ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆನಪೆಲ್ಲ ಬರೆದಿಲ್ಲ;ಎಷ್ಟೋ ನೆನಪೂ ಆಗಿಲ್ಲ!’

Last Updated 17 ಜನವರಿ 2019, 19:30 IST
ಅಕ್ಷರ ಗಾತ್ರ

ನಮ್ಮ ಕಾಲದಲ್ಲಿ ಹರಿಭಕ್ತಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದವರಲ್ಲಿ ವಿದ್ಯಾಭೂಷಣರು ಪ್ರಮುಖರು. ತೀರ್ಥಕ್ಷೇತ್ರವೊಂದರ ಪೀಠಾಧಿಪತಿಯಾಗಿದ್ದ ಅವರು, ನಂತರ ಸನ್ಯಾಸ ತೊರೆದು ಸಂಸಾರಿಯಾದವರು. ಈ ಎರಡೂ ಸ್ಥಿತ್ಯಂತರಗಳಲ್ಲಿಯೂ ಸಂಗೀತವನ್ನು ತಪಸ್ಸಿನಂತೆಯೇ ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದವರು. ಈ ಶನಿವಾರ (ಜ.19) ವಿದ್ಯಾಭೂಷಣರ ಜೀವನಕಥನ ‘ನೆನಪೇ ಸಂಗೀತ’ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಜತೆ ನಡೆಸಿದ ಮಾತುಕತೆ ಇಲ್ಲಿದೆ.

* ನಿಮ್ಮ ಜೀವನದ ಕಥನ ಪುಸ್ತಕವಾಗಿ, ಆತ್ಮಕಥೆಯ ರೂಪದಲ್ಲಿ ಬರಬೇಕು ಎಂದು ಯಾಕೆ ಅನಿಸಿತು?

ನನಗೇನೂ ನನ್ನ ಆತ್ಮಕಥೆ ಪ್ರಕಟವಾಗಬೇಕು ಎಂದು ಅನಿಸಿರಲಿಲ್ಲ. ನನ್ನನ್ನು ಜನರು ತುಂಬ ಪ್ರೀತಿ ಅಭಿಮಾನದಿಂದ ಕಂಡರು. ನನ್ನ ಬದುಕಿನಲ್ಲಿ ಆದ ಕೆಲವು ಪರಿವರ್ತನೆಗಳ ಹಿನ್ನೆಲೆಯ ಬಗ್ಗೆ ಕುತೂಹಲ ಇತ್ತು. ಅದರ ಕುರಿತು ತಿಳಿದುಕೊಳ್ಳಬೇಕು, ಪುಸ್ತಕ ರೂಪದಲ್ಲಿ ಬಂದರೆ ಒಳ್ಳೆಯದು ಎಂದು ಅಪೇಕ್ಷಿಸಿದರು. ಹೀಗಾಗಿ ನಾನು ಕೆಂಡಸಂಪಿಗೆ ಅಂತರ್ಜಾಲ ತಾಣದಲ್ಲಿ ಆತ್ಮಚರಿತ್ರೆಯ ಕೆಲವು ಭಾಗಗಳನ್ನು ದಾಖಲಿಸಿದೆ. ಅದು ಸುಮಾರು ಮುಕ್ಕಾಲು ಭಾಗ ಆದಮೇಲೆ ಯಾಕೋ ಏನೋ ನಿಂತುಹೋಯ್ತು. ಅದಾಗಿ ಎಷ್ಟೋ ವರ್ಷಗಳ ನಂತರ ಈಗ ಈ ರೀತಿ ಪುಸ್ತಕ ರೂಪದಲ್ಲಿ ಬರುತ್ತಿದೆ.

* ‘ನೆನಪೇ ಸಂಗೀತ’ ಎಂಬ ಶೀರ್ಷಿಕೆ ಇಡಲು ಕಾರಣವೇನು?

ಸಮಾಜ ನನ್ನನ್ನು ಗುರ್ತಿಸಿರುವಂಥದ್ದು ಸಂಗೀತದ ಮೂಲಕವೇ. ಆ ಸಂಗೀತ ನನಗೆ ಒದಗಿಬಂದ ರೀತಿ, ನನ್ನ ಬದುಕಿನಲ್ಲಿ ಸಂಗೀತ ಬೀರಿದ ಪ್ರಭಾವ ಇವನ್ನೆಲ್ಲ ಸೇರಿಸಿದಾಗ ಯಾವುದೋ ಗಳಿಗೆಯಲ್ಲಿ ‘ನೆನಪೇ ಸಂಗೀತ’ ಎಂಬ ಶೀರ್ಷಿಕೆ ಫ್ಲ್ಯಾಶ್ ಆಯ್ತು ನನಗೆ. ಅದನ್ನೇ ಪುಸ್ತಕದ ಶೀರ್ಷಿಕೆಗೆ ಇರಿಸಿದೆ.

*ಆತ್ಮಕಥೆ ಎಂದರೆ ಅದು ನೆನಪಿನ ಆಧಾರದ ಮೇಲೆ ಬರೆಯುವಂಥದ್ದು. ಹಿಂದೆಂದೋ ನಡೆದ ಘಟನೆಗಳನ್ನು ನೆನಪಿಸಿಕೊಂಡು ಬರೆಯುವಾಗ ನಮಗೆ ಗೊತ್ತಿಲ್ಲದೆಯೇ ನಮ್ಮನ್ನು ನಾವು ಒಳ್ಳೆಯವರಾಗಿ ಚಿತ್ರಿಸಿಕೊಳ್ಳುವುದು, ಪಕ್ಷಪಾತಿಗಳಾಗುವ ಸಾಧ್ಯತೆಗಳಿರುತ್ತವೆ. ನಮ್ಮ ಬದುಕನ್ನೇ ಒಂದು ಅಂತರದಲ್ಲಿ ನಿಂತು ನೋಡುವುದು ಬಹುದೊಡ್ಡ ಸವಾಲು. ಆತ್ಮಕಥೆ ಬರವಣಿಗೆಯ ಪತ್ರಿಕೆಯಲ್ಲಿ ಎದುರಾಗುವ ಇಂಥ ಸವಾಲುಗಳನ್ನು ನೀವು ಹೇಗೆ ಎದುರಿಸಿದಿರಿ?

ಆತ್ಮಕಥೆಯಲ್ಲಿ ನೀವು ಹೇಳಿದ ಎಲ್ಲ ಸವಾಲುಗಳು ಖಂಡಿತ ಎದುರಾಗುತ್ತವೆ. ನಾನು ಬರವಣಿಗೆಗೆ ತೊಡಗಿಕೊಳ್ಳುವ ಮೊದಲೇ ತಿರ್ಮಾನಿಸಿದ್ದೆ. ನನ್ನ ಬರವಣಿಗೆಯಲ್ಲಿ ಅತಿಶಯೋಕ್ತಿ ಇರಬಾರದು. ಏನಾದರೂ ಸುಳ್‌ ಸುಳ್ಳು ಹೇಳಿ ನನ್ನನ್ನು ನಾನು ವಿಜೃಂಭಿಸಿಕೊಳ್ಳುವ ಸನ್ನಿವೇಶಗಳು ಇರಬಾರದು ಎಂದು ತೀರ್ಮಾನ ಮಾಡಿದ್ದೆ. ಹಾಗೆಯೇ ನೆನಪಾಗಿದ್ದನ್ನೆಲ್ಲ ಹೇಳಿಯೇಬಿಡಬೇಕು ಎಂಬ ಹಟವನ್ನೂ ಇಟ್ಟುಕೊಳ್ಳಬಾರದು ಎಂದುಕೊಂಡಿದ್ದೆ. ಯಾಕೆಂದರೆ ಅದರಿಂದ ಇನ್ನೊಬ್ಬರಿಗೆ ಅನ್ಯಾಯ ಕೂಡ ಆಗಬಾರದಲ್ಲ. ಆದದ್ದು ಆಗಿಹೋಯ್ತು. ಅದನ್ನು ಮತ್ತೆ ಹೇಳುವಾಗ ಬೇರೆಯವರಿಗೆ ಮುಜುಗರ ಆಗಬಾರದು.

ಈ ಅಂಶಗಳನ್ನು ಬಿಟ್ಟು ಉಳಿದವನ್ನು ನಾನು ಬರೆದುಕೊಂಡು ಬಂದೆ. ಈ ಪುಸ್ತಕದ ಮುನ್ನುಡಿಯಲ್ಲಿಯೂ ನಾನು ಬರೆದಿದ್ದೇನೆ; ಇಲ್ಲಿ ಹೇಳಿದ್ದರಲ್ಲಿ ಯಾವುದೇ ತಿಶಯೋಕ್ತಿ ಇಲ್ಲ. ಹೇಳದೆ ಉಳಿದಿದ್ದೂ ಬೇಕಾದಷ್ಟು ಇರಬಹುದು. ಈ ಶಿಸ್ತನ್ನು ಇರಿಸಿಕೊಂಡೇ ನಾನು ಆತ್ಮಕಥೆ ಬರೆದಿದ್ದೇನೆ.

ನೆನಪಾದದ್ದನ್ನೆಲ್ಲ ಬರೆಯಲಿಲ್ಲ; ಆದರೆ ಎಷ್ಟೋ ನೆನಪೂ ಆಗಿಲ್ಲ. ಈ ಪುಸ್ತಕ ಬರೆದು ಆದ ಮೇಲೆ ಎಷ್ಟೋ ಸಂಗತಿಗಳು ನೆನಪಾಗಿವೆ. ಅವನ್ನೆಲ್ಲ ಪುಸ್ತಕದಲ್ಲಿ ಸೇರಿಸಲು ಆಗಿಲ್ಲ.

* ಈ ಪುಸ್ತಕ ನಿಮ್ಮ ಜೀನಕಥನದ ದಾಖಲೆ ಅಷ್ಟೇನಾ? ಅಥವಾ ಅದನ್ನು ಮೀರಿದ ಒಳನೋಟಗಳಿವೆಯಾ?

ನಾನು ಬದುಕಿನಲ್ಲಿ ಅನುಭವಿಸಿದ ಅನುಭವಗಳ ಮೂಲಕ ಪಡೆದುಕೊಂಡ ಒಳನೋಟಗಳು ಸಾಂದರ್ಭಿಕವಾಗಿ ಬಂದೇ ಇರುತ್ತದೆ. ತಪ್ಪಿಸಿಕೊಳ್ಳಬೇಕು ಎಂದರೂ ಅದು ಸಾಧ್ಯವಿಲ್ಲ.

* ಸನ್ಯಾಸಿ ಜೀವನದಲ್ಲಿಯೂ ಸಂಸಾರಿ ಜೀವನದಲ್ಲಿಯೂ ನಿಮ್ಮ ಜತೆಗಿದ್ದಿದ್ದು ಸಂಗೀತ. ನಿಮ್ಮ ಬದುಕಿನ ಪರಿಪ್ರೇಕ್ಷ್ಯದಲ್ಲಿ ಸಂಗೀತ ಅನ್ನುವುದನ್ನು ಹೇಗೆ ಗ್ರಹಿಸಿದ್ದೀರಿ?

ಏನು ಹೇಳಲಿ? ನನಗೆ ಸಂಗೀತ ಇಹಕ್ಕೂ ಹೌದು; ಪರಕ್ಕೂ ಹೌದು. ಸಂಗೀತ ಬಿಟ್ಟು ಬೇರೇನೂ ಗೊತ್ತಿಲ್ಲ. ಬೇರೆ ವ್ಯವಹಾರ ಅರಿತಿಲ್ಲ. ಸಂಗೀತವೇ ನನಗೆಲ್ಲ. ಸಂಗೀತದಲ್ಲಿಯೇ ಆನಂದ. ಸಂಗೀತದಲ್ಲಿಯೇ ತೃಪ್ತಿ. ಮತ್ತು ಸಂಗೀತವೇ ಜೀವನ. ನನ್ನ ಸಂಗೀತ ಜೀವನಕ್ಕೆ ಕುಟುಂಬದ ಸಹಕಾರವೂ ಸಂಪೂರ್ಣವಾಗಿ ಸಿಕ್ಕಿದೆ. ಅಷ್ಟು ಮಾತ್ರ ಹೇಳಬಲ್ಲೆ.

* ಭಕ್ತಿ ಸಂಗೀತವನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದವರು ನೀವು. ಇಂದು ಭಕ್ತಿ ಎನ್ನುವುದು ಒಂದು ಕಡೆಯಿಂದ ಹೈಜಾಕ್‌ ಆಗುತ್ತಿದೆ; ಇನ್ನೊಂದೆಡೆಗೆ ಅದರ ಅವಹೇಳನ ನಡೆಯುತ್ತಿದೆ. ಈ ಎರಡು ಅತಿರೇಕಗಳನ್ನು ನೀವು ಹೇಗೆ ನೋಡುತ್ತೀರಿ?

ಆ ಎರಡೂ ಅತಿರೇಕಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ. ನನಗೆ ಹರಿದಾಸ ಸಾಹಿತ್ಯದ, ಭಕ್ತಿ ಸಾಹಿತ್ಯದ ಕುರಿತಾಗಿ ಒಲವಿದೆ, ನಿಷ್ಠೆ ಇದೆ, ಶ್ರದ್ಧೆ ಇದೆ; ಅದು ನನಗೆ ದೇವರು ಕೊಟ್ಟ ಕರ್ತವ್ಯ ಎಂದು ಅಂದುಕೊಂಡಿದ್ದೇನೆ. ‘ನೀನು ಇದನ್ನು ಮಾಡಬೇಕು’ ಎಂದು ಅವನೇ ತೋರಿಸಿದ್ದಾನೆ ಎಂದು ನಾನು ಅನುಸಂಧಾನ ಮಾಡಿಕೊಂಡು ಪ್ರಾಮಾಣಿಕವಾಗಿ ಅದನ್ನು ಮಾಡುತ್ತಿದ್ದೇನೆ. ಉಳಿದಂತೆ ಯಾವ ವಿಷಯಗಳನ್ನೂ ನಾನು ವಿಮರ್ಶೆ ಮಾಡಲಿಕ್ಕೆ ಹೋಗುವುದೇ ಇಲ್ಲ. ಅದು ಒಂದು ಕಡೆಯಿಂದ ಆಗ್ತಾನೇ ಇರ್ತದೆ. ನಾನು ನನ್ನ ಕಡೆಯಿಂದ ಮಾಡಬೇಕಾದ ಕೆಲಸ ಮಾಡುತ್ತ ಹೋಗುತ್ತೇನಷ್ಟೆ.

*ನಿಮ್ಮ ಆತ್ಮಕಥೆ ಪ್ರಕಟವಾಗುತ್ತಿರುವ ಹೊತ್ತಿನಲ್ಲಿ ನಿಮಗೆ ಏನನಿಸುತ್ತಿದೆ?

ಖುಷಿಯಾಗ್ತಿದೆ ಸಹಜವಾಗಿ. ನಾನು ಒಂದು ಪುಸ್ತಕ ಬರೆದೇನು ಎಂಬ ಕಲ್ಪನೆಯೇ ಇರಲಿಲ್ಲ. ಸಾಹಿತ್ಯದ ಪ್ರಕಾರದಲ್ಲಿ ಬರಹಗಾರ ಆಗಬಹುದು ಎಂದೂ ಅಂದುಕೊಂಡಿರಲಿಲ್ಲ. ಈಗ ಅದು ಆಗಿದೆಯಲ್ಲ ಎಂದು ಏನೋ ಸಂತೋಷವಾಗುತ್ತಿದೆ.

ಇನ್ನು ಮುಂದೆಯೂ ಏನಾದ್ರೂ ಬರೆಯಬೇಕು ಎಂದುಕೊಂಡಿದ್ದೇನೆ. ಸ್ವತಂತ್ರ ಲೇಖನಗಳನ್ನು ಕ್ರೋಡೀಕರಿಸಿ ಪುಸ್ತಕ ತರಬೇಕು ಎಂದಿದೆ. ಡಿ.ಲೀಟ್ ಮಾಡಿದ್ದೇನಲ್ಲ, ಅದಕ್ಕೆ ಸಂಬಂಧಪಟ್ಟು ಬರೆದ ಥೀಸೀಸ್ ಇನ್ನೊಂದಿಷ್ಟು ನೇರ್ಪುಗಳೊಳಿಸಿ ಪುಸ್ತಕ ಮಾಡಬೇಕು ಎಂದೂ ಅಂದುಕೊಂಡಿದ್ದೇನೆ.

***

ಪುಸ್ತಕ: ನೆನಪೇ ಸಂಗೀತ (ಜೀವನ ಕಥನ)

ಪ್ರಕಾಶನ: ಪ್ರಕೃತಿ ಪ್ರಕಾಶನ

ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್‌, ಬಸವನಗುಡಿ, ಬೆಂಗಳೂರು

ದಿನಾಂಕ: 19 ಜನವರಿ 2019

ಸಮಯ: ಬೆಳಿಗ್ಗೆ 10

ಉಪಸ್ಥಿತಿ: ಜಯಂತ ಕಾಯ್ಕಿಣಿ, ಅಬ್ದುಲ್ ರಶೀದ್, ಲಕ್ಷ್ಮೀಶ ತೋಳ್ಪಾಡಿ, ವಿದ್ಯಾಭೂಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT