ಮರಿಬಾತುಕೋಳಿಯೊಂದನ್ನು ತೆಗೆದುಕೊಳ್ಳಿ. ಅದನ್ನು ಗಾಜಿನ ಬಾಟಲಿನಲ್ಲಿಡಿ. ದಿನವೂ ಆಹಾರ ಕೊಟ್ಟು ಬಾತನ್ನು ಪೋಷಿಸುತ್ತ ಬನ್ನಿ. ಇನ್ನು ಅದು ಬಾಟಲಿನಲ್ಲಿಯೇ ಇರಲು ಆಗದು ಎನ್ನುವ ತನಕವೂ ಬೆಳೆಸಿ. ಈಗ ದೊಡ್ಡದಾಗಿ ಬೆಳೆದಿರುವ ಅದನ್ನು ಗಾಜಿನ ಬಾಟಲಿನಿಂದ ಹೊರಗೆ ತೆಗೆಯಬೇಕು? ಹೇಗೆ ತೆಗೆಯುತ್ತೀರಿ? ಹಾ! ಒಂದು ಕ್ಷಣ ತಡೆಯಿರಿ!! ಇಲ್ಲೊಂದು ಕಂಡೀಷನ್ – ನಿರ್ಬಂಧ – ಇದೆ. ನೀವು ಬಾತುವನ್ನು ಹೊರಗೆ ತೆಗೆಯುವಾಗ, ಬಾತುವಿಗಾಗಲೀ ಗಾಜಿನ ಬಾಟಲಿಗಾಗಲೀ ಏನೂ ಆಗಬಾರದು; ಎಂದರೆ ಬಾತು ಸಾಯಬಾರದು, ಬಾಟಲಿ ಒಡೆಯಬಾರದು.

ಈಗ ಹೇಳಿ, ಬಾತುವನ್ನು ಹೊರಗೆ ಹೇಗೆ ತೆಗೆಯುತ್ತೀರಿ?

ಇದು ನಾನು ಸೃಷ್ಟಿಸಿರುವ ಸಮಸ್ಯೆ ಅಲ್ಲ. ಬಹಳ ಹಿಂದಿನ ಸಮಸ್ಯೆ. ಝೆನ್ ದಾರ್ಶನಿಕ ಪದ್ಧತಿಯಲ್ಲಿ ಇಂಥ ಸಮಸ್ಯೆಗಳನ್ನು ಅಲ್ಲಿ ‘ಕೋಅನ್’ ಎನ್ನುತ್ತಾರೆ. ಒಗಟು ಎಂದು ಸರಳವಾಗಿ ಎನ್ನಬಹುದು.

ಅದು ಸರಿ, ಈಗ ಬಾತು–ಬಾಟಲಿ ಸಮಸ್ಯೆಗೆ ಪರಿಹಾರ ಏನು?

ಈ ಕೋಅನ್ ಬಗ್ಗೆ ಹಲವರು ಚಿಂತಕರು, ತತ್ತ್ವಜ್ಞಾನಿಗಳು ಮಾತನಾಡಿದ್ದಾರೆ. ಓಶೋ ಕೂಡ ಈ ಒಗಟಿನ ಸ್ವಾರಸ್ಯವನ್ನು ವಿವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಝೆನ್ ಕಥೆಯೊಂದನ್ನು ಹೇಳಿದ್ದಾರೆ.

ರೈಕೋ ಎಂಬ ಶಿಷ್ಯನೊಬ್ಬ ನನ್‌ಸೆನ್ ಎಂಬ ಗುರುವಿನ ಬಳಿ ತೆರಳುತ್ತಾನೆ; ಬಾತು–ಬಾಟಲಿಯ ಕೋಅನ್‌ನ ಪರಿಹಾರ ಏನು ಎಂದು ಕೇಳುತ್ತಾನೆ.

‘ಗುರುಗಳೇ! ಒಬ್ಬ ವ್ಯಕ್ತಿ ಬಾತುಕೋಳಿಯನ್ನು ಒಂದು ಗಾಜಿನ ಬುರುಡೆಯಲ್ಲಿಟ್ಟು ಅದು ದೊಡ್ಡದಾಗುವವರೆಗೂ ಸಾಕುತ್ತಾನೆ. ಆಮೇಲೆ ಅದನ್ನು ಗಾಜಿನ ಬುರುಡೆಯಿಂದ ಹೊರತೆಗೆಯಬೇಕು; ಆದರೆ ಗಾಜು ಒಡೆಯಬಾರದು, ಬಾತು ಸಾಯಬಾರದು. ಹಾಗಾದರೆ ಅವನು ಅದನ್ನು ಹೇಗೆ ಹೊರಗೆ ತೆಗೆಯುತ್ತಾನೆ?’

ಕೂಡಲೇ ಗುರುಗಳು ಕೈ ತಟ್ಟಿ ‘ರೈಕೋ!’ ಎಂದು ಅಬ್ಬರಿಸಿದರು.

‘ಗುರುಗಳೇ!’ ಎಂದು ಸಿದ್ಧನಾದ ಶಿಷ್ಯ.

‘ಬಾತು ಹೊರಗೆ ಬಂದಾಯ್ತು’ ಎಂದರು ಗುರುಗಳು!

ಮೇಲಣ ಕಥೆಯೂ ಪ್ರಸಿದ್ಧ ಝೆನ್‌ಕಥೆಯೇ. ಇದನ್ನು ಉಲ್ಲೇಖಿಸುತ್ತ ಓಶೋ ಮಾಡಿರುವ ಅರ್ಥವಿವರಣೆ ಸೊಗಸಾಗಿದೆ. ಅದರ ಸಾರಾಂಶ ಹೀಗಿದೆ:

ಇಲ್ಲಿ ಪ್ರಶ್ನೆ ಇರುವುದು ನಮ್ಮ ದೃಷ್ಟಿಕೋನದ ಬಗ್ಗೆ. ಇದು ನಮ್ಮ ಎಚ್ಚರದ ಬಗ್ಗೆ ಕೇಳುತ್ತಿರುವ ಪ್ರಶ್ನೆ. ಬಾತು ಬಾಟಲಿಯಲ್ಲಿರುವುದು ನಾವು ಕನಸಿನಲ್ಲಿರುವಾಗಲೇ ಹೊರತು ಎಚ್ಚರದಲ್ಲಿರುವಾಗ ಅಲ್ಲ. ಕನಸಿನಲ್ಲಿರುವಾಗ ಬಾತುವನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲ; ತೆಗೆಯಲು ಪ್ರಯತ್ನಿಸಿದರೂ ಗಾಜು ಒಡೆದುಹೋಗುತ್ತದೆ. ಕೋಅನ್ ಸಾಮಾನ್ಯವಾದ ಸಮಸ್ಯೆ ಅಲ್ಲ. ಸಮಸ್ಯೆಗೆ ಪರಿಹಾರ ಇರುತ್ತದೆ; ಆದರೆ ಕೋಅನ್ ಅಂಥ ಉತ್ತರವನ್ನು ಹುಡುಕಬಹುದಾದ ಸಮಸ್ಯೆ ಅಲ್ಲ; ಅದರಲ್ಲಿ ನಾವು ಕರಗಿಹೋಗಬೇಕು. ಎಂದರೆ ಕನಸಿನಿಂದ ಎಚ್ಚರದ ಸ್ಥಿತಿಗೆ ಅರಿವನ್ನು ತಂದುಕೊಳ್ಳುವುದು.

ಇದರ ತಾತ್ಪರ್ಯ ಎಂದರೆ: ಬಾತುವನ್ನು ಗಾಜಿನ ಬಾಟಲಿನಲ್ಲಿ ಇಟ್ಟದ್ದು, ಬೆಳಸಿದ್ದು ನಮ್ಮ ಬುದ್ಧಿ, ತರ್ಕ. ನಮ್ಮ ಮೆದುಳು ಸೃಷ್ಟಿಸಿದ ಅವಾಸ್ತವ ಸಂದರ್ಭದ ಸಮಸ್ಯೆಯನ್ನು ಬುದ್ಧಿಯ ಮೂಲಕವೇ ಪರಿಹರಿಸಲು ಒದ್ದಾಡುತ್ತೇವೆ. ಇದೊಂದು ಅಸಾಧ್ಯವಾದ ಸಂದರ್ಭ ಎಂದು ಹೇಳುವ ಧೈರ್ಯವನ್ನೂ ಪ್ರಾಮಾಣಿಕತೆಯನ್ನೂ ಎಚ್ಚರವನ್ನೂ ಕಳೆದುಕೊಂಡುಬಿಟ್ಟಿರುತ್ತೇವೆ. ನಮ್ಮ ಜೀವನದಲ್ಲೂ ಹೀಗೆಯೇ ಏನೇನೋ ಸಂದರ್ಭಗಳನ್ನು ನಾವೇ ಮನಸ್ಸಿನಲ್ಲಿ ಸೃಷ್ಟಿಸಿಕೊಂಡು, ಅದರಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುತ್ತೇವೆ. ನಾವೇ ಸೃಷ್ಟಿಸಿಕೊಂಡ ಸಮಸ್ಯೆಗಳಿಂದ ಹೊರಬರಬೇಕಾದವರು ಯಾರು? ನಾವೇ ಹೌದಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.