ಒಂದು ದೇಶದ ಸಂಪನ್ನತೆಯ ಸೂಚಕಗಳು ಆ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳಷ್ಟೆ ಅಲ್ಲ; ಆ ದೇಶದಲ್ಲಿ ವಾಸಮಾಡುವ ಜವಾಬ್ದಾರಿಯುತ ಶ್ರೀಸಾಮಾನ್ಯರ ಪ್ರಜ್ಞಾವಂತ ನಡವಳಿಕೆಯೂ ಆಗಿರುತ್ತದೆ. ಆಡಳಿತ ವ್ಯವಸ್ಥೆಯ ಪ್ರತಿ ಚಲನವಲನಗಳನ್ನು, ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರಜ್ಞಾವಂತಿಕೆಯ ‘ಚಕ್ಷು’ ಶ್ರೀಸಾಮಾನ್ಯರಿಗೆ ಇರಬೇಕು. ಅಂಥದ್ದೊಂದು ವಿಶೇಷ ಪಾತ್ರ ‘ಕಾಮನ್ ಮ್ಯಾನ್’ ಅನ್ನು ವ್ಯಂಗ್ಯಚಿತ್ರ ಲೋಕಕ್ಕೆ ಕೊಟ್ಟ ಶ್ರೇಯ ಆರ್.ಕೆ.ಲಕ್ಷ್ಮಣ್ ಅವರದ್ದು.

ತಮ್ಮ ಮೊನಚಾದ ರೇಖೆಗಳ ಮೂಲಕ ಗಂಭೀರ ವಿಡಂಬನೆಗೆ ಹೆಸರಾದ ಆರ್.ಕೆ.ಲಕ್ಷ್ಮಣ್ ಅವರು ರಚಿಸಿದ 78 ವ್ಯಂಗ್ಯಚಿತ್ರಗಳನ್ನು ಬೆಂಗಳೂರಿನ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೆಲವನ್ನು ಹೊರತುಪಡಿಸಿದರೆ, ಇಲ್ಲಿ ಬಹುತೇಕ ರಾಜಕೀಯ ವಿಡಂಬನೆಯನ್ನು ಬಿಂಬಿಸುವ ವ್ಯಂಗ್ಯಚಿತ್ರಗಳೇ ಇವೆ.

ಅರಳಿದ ಗುಲಾಬಿಯನ್ನು ನೋಡುತ್ತ ಕುಳಿತ ನೆಹರೂ, ಸಂಗೀತದ ಆಲಾಪನೆಯಲ್ಲಿ ತೊಡಗಿಕೊಂಡಿರುವ ಎಂ.ಎಸ್.ಸುಬ್ಬುಲಕ್ಷ್ಮಿ, ಎಲ್.ಕೆ.ಅಡ್ವಾಣಿ, ಪೆರಿಯಾರ್, ಜಯಪ್ರಕಾಶ್ ನಾರಾಯಣ್, ಜಾಕೀರ್ ಹುಸೇನ್, ದೇವರಾಜ ಅರಸು... ಹೀಗೆ ಹಲವು ಖ್ಯಾತನಾಮರನ್ನು ತಮ್ಮ ತೀಕ್ಷ್ಣ ರೇಖೆಗಳ ಮೂಲಕ ವಿಡಂಬನೆ ಮಾಡಿದ್ದಾರೆ. ಈ ವ್ಯಂಗ್ಯಚಿತ್ರಗಳು ನೋಡುಗರ ಮುಖದಲ್ಲಿ ಒಂದು ನಗುವಿನ ಗೆರೆಯನ್ನು ಮೂಡಿಸುವುದಷ್ಟೆ ಅಲ್ಲದೇ, ಸಂದರ್ಭವನ್ನು ಆಳವಾಗಿ ಅರಿತುಕೊಂಡು ಪ್ರಶ್ನೆ ಮಾಡುವ ಛಾತಿಯನ್ನು ಬೆಳೆಸಿದರೆ ಆಶ್ಚರ್ಯವಿಲ್ಲ. ಇಲ್ಲಿ ರೇಖೆಗಳು ಬರೀ ರೇಖೆಗಳಲ್ಲ. ಹರಿತ ಲೇಖನಿ ಒಸರುವ ಪದಗಳಿಂದಲೂ ಕಟ್ಟಿಕೊಡಲು ಸಾಧ್ಯವೇ ಆಗದ, ಹಲವು ಹೊಳಹುಗಳನ್ನು ಬಹಳ ನಿರ್ಭಿಡೆಯಿಂದ ಚಿತ್ರಿಸಿವೆ.

ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ರೂಪುಗೊಂಡ ಮಹೋನ್ನತ ವ್ಯಕ್ತಿಗಳನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಡಂಬನೆ ಮಾಡಿದ್ದಾರೆ. ಸಂದರ್ಭದ ಸಂಕ್ಷಿಪ್ತ ವಿವರ ತಿಳಿದಿದ್ದರೆ ಈ ವ್ಯಂಗ್ಯಚಿತ್ರಗಳ ಮಹತ್ವವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬಹುದು. ಇಲ್ಲಿರುವ ವ್ಯಂಗ್ಯಚಿತ್ರಗಳಲ್ಲಿ ಯಾರ ಘನತೆಗೂ ಒಂದಿಷ್ಟು ಮುಕ್ಕಾಗದಂತೆ, ಆದರೆ ದಾಟಿಸಬೇಕಾದ ಸಂದೇಶವನ್ನು ಮಹತ್ವದ ರೀತಿಯಲ್ಲಿ ದಾಟಿಸುವ ಲಕ್ಷ್ಮಣ್ ಅವರ ವಿಡಂಬನಾ ಶೈಲಿ ಎಂಥವರನ್ನು ಬೆರಗಾಗಿಸುತ್ತದೆ.

ವಿವಿಧ ಪತ್ರಿಕೆಗಳಲ್ಲಿ ಜನಪ್ರಿಯಗೊಂಡಿದ್ದ ಅವರ ವ್ಯಂಗ್ಯಚಿತ್ರಗಳನ್ನು ನೆಚ್ಚಿಕೊಳ್ಳದವರೇ ಇಲ್ಲ. ಆರ್.ಕೆ.ಲಕ್ಷ್ಮಣ್ ಅವರ ‘ಕಾಮನ್ ಮ್ಯಾನ್’ ಎಂಬುದು ಅದೆಂಥ ಚಂದದ ರೂಪಕ! ಎಲ್ಲ ಕಾಲಘಟ್ಟಗಳಲ್ಲಿಯೂ ಈ ‘ಕಾಮನ್ ಮ್ಯಾನ್’ ಹೊಂದಿರುವ ತೀಕ್ಷ್ಣ ಒಳನೋಟಗಳನ್ನು, ಅಂದಾಜಿಗೆ ಸಿಗದ ಅವನ ಪ್ರತಿಭೆಯನ್ನು ಯಾವುದೇ ಕಾರಣಕ್ಕೂ ಆಳುವ ವರ್ಗ ನಿರ್ಲಕ್ಷ್ಯ ಮಾಡುವಂತಿಲ್ಲ. ಕಾಮನ್ ಮ್ಯಾನ್ ಎಲ್ಲವನ್ನು ತಣ್ಣಗೆ ಗಮನಿಸುತ್ತಿರುತ್ತಾನೆ. ಸಮಯ ಬಂದಾಗ ತನ್ನ ಬತ್ತಳಿಕೆಯಲ್ಲಿರುವ ಬಾಣವನ್ನು ಹೊರಗಿಡುತ್ತಾನೆ ಎಂಬುದರ ಸ್ಪಷ್ಟ ಸಂದೇಶದಂತಿದೆ ಈ ಪಾತ್ರ. ಅಂಥದ್ದೊಂದು ಸಣ್ಣ ಅಳುಕನ್ನು ಆಳುವವರ ಎದೆಯಲ್ಲಿ ಹುಟ್ಟಿಸಿದ ಈ ಪಾತ್ರವು ತನ್ನ ಅಗ್ಗಳಿಕೆಯನ್ನು ಕಾಲಾತೀತವಾಗಿ ಹಿಡಿದಿಡುತ್ತದೆ. ಹಾಗೆಯೇ ಶ್ರೀಸಾಮಾನ್ಯರ ಶಕ್ತಿ ಎಂಥದ್ದು ಎಂಬುದರ ಬಗ್ಗೆ ಸ್ವತಃ ಶ್ರೀಸಾಮಾನ್ಯರಿಗೆ ಅರಿವಿರಬೇಕು. ಸಾರ್ವಜನಿಕರ ನೆನಪಿನಕೋಶ ಕಿರಿದಿರಬಹುದು. ಆದರೆ, ಶ್ರೀಸಾಮಾನ್ಯರ ಪ್ರಜ್ಞಾವಂತಿಕೆಯ ಹರಹು ದೊಡ್ಡದಿರಬೇಕಲ್ಲವೇ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಶ್ರೀಸಾಮಾನ್ಯನೂ ಕೇಳಿಕೊಳ್ಳುವಂತೆ ಮಾಡುತ್ತದೆ.

ಸದ್ಯಕ್ಕೆ ಎಲ್ಲಾ ಕ್ಷೇತ್ರಗಳೂ ವ್ಯಕ್ತಿಪೂಜೆಯ ಸೋಂಕನ್ನು ಅಂಟಿಸಿಕೊಂಡಿವೆ. ವ್ಯಕ್ತಿಯ ತಪ್ಪು–ಒಪ್ಪುಗಳನ್ನೆಲ್ಲ ವಿಡಂಬನೆ ಮಾಡಿ, ತಿದ್ದುವ ಮೊನಚಿಗೆ ಆರಾಧನಾ ಮನೋಭಾವದ ಮಸುಕು ಅಡ್ಡಬರುತ್ತದೆ. ರಾಜಕೀಯ ಹಾಗೂ ಸೈದ್ಧಾಂತಿಕ ಚಿಂತನೆಗಳೆಲ್ಲವೂ ಧ್ರುವೀಕರಣಗೊಂಡಿರುವ ಈ ಹೊತ್ತಿನಲ್ಲಿ ವಿವಿಧ ಕ್ಷೇತ್ರಗಳ ಪ್ರಸಿದ್ಧರನ್ನು ಇಷ್ಟು ಮೊನಚು ಗೆರೆಗಳಿಂದ ತಿವಿಯುವ ಅವಕಾಶವನ್ನೇ ಕಳೆದುಕೊಂಡಿದ್ದೇವಲ್ಲ ಎಂಬ ಖೇದ ಈ ವ್ಯಂಗ್ಯಚಿತ್ರಗಳನ್ನು ನೋಡಿದಾಗ ಹುಟ್ಟದೆ ಇರದು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಮತ್ತೊಮ್ಮೆ ನಮ್ಮೊಳಗೆ ಇಣುಕಿ ನೋಡಲು ‘ಕಾಮನ್ ಮ್ಯಾನ್’ ಪಾತ್ರ ಕಿಟಕಿಯೇ ಸರಿ.

ಈ ವ್ಯಂಗ್ಯಚಿತ್ರಗಳ ಪ್ರದರ್ಶನ ತಾಂತ್ರಿಕ ಪಾಂಡಿತ್ಯದ ಪ್ರದರ್ಶನದಂತಿಲ್ಲ. ತೀಕ್ಷ್ಣತೆ ಹಾಗೂ ಸೂಕ್ಷ್ಮ ವ್ಯಂಗ್ಯದ ಮೂಲಕ ದೇಶ ಸಾಗಿ ಬಂದ ಹಲವು ಹಂತಗಳನ್ನು ಚಿತ್ರಿಸಲಾಗಿದೆ. ಇತಿಹಾಸ, ಕಲಾ ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ ರಾಜಕೀಯ ವಿಡಂಬನಾಪ್ರಿಯರನ್ನು ಹಿಡಿದಿಡುತ್ತವೆ ಲಕ್ಷ್ಮಣ್ ಅವರ ರೇಖೆಗಳು. ಈ ರೇಖೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ದೇಶ ಹಾದು ಬಂದ ಹಲವು ಸಂದಿಗ್ಧ ಪರಿಸ್ಥಿತಿಗಳನ್ನು ಸುಲಭವಾಗಿ ಅರಿಯಬಹುದು. ಆದರೆ ಪ್ರತಿ ವ್ಯಂಗ್ಯಚಿತ್ರದ ಕೆಳಗೆ ರಚನೆಯಾದ ವರ್ಷ ಹಾಗೂ ಸಂದರ್ಭ ಸಮೇತ ಶೀರ್ಷಿಕೆಯೊಂದನ್ನು ನೀಡಲು ಪ್ರದರ್ಶನದ ಆಯೋಜಕರು ಮನಸ್ಸು ಮಾಡಿದ್ದರೆ, ಇನ್ನಷ್ಟು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿತ್ತು.

ಇಷ್ಟೆಲ್ಲ ಗಂಭೀರ ವಿಡಂಬನೆಯ ರೇಖೆಗಳನ್ನು ಕೊಟ್ಟ ಆರ್.ಕೆ.ಲಕ್ಷ್ಮಣ್ ತಾವು ರಚಿಸಿದ ‘ಕಾಮನ್ ಮ್ಯಾನ್’ ಪಾತ್ರದೊಂದಿಗೆ ಸ್ವತಃ ರೇಖೆಯಾಗಿದ್ದಾರೆ. ಲಕ್ಷ್ಮಣ್ ಅವರ ಹೆಗಲ ಮೇಲೆ ಕೈಹಾಕಿರುವ ‘ಕಾಮನ್ ಮ್ಯಾನ್’ ರೇಖೆಯ ಮುಖಭಾವದಲ್ಲಿ ‘ಮುಂದೇನು?’ ಎಂದು ಕೇಳುವಂತೆಯೂ, ಲಕ್ಷ್ಮಣ್ ಅವರ ರೇಖೆಯ ಮುಖಭಾವದಲ್ಲಿ ‘ತಿಳಿಯಿತೇ’ ಎನ್ನುವ ತುಂಟತನವು ಹಾದು ಹೋದಂತೆ ಭಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.