ನಿಮಿಷಕ್ಕೆ ಏಳು, ಗಂಟೆಗೆ ನಾನ್ನೂರು, ದಿನಕ್ಕೆ ಹತ್ತು ಸಾವಿರ, ಈ ಲೆಕ್ಕದಲ್ಲಿ ಒಟ್ಟು ನೂರು ದಿನಗಳು. ಈ ಸಂಖ್ಯೆಗಳ ಲೆಕ್ಕಾಚಾರ ಅಂತಿಮವಾಗಿ ತೋರಿಸುವ ಮೊತ್ತ 10 ಲಕ್ಷ.

ಉಸಿರು ಬಿಗಿ ಹಿಡಿದುಕೊಳ್ಳಿ– ಇದು, ಯಾವುದೋ ಸಾಧನೆಯ ಅಂಕಿಅಂಶವಲ್ಲ. ನೂರು ದಿನಗಳಲ್ಲಿ ಹತ್ತು ಲಕ್ಷ ಜನರನ್ನು ಕೊಂದ ಇತಿಹಾಸದ ಒಂದು ದಾಖಲಾತಿಯಿದು. ಮನುಕುಲದ ಚರಿತ್ರೆಯ ಕಪ್ಪುಚುಕ್ಕೆಗಳಲ್ಲೊಂದಾದ ಈ ಮಹಾದುರಂತದ ಘಟನೆಗೀಗ ಇಪ್ಪತ್ತು ವರ್ಷ.

ಒಂದೇ ನೆಲ, ಜಲ ಹಾಗೂ ಗಾಳಿ ಬಳಸುವ, ಒಂದೇ ಭಾಷೆಯನಾಡುವ, ಒಂದೇ ದೇಶವಾಸಿಗಳಾದ ಜನ ತಂತಮ್ಮ ಕುಲ/ಧರ್ಮದ ಅಸ್ಮಿತೆಯ ಕಾರಣವಾಗಿ ಹೊಡೆದಾಡುವುದು ವಿಶ್ವಗ್ರಾಮದ ವಿಪರ್ಯಾಸ. ಇದಕ್ಕೆ ಉದಾಹರಣೆಯಂತೆ ಕಾಣಿಸುವ ರುವಾಂಡಾ ಜನಾಂಗೀಯ ಹತ್ಯಾಕಾಂಡ ನಡೆದು 20 ವರ್ಷಗಳಾದವು. ಭಾರತದಲ್ಲೂ ಜಾತಿ/ಧರ್ಮಾಧಾರಿತ ಹತ್ಯೆಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿದರೆ ರುವಾಂಡಾದ ಭೀಕರ ಘಟನೆ, ಅದರ ಹೊರತಾಗಿ ಹೇಗೆ ಅದು ಸೌಹಾರ್ದದಿಂದ ಇದೆ ಎಂದು ಪರಿಶೀಲಿಸುವುದು ಸಮಯೋಚಿತ.

ಕರ್ನಾಟಕದ ಎರಡು ಜಿಲ್ಲೆಗಳಷ್ಟು ದೊಡ್ಡದಿರುವ ರುವಾಂಡಾ– 1.2 ಕೋಟಿ ಜನಸಂಖ್ಯೆ ಹೊಂದಿರುವ ಆಫ್ರಿಕಾದ ಒಂದು ದೇಶ. ತನ್ನ ನೆಲದ ಲಕ್ಷಾಂತರ ಜೀವಗಳನ್ನು ಜನಾಂಗದ್ವೇಷಕ್ಕೆ ಎಂದಿನಿಂದ ಕಳೆದುಕೊಳ್ಳುತ್ತ ಬಂದಿರುವ ಈ ದೇಶದ ದುರಂತ. 10 ಲಕ್ಷ ಅಮಾಯಕ ಟುಟ್ಸಿ ಜನರನ್ನು ಕೇವಲ 100 ದಿನಗಳಲ್ಲಿ ಹತ್ಯೆ ಮಾಡಿದ 1994ರ ನರಮೇಧವು ಲಿಖಿತ ಇತಿಹಾಸ ಕಂಡ ಅತ್ಯಂತ ಭೀಕರ ಮತ್ತು ವೇಗದ ಹತ್ಯಾಕಾಂಡ. ರುವಾಂಡಾದ ಬಹುಸಂಖ್ಯಾತ ಹುಟು ಜನಾಂಗ ಕಡಿಮೆ ಸಂಖ್ಯೆಯಲ್ಲಿರುವ ಟುಟ್ಸಿಗಳನ್ನು ‘ಮುಗಿಸಿ ಬಿಡುವ’ ಪ್ರಯತ್ನದಲ್ಲಿ ಅವರನ್ನು ಅಕ್ಷರಶಃ ಬೇಟೆಯಾಡಿತು; ಮಾನಭಂಗ ಮಾಡಿ, ಸುಟ್ಟು, ಅತ್ಯಾಚಾರಗೈದು ನಿರ್ಗತಿಕರನ್ನಾಗಿಸಿತು. ನೂರಕ್ಕೆ ಎಪ್ಪತ್ತರಷ್ಟು ಟುಟ್ಸಿಗಳು ಹತ್ಯೆಗೊಂಡ ಈ ದುರ್ಘಟನೆ ಮನುಷ್ಯನ ಮನಸಿನಲ್ಲಡಗಿದ ಹಿಂಸೆಯ ಸ್ವರೂಪ ಮತ್ತು ಪರಿಣಾಣಗಳನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಮಾನವಹಕ್ಕು, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಗಳನ್ನು ವಿಶ್ವ ಪ್ರತಿಪಾದಿಸುವ ಕಾಲದಲ್ಲಿ, ದಕ್ಷಿಣ ಆಫ್ರಿಕಾ ನೆಲ್ಸನ್ ಮಂಡೇಲಾರನ್ನು ಅಧ್ಯಕ್ಷರಾಗಿ ಚುನಾಯಿಸಿ ಹಾಗೂ ಡೆಸ್ಮಂಡ್ ಟುಟು ‘ಸತ್ಯ ಮತ್ತು ಸಂಧಾನ’ದ ಮಾತನಾಡುತ್ತಿದ್ದ ಕಾಲದಲ್ಲಿ ಆಫ್ರಿಕಾದ ಪುಟ್ಟ ದೇಶ ರುವಾಂಡಾದಲ್ಲಿ ಅಮಾಯಕರನ್ನು ಸೊಳ್ಳೆ ಕೊಂದಷ್ಟು ಸಲೀಸಾಗಿ ಕೊಂದು ಬಿಸಾಡಿದ್ದು ದಿಗ್ಭ್ರಮೆ ಹುಟ್ಟಿಸುತ್ತದೆ. ಆಳುವವರು, ಆರಕ್ಷಕರು, ಸೈನ್ಯ, ಗಣ್ಯರು ಮತ್ತು ಬಹುಸಂಖ್ಯಾತರ ಬೆಂಬಲವೂ ಇದ್ದರೆ ಜನಾಂಗೀಯ ಹತ್ಯೆ ಅದೆಷ್ಟು ಭೀಕರವಾಗಬಹುದು ಎನ್ನುವುದಕ್ಕೆ ಈ ದುರಂತ ಸಾಕ್ಷಿಯಾಗಿದೆ.

ಅಂದಹಾಗೆ, ಈ ಹತ್ಯಾಕಾಂಡ ಇದ್ದಕ್ಕಿದ್ದಂತೆ ಸಂಭವಿಸಲಿಲ್ಲ. ಅದು ವ್ಯವಸ್ಥಿತ. ಅದರ ಕಾರಣಗಳು ಚಾರಿತ್ರಿಕ. ನಿರಂತರ ಜನಾಂಗೀಯ ಸಂಘರ್ಷದ, ಅಧಿಕಾರಕ್ಕಾಗಿನ ಕಚ್ಚಾಟದ ಅಂತಿಮ ಪರಿಣಾಮ ಇದು; ಒಂದು ದೇಶದ ಆಂತರಿಕ ಸಂಘರ್ಷವನ್ನು ವಿದೇಶ ಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತವೆ ಎನ್ನುವುದಕ್ಕೆ ಉದಾಹರಣೆ ಕೂಡ.

ವರ್ಣಭೇದದ ಕರಾಳಹಸ್ತ
ರುವಾಂಡಾ ದೇಶ ಹುಟು (84%), ಟುಟ್ಸಿ(15%) ಮತ್ತು ಟ್ವಾ(1%) ಎಂಬ ಮೂರು ಜನಾಂಗಗಳ ನಾಡು. ಕ್ರಿ. ಪೂ. 8-9 ಸಾವಿರ ವರ್ಷಗಳಷ್ಟು ಹಿಂದಿನಿಂದ ಅಲ್ಲಿ ಬೇಟೆಗಾರ ಪಿಗ್ಮಿಕುಲ ಟ್ವಾ ನೆಲೆಸಿದೆ. ಕ್ರಿ.ಪೂ. 700ರ ಹೊತ್ತಿಗೆ ಆಚೀಚಿನ ಪ್ರದೇಶಗಳಿಂದ ಬಂಟು ಸಮುದಾಯ ರುವಾಂಡಾಕ್ಕೆ ವಲಸೆ ಬಂತು. ಅವರಲ್ಲಿ ಹುಟು ಕೃಷಿಕ ಸಮುದಾಯ. ಟುಟ್ಸಿಗಳು ದನಗಾಹಿಗಳು. ಅವರಿಗೆಲ್ಲ ಬಾನ್ಯಾರ್ವಾಂಡಾ ಆಡುಭಾಷೆ.

18ನೇ ಶತಮಾನದ ಹೊತ್ತಿಗೆ ಅಲ್ಲಿ ಸಣ್ಣಪುಟ್ಟ ರಾಜ್ಯಗಳು ತಲೆಯೆತ್ತಿದವು. ಅದರಲ್ಲಿ ಟುಟ್ಸಿಗಳು ಆಳುತ್ತಿದ್ದ ಒಂದು ರಾಜ್ಯ ಬಲಶಾಲಿಯಾಗಿ ವಿಸ್ತಾರಗೊಳ್ಳುತ್ತ ಉಳಿದವರ ಮೇಲೆ ಅಧಿಕಾರ ಸಾಧಿಸಿತು. ಆಗ ಕಾಲಿಟ್ಟವರು ವಸಾಹತುಶಾಹಿಗಳು. ಬರ್ಲಿನ್ ಕಾನ್ಫರೆನ್ಸ್ 1884ರಲ್ಲಿ ರುವಾಂಡಾವನ್ನು ಜರ್ಮನಿಗೆ ಕೊಟ್ಟಿತು. ಜರ್ಮನರಿಗೆ ಟುಟ್ಸಿಗಳು ಹೆಚ್ಚು ‘ಬಿಳಿಯರೂ’, ಸಮರ್ಥರೂ ಆಗಿ ಕಾಣಿಸಿದರು. ಅವರು ಟುಟ್ಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರುವಾಂಡಾದಲ್ಲಿ ಯೂರೋಪ್ ಸೈನ್ಯವನ್ನಿಟ್ಟು ಆಡಳಿತ ನಡೆಸಿದರು. ಒಡೆದು ಆಳುವ ವಸಾಹತುಶಾಹಿ ನೀತಿಯಿಂದ ಟುಟ್ಸಿ ಮೇಲುಗೈ ಶುರುವಾಯಿತು.

ಮೊದಲ ಮಹಾಯುದ್ಧದ (1919) ಫಲವಾಗಿ ರುವಾಂಡಾ ಬೆಲ್ಜಿಯಂಗೆ ಹಸ್ತಾಂತರಗೊಂಡಿತು. ಬೆಲ್ಜಿಯನ್ನರೂ ಟುಟ್ಸಿಗಳನ್ನು ಆಳುವ ಗಣ್ಯ ಕುಲವೆಂದೇ ಪರಿಗಣಿಸಿದರು. ಹುಟುಗಳಿಗೆ ಸೇರಿದ ಹುಲ್ಲುಗಾವಲು ಪ್ರದೇಶಗಳನ್ನು ಕಿತ್ತುಕೊಂಡು ಟುಟ್ಸಿಗಳಿಗೆ ಕೊಟ್ಟರು. 1935ರಲ್ಲಿ ಜನಾಂಗಗಳನ್ನು ಗುರುತಿಸಿ ಗುರುತಿನ ಕಾರ್ಡ್ ನೀಡಿದಾಗ, ಮೂರೂ ಜನಾಂಗಗಳು ಮತ್ತಷ್ಟು ದೂರದೂರ ಸರಿದವು. ಆಗ ಬಂದದ್ದು ಕ್ಯಾಥೊಲಿಕ್ ಚರ್ಚ್. ತಂತಮ್ಮ ಕುಲದ ಪ್ರಾಮುಖ್ಯ ಹೆಚ್ಚಿಸಿಕೊಳ್ಳಲು ಜನ ಕ್ರೈಸ್ತರಾಗತೊಡಗಿದರು. ಆದರೆ ಚರ್ಚ್ ಟುಟ್ಸಿಗಳಿಗೆ ಮಣೆ ಹಾಕಿತು. ನಾಯಕರಾಗಲು ಅವಶ್ಯವಿರುವ ಶಿಕ್ಷಣ, ತರಬೇತಿ, ಭಾಷೆಯನ್ನು ಅವರಿಗೆ ಕಲಿಸಿತು. ಹುಟುಗಳು ಬಹುಸಂಖ್ಯಾತರಾಗಿದ್ದರೂ ವಂಚಿತ, ದಮನಿತ, ಗಾಯಗೊಂಡ ಸಮುದಾಯವಾಗಿ ಒಂದು ಶತಮಾನ ದಾಟಿದರು.

ಎರಡನೇ ಮಹಾಯುದ್ಧದ ನಂತರ ಸಮೀಕರಣ ತಿರುವುಮುರುವಾಯಿತು. ಹುಟುಗಳ ಮೇಲೆ ಇದ್ದಕ್ಕಿದ್ದಂತೆ ಎಲ್ಲರಿಗೆ ಪ್ರೀತಿ ಉಕ್ಕಿತು. ಮಿಷನರಿಗಳು ಹುಟುಗಳ ಅಭ್ಯುದಯ ತಮ್ಮ ಜವಾಬ್ದಾರಿಯೆಂದು ತಿಳಿದು, ಹುಟು ಧರ್ಮಗುರುಗಳನ್ನು, ರಾಜಕೀಯ ನಾಯಕರನ್ನು ಬೆಳೆಸಿದರು. ಬೆಲ್ಜಿಯಂ ಹುಟುಗಳನ್ನು ಬೆಂಬಲಿಸಿತು. ಈ ಬೆಳವಣಿಗೆಯಿಂದಾಗಿ ಒಂದಷ್ಟು ಕಾಲ ಅಧಿಕಾರ, ಕಾಳಜಿ, ಸವಲತ್ತು ಅನುಭವಿಸಿದ್ದ ಟುಟ್ಸಿಗಳು ಕೆರಳಿದರು. ಸಶಸ್ತ್ರ ಗುಂಪುಗಳು ಹುಟ್ಟಿದವು. ಅಲ್ಲಿಂದ ಆ ಎರಡೂ ಜನಾಂಗಗಳು ನಿರಂತರ ಕಾದಾಟದಲ್ಲಿ ಮುಳುಗಿದವು. ಕ್ರೈಸ್ತಧರ್ಮವೂ ಅವರ ಜನಾಂಗೀಯ ಭಿನ್ನಾಭಿಪ್ರಾಯವನ್ನು ಅಳಿಸಲಿಲ್ಲ. ಒಮ್ಮೆ ಹುಟು ಮೇಲಾಟ, ಮತ್ತೊಮ್ಮೆ ಟುಟ್ಸಿ ವಿಜಯ. ಒಮ್ಮೆ ಹುಟು ಸಂಚು, ಮತ್ತೊಮ್ಮೆ ಟುಟ್ಸಿಗಳಿಂದ ಹತ್ಯಾಕಾಂಡ.

ಅಂತಃಕಲಹದ ದಳ್ಳುರಿ
1962ರಲ್ಲಿ ಬೆಲ್ಜಿಯಂನಿಂದ ಸ್ವತಂತ್ರಗೊಂಡ ರುವಾಂಡಾದಲ್ಲಿ ಹುಟು ಪ್ರಾಬಲ್ಯದ ಸರ್ಕಾರ ಬಂತು. ಫ್ರಾನ್ಸ್, ಬೆಲ್ಜಿಯಂ ಹುಟು ಪರವಾಗಿದ್ದರೆ ಅಮೆರಿಕ ‘ರುವಾಂಡನ್ ಪೇಟ್ರಿಯಾಟಿಕ್ ಫ್ರಂಟ್’ (ಆರ್‌ಪಿಎಫ್) ಎಂಬ ಸಶಸ್ತ್ರ ಗುಂಪು ಕಟ್ಟಲು ಟುಟ್ಸಿಗಳಿಗೆ ಸಹಾಯ ನೀಡಿತು. ನೆರೆಹೊರೆಯ ಉಗಾಂಡಾ, ಬುರುಂಡಿ, ಈಜಿಪ್ಟ್, ಜೈರೆಗಳು ಒಮ್ಮೆ ಇತ್ತ, ಒಮ್ಮೆ ಅತ್ತ. ಹೀಗೆ ಆಂತರಿಕ ಜನಾಂಗ ದ್ವೇಷದ ಜೊತೆ ಬಾಹ್ಯ ಶಕ್ತಿಗಳ ಹಿತಾಸಕ್ತಿಯೂ ಸೇರಿ ನಿರಂತರ ಚಕಮಕಿ, ನಿರಂತರ ಸಾವು, ನಿರಂತರ ವಲಸೆ ಆ ಪ್ರದೇಶದ ವಿದ್ಯಮಾನವಾಯಿತು.

ಕಾಲಚಕ್ರದ ಉರುಳಿನಲ್ಲಿ ಉದಾರವಾದಿಗಳು ರುವಾಂಡಾದಲ್ಲಿ ಅಧಿಕಾರಕ್ಕೆ ಬಂದು ಜುವೆನಾಲ್ ಹಬ್ಯಾರಿಮಾನ ಎಂಬ ಉದಾರವಾದಿ ಹುಟು ಅಧ್ಯಕ್ಷರಾದರು. ಅವರು ತಮ್ಮ ಸರ್ಕಾರದಲ್ಲಿ ಟುಟ್ಸಿಗಳನ್ನೂ ಸೇರಿಸಿಕೊಂಡರು. ಆದರೆ, ‘ಆರ್‌ಪಿಎಫ್’ ಸರ್ಕಾರದಲ್ಲಿ ಟುಟ್ಸಿಗಳು ಸಹಭಾಗಿಯಾಗಿದ್ದು ಜನಾಂಗೀಯವಾದಿ ಹುಟುಗಳಿಗೆ ಇಷ್ಟವಾಗಲಿಲ್ಲ. ಭಿನ್ನಮತ ಭುಗಿಲೆದ್ದಿತು. ಅಧ್ಯಕ್ಷರಿಂದ ‘ದೇಶ ರಕ್ಷಿಸಲು’ ಉಗ್ರ ಗುಂಪುಗಳು ಹುಟ್ಟಿದವು.

ಅಧ್ಯಕ್ಷರಿಗೆ ತಿಳಿಯದಂತೆ ಸೇನೆಯೇ ಉಗ್ರ ತರುಣರಿಗೆ ತರಬೇತಿ ಕೊಟ್ಟಿತು. ಸರ್ಕಾರ-ಸೈನ್ಯ-ಆಡಳಿತದಲ್ಲಿ ಹುಟು ಪರ ಉಗ್ರವಾದಿಗಳೇ ತುಂಬಿದರು. ಟುಟ್ಸಿ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡಲು ಪತ್ರಿಕೆ ಶುರುವಾಯಿತು. ಆಕಾಶವಾಣಿ ಮತ್ತು ಟೆಲಿವಿಷನ್‌ಗಳಲ್ಲಿ ಜನಾಂಗೀಯ ದ್ವೇಷ ಬೆಳೆಸುವ ಕಾರ್ಯಕ್ರಮ ಬಿತ್ತರವಾಯಿತು. ಟುಟ್ಸಿ ಗಣ್ಯರ, ಅವರ ಪರ ಇರುವ ಹುಟು ಗಣ್ಯರ ಪಟ್ಟಿ ಮಾಡಲಾಯಿತು. ಜನಾಂಗೀಯ ಗುರುತು ಪತ್ರ ನೀಡಲಾಯಿತು. ಸೇನಾಬಲ ಹೆಚ್ಚಿಸಿ ಅವಶ್ಯಕತೆಗಿಂತಲೂ ಹೆಚ್ಚು ಶಸ್ತ್ರಾಸ್ತ್ರ ಖರೀದಿ ನಡೆಯಿತು. ‘ನಾಗರಿಕ ರಕ್ಷಣೆ’ ಹೆಸರಿನಲ್ಲಿ ಜನರಿಗೆ ಬ್ಲೇಡು, ಕತ್ತಿ, ಚಾಕು, ಕೊಡಲಿ; ಕೆಲವರಿಗೆ ಪಿಸ್ತೂಲು, ತರುಣರಿಗೆ ಎಕೆ-47 ಕೊಡಲಾಯಿತು. ಇವೆಲ್ಲವೂ ಟುಟ್ಸಿಗಳನ್ನು ಇಲ್ಲವಾಗಿಸಲು ‘ಅಂತಿಮ ಯುದ್ಧ’ಕ್ಕೆ ನಡೆದ ಸಿದ್ಧತೆಯಂತಿದ್ದವು.

ಉದಾರವಾದಿ ಅಧ್ಯಕ್ಷ ಜುವೆನಾಲ್‌ರನ್ನು ಹೊತ್ತ ವಿಮಾನವನ್ನು ರುವಾಂಡಾ ಸೇನೆ 1994, ಏಪ್ರಿಲ್ 6ರಂದು ಹೊಡೆದುರುಳಿಸಿತು. ಅದು ಟುಟ್ಸಿಗಳ ‘ಆರ್‌ಪಿಎಫ್ ದಾಳಿ’ ಎಂದು ಬಿಂಬಿಸಿ ಜನರನ್ನು ರೊಚ್ಚಿಗೇಳಿಸುವ ಪ್ರಯತ್ನಗಳು ನಡೆದವು. ‘ಕಂಡಲ್ಲಿ ಟುಟ್ಸಿಗಳ ಕೊಲ್ಲಿ, ಮಕ್ಕಳನ್ನೂ ಬಿಡದೆ’ ಎಂಬ ಸಂದೇಶ ಜನಸಾಮಾನ್ಯರಿಗೂ ಹೋಯಿತು. ಆಗ ಶುರುವಾಗಿದ್ದು ಭೀಕರ ಮಾರಣಹೋಮ.

ಪ್ರಧಾನಿ ಮತ್ತವರ ಕುಟುಂಬದ ಹತ್ಯೆಯಾಯಿತು. ಉದಾರವಾದಿ ಹುಟು ಗಣ್ಯರನ್ನು, ಸೇನಾಧಿಕಾರಿಗಳನ್ನು ಕೊಲ್ಲಲಾಯಿತು. ಹುಟುಗಳು ಊರೂರು ಕೇರಿಗಳಲ್ಲಿ ತಮಗೆ ಗೊತ್ತಿರುವ ಟುಟ್ಸಿಗಳನ್ನು ಕೊಲ್ಲತೊಡಗಿದರು. ಅಕ್ಕಪಕ್ಕದವರಿಂದಲೇ ಕೊಲೆ, ಅತ್ಯಾಚಾರಗಳು ನಡೆದವು. ಶಾಲೆ, ಚರ್ಚಿನಲ್ಲಿ ಅಡಗಿರುವವರನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಟುಟ್ಸಿಗಳ ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸಿ ಮಾರಣಹೋಮ ನಡೆಸಲಾಯಿತು. ಟುಟ್ಸಿಗಳ ಆಸ್ತಿ ಲೂಟಿಯಾಯಿತು.

ನರಕ ಕಂಡ ಹೆಣ್ಣುಮಕ್ಕಳು
ಟುಟ್ಸಿಗಳ ದುರಂತದಲ್ಲಿ ಹೆಚ್ಚು ಘಾಸಿಗೊಂಡದ್ದು ಮಹಿಳೆಯರು. ಬದುಕುಳಿದವರಲ್ಲಿ ಅತ್ಯಾಚಾರಕ್ಕೊಳಗಾಗದ ಟುಟ್ಸಿ ಹೆಣ್ಣೇ ಇಲ್ಲ ಎನ್ನುವಂತಾಯಿತು. ಲಕ್ಷಾಂತರ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ದಾಳಿಗೊಳಗಾದ ಮಾರಿಯಾ ಲೂಸಿ ಎಂಬಾಕೆ ಹೇಳಿರುವಂತೆ– ‘ಪ್ರತಿ ದಿನ ಕನಿಷ್ಠ ಐದು ಸಲ ಅತ್ಯಾಚಾರ ಮಾಡುತ್ತಿದ್ದರು. ಸ್ಥಳೀಯರು, ಹುಟು ಸೇನಾಧಿಕಾರಿಗಳು ಸೇರಿದಂತೆ ಯಾರು ಯಾರೋ ಅತ್ಯಾಚಾರ ಮಾಡುತ್ತಿದ್ದರೆ ಉಳಿದವರು ಸುತ್ತ ನಿಂತು ನೋಡುತ್ತಿದ್ದರು. ನನ್ನ ಕಾಯಲು ಒಬ್ಬ ಹುಟು ಹೆಂಗಸಿದ್ದಳು. ಅತ್ಯಾಚಾರ ನಡೆಯದ ಸಮಯದಲ್ಲಿ ಹೊಲದ ಕೆಲಸ ಮಾಡುವಂತೆ ಅವಳು ಆಜ್ಞಾಪಿಸುತ್ತಿದ್ದಳು’.

ಆಸ್ಪತ್ರೆಯಿಂದ ಎಚ್‌ಐವಿ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ ‘ರೇಪ್ ಸ್ಕ್ವಾಡ್’ಗಳನ್ನು ರಚಿಸಲಾಯ್ತು. ಅವರು ಟುಟ್ಸಿ ಹೆಣ್ಣುಗಳನ್ನು ಹುಡುಕಿ ಅತ್ಯಾಚಾರ ಮಾಡಿದರು; ಎಚ್‌ಐವಿ ರೋಗವನ್ನೂ, ಬೇಡದ ಗರ್ಭವನ್ನೂ ದಯಪಾಲಿಸಿದರು. ಟುಟ್ಸಿ ಹೆಣ್ಣುಗಳ ಪ್ರಜನನ ಶಕ್ತಿ ನಾಶ ಮಾಡಲಾಯಿತು. ಅತ್ಯಾಚಾರದ ಬಳಿಕ ಬಿಸಿನೀರು, ಆಸಿಡ್, ಕೋಲು, ಚೂರಿ ಎಲ್ಲದರಿಂದ ಜನನಾಂಗಗಳ ನಾಶ ಮಾಡಲಾಯಿತು. ಗಂಡಸರ ಜನನಾಂಗ ಕತ್ತರಿಸಿ ಮೆರವಣಿಗೆ ಮಾಡಲಾಯಿತು.

ಅಮೆರಿಕದ ಪರೋಕ್ಷ ಬೆಂಬಲದಿಂದ ರುವಾಂಡಾದ ಒಂದೊಂದೇ ಭಾಗಗಳನ್ನು ಹತ್ಯಾಕೋರರು ವಶಪಡಿಸಿಕೊಂಡರು. ಜುಲೈ 18ರ ವೇಳೆಗೆ ಇಡೀ ರುವಾಂಡಾ ಅವರ ಹಿಡಿತಕ್ಕೆ ಸಿಕ್ಕಿತು. ಈ ನರಮೇಧದಲ್ಲಿ ಒಂದು ಲಕ್ಷ ಹುಟುಗಳೂ ಹತರಾದರು. ಕೊನೆಗೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ ಟುಟ್ಸಿ ಪ್ರಾಬಲ್ಯದ ಮಧ್ಯಂತರ ಸರ್ಕಾರ ರುವಾಂಡಾದಲ್ಲಿ ಅಸ್ತಿತ್ವಕ್ಕೆ ಬಂತು.

ಕೆಲವರಿಗೆ ಶಿಕ್ಷೆ, ಹಲವರಿಗೆ ಕ್ಷಮಾದಾನ
ಇಡೀ ಸಮುದಾಯವೇ ಅಪರಾಧಿ ಸ್ಥಾನದಲ್ಲಿರುವಾಗ; ಸಂತ್ರಸ್ತರ ಕೈಗೆ ಅಧಿಕಾರ ಬಂದಾಗ ಶಾಂತಿ ಕಾಪಾಡುವುದು, ಸಮಾಜ ಚೇತರಿಸಿಕೊಳ್ಳುವುದು ಸುಲಭವಲ್ಲ. ರುವಾಂಡಾದಲ್ಲಿ ಕೇವಲ ಮೂರು ಲಕ್ಷ ಟುಟ್ಸಿಗಳಷ್ಟೇ ಉಳಿದಿದ್ದರು. ಅವರದು ಆತ್ಮನಾಶವಾದ ಸ್ಥಿತಿ. ದೇಶಬಿಟ್ಟು ನೆರೆಯ ಜೈರೆಗೆ ಹೋದ 20 ಲಕ್ಷ ಹುಟು ನಿರಾಶ್ರಿತರು; ಜೈಲಿನಲ್ಲಿದ್ದ ಒಂದು ಲಕ್ಷ ಬಂದಿಗಳು; ಸಶಸ್ತ್ರ ಉಗ್ರಗಾಮಿಗಳಿಗೆ ಬದಲಿ ಉದ್ಯೋಗ; ಎಚ್‌ಐವಿ ಸೋಂಕಿತರು; 40 ಸಾವಿರ ಅನಾಥ ಮಕ್ಕಳು; ಅತ್ಯಾಚಾರದಿಂದ ಗರ್ಭಿಣಿಯರಾಗಿ ಬೇಡದ ಮಕ್ಕಳ ಹೆತ್ತವರು; ಕಡಿಮೆಯಾದ ಮಾನವ ಸಂಪನ್ಮೂಲ; ಆಸ್ತಿಹಾನಿ– ಇಂಥ ಹಲವು ಸವಾಲುಗಳು ಹೊಸ ಪ್ರಭುತ್ವದ ಎದುರಿದ್ದವು.

ಜನಾಂಗೀಯ ಮತ್ತು ವಸಾಹತುಶಾಹಿ ಆಡಳಿತದಿಂದ ಪ್ರಜಾಸತ್ತಾತ್ಮಕ ಆಡಳಿತ ಪಡೆವ ಸಂಕ್ರಮಣ ಕಾಲವನ್ನು ರುವಾಂಡಾ ಪ್ರವೇಶಿಸಿತು. ಕುಸಿದ ನ್ಯಾಯವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವುದು; ಜನರಿಗೆ ತಿಳಿಯದ ಅಥವಾ ತಿಳಿಯದಂತೆ ನೋಡಿಕೊಳ್ಳಲಾದ ಸತ್ಯಗಳನ್ನು ತಿಳಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಿ ಸ್ಥೈರ್ಯ ಮೂಡಿಸುವುದೂ ಮುಖ್ಯವಾಯಿತು. ಇದೆಲ್ಲಕ್ಕಾಗಿ ‘ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ’ ರಚಿಸಲು ಸರ್ಕಾರವು ವಿಶ್ವಸಂಸ್ಥೆಯ ನೆರವು ಕೋರಿತು; ಈ ನ್ಯಾಯಮಂಡಳಿ 1996ರಲ್ಲಿ ಅಸ್ತಿತ್ವಕ್ಕೆ ಬಂತು.

ಪರಸ್ಪರರ ಆಕ್ರಮಣಕ್ಕೆ ಹೆದರಿ ನಿರಂತರ ನಿರಾಶ್ರಿತರಾಗಿ ಅಲೆಯುತ್ತಿರುವ ಎರಡೂ ಜನಾಂಗಗಳು ಹೊಸ ರಾಜಕೀಯ ಬದಲಾವಣೆಯನ್ನು ಹೇಗೆ ಸ್ವೀಕರಿಸಬಹುದು? ರಾಜಕೀಯ ಬದಲಾವಣೆಯ ಹಾದಿಯಲ್ಲಿ ಸಂಭವಿಸಿದ ದೌರ್ಜನ್ಯಗಳಿಗೆ ನ್ಯಾಯ ಪಡೆಯುವುದು ಹೇಗೆ? ಈ ಪ್ರಶ್ನೆಗಳನ್ನಿಟ್ಟುಕೊಂಡೇ ಡೆಸ್ಮಂಡ್ ಟುಟು ಸೇರಿದಂತೆ ಹಲವರು ‘ಸತ್ಯ ಮತ್ತು ಸಂಧಾನ ಸಮಿತಿ’ ರಚಿಸಿ ಜನಾಂಗೀಯ ಹತ್ಯೆಯ ವಿಚಾರಣೆಯನ್ನು ಕಾನೂನು ಪರಿಭಾಷೆಯಾಚೆ ನಡೆಸುವಂತೆ ಒತ್ತಾಯಿಸಿದರು.

ಏಕೆಂದರೆ ‘ಸೂಕ್ತ ನ್ಯಾಯ’ ಸಿಗುವುದು ಬೂದಿಯೊಂದಿಗೆ; ಸಂಧಾನ ಕ್ರಿಯೆಯಷ್ಟೇ ವ್ಯಕ್ತಿಗಳನ್ನು ಮತ್ತು ದೇಶಗಳನ್ನು ಗಾಯದಿಂದ ಮುಕ್ತಗೊಳಿಸಿ ಭವಿಷ್ಯ ರೂಪಿಸಬಲ್ಲದು ಎನ್ನುವುದು ಅವರ ನಂಬಿಕೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರುವಾಂಡಾ ಸರ್ಕಾರ ‘ಗಕಾಕಾ’ ಸಾಂಪ್ರದಾಯಿಕ ನ್ಯಾಯವ್ಯವಸ್ಥೆಯನ್ನು ಜಾರಿಗೆ ತಂದಿತು. ಕೌಟುಂಬಿಕ ಮತ್ತು ಸಣ್ಣಪುಟ್ಟ ಜಗಳ ಪರಿಹಾರಕ್ಕಾಗಿ ಆ ವ್ಯವಸ್ಥೆ ಮೊದಲಿನಿಂದ ಜಾರಿಯಲ್ಲಿತ್ತು. 2002ರಲ್ಲಿ ಗಕಾಕಾ ನ್ಯಾಯಾಲಯ ಶುರುವಾಯಿತು. ನಂತರದಲ್ಲಿ ಒಟ್ಟು 11 ಸಾವಿರ ಗಕಾಕಾ ಕೋರ್ಟುಗಳು ಅಸ್ತಿತ್ವಕ್ಕೆ ಬಂದವು.

ಯಾರು ಕೊಂದರೋ, ಸುಟ್ಟರೋ, ಅತ್ಯಾಚಾರ ಎಸಗಿದರೋ, ಲೂಟಿ ಹೊಡೆದರೋ ಅವರು ಸಂತ್ರಸ್ತರನ್ನು ಭೇಟಿಯಾಗಿ ಕ್ಷಮೆ ಯಾಚಿಸುವುದು; ತಪ್ಪೊಪ್ಪಿಕೊಂಡು ಪಶ್ಚಾತ್ತಾಪದ ಮಾತುಗಳನ್ನಾಡುವುದು ಹಾಗೂ ಸಂತ್ರಸ್ತರಿಗೆ ಅವರ ಬದುಕು ಕಟ್ಟಿಕೊಳ್ಳಲು ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡುವುದು – ಇವು ಗಕಾಕಾ ನ್ಯಾಯವ್ಯವಸ್ಥೆಯ ಸ್ತಂಭಗಳು. ಇಂಥ ನ್ಯಾಯವ್ಯವಸ್ಥೆ ಶತ್ರುವಿನ ಜೊತೆಯೂ ಬದುಕಲು ಅವಕಾಶ ಕೊಡುವ ಮಾರ್ಗವಾಗಿ, ರುವಾಂಡಾಕ್ಕೆ ಅನಿವಾರ್ಯ ಉಳಿವಿನ ಮಾರ್ಗವೂ ಆಯಿತು. ಅದು ಸತ್ಯ ಮತ್ತು ಸಂಧಾನದ ಜೊತೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನ್ಯಾಯ ವ್ಯವಸ್ಥೆಯೂ ಆಗಿರುವುದರಿಂದ ಹಲವರ ಮೆಚ್ಚುಗೆ ಪಡೆಯಿತು. ಗಕಾಕಾ ನ್ಯಾಯಾಲಯದೆದುರು ತಪ್ಪೊಪ್ಪಿಕೊಂಡ 60,238 ಜನರಿಗೆ ಶಿಕ್ಷೆಯನ್ನು ಅರ್ಧಕ್ಕೆ ಕಡಿತಗೊಳಿಸಲಾಯಿತು. ಆದರೆ ಪಕ್ಷಪಾತ ಮತ್ತಿತರ ಲೋಪಗಳ ಬಗೆಗೆ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ 2012ರಲ್ಲಿ ಗಕಾಕಾ ಕೋರ್ಟ್‌ಗಳನ್ನು ಸ್ಥಗಿತಗೊಳಿಸಲಾಯಿತು.

ಮರು ವಸಂತ
ಕಾಳ್ಗಿಚ್ಚು ಉರಿದ ನೆಲದಲ್ಲೂ ಮರು ವಸಂತಕ್ಕೆ ಭೂಮಿ ಸಜ್ಜಾಗುತ್ತದೆ. ನೆಲದಾಳದ ಬೀಜ ಮತ್ತೆ ಮೊಳೆಯುತ್ತದೆ. ಆದರೆ ಕಾಳ್ಗಿಚ್ಚು ಹೊತ್ತದಂತೆ ತಡೆಯುವುದೇ ಮಾನವತ್ವದ ದೊಡ್ಡ ಸವಾಲಾಗಿದೆ. ಈಗಿನ ರುವಾಂಡಾ ಸಂವಿಧಾನ ಕುಲ, ಜನಾಂಗ, ಧರ್ಮದ ಆಧಾರದ ಮೇಲಿನ ದೌರ್ಜನ್ಯವನ್ನು ನಿಷೇಧಿಸಿದೆ. 2003ರಲ್ಲಿ ಮೊದಲ ಚುನಾವಣೆ ನಡೆದು ‘ಆರ್‌ಪಿಎಫ್’ ಕಮ್ಯಾಂಡರ್ ಆಗಿದ್ದ ಪಾಲ್ ಕಗಾಮೆ ಅದರ ಅಧ್ಯಕ್ಷರಾಗಿದ್ದಾರೆ.

ಭೀಕರ ಹತ್ಯಾಕಾಂಡವನ್ನು ದಾಟಿ ಬದುಕುಳಿದ ಹೆಣ್ಣುಮಕ್ಕಳು ಹಿಂಸೆಯ ಭಯಾನಕ ಕಡಲಿನೆದುರು ಈಜಿ ನಿಂತಿದ್ದಾರೆ. ಹಿಂಸೆ ಮತ್ತು ದ್ವೇಷದ ಅಲೆಯಲ್ಲಿ ದೇಶ ಕೊಚ್ಚಿಹೋಗದಂತೆ ತಡೆದಿರುವಲ್ಲಿ ಈ ಹೆಣ್ಣುಮಕ್ಕಳ ಪಾತ್ರ ವಿಶೇಷವಾದುದು. ಭೀಕರ ನೆನಪುಗಳ ನಡುವೆಯೂ ಇವರು ಪ್ರಜಾಸತ್ತಾತ್ಮಕ ಕ್ರಿಯೆಯಲ್ಲಿ ಭಾಗಿಯಾಗಿ ಈಗಿನ ಸಂಸತ್ತಿನಲ್ಲಿ ಶೇ 55 ಪ್ರಾತಿನಿಧ್ಯ ಪಡೆದಿದ್ದಾರೆ. ಐದು ಜನ ಯುನೆಸ್ಕೋ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.

ಆಫ್ರಿಕಾದ ನೆಲಮೂಲ ತಾತ್ವಿಕತೆ ‘ಉಬುಂಟಾ’. ಅದು ಪ್ರತಿಪಾದಿಸುವ ‘ನಾವು ಇರುವುದು ನೀನು ಇರುವುದರಿಂದ. ನೀನು ಇರುವುದರಿಂದಲೇ ನಾನು ಆಗಿರುವುದು’ ಎಂಬ ಸಹಬಾಳ್ವೆಯ ಆದರ್ಶವೇ ಮಾನವತ್ವವನ್ನು ಪೊರೆಯಬಲ್ಲದು. ಆಗ ಮಾತ್ರ ‘ಪಶ್ಚಾತ್ತಾಪ ಮತ್ತು ಕ್ಷಮೆ’ ಹೇರಿಕೆಯಾಗದೇ ಜನರ ಆಯ್ಕೆಯಾಗುತ್ತದೆ. ದೌರ್ಜನ್ಯ ಪುನರಾವರ್ತನೆ ಆಗುವುದು ತಪ್ಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.