ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ಗಳಿಸುವ ಯಂತ್ರಗಳೇ?

ಅಕ್ಷರ ಗಾತ್ರ

ಶೇಕಡ ತೊಂಬತ್ತೈದು, ತೊಂಬತ್ತಾರು, ತೊಂಬತ್ತೆಂಟು ಅಂಕ... ನೂರಕ್ಕೆ ನೂರು... 625ಕ್ಕೆ ಎರಡೋ ಮೂರೋ ಮಾತ್ರ ಕಮ್ಮಿ... ರಾಜ್ಯಕ್ಕೇ ಪ್ರಥಮ... ಪರೀಕ್ಷಾ ಫಲಿತಾಂಶಗಳ ಪರ್ವ ಆರಂಭವಾಗುತ್ತಿದ್ದಂತೆ ಪತ್ರಿಕೆ-ಟಿ.ವಿ.ಗಳಲ್ಲಿ ಒಂದಾದ ಮೇಲೊಂದರಂತೆ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಅಪ್ಪ-ಅಮ್ಮಂದಿರು ತಮ್ಮ ಮುದ್ದಿನ ಮಗಳಿಗೆ ಇಲ್ಲವೇ ಮಗನಿಗೆ ಸಿಹಿ ತಿನ್ನಿಸುವ, ರಮಿಸುವ ಚಿತ್ರಗಳು ಬರುತ್ತವೆ. ಫೇಸ್‌ಬುಕ್, ವಾಟ್ಸ್‌್ಆ್ಯಪ್‌ಗಳಲ್ಲಿ ಹೆಮ್ಮೆಯ ಘೋಷಣೆಗಳು ಕಾಣಿಸಿಕೊಳ್ಳುತ್ತವೆ.

ಮಾಧ್ಯಮಗಳಲ್ಲಿ ವ್ಯಕ್ತವಾಗುವ ಅಪ್ಪ-ಅಮ್ಮಂದಿರ ಸಡಗರ, ಬಂಧು-ಮಿತ್ರರ ಸಂಭ್ರಮ ನೋಡುತ್ತಿದ್ದರೆ ನಮಗೂ ಒಂದು ಕ್ಷಣ ಹೆಮ್ಮೆಯೆನಿಸುವುದು ಸಹಜ. ರಾಜ್ಯವೇ ಬೆರಗುಗೊಳ್ಳುವಂಥ ಸಾಧನೆ ಮಾಡಿದ ಮಕ್ಕಳನ್ನು ಕಂಡಾಗ ಯಾರಾದರೂ ಮನತುಂಬಿ ಮಚ್ಚುಗೆ ಸೂಚಿಸದಿರಲು ಸಾಧ್ಯವೇ ಇಲ್ಲ.

ಆದರೆ ಈ ಸಂತೋಷ, ವಿಸ್ಮಯಗಳ ಬೆನ್ನಲ್ಲೇ ಸಣ್ಣ ಆತಂಕವೊಂದು ಮನಸ್ಸಿನ ಮೂಲೆಯಲ್ಲಿ ಹುಟ್ಟಿ ನಿಧಾನಕ್ಕೆ ಬೆಳೆಯತೊಡಗುತ್ತದೆ.  ಏನಿದು ಅಂಕಗಳ ಭರಾಟೆ? ಎಲ್ಲಿಯವರೆಗೆ ಈ ಪರ್ಸೆಂಟೇಜುಗಳ ಓಟ? ಮಕ್ಕಳನ್ನು ಇವರೆಲ್ಲ ಏನೆಂದು ಭಾವಿಸಿಕೊಂಡಿದ್ದಾರೆ? ಇವರೆಲ್ಲ ಅಂಕ ಮೊಗೆಯುವ ಯಂತ್ರಗಳಾಗಿಬಿಟ್ಟಿದ್ದಾರೆಯೇ?

ಮೊನ್ನೆ ಎಸ್ಎಸ್ಎಲ್‌ಸಿ, ಪಿಯುಸಿ ಫಲಿತಾಂಶದ ಸಂಭ್ರಮಾಚರಣೆಯ ನಡುವೆ ಹಿರಿಯರೊಬ್ಬರು ಹೇಳುತ್ತಿದ್ದರು: ‘ಎಂಥಾ ಪರ್ಸೆಂಟೇಜು ಕಣ್ರೀ ಇದು? ತೊಂಬತ್ತೇಳು, ತೊಂಬತ್ತೆಂಟು...! ನಮ್ಮ ಕಾಲಕ್ಕೆಲ್ಲ 60 ದಾಟಿಬಿಟ್ಟರೆ ಅದೇ ಬರೋಬ್ಬರಿಯಾಯಿತು. ಈಗ ತೊಂಬತ್ತಕ್ಕಿಂತ ಕಡಿಮೆ ಸ್ಕೋರ್ ಮಾಡಿದರೆ ಅಂಥವರು ಲೆಕ್ಕಕ್ಕೇ ಇಲ್ಲ...’ ಕಾಲ ಬದಲಾಗಿದೆ.

ಪ್ರಥಮ ದರ್ಜೆ, ಶೇಕಡ ಅರುವತ್ತರ ಕಾಲ ಈಗ ಉಳಿದಿಲ್ಲ. ಎಲ್ಲರಿಗೂ ಅವರವರ ಭವಿಷ್ಯದ ಪ್ರಶ್ನೆ. ಎಸ್ಎಸ್ಎಲ್‌ಸಿ ಮುಗಿಸಿದವರಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಯುಸಿಗೆ ಸೀಟು ಗಿಟ್ಟಿಸಿಕೊಳ್ಳುವ ಒತ್ತಡ. ಪಿಯುಸಿ, ಸಿಇಟಿ ಮುಗಿಸಿದವರಿಗೆ ಒಳ್ಳೆಯ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಒತ್ತಡ. ಇದು ಸಾಧ್ಯವಾಗಬೇಕಾದರೆ ಹೆಚ್ಚು ಅಂಕ ಇರಲೇಬೇಕು. ಶೇಕಡಾವಾರು ಅಂಕ  ಏರಿದಷ್ಟೂ ಅವರು ನಿರಾಳ.

ಎಲ್ಲವೂ ನಿಜ. ಆದರೆ ಇಂತಹದೊಂದು ಪರಿಸ್ಥಿತಿ ಹೇಗೆ ಸೃಷ್ಟಿಯಾಯಿತು? ನಮ್ಮ ಮಕ್ಕಳು ಹೀಗೆ ಅಂಕ ಮೊಗೆಯುವ ಯಂತ್ರಗಳಾಗುತ್ತಾ ಹೋದರೆ ಅವರ ಮತ್ತು ಒಟ್ಟಾರೆ ಸಮಾಜದ ಭವಿಷ್ಯ ಏನು?  ಅಂಕ ಗಳಿಸಲು ತಯಾರಾದಂತೆ ಇವರು ಜೀವನವನ್ನು ಎದುರಿಸಲೂ ತಯಾರಾಗಿದ್ದಾರಾ? ಅದಕ್ಕೆ ಅಧ್ಯಾಪಕರು ಮತ್ತು ಹೆತ್ತವರ ಕೊಡುಗೆ ಏನು? ಒಳ್ಳೆಯ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದ ಕೂಡಲೇ ಈ ಮಕ್ಕಳ ಬದುಕು ಬಂಗಾರವಾಗುವುದೇ?

ಸ್ನೇಹಿತರೊಬ್ಬರು ತಮ್ಮ ನೆಂಟರ ಮನೆಯ ಕಥೆ ಹೇಳುತ್ತಿದ್ದರು. ಆ ಮನೆಯ ಹೆಣ್ಣುಮಗು ಎಸ್ಎಸ್ಎಲ್‌ಸಿಯಲ್ಲಿ 625ಕ್ಕೆ 619 ಅಂಕ ಗಳಿಸಿದ್ದಳಂತೆ. ಅವಳ ಹೆತ್ತವರು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರಂತೆ, ಇನ್ನೂ ಐದು ಅಂಕ ಹೆಚ್ಚಿಗೆ ಬರಬೇಕಿತ್ತೆಂದು. ಆ ಹೆಣ್ಣುಮಗಳ ತಂದೆ ಪದವಿ ಕಾಲೇಜೊಂದರ ಪ್ರಾಂಶುಪಾಲರು.

ಅದೇ ಸ್ನೇಹಿತರು ಇನ್ನೂ ಒಂದು ಮಾತು ಹೇಳಿದರು: ‘ಈ ತೊಂಬತ್ತೈದು ತೊಂಬತ್ತೆಂಟು ಪರ್ಸೆಂಟೇಜಿನ ಒಬ್ಬ ಹುಡುಗನ ಕೈಗೆ ನೂರು ರೂಪಾಯಿ ನೋಟು ಕೊಟ್ಟು ಇವತ್ತಿಗೆ ಬೇಕಾದ ದಿನಸಿ ತೆಗೆದುಕೊಂಡು ಬಾ ಎಂದು ಕಳಿಸಿ ನೋಡು; ಆತ ಇಪ್ಪತ್ತು ರೂಪಾಯಿಯ ಅಕ್ಕಿ, ಇಪ್ಪತ್ತು ರೂಪಾಯಿಯ ಮೆಣಸು, ಇಪ್ಪತ್ತು ರೂಪಾಯಿಯ ಉಪ್ಪು, ಇಪ್ಪತ್ತು ರೂಪಾಯಿಯ ಹುಳಿ ಹೊತ್ತುಕೊಂಡು ಬರುತ್ತಾನೆ; ಅವನ ಪರ್ಸೆಂಟೇಜಿನ ಕಥೆ ಇಷ್ಟೇ’. ಅವರು ಹೇಳಿದ ಮಾತು ಎಲ್ಲ ಹುಡುಗರಿಗೂ ಅನ್ವಯಿಸದೇ ಇರಬಹುದು.

ಆದರೆ ಅಂಕ ಗಳಿಸುವ ಯಂತ್ರಗಳಂತೆ ಕಾಣುವ ಅನೇಕ ಮಕ್ಕಳ ಕಥೆ ಇದಕ್ಕಿಂತ ತೀರಾ ಭಿನ್ನವಾಗಿಯೇನೂ ಇಲ್ಲವೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಆ ಮಕ್ಕಳನ್ನು ಹೊಣೆಗಾರರನ್ನಾಗಿಸಿ ಏನೂ ಪ್ರಯೋಜನ ಇಲ್ಲ. ನಾವು ಯೋಚಿಸಬೇಕಿರುವುದು ಅವರನ್ನು ಈ ಪರಿಸ್ಥಿತಿಗೆ ನೂಕಿರುವ ಹೆತ್ತವರು, ಅಧ್ಯಾಪಕರು ಮತ್ತು
ಒಟ್ಟಾರೆ ಸಾಮಾಜಿಕ ಸನ್ನಿವೇಶದ ಬಗ್ಗೆ; ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಬಿಟ್ಟರೆ ಈ ಪ್ರಪಂಚದಲ್ಲಿ ಬೇರೆ ಅವಕಾಶಗಳೇ ಇಲ್ಲವೇನೋ ಎಂಬ ಭ್ರಮೆಯ ಬಗ್ಗೆ.

ಈ ಮಕ್ಕಳ ಬುದ್ಧಿಮತ್ತೆ ಸೂಚ್ಯಂಕವನ್ನು ಬೆಳೆಸಿದಂತೆ ನಾವು ಅವರ ಭಾವನಾ ಪ್ರಪಂಚವನ್ನು ಪೋಷಿಸಿದ್ದೇವೆಯೇ? ಅಂಕಗಳನ್ನು ಅಗೆದುಹಾಕಲು ತರಬೇತುಗೊಳಿಸಿದಂತೆ ದಿನನಿತ್ಯದ ಬದುಕಿಗೆ ಅವಶ್ಯಕವಿರುವ ಕಾಮನ್ ಸೆನ್ಸನ್ನೂ ಕಲಿಸಿದ್ದೇವೆಯೇ?

ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸುವುದೇ ಅತಿದೊಡ್ಡ ಸವಾಲೆಂದು ಮಕ್ಕಳೆದುರು ಬಿಂಬಿಸುವ ಹೊತ್ತಿಗೆ ಬದುಕಿನ ನಿಜವಾದ ಸವಾಲುಗಳು ಏನೆಂಬುದನ್ನು ಹೇಳಿಕೊಟ್ಟಿದ್ದೇವೆಯೇ? ಅವುಗಳನ್ನು ಎದುರಿಸುವ ಮಾನಸಿಕ ದೃಢತೆಯನ್ನು ಮಕ್ಕಳಲ್ಲಿ ಬೆಳೆಸಿದ್ದೇವೆಯೇ? ಇಂದು ಶೇ 95ರಷ್ಟು ಅಂಕ ಕೂಡಿ ಹಾಕುವ ಮಗು ನಾಳೆ ಬದುಕಿನ ಸಣ್ಣದೊಂದು ಆತಂಕವನ್ನೂ ಎದುರಿಸಲಾರದೆ ಆಘಾತ, ಖಿನ್ನತೆಗೊಳಗಾದರೆ ಅದಕ್ಕೆ ಯಾರು ಹೊಣೆ?

ಬಾಲ್ಯದ, ತಾರುಣ್ಯದ ಸುಂದರ ಕನಸುಗಳು ಮೊಳೆತು ಪಲ್ಲವಿಸುವ ಕಾಲಕ್ಕೆ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಗಳನ್ನಾಗಿಸಿ ಅವರೆದುರು 90%  ಮಹಾಮಂತ್ರವೊಂದನ್ನೇ ಪಠಿಸುತ್ತಾ ಕೂತರೆ ಅವರ ಭಾವಪ್ರಪಂಚ ವಿಕಸಿಸುವುದು ಯಾವಾಗ? ಅನುರಾಗ, ಸಹಬಾಳ್ವೆ, ಅನುಕಂಪ, ವಿನಯ, ಸಹಾನುಭೂತಿಗಳು ಗಟ್ಟಿಗೊಳ್ಳುವುದು ಹೇಗೆ? ತಮ್ಮ ಆತ್ಮವಿಶ್ವಾಸ, ಸ್ಥೈರ್ಯಗಳನ್ನು ಕುಂದಿಸುವ ಹತ್ತುಹಲವು ಸೂಜಿಮೊನೆಗಳೂ ಕೂಡ ತಮ್ಮ ಸುತ್ತಮುತ್ತ ಇವೆ ಎಂದು ಅವರು ಅರ್ಥಮಾಡಿಕೊಳ್ಳುವುದೆಂತು? ತಮ್ಮೆದುರು ಪಠ್ಯಪುಸ್ತಕಗಳಷ್ಟೇ ಅಲ್ಲದೆ ಸುಂದರ ಬೆಳಗು, ಚಂದದ ಸೂರ್ಯಾಸ್ತ, ಹುಣ್ಣಿಮೆಯ ಆಕಾಶ, ಮೈಮನಗಳಿಗೆ ಹಿತ ನೀಡುವ ಸುಂದರ ಪ್ರಕೃತಿ, ನದಿ, ಸಮುದ್ರ, ಪರ್ವತ, ಜಲಪಾತ ಇವೆಲ್ಲ ಇವೆ ಎಂದು ಅವರು ತಿಳಿದುಕೊಳ್ಳುವುದಕ್ಕೆ ಅವಕಾಶ ಎಲ್ಲಿ?

ಮಕ್ಕಳ ಎಸ್ಎಸ್ಎಲ್‌ಸಿ, ಪಿಯುಸಿ ಫಲಿತಾಂಶದ ಕುರಿತಾಗಿರುವ ಹೆತ್ತವರ, ಅಧ್ಯಾಪಕರ ಆತಂಕಗಳು ಹುರುಳಿಲ್ಲದ್ದು ಎಂದು ಈ ಮಾತಿನ ಅರ್ಥವಲ್ಲ. ಇದು ಟಾರ್ಗೆಟ್ ಜಮಾನ. ಇಂದು ಎಲ್ಲರ ಎದುರೂ ಟಾರ್ಗೆಟ್‌ಗಳಿವೆ. ಎಲ್ಲ ವಿದ್ಯಾರ್ಥಿಗಳೂ ಇಂತಿಷ್ಟು ಶೇಕಡ ಅಂಕ ಗಳಿಸಬೇಕೆಂದು ಅಧ್ಯಾಪಕರಿಗೆ ಕಟ್ಟುನಿಟ್ಟಿನ ಸೂಚನೆಯಿದೆ.

ಏಕೆಂದರೆ ಇಷ್ಟು ವಿದ್ಯಾರ್ಥಿಗಳು ನಮ್ಮಲ್ಲಿ ಡಿಸ್ಟಿಂಕ್ಷನ್,  ರ್‍ಯಾಂಕ್‌ ಗಳಿಸಿದ್ದಾರೆ, ಇಷ್ಟು ಮಕ್ಕಳು ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬ ಜಾಹೀರಾತೇ ಶಿಕ್ಷಣ ಸಂಸ್ಥೆಗಳ ಮೂಲ ಬಂಡವಾಳ. ಹೆತ್ತವರಂತೂ ಯಾವ ಸಂಸ್ಥೆಗೆ ಎಡತಾಕಿದರೂ ಅಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಸೀಟು. ಹಾಗಾದರೆ ಅದಕ್ಕಿಂತ ಕಡಿಮೆ ಅಂಕ ಗಳಿಸಿದವರು ಎಲ್ಲಿಗೆ ಹೋಗಬೇಕು? ಅತ್ಯುನ್ನತ ಶ್ರೇಣಿ ಪಡೆದವರೇ ಲಕ್ಷಗಳಲ್ಲಿ ಶುಲ್ಕ ಪಾವತಿಸಬೇಕು; ಉಳಿದವರ ಗತಿ ಏನು?

ಶಿಕ್ಷಣದ ವ್ಯಾಪಾರೀಕರಣದ ಘೋರ ಪರಿಣಾಮಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಮಕ್ಕಳನ್ನು ಅಂಕ ಮೊಗೆಯುವ ಯಂತ್ರಗಳನ್ನಾಗಿ ಪರಿವರ್ತಿಸಿರುವುದು ಇದೇ ವ್ಯಾಪಾರೀಕರಣದ ಭೂತ. ನಾವು ವಾಪಸ್ ಹೋಗಲಾರದಷ್ಟು ದೂರ ಬಂದುಬಿಟ್ಟಿದ್ದೇವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT