ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಖ ಇಲಿಗಳನ್ನು ಕೊಂದ ಕಥೆಯು

ದೀಪಾವಳಿ ವಿಶೇಷಾಂಕ : ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 16 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಆಫ್ರಿಕಾ ಖಂಡದ ನೆತ್ತಿಯ ಭಾಗಕ್ಕಿರುವ ಮೊರಾಕ್ಕೋ ದೇಶಕ್ಕೂ ಮೊರಖನಿಗೂ ರವಷ್ಟೂ ಸಂಬಂಧವಿಲ್ಲದಿದ್ದರೂ, ತುಂಬಾ ಓದಿಕೊಂಡಿರುವವರು, ಮೂರ್ಖ – ಮುರಖ – ಮೊರಖ ಆಗಿರಬಹುದೆಂದು ತಮ್ಮ ವ್ಯಾಕರಣ ಜ್ಞಾನವನ್ನೂ ಮೊರಖನ ಹೆಸರಿನ ಹಿಂದಿನ ಇತಿಹಾಸವನ್ನೂ ಕೆದಕೀ ಕೆದಕೀ ಸೋಲುಂಡಿರುವುದನ್ನು ಒಪ್ಪಿಕೊಳ್ಳಲಾರರು!

ಒಂದಂತೂ ಸತ್ಯ. ಅವನ ‘ಕ’ ಶಬುದದ ಉಚ್ಚಾರಣೆಯು ‘ಖ’ ಎಂದು ಸ್ಪಷ್ಟವಾಗಿ ಕೇಳುವುದರಿಂದ, ಮೊರಕ... ಮೊರಖನಾಗಿದ್ದಾನೆ ಎಂದು ಯಾರು ಬೇಕಾದರೂ ಊಹಿಸಬಹುದಿತ್ತು. ‘ಖುದ್ದು ಅವರಪ್ಪನೇ ಇಟ್ಟ ಹೆಸರು’ ಎಂದು ಬಡಬಡಾಯಿಸುವ ಮೊರಖನ ಅವ್ವ ಮಂಚಕ್ಕ, ಅವಾಗವಾಗ ‘ಇಲ್ಲ ನಂಗೂ ಗೊತ್ತಿಲ್ಲ’ ಅನ್ನುತ್ತಾಳೆ!

ನಡೀವಾಗ ಅವನು ವಾಲಾಡುವಂತೆ ಕಾಣುತ್ತಿದ್ದರಿಂದ ಅವನನ್ನು ಕೆಲವರು ತಮಾಷೆಗೆ ‘ಕುಣ್ಕಾ’ ಅಂತ ಕರೆದು ಅವನ ಹೆಂಡತಿ ಅವರಿಗೆ ಆರತಿ ಮಾಡಿದ್ದಳು. ಅವನ ನಿಜ ಹೆಸರು ಹೆಂಡತಿಗೂ ತಿಳೀದೆ ಸ್ಕೂಲಿಗೆ ಮಕ್ಕಳನ್ನು ಸೇರಿಸುವಾಗ ಪರದಾಡಿಬಿಟ್ಟಿದ್ದಳು! ಒಟ್ಟಿನಲ್ಲಿ ಮೋಸ, ತಟವಟ, ಸುಳ್ಳು, ದಗಲ್ಬಾಜಿ ಗೊತ್ತಿಲ್ಲದ ಮೊರಖನನ್ನು ‘ದಡ್ಡ್  ದಡ್ಡ್ ದಡ್ನಂಗಾಡ್ತಾನೆ ಆವಣ್ಣ’ ಅಂತ ಸಮುದಾಯ ಭವನದ ಮುಂದೆ ವಾಲಿಬಾಲ್ ಆಡೋ ಹುಡುಗ್ರು ಯಾವಾಗಲೂ ರೇಗಿಸುತ್ತಿರುತ್ತಾರೆ. ಮೊರಖನ ವಯಸ್ಸು ಸುಮಾರು ಒಂದೂವರೆ ಎರಡು ಕತ್ತೆಗಳಷ್ಟಿರಬಹುದು.

ಚಾಲುಕ್ಯರ ಕಾಲದ ಶಿಲ್ಪಗಳಂತೆ ಗುಂಡು ಗುಂಡಾಗಿ ಇರುವ ಅವನದು ಸುಮಾರಾದ ಕುಳ್ಳು ದೇಹ, ಸೋಲು ಗೆಲುವಿನ ಅರಿವಿಲ್ಲದ ಮುಖ. ಆದರೂ ಕಣ್ಣುಗಳು ಸೋತಿವೆ. ಸೋತಿರೋ ಕಣ್ಣುಗಳಾಗಿದ್ದರೂ ಊರಷ್ಟಗಲ ಇರುವುದರಿಂದ ಆ ಮುಖಕ್ಕೆ ಕಳೆಗಟ್ಟಿಸಿದೆ. ಆದರೆ ಇವನು ಉಸಿರಾಡಿದಾಗ ಶ್ವಾಸಕೋಶದಿಂದ ಹೊರಟ ಗಾಳಿಯು ‘ಝುಂಯ್’ ಎಂದು ಬಂದು ಅವನ ಬಾಯಿಯ ತುದಿಯಲ್ಲಿ ಜೊಲ್ಲುರಸವಾಗಿ ಮಾರ್ಪಟ್ಟು ಕುಳಿತು, ಇವನ ಅಂದವನ್ನು ತೀರ ಕೆಳಮಟ್ಟಕ್ಕೆ ತಳ್ಳಿಬಿಟ್ಟಿದೆ. ಆ ರಸವು ಈ ಕಡೆ ಕೆಳಕ್ಕೂ ಬೀಳದೆ, ಆ ಕಡೆ ಬಾಯಿಯಲ್ಲಿಯೇ ಅಂಟಿಕೊಳ್ಳದೆ ಮೇಲೆ ಕೆಳಗೆ ತೂರಾಡುತ್ತಿರುತ್ತದೆ.

ಸದ್ಯ ಅವಾಗವಾಗ ಅದನ್ನು ಒರೆಸಿಕೊಳ್ಳಲು ತನ್ನ ಶರ್ಟಿನ ಜೇಬಿನಲ್ಲಿ ಒಂದು ಸಣ್ಣ ಟವೆಲ್ ಇಟ್ಟುಕೊಂಡಿದ್ದಾನೆ. ಏನಾದರು ಬ್ಯುಸಿ ಕೆಲಸದಲ್ಲಿ ತಲ್ಲೀನನಾಗಿಬಿಟ್ಟರೆ ಬಾಯಿಯಿಂದ ಗಂಗಾಮಾತೆಯೇ: ಆದರೆ ಅದರ ಗಮನ ಇವನ ಮನಸಿಗೆ ಹೋಗದೆ, ಅಲ್ಲಿರೋ ಯಾರಾದ್ರೂ ಅಸಹ್ಯ ಪಟ್ಕೊಂಡು ಹೇಳಿದರೆ, ಟವೆಲ್ ಗೆ ಕೈ ಹಾಕುತ್ತಾನೆ. ಇಲ್ಲಾಂದ್ರೆ ಬಾಯಿಂದ ಹೊರಟ ರಸವು ಕುತ್ತಿಗೆಯ ಮೂಲಕ ಎದೆ, ಹೊಟ್ಟೆ, ಇನ್ನೂ ಕೆಳಗೆ ಹರಿಯುತ್ತಲೇ ಇರುತ್ತೆ. ಕಷ್ಟಪಟ್ಟು ದುಡಿವ ಇವನಿಗೆ ಬೆವರೂ ಕಿತ್ತು ಹರಿವುದರಿಂದ ಜೊಲ್ಲು ಹಾಗು ಬೆವರು – ಇವೆರಡರ ನಡುವೆ ಕಿತ್ತಾಟವೇ ನಡೆಯುತ್ತಿರುತ್ತದೆ.

ಬೇಸಿಗೆ ಕಾಲದಲ್ಲಂತೂ ಬೆವರು, ಜೊಲ್ಲನ್ನು ಕೆಣಕೀ ಕೆಣಕೀ ಹಾಸ್ಯ ಮಾಡುತ್ತಿರುತ್ತದೆ. ಸುಮಾರು ವರ್ಷಗಳ ಹಿಂದೆ ಹೆಂಡತಿ ಗೌರ್ನಮೆಂಟ್ ಆಸ್ಪತ್ರೇಲಿ ತೋರಿಸಿದಾಗ ‘ಪಿಟ್ಯೂಟರಿ ಗ್ಲ್ಯಾಂಡೋ, ಏನೋ ಹಾಳಾಗಿರೋದ್ರಿಂದ ಹಂಗಾಗುತ್ತೆ ಅದನ್ನ ತಪ್ಪಿಸೋಕಾಗಲ್ಲ. ಇಲ್ಲಾಂದ್ರೆ ಆಪರೇಷನ್ ಮಾಡಬೇಕಾಗುತ್ತೆ’ ಅಂತ ಹೇಳಿ ವಾಪಸು ಕಳಿಸಿದ್ದರು. ಸುಮಾರು ನಲವತ್ತು ವರ್ಷದಿಂದ ಆ ಊರಿನಲ್ಲಿ ಠಿಕಾಣಿ ಹೂಡಿರುವ ಅವನು ಈಗ ಒಂಟಿ! ಆಗ ಹೆಂಡತಿ, ಜೊತೆಗೆ ಎರಡು ಹೆಣ್ಣು ಮಕ್ಕಳು ಮತ್ತು ತನ್ನವ್ವ! ಮಕ್ಕಳೀಗ ‘ಊರು ಸಾಕು, ತಾವೂ ದುಡೀತೀವಿ’ ಅಂತ ಅಜ್ಜಿ ಜೊತೆ ಬೆಂಗಳೂರಿನ ಲಗ್ಗೆರೆಯಲ್ಲಿ ಕಕ್ಕಸ್ಸುಮನೆ ಗಾತ್ರದ್ದಷ್ಟೇ ಇರುವ ಮನೆ ಮಾಡಿಕೊಂಡು ಬದುಕುತ್ತಿವೆ.

ಸುಲೆಮಣಕ್ಕ ಅವರ ಗದ್ದೆಲಿ ಕಬ್ಬು ಕುಯ್ಯುವಾಗ, ಕಟ್ನಾವು ಕಡಿದು ಸುಮಾರು ಎರಡು ವರ್ಷದ ಹಿಂದೆ  ಹೆಂಡತಿಯನ್ನು ಕಳಕೊಂಡ ಮೊರಖ ಅವಾಗವಾಗ ಮನೇಲಿ ಮಲಗಿಕೊಳ್ಳುವುದು ಬಿಟ್ಟರೆ ಜಾಸ್ತಿ ಸಣ್ಣಪ್ಪೊರ ಸೌದೆ ಡಿಪೊದಲ್ಲಿ ಮಲಗಿಕೊಳ್ಳುತ್ತಾನೆ. ಡಿಪೊದಲ್ಲಿ ಸೌದೆ ಹೊಡೆಯೋದು, ಗಿರಾಕಿಗಳ ಮನೆಗೆ ಸೌದೆ ತಗೊಂಡು ಹೋಗಿ ಹಾಕೋದು, ಲಾರಿಯಿಂದ ಸೌದೆ ಇಳಿಸೋದು, ಸೌದೆ ಸಾಗಿಸೋ ಗಾಡಿ ನೋಡಿಕೊಳ್ಳೋದು, ಸೌದೆ ಹೊಡೆಯೋ ಕೊಳ್ಳಿ, ಗರಗಸಗಳನ್ನು ಚೂಪು ಮಾಡಿಸಿಕೊಂಡು ಬರೋದು, ದೇವಸ್ಥಾನದ ಪಕ್ಕಕ್ಕೆ ಅಂಟಿಕೊಂಡಿರುವ ಡಿಪೊಗೆ ಪೂಜೆ ನೆಪದಲ್ಲಿ ಬಂದು ಸೌದೆ ಕದಿಯೋರನ್ನ ಹಿಡಿದುಕೊಳ್ಳೋದು, ರಾತ್ರಿ ಆದ್ಮೇಲೆ ಡಿಪೊ ಬೀಗ ಹಾಕಿ ಬೀಗದ ಕೈಯ್ಯನ್ನು ಸಣ್ಣಪ್ಪೋರ ಮನೆಗೆ ತಲುಪಿಸೋದು ಇವನ ಸಾಮಾನ್ಯ ಕಸುಬು.

ತಕ್ಕಡಿ ಮುಟ್ಟಲು ಅವಕಾಶವಿಲ್ಲದ್ದರಿಂದ, ತಕ್ಕಡಿಗೆ ತೂಕ ಹಾಕುವಾಗ ಸೌದೆ ಹಾಕೋ ಕೆಲಸವನ್ನು ಸಣ್ಣಪ್ಪ ಅಥವ ಅವನ ಮಕ್ಕಳೇ ಮಾಡುತಿದ್ದರು. ಸಂಬಳ ಕರೆಕ್ಟ್‌ಆಗಿ ಎರಡನೇ ತಾರೀಖು ಮೊರಖನ ಕೈಗೆ ಧೊಪ್ ಅಂತ  ಬೀಳುತ್ತದೆ. ಗಿರಾಕಿಗಳ ಮನೆಗೆ ಸೌದೆ ಹಾಕಲು ಹೋದಾಗ ಅವರೂ ಅಷ್ಟೋ ಇಷ್ಟು ದುಡ್ಡು ಕೊಡೋದ್ರಿಂದ ಸಣ್ಣಪ್ಪ ತಿಂಗಳ ಸಂಬಳ ಕೊಡೋದ್ರಲ್ಲಿ ಜುಗ್ಗತನ ಮಾಡುತ್ತಾನೆ. ಆದರೂ ಸುಮಾರಾಗಿ ಸಂಪಾದಿಸುವ ಮೊರಖ, ತನ್ನ ಹೆಣ್ಣು ಮಕ್ಕಳಿಗೆ ಅಂತ ಎತ್ತಿಟ್ಟು ಅವರು ಅಪ್ಪನ ನೋಡಲು ಊರಿಗೆ ಬಂದಾಗ ಕೊಟ್ಟು ಬಿಡುತ್ತಾನೆ.

‘ದಾಕ್ಷೇಣಿ ಇದ್ದಿದ್ದರೆ ಹೆನ್ನೈಕ್ಳು ಇಲ್ಲೇ ಇರ್ತಿದ್ವೇನೋ’ ಅಂತ ಅಕ್ಕಪಕ್ಕದೋರು ಮಾತಾಡಿಕೊಳ್ಳುವಾಗ ಮೊರಖನಿಗೆ ಹೆಂಡತಿಯ ನೆನಪು ಬಂದು, ಜೊಲ್ಲು ಜಾಸ್ತಿ ಸುರಿಯಲು ಪ್ರಾರಂಭಿಸುತ್ತದೆ. ಮತ್ತೆ ಟವೆಲ್! ವಾರದಲ್ಲಿ ಒಂದು ದಿನ, ಅದೂ ಶನಿವಾರ ಮಾತ್ರ ಸ್ನಾನ ಮಾಡುವ ಅಭ್ಯಾಸ ಇರುವ ಇವನಿಗೆ, ಸೌದೆಯ ಕಾರಣಕ್ಕಾಗಿ ಚೆಲುವಣ್ಣನ ಹೆಂಡತಿ ಮಾದೇವಕ್ಕ ಅವಾಗವಾಗ ಬಿಸಿ ನೀರು ಕಾಯಿಸಿ ಕೊಡುತ್ತಾಳೆ.

ಮುಂಚೆ ಶನಿಮಾತ್ಮನ ಪರಮ ಭಕ್ತನಾಗಿದ್ದ ಮೊರಖ, ಹೆಂಡತಿ ಸತ್ತ ಮೇಲೆ, ಕರೆದುಕೊಂಡು ಹೋಗೋವರು ಯಾರೂ ಇಲ್ಲ ಅಂತ ದೇವಸ್ಥಾನಕ್ಕೆ ಹೋಗೋದು ಬಿಟ್ಟನೋ ಅಥವ ಹೆಂಡತೀನೇ ಇಲ್ಲದ ಮೇಲೆ ದೇವ್ರ್ ಕಟ್ಕೊಂಡು ನನಗೇನು ಅಂದ್ಕೊಂಡು ಬಿಟ್ಟನೋ ಶನಿಮಾತ್ಮನೆ ಹೇಳಬೇಕು. ಇನ್ನು ಊಟ! ಹೆಂಡತಿ ಇದ್ದಾಗ ಉಳ್ಳೀ ಕಾಳ್ ಸಾರು, ಹಿಟ್ಟು, ಅನ್ನ, ಉಪ್ಪೆಸ್ರು ಖಾರ, ಜೊತೆಗೆ ಅವಾಗವಾಗ ಒಂದು ಮೊಟ್ಟೆ ಪೀಸು, ಅವಾಗವಾಗ ಕಾಲ್ ಕೇಜಿ ಬಡಾಘೋಸ್ ತಟ್ಟೆಗೆ ಬಿದ್ರೆ, ಸೌದೆ ಹೊಡೆದು ಸುಸ್ತಾಗಿರುತ್ತಿದ್ದ ಮೊರಖನಿಗೆ ಜೊಲ್ಲಿನ ಮೇಲೆ ಜೊಲ್ಲು! ಈಗ ಅವನೇ ಮಾಡಿಕೊಳ್ಳುತ್ತಾನೆ. ಆದ್ರೆ ಗಂಜಿ ತರ ನೀರಿರೋ ಅನ್ನ ಮಾತ್ರ!

ಅವಾಗವಾಗ ಮಾದೇವಕ್ಕ ಬಾಡಿನ ಸಾರು ಮಾಡಿದ್ದಾಗ ಮನೆಗೆ ಕರೆದು ಊಟಕ್ಕಿಕ್ಕುತ್ತಾಳೆ. ಜನ ಹೇಳುವ ಹಾಗೆ ದಡ್ಡನಾದರೂ, ತುಂಬಾ ಸ್ವಾಭಿಮಾನಿಯಾದ ಮೊರಖನು ಬೇರೆಯವರ ಮನೆ ಬಾಗಿಲಿಗೆ ಹೋಗದೆ ಶೆಟ್ಟರ ಅಂಗಡೀಲಿ ಅಕ್ಕಿ ತಂದು ಖುದ್ದು ತಾನೇ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದನು. ಸೀಮೆಣ್ಣೆ ಸ್ಟವ್‌ನಲ್ಲಿ ಅಡುಗೆ ಮಾಡೋದು ಹೇಳಿಕೊಟ್ಟು ಹೋಗಿದ್ದ ತುಸು ಚೂಟಿಯೇ ಇದ್ದ ದೊಡ್ಡ ಮಗಳು, ಮನೆಗೆ ಬರುವಾಗ ಸೀಮೆಣ್ಣೆ, ಒಳ್ಳೆಣ್ಣೆ ತರೋದನ್ನು ಮರೀತಿರಲಿಲ್ಲ.

ಅವತ್ತು ದಂಡುನ್ ಮಾರಿಯಮ್ಮನ ಹಬ್ಬ! ನೆನ್ನೆ ರಾತ್ರೀನೇ ಬೆಂಗಳೂರಿಂದ ಊರಿಗೆ ಬಂದಿದ್ದ ಅಜ್ಜಿ ಮೊಮ್ಮಕ್ಕಳು ಹಬ್ಬದ ಸಡಗರದಲ್ಲಿ ಮುಳುಗಿದ್ದರು. ಎಲ್ಲರೂ ಒಟ್ಟಿಗಿದ್ದು ಬಹುಶಃ ಒಂದೂವರೆ ತಿಂಗಳಾಗಿದ್ದವು. ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ ಹೆಣ್ಣುಮಕ್ಕಳು, ಹೋದ ವಾರ ಬರದೆ ಹಬ್ಬಕ್ಕೆಂದೇ ಒಟ್ಟು ಮೂರು ದಿನ ರಜೆ ಹಾಕಿ, ಅಜ್ಜಿ ಸಮೇತ ಬಂದಿದ್ದರು. ಅವ್ವನಿಗಾಗಿಯೇ ಎಂದು ಹುಣಸೆ ಸೌದೇಲಿ ಮಾಡಿದ್ದ ಊರುಗೋಲನ್ನು ಮಗನಿಂದ ಪಡೆದಿದ್ದ ಮಂಚಕ್ಕ, ಒಳಗೊಳಗೇ ಖುಷಿ ಪಟ್ಟುಕೊಂಡಳಾದರೂ, ಅವನು ಸೊಸೆ ಇಲ್ಲದೆ ಸೊರಗಿರುವುದನ್ನು ಸುಮಾರು ತಿಂಗಳುಗಳಿಂದಲೇ ಗೊತ್ತುಮಾಡಿಕೊಂಡಿದ್ದಳು.

ಆ ಹೆಣ್ಣುಮಕ್ಕಳು ಅಷ್ಟು ಗೋಗರೆದರೂ ಊರು ಬಿಟ್ಟು ಬೆಂಗಳೂರು ಸಿಟಿಗೆ ಬರಲೊಪ್ಪದ ಮೊರಖನನ್ನು ಕಂಡು ಹಿಂಜರಿಯುತ್ತಲೇ ಕ್ಯಾತೆ ತೆಗೆದಳು. ‘ಆಲ್ ಬಂದ್ ಬಿದ್ದಿರಕ್ಕಾಗ್ದ... ಅಲ್ಲೂ ಎಲ್ಲರ ಡಿಪೊವ್ ನೋಡ್ಕಂದ್ರಾಯ್ತು...’ ಎನ್ನುವ ಮಂಚಕ್ಕನ ಮಾತು ಮುಗಿದೇ ಇಲ್ಲ, ಆಡಿಗೆ ಸೊಪ್ಪು ತಿನ್ನಿಸುತ್ತಿದ್ದವನು– ‘ಎಟ್ಸಲಿ ಏಳದು ಆಗಕಿಲ್ಲ ಅಂತ, ಇರಾದ್ ಒಂದ್ ಮನೆನೂ ಬುಟ್ಬುಟ್ ಒಂಟೋಗಿ...’ ಅಂತ ಸಿಡಿದನು. ಅವನ ಸಿಡಿತಕ್ಕೆ, ಜೊಲ್ಲೂ ಬಹಳ ಜೋರಾಗಿಯೇ ಸಿಡಿಯಿತು. ಮೊಖಕ್ಕೆ ಸಿಡಿದ ಜೊಲ್ಲನ್ನು ಒರಸಿಕೊಳ್ಳುತ್ತಾ ಮೇಲೆದ್ದೇಳಿದ ಮಂಚಕ್ಕ, ಮಾದೇವಕ್ಕನ ಮನೆ ಮುಂದೆ ಜನ ಮುತ್ತಿಕೊಳ್ಳೋದನ್ನ ಕಂಡು ‘ಅಸಿಸಿ, ಇವ್ನ್‌ಗೆ ಎಷ್ಟ್ ಯೋಳುದ್ರೂ ಅಸ್ಟಿಯ’ ಅನ್ನುತ್ತ ಮಾದೇವಕ್ಕನ ಮನೆ ಕಡೆ ಹೊರಟಳು.

‘ಅಯ್ ಬುಡು ಅತಗೆ ವಟ್ಟೆಲಿ ಉಳ ಕಣ...’ ಹೆಂಗಸರು ಮಾತಾಡಿಕೊಳ್ಳುತಿದ್ದರು. ಮಾದೇವಕ್ಕನ ಮಗ ಚೆಂದೂ ಮೂರನೇ ಕ್ಲಾಸ್ ಓದುತಿದ್ದವನು, ಇದ್ದಕಿದ್ದಂತೆ ‘ವಟ್ಟೆ ನೋವು... ವಟ್ಟೆ ನೋವು’ ಅಂತ ಅಳೋಕೆ ಶುರು ಮಾಡಿದ್ದರೆ, ಮಾದೇವಕ್ಕ ‘ಅವ್ವಲೋ...’ ಅಂತ ಕಿರುಚಿಕೊಂಡು ಅಕ್ಕ ಪಕ್ಕದೊವ್ರೆಲ್ಲ ಓಡಿ ಬರುವಂತೆ ಮಾಡಿದ್ದಳು. ಹಬ್ಬಕ್ಕೆ ವಾರ ಇರುವಂತೆ ಮೋರಿಮಂಚಣ್ಣನ ಕಿರೀಮಗ ಡೆಂಗೇ ಜ್ವರನೋ, ಏನೋ ಬಂದು ಸತ್ತು ಹೋಗಿದ್ದ. ಸಾಯೋಕ್ಕೆ ಮುಂಚೆ ಹೀಗೆಯೇ ವಟ್ಟೆನೋವು ವಟ್ಟೆನೋವು ಅನ್ತಿತಂತೆ. ಇದರಿಂದ ಭಾರಿ ಗಾಬರಿಗೊಳಗಾಗಿದ್ದ ಮಾದೇವಕ್ಕ ತನ್ನೆಲ್ಲ ಶಕ್ತಿ ಮೀರಿ ಅರಚಿಕೊಂಡುಬಿಟ್ಟಿದ್ದಳು.

ಆಮೇಲೆ ಭಾಗೀರತಿ ಮಗಳು ಅರ್ಪಿತ ಬಂದು ಚೆಂದೂ ಮಾತನಾಡಿಸಿ, ಅವನು ಕಕ್ಕಸ್ಗೋಗ್ಬೇಕು ಅಂತ ಎರಡು ಬೆರಳೆತ್ತಿ ತೋರಿಸಿ ಅಳಲು, ಅದಕ್ಕೆ ಕೂರಿಸಿ, ಮಾಡುವಾಗ ಅವನು ಹೊಟ್ಟೆ ಹಿಡ್ಕೊಂಡು ತನ್ನ ತಲೆ ಬಗ್ಗಿಸಿ ತೊಡೆ ಸಂಧಿಯನ್ನೇ  ನೋಡುತ್ತಿದ್ದುದನ್ನೇ ಗಮನಿಸಿದ ಅರ್ಪಿತ, ಅವನ ಹಿಂಭಾಗದಿಂದ ಪೈಪ್ ರೀತಿಯಲ್ಲಿ ಹುಳವೊಂದು ಬರುತ್ತಿರುವುದನ್ನು ಕಂಡು ‘ಅಯ್, ಜಂತುಳ... ಜಂತುಳಾ...’ ಅಂತ ನಗಲಾರಂಭಿಸಿದಳು. ‘ಅಯ್ ಇಸ್ಟುಕ್ಕೆ ಭೋ ಅಂದ್‌ಬುಟ್ಲು...’ ಅಂತ ಹೆಂಗಸರು ಮಾದೇವಕ್ಕನ ಬೈದುಕೊಂಡೂ, ನಗಾಡಿಕೊಂಡೂ, ಸಮಾಧಾನ ಮಾಡಿಯೂ, ಜಾಗ ಖಾಲಿ ಮಾಡಿದರು.

ಮುಸ್ಸಂಜೆ ಹೊತ್ತು. ಆಗತಾನೇ ಚುನಾವಣೇಲಿ ಗೆದ್ದು ಬೀಗುತ್ತಿದ್ದ ಅದೇ ಊರಿನ ಜಿಲ್ಲಾ ಪಂಚೈತಿ ಅಧ್ಯಕ್ಷನಾಗಿದ್ದ ಕೇಬಲ್ ಸೋಮಣ್ಣ, ಪೂಜೆ ಸ್ವಲ್ಪ ಗ್ರಾಂಡಾಗೇ ನಡೀಲಿ ಅಂತ ಮಾರಮ್ಮನ ದೇವಸ್ಥಾನಕ್ಕೆ ಕಾಲದಿಂದಲೂ ಪೂಜೆ ಸಲ್ಲಿಸುತ್ತಿದ್ದ ಗವಿಸಿದ್ದನನ್ನು ಬಿಟ್ಟು, ವಿಶೇಷ ಅಂತ ಸಿಟಿಯಿಂದ ಬೇರೆ ಪೂಜಾರಿಯನ್ನು ಕರೆಸಿ ತಂದದ್ದರಿಂದ, ಊರಲ್ಲಿ ಅವನಿಗೆ ಆಗದೆ ಇದ್ದವರು ತಗಾದೆ ತೆಗೆದಿದ್ದರು. ಇದರಿಂದ ಪೂಜೆಯು ಸುಮಾರೊತ್ತು ಪೋಸ್ಟ್ ಪೋನಾಯಿತು. ಮಾರಮ್ಮಳೂ ಮುನಿಸಿಕೊಂಡು ತನ್ನ ಕೋಪವನ್ನು ದೇವರ ಗುಡ್ದಪ್ಪನ ಮೈ ಮೇಲೆ ಬರುವುದರ ಮೂಲಕ ಊರವರಿಗೆ ಛೀಮಾರಿ ಹಾಕಿದ್ದಳು. ಊರಲ್ಲಿ ಆಗಲೇ ಡೆಂಗೆ ಬೇರೆ ಆಟಕಾಯಿಸಿಕೊಂಡಿರುವುದರಿಂದ ಹೆಂಗಸರೂ ಜಗಳಕ್ಕೆ ಬಿದ್ದುದರಿಂದ ಹಬ್ಬ ತುಸು ಹೆಚ್ಚಿನ ಭಯ ಭಕ್ತಿಯಿಂದಲೇ ಸುಸೂತ್ರವಾಗಿಯೇ ನಡೆದುಹೋಯಿತು.

ಎಲ್ಲವೂ ಸುಸೂತ್ರವಾಗಿ ನಡೆದು ಕತ್ತಲಾವರಿಸಿದೆ. ದಂಡುನ್ ಮಾರಿಯಮ್ಮ ಸಂತೃಪ್ತಳಾಗಿದ್ದಾಳೆ. ಹಬ್ಬದೂಟವನ್ನು ಉಂಡ ಎಲ್ಲರೂ ಮಲಗಲು ಅಣಿಯಾದರೆ ಮಂಚಕ್ಕ ಇನ್ನೂ ಎಲೆ ಅಡಿಕೆ ಅಗೀತಾ ಇದ್ದಳು. ‘ಸ್ಸಾಕ್ ಮನಿಕೋ...’ ಎನ್ನುತ್ತಾ ಅಲ್ಲೇ ಮಂಚದ ಮೇಲೆ ಇದ್ದ ಚಾಪೆಯನ್ನು ಮಂಚಕ್ಕನಿಗೆ ಕೊಡುತ್ತ, ತಾನು ಖಾಲಿ ಮಂಚದ ಮೇಲೆ ಬಿದ್ದುಕೊಂಡ ಮೊರಖ. ತಲೆದಿಂಬಿಗೆ ಅಲ್ಲೇ ನೇತುಹಾಕಿದ್ದ ವೈರ್ ಬ್ಯಾಗನ್ನು ಎತ್ತುಕೊಂಡು ತಲೆ ಕೆಳಗೆ ಸಿಕ್ಕಿಸಿ ಸೂರನ್ನು ನೋಡುತ್ತಾ ಮಲಗಿದ. ಎಲ್ಲಿದ್ದಳೋ ನಿದ್ರಾದೇವಿ... ಅಪ್ಪಿಕೊಂಡಳು!

ಯಾವಾಗ ನಿದ್ದೆ ಆವರಿಸಿಕೊಂಡಿತೊ ಗೊತ್ತೇ ಆಗಲಿಲ್ಲ, ಹಬ್ಬದ ರಾತ್ರಿಯಾದ್ದರಿಂದ ಬಹಳ ದಣಿದಿದ್ದ. ಆದರೂ ಎಚ್ಚರವಾಯಿತು ಮೊರಖನಿಗೆ! ಒದ್ದಾಡಿಕೊಂಡೇ ನಿದ್ದೆಗಣ್ಣಿನಲ್ಲೇ ಪಕ್ಕಕ್ಕೆ ತಿರುಗಿ ನೋಡಿದ ಅವನಿಗೆ ಅವ್ವ ಲೈಟಾಫ್ ಮಾಡದೆ ಮಲಗಿಕೊಂಡಿರೋದ ಕಂಡು ಅರ್ಧಗಣ್ಣಲ್ಲೇ ‘ಅಯ್ಯ್’ ಅಂದುಕೊಂಡ. ಅವಳು ಬೊಚ್ಚು ಬಾಯಿ ಬಿಟ್ಟುಕೊಂಡು ಗೊರ್ ಗೊರ್ ಎನ್ನುತ್ತಿದ್ದಳು. ಮಕ್ಕಳಿಬ್ಬರೂ ಕಣ್ಣು ಬಿಟ್ಟುಕೊಂಡು ಒಬ್ಬರಿಗೊಬ್ಬರು ನೋಡಿಕೊಳ್ಳುತಿದ್ದಾರೇನೋ ಅನ್ನುವ ರೀತಿಯಲ್ಲಿ ಮಲಗಿದ್ದರು. ಅವರ ಮೈ ಮೇಲಿರಬೇಕಿದ್ದ ರಗ್ಗು ಅಲ್ಲೆಲ್ಲೋ ಬಿದ್ದಿದೆ. ಹಿರೀ ಮಗಳ ಎಳೆ ಎದೆಗಳು ಅರಳಿಕೊಂಡಿರೋದು ಹಾಗೂ ಲೈಟ್ ಬೆಣಕಿನಲ್ಲಿ ಅವಳ ಕಾಲುಗಳು ಹೊಳೆಯೋದನ್ನು ಕಂಡ ಮೊರಖನಿಗೆ ಒಂದು ಕ್ಷಣ ಎದೆ ಝಲ್ಲೆಂದಿತು!

ಮಕ್ಕಳಿಬ್ಬರೂ ಮದುವೆ ವಯಸ್ಸಿಗೆ ಬಂದಿದ್ದಾರೆಂದು ಇವಾಗ ಅರಿವಾಗತೊಡಗಿತು. ನಿಧಾನವಾಗಿ ವಾಲಿಬಾಲ್ ಆಡೋ ಹುಡುಗ್ರು ‘ದಡ್ಡ್ ದಡ್ಡ್ ದಡ್ನಂಗಾಡ್ತಾನೆ ಈವಣ್ಣ...’ ಅನ್ನೋ ಮಾತುಗಳು ಕಿವಿ ತುಂಬಾ ರೊಣ ರೊಣ ಅನ್ನಲು ಶುರುವಾದವು. ಅವರ್ಯಾಕೆ ಹಂಗಂತಿದ್ರು ಅನ್ನೋದನ್ನ ಈಗ ಕಂಡುಕೊಂಡವನಂತೆ ಮನಸಲ್ಲೇ ‘ಶನಿಮಾತಮಾ’ ಅಂದುಕೊಂಡ! ತನಗೆ ಸೌದೆ ಸೀಳೋದು ಬುಟ್ರೆ ಇನ್ನೇನು ತಲೆ ಓಡೋದಿಲ್ಲವಲ್ಲ ಸಿವನೇ... ಅಂದುಕೊಂಡು ತನ್ನ ಬಗ್ಗೆ ತಾನೇ ಹಲ್ಲು ಕಡಿದುಕೊಂಡ. ಸಡನ್ ಆಗಿ ನಿದ್ದೆಯಿಂದ ಎದ್ದಿದ್ದರಿಂದ ತಲೆಯ ಒಚ್ಚೊರಿ ಸಣ್ಣದಾಗಿ ನೋಯುತ್ತಿತ್ತು. ಜೊತೆಗೀಗ ದೇಹ ಗುಡು ಗುಡು ನಡುಗುತ್ತಿದೆ!

ಅವತ್ತು ಡಿಪೊದಲ್ಲಿ ಮಧ್ಯಾಹ್ನದ ಹೊತ್ತೇ ಕಂಡ ಕನಸಲ್ಲಿ ಜೊಲ್ಲು ರಸ ದೇಹದ ಎಲ್ಲ ತೂತುಗಳಿಂದಲೂ ಹರಿಯಲು ಪ್ರಾರಂಭಿಸಿದ್ದವು. ಜೊತೆಗೆ ಸೌದೆ ಹಾಕಿಸಿಕೊಳ್ಳೊ ಮೂಲೆ ಮನೆ ಶಂಭಪ್ಪೋರ ತಮ್ಮ ಚಂದ್ರಹಾಸ ಪರಂಗಿ ಹಣ್ಣು ಕೊಡುತ್ತ ಮೊನ್ನೆ ಹೇಳಿದ ಮಾತುಗಳೂ ನೆನಪಾದವು. ‘ಮೊರಖಣ್ಣ, ಹಸ್ಕಂಡ್ ಮಲ್ಕೋ ಬೇಡ ಕಣೋ, ಮಧ್ಯರಾತ್ರಿಲಿ ಇಲಿಗಳು... ನಿನ್ನೊಟ್ಟೆ ಒಳಗೆ ನಿಂಗೇ ಶಾಪ ಹಾಕ್ಕೊಂಡ್ ಓಡಾಡ್ತವೆ...!’.

ಮಧ್ಯಾಹ್ನ  ಮಾದೇವಕ್ಕನ ಮಗನ ಜಂತುಳ ನೋಡಿದಾಗಲೇ ಚಂದ್ರಹಾಸನ ಮಾತುಗಳು ಗಾಬರಿ ಹುಟ್ಟಿಸಿದ್ದವು. ಸಣ್ಣ ಮಕ್ಕಳ ಹೊಟ್ಟೇಲಿ ಹುಳಗಳು. ದೊಡ್ಡೋವ್ರ ಹೊಟ್ಟೆೇಲಿ ಹೆಗ್ಗಣ! ಮೂರು ದಿನದಿಂದಲೂ ಕಾರಣ ಇಲ್ಲದೆ ಸೊಲ್ಪ ಸೊಲ್ಪವೇ ಹೊಟ್ಟೆ ನೋಯುವಂತಾಗಿತ್ತು! ಏನು ಯೋಚಿಸಿದನೋ ಏನೋ, ಅರೆಬರೆ ನಿದ್ದೆಯಿಂದ ಸಂಪೂರ್ಣ ಎಚ್ಚರಗೊಂಡಿದ್ದೇನೆ ಎಂದು ಧೃಢಪಡಿಸಿಕೊಂಡ ಮೊರಖ ತನ್ನ ಎರಡೂ ಕಿವಿಗಳನ್ನು ಮುಚ್ಚಿಕೊಂಡು ಸ್ತಬ್ದನಾದನು.

ಬಾಯಿಯಿಂದ ಜೊಲ್ಲು ಎದೆ ಮೇಲೆ ಹರಿದು ತಣ್ಣ್ ಅನ್ನುತ್ತಿದೆ. ಕೈಗಳು ಗುರು ಗುರು ಅನ್ನುತ್ತಿವೆ. ಎಷ್ಟೇ ಬೇಡ ಬೇಡ ಅಂದುಕೊಂಡರೂ ‘ಬ್ಯಾಡ’ ಅನ್ನಲಾಗದೆ ‘ನೋಡೆೇಬಿಡವ’ ಅಂತ ನಿಧಾನವಾಗಿ ತನ್ನೆರಡೂ ಕೈಗಳನ್ನು ಹೊಟ್ಟೆ ಮೇಲೆ ತಂದಿರಿಸಿದನು. ಆಹಾ ಶನಿಮಾತ್ಮ! ಹೊಟ್ಟೆಯೊಳಗೆ ಗುಳು ಗುಳು ಶಬ್ದ! ಯಾರೋ ಓಡಾಡುವಂತೆ ಅಸ್ಪಷ್ಟ ಸದ್ದು! ಸದ್ದೇನಾದರು ಸರಿಯಾಗಿ ಕೇಳಬಹುದೇ ಅಂದುಕೊಂಡು ಕಿವಿಯನ್ನು ಚುರುಕುಗೊಳಿಸುತ್ತಾನೆ. ಮಲಗಿರುವ ಬದಲು ಎದ್ದರೆ ಕಿವಿಯನ್ನು ಹೊಟ್ಟೆಯ ಬಳಿ ಸುಲಭವಾಗಿ ಹರಿಯಬಿಡಬಹುದೆಂದು ಈಗ ಎದ್ದು ಕೂರುತ್ತಾನೆ.

ನಿಧಾನವಾಗಿ ತನ್ನ ಕಿವಿಯನ್ನು ತಂದು ಹೊಟ್ಟೆಯ ಬಳಿ ಇಳಿಬಿಟ್ಟು ಆಲಿಸುತ್ತಾನೆ. ಹೌದು ಏನೋ ಕೇಳಿಸುತ್ತಿದೆ. ‘ಅತ್ತೇರಿ’ ಎಂದು ಗಾಬರಿಗೊಂಡ ಮೊರಖ ತಲೆಯೆತ್ತಿ ಕೂರುತ್ತಾನೆ. ಅವ್ವ, ಮಕ್ಕಳನ್ನ ನೋಡುತ್ತಾನೆ. ಒಂದೇ ನಿಮಿಷ! ಕುತೂಹಲ ತಾಳಲಾರದೆ ಮತ್ತೆ ಹೊಟ್ಟೆಯ ಬಳಿ ತಲೆ ಹಾಕುತ್ತಾನೆ! ಹೌದು ಯಾರೋ ಗುಯ್ಯ್ ಗುಯ್ಯ್ ಅನ್ನೋ ಸವುಂಡು. ಅಲಲಲಾ...ಯಾರೋ ಮಾತನ್ನಾಡುತ್ತಿದ್ದಾರೆ! ಶಿವ...ಶಿವಾ...! ಸದ್ದು!

ಮಾತು ಒಂದು: ಆಹಾ! ಏನಿದು ಸಂಭ್ರಮ? ತಲೆ ಕಾಲ್ ರುಚಿ ನೋಡಿ ಎಷ್ಟು ದಿನಗಳಾಗಿತ್ತು! ಮೊರಖಣ್ಣ, ಮೆಚ್ಚಿದೆ ನಿನ್ನ! ಭೇಷ್! ಭೇಷ್! (ಚಪ್ಪರಿಸುತ್ತಿರುವ ಧ್ವನಿ)
ಮಾತು ಎರಡು: ಆಹಾ! ಆಸೆಯೇ! ನಿನ್ನ ಕ್ಷಣಿಕ ಸುಖದ ಸಂಭ್ರಮ ಕಂಡು ನನಗೆ ಅಯ್ಯೋ ಪಾಪ ಅನಿಸದೆ ಇನ್ನೇನು?
ಮಾತು ಮೂರು (ಹೆಣ್ಣು  ದನಿ): ಬುದ್ಧಿವಂತರೇ, ನೀವೇನೇ ಹೇಳಿ, ನನಗೆ ಈ ಮೊರಖಣ್ಣನನ್ನು ಕಂಡರೆ ಬಹಳ ವ್ಯಥೆಯಾಗುತ್ತದೆ!

ಅರರೆ! ಶನಿಮಾತ್ಮ! ಇಲಿಗಳು ನಿಜವಾಗಲು ಮಾತನಾಡುತ್ತಿವೆ! ಆಆ ಆಶ್ಚರ್ಯ! ಹೊಟ್ಟೆ ಮೇಲೆ ದೊಬ ದೊಬನೆ ಸೋರುತ್ತಿದ್ದ ಜೊಲ್ಲನ್ನು ಒರೆಸಿಕೊಳ್ಳುತ್ತಾ, ಗಾಬರಿಯಾಗಿ, ಮೂರು ಮೂರು ಬಾರಿ ತನ್ನ ಕೈಗಳನ್ನು ಗಿಂಡೀ ಗಿಂಡಿ ಕನಸಲ್ಲವೆಂದು ಖಚಿತಪಡಿಸಿಕೊಳ್ಳುತ್ತ, ಮತ್ತೆ ಬಾಡಿಯನ್ನು ಬೆಂಡ್ ಮಾಡಿ, ತನ್ನ ತಲೆಯನ್ನು ಹೊಟ್ಟೆಯ ಬಳಿ ಇಳಿಸುತ್ತಾ ಕಿವಿಗೊಡುತ್ತಾನೆ!

ದಪ್ಪಿಲಿ: ಮತ್ತಿನ್ನೇನು? ಅಪರೂಪಕ್ಕೊಮ್ಮೆ ತಲೆ ಮಾಂಸ ಹಾಕ್ಬಿಟ್ರೆ ಸಾಕೆ? ದಿನಾ ಅದೇ ಮೊಸರು, ಅದೇ ಅನ್ನ ತಿಂದೂ ತಿಂದೂ ನಾಲ್ಗೆಯೆಲ್ಲ ಸಪ್ಪುಕಾಗದೆ.

ಸಣ್ಣಿಲಿ: ಪಾಪ! ಅವನೇನು ಮಾಡೋಕ್ಕಾಗುತ್ತೆ? ಅವನಿಗೆ ಸಿಕ್ಕಿದ್ದನ್ನು ತಿಂತಾನೆ! ಅಕ್ಕಿ, ಬೇಳೆ ರೇಟ್ ಏನಾದ್ರೂ ತಮಗೆ ತಿಳಿದಿದೆಯೋ?

ದಪ್ಪಿಲಿ: ಕ್ಷಮಿಸಿ, ಅಕ್ಕಿ ರೇಟು ಈಗ ಕೇವಲ ಒಂದ್ ರುಪಾಯಿ ಕೆೇಜಿಗೆ!

ಸಣ್ಣಿಲಿ: ಇರಬಹುದು, ಆದ್ರೆ ಅಕ್ಕಿ ಒಂದ್ ಇದ್ಬಿಟ್ರೆ ಆಗೊಗ್ಬಿಟ್ಟದ? ಪಾತ್ರೆ ಪಗಡ, ನೀರು, ಸ್ಟವ್, ಸ್ಟವಲ್ಲಿ ಸೀಮೆಯೆಣ್ಣೆ, ಉಪ್ಪು ಹುಳಿ ಖಾರಕ್ಕೆ ಮಸಾಲೆ ಪದಾರ್ಥ, ಸಾಂಬಾರ್‌ಗೆ ತರಕಾರಿ?

ದಪ್ಪಿಲಿ: ಅದುಕ್ಕೆ? ಕಷ್ಟ ಅಂತ ‘ನಂದಿನಿ’ ಪ್ಯಾಕೆಟ್ ಮೊಸರು ತಂದು, ಕಲಸಿ ತಿಂದ್ಬಿಡೋದೇ?

ಇನ್ನೂ ಸಣ್ಣಿಲಿ: ಕೊನೆಪಕ್ಷ ಅದನ್ನಾದ್ರು ತಿಂತಾನೆ, ತಿಂದು ನಮ್ಮನ್ನೂ ಸಾಕ್ತ ಇದಾನೆ.

ದಪ್ಪಿಲಿ: ಹೌದು. ನನಗೂ ಹಂಗೆ ಅನ್ಸುತ್ತೆ. ಇವನ ದೈನಾಸಿ ಸ್ಥಿತಿ ಯಾರಿಗೂ ಬರ್ದೇ ಇರ್ಲಿ. ಮೊನ್ನೆ ಡುಮ್ಮಿಲಿ ಫೋನ್ ಮಾಡಿದ್ದ. ಅವನಿಗೆ ಭಾರೀ ಹೊಟ್ಟೆ ಸಿಕ್ಕಿದೆಯಂತೆ! ಬರೀ ಪಿಜ್ಜಾ ಕಾರ್ನರ್, ಖರ್ಜೂರ, ಗೋಡಂಬಿನೇ ಅಂತೆ! ಇಲ್ಲಿ ಬರೀ ಮೊಸರು ಅಂದೆ. ಆದ್ರೆ ಅವನು ನಂಬ್ತಾನೇ ಇಲ್ಲ! ಈ ಕಾಲದಲ್ಲೂ ಅಷ್ಟೊಂದ್ ಬಡ್ತನನಾ ಅಂತ ಕಣ್ಣರಳಿಸಿ ಕೇಳ್ತಿದ್ದ! ನಾನು, ಅಯ್ ಆ ಕಾಲದಲ್ಲಿ ಒಬ್ರುಗೊಬ್ರು ಕೊನೆಪಕ್ಷ ಹಂಚ್ಕೊಂದು ತಿಂತಿದ್ರು... ಈಗ ಕಿತ್ಕೊಂಡ್ ತಿಂತಾರೆ... ನಾವೇ ಇಲ್ವಾ? ಅಂದೆ!

ಸಣ್ಣಿಲಿ: ಮೊನ್ನೆ ಚಂದ್ರಹಾಸ ಬೇರೆ ನಮ್ಮ ಬಗ್ಗೆ ಚಾಡಿ ಹೇಳ್ತಿದ್ದ. ಮೊರಕಣ್ಣ... ಹೊಟ್ಟೆ ಒಳಗೆ ಇಲಿಗಳು... ಹಂಗೆ ಹಿಂಗೆ ಅಂತ! ಹೆಗ್ಗಣ... ಮೊರಖಣ್ಣನ ಮಗಳ ಮೇಲೆ ಕಣ್ ಹಾಕಿದ್ದಾನೆ ಅನ್ಸುತ್ತೆ, ಅದಿಕ್ಕೆ ಇವನ ಮೇಲೆ ಪ್ರೀತಿ ಉಕ್ಕಿ ಹರಿತಾಯ್ತೆ! ಹೆಣ್ಣ ಮಕ್ಳು ನೀರ್ ಹಾಕ್ಕೊಳ್ಳೋ ಸುದ್ದಿ ಕೇಳುದ್ರೆ ತಿನ್ನೋಕ್ ಗತಿಯಿಲ್ಲದ ಗಂಡಸಿಗೂ ತೊಡೆಸಂದಿೀಲಿ ಮುಲು ಮುಲು ಅಂದದಂತೆ!

ದಪ್ಪಿಲಿ: ಹೌದು ಈ ಮೊರಖಣ್ಣ ನಮ್ಮುನ್ನೂ ಸಾಕ್ಕಂಡು ಅವನ್ ಮಕ್ಳೂನು ಸಾಕಿ, ಹೆಂಗ್ ಮದ್ವೆ ಮಾಡ್ತಾನೋ? ಅಷ್ಟು ದುಡೀತಾನೆ... ಕಯ್ಯಲ್ ಮೂರ್ಕಾಸ್ ನಿಲ್ಲಾಕಿಲ್ಲ. ಸೌದೆ ಸೀಳುವಾಗ ಮೇಕ್ಕೂ ಕೆಳಿಕ್ಕೂ ಬಾಡಿ ಬೆಂಡ್ ಮಾಡ್ದಾಗ ನಂಗೆ ಉಸುರೇ ಓದಂಗಾಗ್ಬುಡ್ತದೆ. ಅದಕ್ಕೆ ಕಿಡ್ನಿ ಪಕ್ಕ ಓಡೋಗಿ ನಿಂತ್ಕ ಬುಡ್ತೀನಿ!
ಬಡೂರ್ ಹಣೆಬರಾನೆ ಇಷ್ಟು. ಅಷ್ಟು ದುಡಿದರೂ ಎರಡಲ್ಲ, ಒಂದ್ ಮದ್ವೆನೂ ಮಾಡೋಕ್ಕಾಗಲ್ಲ. ಮೊರಖಣ್ಣನ ಮಗಳ ಮದ್ವೆಗೆ ಅಪ್ಪಿ ತಪ್ಪಿ ಸಣ್ಣಪ್ಪ ಏನಾದ್ರೂ ಸಾಲ ಕೊಟ್ಬುಟ್ರೆ ನಾನ್ ಈ ಹೊಟ್ಟೇನೆ ಖಾಲಿ ಮಾಡ್ಕ ಹೊಂಟೋಯ್ತಿನಿ... ಜೊತೆಗೆ ನಂಗೂ ಸಾಕಾಗ್ಬುಟ್ಟದೆ. ಬರೀ ಮೊಸರನ್ನ! ಡುಮ್ಮಿಲಿ ಕರಿಯೋದನ್ನೇ ಕಾಯ್ತಾ ಇದ್ದೀನಿ. ಹೊಂಟೋಯ್ತಿನಿ!ಸಣ್ಣಿಲಿ,

ನ್ನೂ ಸಣ್ಣಿಲಿ: ನಾವೂ?

ದಪ್ಪಿಲಿ: ಅಯ್ಯ್ ಒಬ್ನುಗಾಗೊಷ್ಟು ಮಾತ್ರ ಜಾಗ ಇರೋದಂತೆ! ಡುಮ್ಮಿಲಿ ಇರೋ ಹೊಟ್ಟೆೇಲಿ ಡಾಕ್ಟರು ಆಪರೇಷನ್ ಮಾಡುವಾಗ ಕತ್ರಿ ಬುಟ್ಬುಟ್ಟು ಹೊಂಟೋಗಿ, ಅದು ದೊಡ್ಡಿಲಿ ಹೊಟ್ಟೆಗೆ ತಿವಿದು ಅವನು ಇನ್ನೇನು ಸಾಯನ್ಗಾಗಿದಾನಂತೆ. ದೊಡ್ಡಿಲಿ ಸಾಯೋದನ್ನೇ ಡುಮ್ಮಿಲಿ ಕಾಯ್ತಾ ಅವ್ನೆ. ನಾನೂ ಅದುನ್ನೇ ಕಾಯ್ತಾ ಅವನಿ! ಹೊಂಟೋಯ್ತಿನಿ!

ಸಣ್ಣಿಲಿ: ಏನೋ... ಯಾರ್ನೂ ನಂಬೋಕ್ಕಾಗ್ತಾ ಇಲ್ಲ. ಇಲ್ಲಿ ಮಜ್ಜಿಗೆನಾದ್ರೂ ಸಿಕ್ತಾ ಅಯ್ತೆ! ಅಲ್ಲಿ ಅದೂ ಸಿಕ್ದೇ ಹೋದ್ರೆ? ನಾನ್ ಇಲ್ಲೇ ಇರ್ತೀನಿ.

ದಪ್ಪಿಲಿ: ನಿಮ್ಮ್ ನಿಮ್ಮಿಸ್ಟ! ನಾನೊಂಚೂರು ಮನಿಕೊತೀನಿ. ಎಷ್ಟ್ ಮಾತಾಡುದ್ರೂ ಅಷ್ಟೇಯ. ಥುತ್! ಇನ್ನೆಸ್ಟ್ ದಿನನೋ ಅಂತ ತಲೆ ಮಾಂಸೂದ್ ಜೊತೆಗೆ ಬೋಟಿನೂ ತಿಂದ್ಬುಟ್ಟೆ. ಎಲ್ ನಿನ್ತ್ಕೊಂಡ್ರು ನಿದ್ದೆ!
ಸಣ್ಣಿಲಿ, ಇನ್ನೂ ಸಣ್ಣಿಲಿ: ಸರಿ ಬಾ, ನಾವೂ ಒಂಚೂರ್ ಮನಿಕೊಳುವ..

ಇಲಿಗಳು ಮಾತನ್ನಾಡುತ್ತಿರುವುದನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಂಡ ಮೊರಖನಿಗೆ ಈಗ ಬಾಯಿ ಕಿತ್ತು ಕೈಯ್ಯಿಗೆ ಕೊಟ್ಟನ್ಗಾಗಿತ್ತು! ಗಾಬರಿ ಮೇಲೆ ಗಾಬರಿ! ನಿಜಾನೋ ಸುಳ್ಳೋ... ನಂಬಿಕೆಯೇ ಬರದಾಯಿತು! ಜೊತೆಗೆ ಅಷ್ಟು ಎಚ್ಚರದ ಮೇಲೆ ಎಚ್ಚರಗೊಳ್ಳುತ್ತಿದ್ದರೂ ಕಣ್ಣುಗಳು ಮಾತ್ರ ನಿದ್ದೆಗೆಳೆಯುತ್ತಿದ್ದವು! ತನ್ನ ಬಗ್ಗೆ ಕರುಣೆಯ ಮಾತನ್ನಾಡಿದ ಇಲಿಗಳ ಬಗ್ಗೆ ಇವನಿಗೂ ಕರುಣೆ ಉಂಟಾಗಬೇಕಿತ್ತು! ಆದರೆ ತನ್ನೊಟ್ಟೆಯೊಳಗೆ ಇಲಿಗಳು ಮನೆ ಮಾಡಿಕೊಂಡಿರುವುದನ್ನು ಮಾತ್ರ ಸಹಿಸಿಕೊಳ್ಳಲಾಗಲಿಲ್ಲ!

ಆಮೇಲೊಂದಿನ ಜೋರು ಹೊಟ್ಟೆ ನೋವು ಬಂದು ತನ್ನೊಳಗೆ ಇಲಿಗಳಿರುವುದನ್ನು ಡಾಕ್ಟ್ರು ಕಂಡಿಡಿದುಬಿಟ್ರೆ ಊರವರು, ಹೆಂಗಸರು... ಅದರಲ್ಲೂ ವಾಲಿಬಾಲ್ ಆಡೋ ಹುಡುಗರೂ ಇನ್ನೂ ಆಡ್ಕೊಂಡ್ ನಗ್ತಾರೆ ಎನಿಸಿ, ಇವುಗಳಿಗೆ ಏನಾದ್ರು ಮಾಡ್ಬೇಕು ಅಂದುಕೊಂಡ! ಸೊಲುಪ ಹೊತ್ತು ಗೊರ್ರ್ ಗೊರ್ರ್ ಗೊರ್ರ್ ಅಂತ ಜೊಲ್ಲು ಹಾರಿಸುತ್ತ ಕುಳಿತ. ಕೈಯ್ಯಲ್ಲೇ ಜೊಲ್ಲು ಒರೆಸುತ್ತಾ ನಿಧಾನವಾಗಿ ಮಂಚದಿಂದ ಕೆಳಗಿಳಿದ. ಕಳ್ಳ ಹೆಜ್ಜೆ ಹಾಕುತ್ತ ಹಾಕುತ್ತ ಮನೆ ಬಾಗಿಲಿನ ಚಿಲಕ ತೆಗೆದು ಮನೆಯ ಹೊರಗೆ ಬಂದು, ಟಾಯ್ಲೆಟ್ಟಿನತ್ತ ಮುಖ ಮಾಡಿದ. ಸೂರಿಲ್ಲದ ಟಾಯ್ಲೆಟ್ಟು ಹಬ್ಬದ ಪ್ರಯುಕ್ತ ಉಜ್ಜೀ ಉಜ್ಜೀ ತಿಕ್ಕಿದ್ದರಿಂದ ಚಂದ್ರನ ಬೆಳಕಿಗೆ  ಹೊಳೆಯುತ್ತಿತ್ತು!

ಒಳಗೋಗಿ ಬಾಗಿಲು ಜಡಿದುಕೊಂಡ. ಸ್ವಲ್ಪ ಹೊತ್ತಿಗೆ ಮುಕ್ಕರಿವ ಶಬುದಕ್ಕೆ ಫಳಾರನೆ ಎಚ್ಚರಗೊಂಡ ಪಕ್ಕದ್ಮನೆ ಸರೋಜ ‘ಅಸಿಸಿ... ಈಗ ತಾನೇ ಮಗ ಮಲಿಕಂಡದೆ’ ಅಂದದ್ದು ಮೊರಖನಿಗೆ ಕೇಳಿಸುತ್ತಿತ್ತು. ಸ್ವಲ್ಪ ಹೊತ್ತು ಬಿಟ್ಟು ಆಚೆಗೆ ಬಂದ ಮೊರಖ ಅಲ್ಲೆಲ್ಲೋ ಮೂಲೇಲಿ ಬಿದ್ದ ಬೆರಳು ಗಾತ್ರದ ಸೌದೆ ಸೀಳನ್ನು ತೆಗೆದುಕೊಂಡು ಮತ್ತೆ ಟಾಯ್ಲೆಟ್ಟಿನ ಬಾಗಿಲಾಕಿಕೊಂಡ! ಸದ್ದಿಲ್ಲ! ಏನಾಯಿತೋ ಮತ್ತೆ ಧಡಾರನೆ ಬಾಗಿಲು ತೆಗೆದು ಹೊರನುಗ್ಗಿದ ಮೊರಖ ಸುಸ್ತಾದವಂತೆ ಕಂಡು ಬರುತ್ತಿದ್ದ!

ಕಯ್ಯಲ್ಲಿದ್ದ ಸೌದೆ ಸ್ಸೀಳನ್ನು ಬಿಸಾಕಿ, ಹಬ್ಬದ ಕಾರಣ ರಜೆಯಿದ್ದುದರಿಂದ ಡಿಪೊ ಬೀಗದ ಕೈ ತನ್ನಲ್ಲೇ ಇರುವುದನ್ನು ಅರಿತು ಮನೆಯೊಳಗೆ ಬಂದು ಬೀಗದ ಕೈ ತೆಗೆದುಕೊಂಡು ಡಿಪೋನತ್ತ ಹೊರಟ! ಕತ್ತಲ್ಲೆಯಲ್ಲಿ ಯಾರೋ ಶನೀಶ್ವರನಂತೆ ವಾಲಾಡಿಕೊಂಡು ಬರೋದನ್ನು ಕಂಡ ದೊಡ್ಡೇಗೌಡರ ನಾಯಿ ‘ಟುಯ್ಯಿ’ ಜೋರಾಗಿ ಬೊಗಳಲು ಶುರು ಮಾಡಿತು. ಹೆದರಿದ ದನಿಯಲ್ಲಿಯೇ ಶಕ್ತಿ ಮೀರಿ ಬೊಗಳುತ್ತಿದ್ದ ಟುಯ್ಯಿಯು ಮೊರಖನ ಎರಡೂ ಕಾಲಗಳ ಮೂಲಕ, ಕೆಳಕ್ಕೆ ಹರಿದು ಹಿಮ್ಮಡಿಯ ಮೂಲಕ ನೆಲವನ್ನು ಸೇರುತ್ತಿದ್ದ, ಕೆಂಪು ಕೆಂಪಾಗಿ ಕಾಣುತ್ತಿದ್ದ ಅಂಟಂಟು ದ್ರವದ ‘ಘಂಮ್’ ವಾಸನೆಗೆ ಬೊಗಳುವುದನ್ನು ನಿಲ್ಲಿಸಿ, ನೆಕ್ಕಿ ರುಚಿನೋಡುತ್ತಾ, ಇದೆಲ್ಲಿಂದ ಬೀಳುತ್ತಿದೆಯೋ ಎಂದು ಆ ಕರಾಳರಾತ್ರಿಯಲ್ಲೂ ಮೊರಖನ ತೊಡೆಯನ್ನೇ ದಿಟ್ಟಿಸುತ್ತಿತ್ತು!

ಇನ್ನೂ ನಿದ್ದೆಗಣ್ಣೇ ಇತ್ತೋ ಅಥವ ಪೂರ್ತಿ ಎಚ್ಚರಗೊಂಡಿದ್ದನೋ ಅಂತೂ ಡಿಪೊ ಸೇರಿದ ಮೊರಖ ತಾನು ಮಲಗುತ್ತಿದ್ದ ಮಂಚದ ಕೆಳಗೆ ಕೈ ಹಾಕಿ ಏನನ್ನೋ ಹುಡುಕಲಾರಂಭಿಸಿದ. ಸಿಕ್ಕಿತು! ಸೌದೆ ಹಾಳಾಗದಂತೆ ನೋಡಿಕೊಳ್ಳಲು ಅವನೇ ಸಿಂಪಡಿಸುತ್ತಿದ್ದ ಗೆದ್ದಲಿನಪುಡಿ, ಇಲಿಪಾಶಾಣವನ್ನು ಮೊನ್ನೆ ತಾನೇ ಅವನೇ ಶೆಟ್ರ ಅಂಗಡಿಯಿಂದ ‘ಉಳಗಳು ಜಾಸ್ತಿ ಆಗ್ಬುಟ್ಟವೆ...’ ಅಂತೇಳಿ ತಂದಿದ್ದ! ಹೆಂಗಾದ್ರೂ ಇಲಿಗಳನ್ನು ಸಾಯಿಸಬೇಕು.

ಇಲಿ ಪಾಶಾಣವೇ ಸಿಕ್ಕಿದ್ಮೇಲೆ? ಐದೂ ಪಾಕೀಟನ್ನು ಒಂದಾದ ಮೇಲೆ ಒಂದು ಒಡೆದು, ತಟ್ಟೇಲಿ ಹಾಕಿಕೊಂಡು... ಗಬ ಗಬ ಮುಕ್ಕಿದ... ಪಾಷಾಣದ ಪುಡಿಯು ಮೊರಖನ ಮೈ ತುಂಬಾ ಹರಡಿ ಕೆಮ್ಮನ್ಗಾಯಿತು. ಇತ್ತ ಹೊಟ್ಟೆಯೊಳಗೆ  ಧೂಳಿನಂತಾದ್ದು ಏನೋ ಹಾಯ್ದು ಬರಲು, ಇಲಿಗಳು ಗಲಿಬಿಲಿಗೊಳ್ಳುತ್ತಲೂ... ಪುಡಿ ತನ್ನ  ಕೆಲಸವನ್ನು ಕ್ಷಣ ಮಾತ್ರದಲ್ಲಿಯೇ ಜರುಗಿಸಲೂ... ಜೊಲ್ಲುರಸವು ದಪ್ಪ ದಪ್ಪ ನೊರೆಯಂತಾಗಲೂ... ಮೊರಖನ ದೇಹ ತಕ್ಕಡಿಯಲ್ಲಿ ತೂಗಾಡಲಾರಂಭಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT