ಕವಿತೆ: ಯುದ್ಧಕಾಂಡ...

ಸಾವು ಎದೆ ಮೇಲೇ ಬಿದ್ದಿದೆ
ಕಣ್ಣೀರು ದಡದುದ್ದಕ್ಕೂ
ಪ್ರವಾಹದ ಭೀತಿಯಿಂದ ಕೂತಿದೆ
ಮಧ್ಯೆ ಏನಿಲ್ಲ
ಹರಿಯುವ ನದಿಗೆ ಹಾಕ ಹೊರಟ
ಬೇಲಿ
ತೇಲುತ್ತಿದೆ!
ತೇಲುತ್ತಾ... ಇಗಾ
ಈಗ ಈ ಕಡೆ
ಮತ್ತೆ ಆ ಕಡೆ
ಪ್ರವಾಹ ಬಂದರೆ ಯಾವ ದಡಕ್ಕೂ
ಉಳಿಗಾಲವಿಲ್ಲ
ಈಗೇನೋ ದೂರವಿದ್ದೀವಿ
ನಮಗೆ ಸೂತಕವಿಲ್ಲ
ಅಷ್ಟಕ್ಕೇ ನಮ್ಮ ನಾಳೆಗಳೇನು ನಮ್ಮ ಸ್ವಂತದ್ದವಲ್ಲ!
ಮೋಡ ಅಳು ಕಟ್ಟಿ
ಆಚೀಚೆ ಅಲೆಯುತ್ತಿದೆ
ಗುಡುಗುತ್ತಾ ಸಿಡಿಲು
ಎದೆ ತಲೆಯ ಸೀಳಿಹೊಕ್ಕು; ಜೀವ
ಮಳೆಹನಿಗಿಂತ ಬಿರುಸಾಗಿ ಮಣ್ಣುಪಾಲು
ಈ
ಕೊಲ್ಲುವ ಮನುಷ್ಯರ(?)
ಹಸಿವಿನ ಸೂತ್ರ ಯಾವುದೋ
ಸೂತಕದ ತಲೆಗಳ ಅನಂತ ಗಣಿತ
ಕಳೆದುಹಾಕುತ್ತಿರುವುದು ಎಲ್ಲವನ್ನು
ಸಂಪೂರ್ಣ ಎಲ್ಲವನ್ನೂ
ನಾವು ದೂರವಿದ್ದೇವೆ
ಈಗೇನೋ ವ್ಯತ್ಯಾಸವಾಗುವುದಿಲ್ಲ
ಅಷ್ಟಕ್ಕೇ ನಮ್ಮ ನೆತ್ತಿಯ ಆಕಾಶ ತಿಳಿಯಾಗೇನಿಲ್ಲ
**
ಅಯ್ಯೋ...
ಅಂತ
ಎಂಥವರೂ ಮರುಗುತ್ತಾರೆ
ಎದೆ ಕಿವುಚಿದರೆ ಎರಡು ಹನಿ ನೋವು
ಕರುಳು ಚೀರಿದರೆ ಎರಡು ನಿಮಿಷದ ಮೌನ
ಯಾವ ಪ್ರಾರ್ಥನೆಯೂ ಕಳೆಯುವುದಿಲ್ಲ
ಖಾಲೀ ಕಣ್ಣಿನ ಸಜೀವ ನೆನಪುಗಳ
ಕೆಂಪುಕೋಡಿಯ ಕಡುಗಪ್ಪು ಹೆಪ್ಪುಗಳ
ಉಜ್ಜಿ ಬಣ್ಣ ತೀಡಿ
ಕಣ್ಣ ಮಸೂರಗಳಿಗೆ
ಬೇಗನೆ
ಕನ್ನಡಿ, ಭೂತಗನ್ನಡಿಗಳ ತಯಾರಿಸಿ
ಸೂಕ್ಷ್ಮ ನೋಡುವುದು..
ಸೂಕ್ಷ್ಮ ನೋಡಿಕೊಳ್ಳುವುದೆರಡೇ ಆಯ್ಕೆ ಈಗ
ಬರುವ ದಿನಗಳ ಮುಲಾಮಿಗೆ
ಕೆರೆದು ಗಾಯ ಮಾಡಿಕೊಳ್ಳುವುದಲ್ಲ ಬದುಕು!
ಈಗೇನೋ ವ್ಯತ್ಯಾಸವಾಗುವುದಿಲ್ಲ
ಹಾಗಂತ.. ಈ ಮುಲಾಮೂ
ಮೀರಿದ ಗಾಯಗಳ ಮಾಯಿಸುವುದಿಲ್ಲ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.