಿಸಿದ್ದರಿಂದ ಬಹುತೇಕ ಸುದ್ದಿ ವಾಹಿನಿಗಳೂ ಅವರನ್ನು ಕರೆಸಿ ಕಾರ್ಯಕ್ರಮ ಮಾಡಿದವು. ರಾಜ್ಯ ಸರ್ಕಾರ ಕೂಡ ಮೈಸೂರು ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರಿಗೆ ವೇದಿಕೆಯನ್ನು ಕಲ್ಪಿಸಿತು. ಮಕ್ಕಳನ್ನು ಗೌರವಿಸಿದ್ದು ಸರಿ. ಆದರೆ, ಆ ಮಕ್ಕಳು ಶಾಲೆಗಿಂತಲೂ ಹೆಚ್ಚಾಗಿ ವೇದಿಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಅಪಾಯದ ಬಗ್ಗೆಯೂ ನಾವು ಯೋಚಿಸಬೇಕಲ್ಲವೇ? ಮುದ್ದು ಮಕ್ಕಳು ಮನರಂಜನೆ ನೀಡುವ ಸರಕುಗಳಾಗಬಾರದು.

ಝೀ ಕನ್ನಡದ ‘ಲಿಟ್ಲ್ ಚಾಂಪ್’ ಮಕ್ಕಳ ಸಂಗೀತ ಕಾರ್ಯಕ್ರಮಕ್ಕೆ ‘ಡ್ರಾಮಾ’ ನಟರನ್ನು ಆಹ್ವಾನಿಸಲಾಗಿತ್ತು. ನಿರೂಪಕಿ ಐದು ವರ್ಷದ ನಟನನ್ನು ಒಂದು ಪ್ರಶ್ನೆಯನ್ನು ಕೇಳಿದರು. ‘ಡ್ರಾಮಾ ಮುಗಿತು ಅಂತ ಬೇಜಾರಾಯ್ತಾ?’. ‘ಇಲ್ಲ. ಖುಷಿ ಆಗ್ತಿದೆ’ ಎನ್ನುವುದು ಮಗುವಿನ ಉತ್ತರ. ‘ಸಿಕ್ಕಾಪಟ್ಟೆ ಕಷ್ಟದ ಡೈಲಾಗ್ ಕಲಿಯಬೇಕಿತ್ತು’ ಎಂದೂ ಆ ಮಗು ಹೇಳಿತು. ಅದು ಮಗು ಮನಸ್ಸಿನ ಪ್ರತಿಬಿಂಬ. ಎಲ್ಲಾ ಮಕ್ಕಳ ಕಥೆಯೂ ಹೆಚ್ಚೂಕಡಿಮೆ ಇದುವೇ.

ಮಕ್ಕಳ ಬಾಯಲ್ಲಿ ಸುಳ್ಳನ್ನು ಹೇಳಿಸಿ ಅದನ್ನೇ ಮಾದರಿಯನ್ನಾಗಿ ಮಾಡುತ್ತಿದ್ದೇವೆ. ಅದರ ಪರಿಣಾಮ ಎಲ್ಲಾ ಮಕ್ಕಳೂ ಗಾಯಕ ಆಗಬೇಕು, ನಟರೂ ಆಗಬೇಕು, ನರ್ತಿಸಬೇಕು... ಇದೆಲ್ಲದರ ಜೊತೆಗೆ ಶಾಲೆಗೂ ಹೋಗಬೇಕು. ಈ ಕರ್ಮ ಎಳೆಯ ಮಕ್ಕಳಿಗೆ ಬೇಕೆ? ಆದರೆ ವಾಹಿನಿಗಳು ಹೀಗೆಲ್ಲ ಯೋಚಿಸುವುದಿಲ್ಲ. ಮಕ್ಕಳ ಪ್ರತಿಭೆ ಅವರ ಪಾಲಿಗೆ ಟಿಆರ್ಪಿ ಸರಕು. ಹಾಗಾಗಿಯೇ ಮಕ್ಕಳನ್ನು ಸಮಯದ ಪರಿವೆಯಿಲ್ಲದೆ ದುಡಿಸಿಕೊಂಡು ಚಿಣ್ಣರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ.

ಮಕ್ಕಳು ಹೋಟೆಲ್ನಲ್ಲಿ ಲೋಟ ತೊಳೆಯುವುದು, ಗ್ಯಾರೇಜ್ನಲ್ಲಿ ದುಡಿದು ಅಮ್ಮನಿಗೆ ಚಿಲ್ಲರೆ ಕಾಸು ಸಂಪಾದಿಸಿ ಕೊಡುವುದು ಅಪರಾಧ. ಒಂದು ಮಗು ಕಿರುತೆರೆಯಲ್ಲಿ ನಟಿಸುವುದನ್ನೇ ಉದ್ಯೋಗವಾಗಿಸಿಕೊಂಡು ಪೋಷಕರಿಗೆ ಆದಾಯ ತಂದುಕೊಡುವುದು ಏಕೆ ಅಪರಾಧ ಅಲ್ಲ?

ದೃಶ್ಯ ಮಾಧ್ಯಮಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವ ಚಿಣ್ಣರನ್ನು ‘ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆಗಳು’ ರಕ್ಷಿಸಬೇಕಾಗಿದೆ. ಎಸ್ಎಸ್ಎಲ್ಸಿ – ಪಿಯುಸಿಯಲ್ಲಿ ರ್ಯಾಂಕ್ ನೀಡುವುದರಿಂದ ಉಳಿದ ಮಕ್ಕಳ ಮನಸ್ಸಿಗೆ ನೋವು ಆಗುತ್ತದೆ ಎಂಬ ವೈಜ್ಞಾನಿಕ ಸತ್ಯ ಅರಿತು ರ್ಯಾಂಕ್ ಪದ್ಧತಿಯನ್ನು ರದ್ದುಮಾಡಲಾಯಿತು.

ಶಾಲೆಗಳಲ್ಲಿಯೂ ಅಂಕಗಳ ಬದಲಾಗಿ ಗ್ರೇಡ್ ನೀಡಲಾಗುತ್ತಿದೆ. ಮಾಧ್ಯಮಗಳು ಆಯ್ದ ಬೆರಳೆಣಿಕೆ ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಅಸಂಖ್ಯಾತ ಮಕ್ಕಳಲ್ಲಿ ಹತಾಶೆಯನ್ನು ಬಿತ್ತುತ್ತಿವೆ. ಮಕ್ಕಳಿಗೂ ಘನತೆ ಇದೆ; ಅದನ್ನು ರಕ್ಷಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.