ಬುಧವಾರ, ಜೂನ್ 23, 2021
30 °C

ಅತಂತ್ರ ಭವಿಷ್ಯ!

ಜೆಬಿಎಸ್‌ ಉಮಾನಾದ್ Updated:

ಅಕ್ಷರ ಗಾತ್ರ : | |

ಅಖಂಡ  ಆಂಧ್ರದ ಇಬ್ಭಾಗ ಸಮೀಪಿ­ಸುತ್ತಿದ್ದಂತೆಯೇ  ತೆಲಂಗಾಣ­ದಲ್ಲಿ  ಹೊಸ ಕನಸು­ಗಳು  ಅರಳುತ್ತಿವೆ. ರಾಜ್ಯ ವಿಭಜನೆ ಎಂಬ ದುಃಸ್ವಪ್ನ­ವನ್ನು ಇನ್ನೂ ಅರಗಿಸಿಕೊಳ್ಳಲಾರದ  ಸೀಮಾಂಧ್ರದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.ಸೀಮಾಂಧ್ರದ ಒಟ್ಟು 13 ಜಿಲ್ಲೆಗಳ ಪೈಕಿ  ಎಂಟು ಜಿಲ್ಲೆಗಳು ಸಮುದ್ರ,  ಒಡಿಶಾ ಹಾಗೂ  ತೆಲಂಗಾಣ ಮಧ್ಯೆ ಸಿಲುಕಿಕೊಂಡು ಅನಿಶ್ಚಯ ಭವಿಷ್ಯ ಎದುರಿಸುತ್ತಿವೆ.ಸೀಮಾಂಧ್ರದ ಮುಂದಿರುವ ಸಮಸ್ಯೆ ಮತ್ತು ಸವಾಲುಗಳ ಪಟ್ಟಿ ದೊಡ್ಡದಾಗಿದೆ.  ಆ ಪೈಕಿ ಹೊಸ ರಾಜಧಾನಿಯ ಆಯ್ಕೆ ಮತ್ತು ಅಭಿವೃದ್ಧಿ ಪ್ರಮುಖವಾದದ್ದು.  ಕಡಿಮೆ ವರಮಾನ, ಭಾರಿ ಸಂಖ್ಯೆಯಲ್ಲಿ­ರುವ ಪಿಂಚಣಿದಾರರ ಸಂಖ್ಯೆ, ಕೈಗಾರಿಕೀಕರಣ, ನೀರಾವರಿ ಯೋಜನೆ, ವೈದ್ಯಕೀಯ ಸೌಲಭ್ಯ, ಉನ್ನತ ಶಿಕ್ಷಣ ಸಂಸ್ಥೆಗಳ  ಕೊರತೆಗಳು ತಲೆನೋವಾಗಿ ಪರಿಣಮಿ­ಸಲಿವೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ  ಕೇಂದ್ರವಾಗಿದ್ದ  ರಾಜಧಾನಿ ಹೈದರಾಬಾ­ದನ್ನು ಕಳೆದುಕೊಳ್ಳುತ್ತಿರು­ವುದು ಈ ಸಮಸ್ಯೆಗಳಿಗೆ ಕಾರಣವಾಗಿದೆ.ರಾಜ್ಯ ಪುನರ್‌ ವಿಂಗಡಣೆಯ ಕವಲು ದಾರಿಯಲ್ಲಿ ನಿಂತಿರುವ ತೆಲಂಗಾಣ ಮತ್ತು ಸೀಮಾಂಧ್ರಗಳ ಪೈಕಿ ಹೈದರಾ­ಬಾದ್‌ ಮೇಲೆ ಯಾರು ಹಿಡಿತ ಸಾಧಿಸು­ತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.ಮಿನಿ ಭಾರತ

ಆಂಧ್ರದ ಪ್ರಮುಖ ವಾಣಿಜ್ಯ ಹಾಗೂ ಆರ್ಥಿಕ ಕೇಂದ್ರವಾಗಿರುವ ಹೈದರಾ­ಬಾದ್‌ ಐ.ಟಿ ಕೇಂದ್ರವಾಗಿಯೂ ಬೆಳೆದಿದೆ. 80 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮುತ್ತಿನ ನಗರಿ ತೆಲುಗು ಭಾಷಿಕರ ಶಕ್ತಿಕೇಂದ್ರವೂ ಹೌದು. ತೆಲಂಗಾಣದ ಭಾಗವಾದರೂ ಹೈದರಾಬಾದ್‌ ತನ್ನ ವೈವಿಧ್ಯಮಯ ಬಹು ಸಂಸ್ಕೃತಿ ಮತ್ತು ವಿಭಿನ್ನತೆಯಿಂದಾಗಿ ಗಮನ ಸೆಳೆಯುತ್ತದೆ. ಇದರಿಂದಾಗಿಯೇ ಈ ನಗರ ಬಹು ಸಂಸ್ಕೃತಿಯನ್ನು ಒಡಲೊಳಗೆ ಹುದುಗಿಸಿ ಇಟ್ಟುಕೊಂಡಿರುವ  ‘ಮಿನಿ ಭಾರತ’ದಂತೆ ಕಾಣುತ್ತದೆ!ಇಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ   ಸೀಮಾಂಧ್ರದಿಂದ ವಲಸೆ ಬಂದು ನೆಲೆ ಕಂಡುಕೊಂಡವರ ಸಂಖ್ಯೆಯೇ ಹೆಚ್ಚು. ವಿದ್ಯಾರ್ಥಿಗಳು, ಉದ್ಯಮಿಗಳು, ಉದ್ಯೋಗ ಅರಿಸಿ ಬಂದವರು ಹೀಗೆ ಆರು ದಶಕಗಳಲ್ಲಿ ವಿವಿಧ ವರ್ಗಗಳ ಶೇ 40 ರಷ್ಟು ಸೀಮಾಂಧ್ರದ  ಜನರಿಗೆ ಈ ನಗರ ಆಶ್ರಯ ನೀಡಿದೆ. ಅಲ್ಲಿಯ ಪ್ರತಿ ಕುಟುಂಬದ ಒಬ್ಬರಾದರೂ  ಇಲ್ಲಿ ನೆಲೆ ನಿಂತಿರುವುದು ಸಾಮಾನ್ಯ. ಇಂತಹ ಹೈದರಾಬಾದ್‌ಗಾಗಿ ಈಗ ತೆಲಂಗಾಣ ಮತ್ತು ಸೀಮಾಂಧ್ರ ಕಿತ್ತಾಡುವಂತಾಗಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಆಧಾರದ ಮೇಲೆ  ಆಂಧ್ರ   ಅಸ್ತಿತ್ವಕ್ಕೆ ಬಂದ ಮೇಲೆ ಸೀಮಾಂಧ್ರದ ಬಹು­ತೇಕ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯ­ಮಿಗಳು ಹೈದರಾಬಾದ್‌­ನಲ್ಲಿಯೇ ನೆಲೆ ನಿಂತರು. ಇಲ್ಲಿಯೇ ಭಾರಿ ಬಂಡವಾಳ ಹೂಡಿದ್ದು, ವಿಭಜನೆಯ ನಂತರ  ಬಂಡವಾಳದ ಗತಿ ಏನು ಎಂಬ ಆತಂಕ ಅವರನ್ನು ಕಾಡತೊಡಗಿದೆ.ರಾಜಧಾನಿಗಾಗಿ ತಿಕ್ಕಾಟ!

ಹೊಸ ರಾಜಧಾನಿಯನ್ನು  ಅಭಿವೃದ್ಧಿಪಡಿಸಲು ಭಾರಿ ಪ್ರಮಾಣದ ಹಣ ಬೇಕಾಗುತ್ತದೆ. ಅದಕ್ಕಾಗಿ ಅಲ್ಲಿಯ ಜನರು ಕೇಂದ್ರ ಸರ್ಕಾರದ ಮೊರೆ ಹೋಗಬೇಕಾ­ಗುತ್ತದೆ. ಸೀಮಾಂಧ್ರದ ಹೊಸ ರಾಜಧಾನಿ ಯಾವುದಾಗಬೇಕು ಎಂಬ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರೆದಿದೆ.

ಅಭಿವೃದ್ಧಿಯಲ್ಲಿ ಹಿಂದುಳಿದ ರಾಯಲಸೀಮಾ ಭಾಗದ ಕರ್ನೂಲ್‌, ಕಡಪ, ಚಿತ್ತೂರು ಮತ್ತು ಅನಂತಪುರ­ಗಳಲ್ಲಿ ಯಾವುದಾದ­ರೊಂದು  ಹೊಸ ರಾಜಧಾನಿಯಾಗಬೇಕು ಎನ್ನುವುದು ಅಲ್ಲಿಯ ಜನರ ಹೆಬ್ಬಯಕೆ.‘1956ರಲ್ಲಿ ಆಂಧ್ರ ಪ್ರದೇಶ ಹೊಸ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ನಂತರ ಕರ್ನೂಲ್‌ ರಾಜಧಾನಿ­ಯಾಗಿತ್ತು. ಹೈದರಾಬಾದ್‌ಗಾಗಿ ನಾವು ಅದನ್ನು ತ್ಯಾಗ ಮಾಡಿದೆವು. ಈಗ ಮತ್ತೆ ರಾಜ್ಯ ಇಬ್ಭಾಗವಾಗಿದೆ. ಆರು ದಶಕಗಳ ಹಿಂದೆಯೇ ರಾಜಧಾನಿಯಾಗಿದ್ದ ಕರ್ನೂಲ್‌ ನಗರ ಸಹಜವಾಗಿ ಸೀಮಾಂಧ್ರದ ಹೊಸ ರಾಜಧಾನಿ ಆಗಬೇಕು. ಇಲ್ಲದಿದ್ದರೆ ನಮಗೂ ಪ್ರತ್ಯೇಕ ರಾಜ್ಯ (ರಾಯಲಸೀಮಾ) ಬೇಕು’ ಎನ್ನುವುದು ಈ ಭಾಗದ ಮುಖಂಡ ಭೈರೆಡ್ಡಿ ರಾಜಶೇಖರ ರೆಡ್ಡಿ  ಬೇಡಿಕೆ.ಇದು ಕೇವಲ ಕರ್ನೂಲ್‌ ನಗರದ ಕಥೆ ಮಾತ್ರವಲ್ಲ. ರಾಯಲಸೀಮಾ ಮತ್ತು ಕರಾವಳಿ ಭಾಗದ ಉಳಿದ ನಗರಗಳ ಕಥೆಯೂ ಇದಕ್ಕಿಂತ ವಿಭಿನ್ನವಾಗಿಯೇನೂ ಇಲ್ಲ. ಎಲ್ಲ ನಗರಗಳ ಜನರಿಗೂ ತಮ್ಮ ಊರು ರಾಜಧಾನಿಯಾಗಲಿ ಎಂಬ ಹೆಬ್ಬಯಕೆ. ಅದಕ್ಕಾಗಿ ಅವರು ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ.ಜಿಲ್ಲಾ ಕೇಂದ್ರ ರಾಜಧಾನಿಯಾದರೆ ಅದರ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತದೆ.  ಮೂಲಸೌಕರ್ಯಗಳು ದೊರೆಯುತ್ತವೆ. ನಗರಗಳು ವೇಗವಾಗಿ ಅಭಿವೃದ್ಧಿ ಕಾಣುತ್ತವೆ. ಸಹಜವಾಗಿ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೇರಳ ಹಣ ಹರಿದಾಡುತ್ತದೆ. ಆಗ ಸುಲಭವಾಗಿ ಹಣ ಮಾಡ­ಬಹುದು ಎನ್ನುವುದು  ಈ ಭಾಗದ ಜನರ ಲೆಕ್ಕಾಚಾರ.ಹೊಸ ರಾಜಧಾನಿ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.  ಹೊಸ ಆಡಳಿತ ಭವನ, ಹೈಕೋರ್ಟ್‌ ಹಾಗೂ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣ ಸೇರಿದಂತೆ ರಾಜಧಾನಿಗೆ ಬೇಕಾಗುವ ಎಲ್ಲ  ಮೂಲಸೌಲಭ್ಯ ಕಲ್ಪಿಸಲು ಕೇಂದ್ರದ ಈ ಹಣ ವಿನಿಯೋಗವಾಗಲಿದೆ.ತಮ್ಮ ನಗರ ರಾಜಧಾನಿಯಾದರೆ ಭಾಗ್ಯದ ಬಾಗಿಲು ತೆರೆಯುತ್ತದೆ. ಆ  ಭಾಗ್ಯ ತಮ್ಮದಾಗಲಿ ಎನ್ನುವುದು  ಈ ಭಾಗದ ಜನರ ಆಶಯ.  ವಿಭಜಿತ ಆಂಧ್ರ ಪ್ರದೇಶಕ್ಕೆ ಹೊಸ ರಾಜಧಾನಿ ಗುರುತಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿದ್ದು, 45 ದಿನಗಳ ಒಳಗಾಗಿ ಸಮಿತಿ ತನ್ನ  ಕೆಲಸ ಮಾಡಿ ಮುಗಿಸಬೇಕಿದೆ.ಭಾರಿ ಪೈಪೋಟಿ

ವಿಜಯವಾಡ, ಗುಂಟೂರು, ಕಾಕಿನಾಡ, ರಾಜಮಂಡ್ರಿ, ಕರ್ನೂಲ್‌ ಮತ್ತು ತಿರುಪತಿ ನಗರಗಳು ‘ರಾಜಧಾನಿ’ ಸ್ಪರ್ಧೆಯಲ್ಲಿವೆ.  ಪಟ್ಟಿ ದೊಡ್ಡದಿರುವ ಕಾರಣ ಜಾಗರೂಕತೆ ಮತ್ತು ಚಾಣಾಕ್ಷತೆಯಿಂದ ರಾಜಧಾನಿಯನ್ನು ಆಯ್ಕೆ ಮಾಡುವ ಹೊಣೆ ಸರ್ಕಾರದ ಮೇಲಿದೆ. ಸ್ವಲ್ಪ ಎಡವಿದರೂ  ಅಪಾಯ ನಿಶ್ಚಯ!  ಈ ವಿಷಯದಲ್ಲಿ ಹಿಂದುಳಿದಿರುವ  ರಾಯಲ ಸೀಮಾಕ್ಕೆ ಅನ್ಯಾಯವಾದರೆ ಮತ್ತೆ ತೊಂದರೆ ತಪ್ಪಿದ್ದಲ್ಲ.ತೆಲಂಗಾಣದ ಕಂದಾಯ ವಿಭಾಗವಾದ ಭದ್ರಾಚಲಂನ ಏಳು ಮಂಡಲಗಳನ್ನು ಆಂಧ್ರದಲ್ಲಿ ಉಳಿಸಿ­ಕೊಂಡಿ­ರುವುದು ಭವಿಷ್ಯದಲ್ಲಿ ಅಡೆತಡೆಯೊಡ್ಡುವ ಸಾಧ್ಯತೆ ಇದೆ. ಅವಿಭಜಿತ ಆಂಧ್ರದ ಮಹತ್ವಾ­ಕಾಂಕ್ಷೆಯ ಪೋಲವರಂ ನೀರಾವರಿ ಯೋಜನೆಯಲ್ಲಿ ಮುಳಗಡೆ­ಯಾಗುವ ಪ್ರದೇಶದ ಜನರಿಗೆ ಪರಿಹಾರ ರೂಪ­ದಲ್ಲಿ ನೀಡಲು ಭೂಮಿ ಇಲ್ಲದಿರುವುದು ಹೊಸ ಸಮಸ್ಯೆ ಸೃಷ್ಟಿಸಿದೆ.ಕೇಂದ್ರ ಸರ್ಕಾರ, ಪೋಲವರಂ ನೀರಾವರಿ ಯೋಜನೆಗೆ ಅನುಮತಿ ನೀಡುವ ಮುನ್ನ ಮುಳುಗಡೆ ಪ್ರದೇಶದ ಬುಡಕಟ್ಟು ಜನರಿಗೆ ಅಚ್ಚುಕಟ್ಟು ಪ್ರದೇಶದಲ್ಲಿ 80 ಸಾವಿರ ಎಕರೆ ಕೃಷಿ ಭೂಮಿ ನೀಡುವಂತೆ ಷರತ್ತು ವಿಧಿಸಿತ್ತು.ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದು­ಕೊಳ್ಳುವ ಜನರಿಗೆ ಪರಿಹಾರ ರೂಪದಲ್ಲಿ ಹಣದ ಬದಲು ಕೃಷಿ ಭೂಮಿಯನ್ನೇ ನೀಡಬೇಕು  ಎಂದು 2007ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದಾದ ಎರಡು ವರ್ಷಗಳ ನಂತರ ಯೋಜನೆಗೆ ಕೇಂದ್ರ ಯೋಜನಾ ಆಯೋಗದ ಒಪ್ಪಿಗೆ ದೊರೆತಿದ್ದು, ಹಣದ ಬದಲಾಗಿ ಕೃಷಿ  ಭೂಮಿಯನ್ನು ಪರಿಹಾರ ರೂಪದಲ್ಲಿ ನೀಡುವಂತೆ ಸೂಚಿಸಿತ್ತು.ಆದರೆ, ಇಷ್ಟೊಂದು ದೊಡ್ಡ ಪ್ರಮಾಣದ ಕೃಷಿ ಭೂಮಿ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆ­ಗಳಲ್ಲಿ  ಇಲ್ಲ ಎನ್ನುವುದು ರಾಜ್ಯ ಸರ್ಕಾರ   ವಾದ. ಮುಂದೊಂದು ದಿನ ಇದೇ ವಿವಾದಕ್ಕೆ ಕಾರಣವಾಗಲೂ­ಬಹುದು ಎನ್ನುವುದು ತಜ್ಞರ ಅಭಿಮತ. ಕೃಷ್ಣಾ ನದಿ ಪಾತ್ರದ ರೈತರು ಉಳಿಯಬೇಕೆಂದರೆ ಪೋಲವರಂ ನೀರಾವರಿ ಯೋಜನೆಯ ಮೂಲಕ ಗೋದಾವರಿ ಮತ್ತು ಕೃಷ್ಣಾ ನದಿಗಳ ಜೋಡಣೆ  ಅಗತ್ಯ.‘ಮೊದಲನೆಯದಾಗಿ ಆಂಧ್ರದ ಹಿತಕ್ಕಾಗಿ ತೆಲಂಗಾಣದ ಜನರು ತಮ್ಮ ಗ್ರಾಮಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಮೇಲಾಗಿ ಅಷ್ಟೊಂದು ದೊಡ್ಡ ಭೂಮಿಯೂ ಇಲ್ಲ’ ಎನ್ನುತ್ತಾರೆ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಟಿ. ಹನುಮಂತರಾವ್‌.ಒಂದು ವೇಳೆ ಯಾರಾದರೂ ಇದನ್ನು ನ್ಯಾಯಾ­ಲಯದಲ್ಲಿ ಪ್ರಶ್ನಿಸಿದರೆ ಪೋಲವರಂ ನೀರಾವರಿ ಯೋಜನೆಗೆ ತೀವ್ರ ಹಿನ್ನಡೆಯಾಗಲಿದೆ ಎನ್ನುವುದು ಅವರ ಆತಂಕ. ಸರ್ಕಾರದ ವರದಿಯ ಪ್ರಕಾರ 7.2 ಲಕ್ಷ ಎಕರೆ ಭೂಮಿಯನ್ನು ಅಚ್ಚುಕಟ್ಟು ಪ್ರದೇಶ ಎಂದು ಘೋಷಿಸಲಾಗಿದೆ. ಆ ಪೈಕಿ ಕೇವಲ 30 ಸಾವಿರ ಎಕರೆ ಭೂಮಿ ಸರ್ಕಾರಕ್ಕೆ ಸೇರಿದ್ದು.  ಸರ್ಕಾರದ ಬಳಿ ಸಂತ್ರಸ್ತರಿಗೆ ನೀಡಲು ಕೃಷಿ ಭೂಮಿ ಇಲ್ಲ ಎನ್ನುವುದು ಸ್ಪಷ್ಟ.ಆಂಧ್ರ ಪ್ರದೇಶದೊಂದಿಗೆ ತೆಲಂಗಾಣ ಭಾಗದ ಏಳು ಮಂಡಲಗಳ ಸೇರ್ಪಡೆ  ಕುರಿತು ಸರ್ಕಾರ ಹೊರಡಿಸಿರುವ ಗೆಜೆಟ್‌ ಅಧಿಸೂಚನೆ  ಬಗ್ಗೆ ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಆಕ್ಷೇಪ ವ್ಯಕ್ತಪಡಿಸಿ  ರಾಷ್ಟ್ರಪತಿಗೆ ಪತ್ರವನ್ನೂ ಬರೆದಿದ್ದಾರೆ.ವಿಶೇಷ ಪ್ಯಾಕೇಜ್‌

ಸೀಮಾಂಧ್ರದ ಈ ಎಲ್ಲ ಅಡ್ಡಿ, ಆತಂಕಗಳನ್ನು ಮನಗಂಡಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌, ಇಲ್ಲಿ ಹೊಸದಾಗಿ ಬಂಡವಾಳ ಹೂಡುವವರಿಗೆ ವಿಶೇಷ ಪ್ಯಾಕೇಜ್‌ ಮತ್ತು ತೆರಿಗೆ ರಿಯಾಯ್ತಿ ಘೋಷಿಸಿದ್ದಾರೆ.ಈ ಭಾಗದ ಅಭಿವೃದ್ಧಿ ಮತ್ತು ಕೈಗಾರಿಕೀಕರಣಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳಿಗೆ ಅನುಕೂಲವಾಗುವಂತೆ ತೆರಿಗೆ ರಿಯಾಯ್ತಿ ಸೇರಿದಂತೆ ಕೆಲವು ಆರ್ಥಿಕ ಯೋಜನೆ ಹಾಗೂ ಸೌಲಭ್ಯಗಳನ್ನು ಘೋಷಿಸಿದೆ.ರಾಯಲಸೀಮಾದ ನಾಲ್ಕು ಮತ್ತು ಉತ್ತರ ಕರಾವಳಿ ಭಾಗದ ನಾಲ್ಕು ಜಿಲ್ಲೆ ಸೇರಿದಂತೆ ೧೩ ಜಿಲ್ಲೆ­ಗಳಿಗೆ ಅನ್ವಯವಾಗುವಂತೆ ಐದು ವರ್ಷಗಳ ಅವಧಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಆ ಮೂಲಕ ಕೇಂದ್ರದ ನೆರವು ಈ ಭಾಗಗಳಿಗೆ ಹರಿದುಬರಲಿದೆ ಎನ್ನುವುದು ಜೈರಾಂ ರಮೇಶ್‌ ಆಶಯ.ಪೋಲವರಂ  ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿರುವ ಕೇಂದ್ರ ಸರ್ಕಾರ, ೨೦ ಸಾವಿರ ಕೋಟಿ ರೂಪಾಯಿ ನೀಡಿದೆ. ಐದು ವರ್ಷಗಳ ಅವಧಿಯಲ್ಲಿ ಐಐಟಿ, ಎನ್‌ಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯ, ಪೆಟ್ರೋಲಿಯಂ ಹಾಗೂ ಕೃಷಿ ವಿಶ್ವವಿದ್ಯಾಲಯದಂತಹ ಉನ್ನತ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿಯವರೆಗೆ ಹೈದರಾಬಾದ್‌ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಮಾಂಧ್ರದ ವಿದ್ಯಾರ್ಥಿಗಳಿಗೆ ಈಗಾಗಲೇ ಜಾರಿಯಲ್ಲಿರುವ ನಿಯಮಾವಳಿಯ ಪ್ರಕಾರ ಪ್ರವೇಶಾವಕಾಶ ನೀಡಲು ಸೂಚಿಸಲಾಗಿದೆ.ಕೃಷ್ಣಾ ಮತ್ತು ಗೋದಾವರಿ ನದಿ ನೀರು ಹಂಚಿಕೆಗಾಗಿ ಪ್ರತ್ಯೇಕ ನೀರಾವರಿ ನಿಗಮ ಸ್ಥಾಪಿಸಲಾಗುವುದು. ತೆಲಂಗಾಣದಲ್ಲಿ ಕೃಷ್ಣಾ ಜಲ ನಿಗಮ ಮತ್ತು ಸೀಮಾಂ ಧ್ರದಲ್ಲಿ ಗೋದಾವರಿ ಜಲ ನಿಗಮ  ಅಸ್ತಿತ್ವಕ್ಕೆ ಬರಲಿವೆ. ಸೀಮಾಂಧ್ರದ ಬೇಕು, ಬೇಡಿಕೆಗಳನ್ನು ಗಮನಿಸಲು ಯೋಜನಾ ಆಯೋಗದಲ್ಲಿ ಪ್ರತ್ಯೇಕ ಘಟಕ­ವೊಂದನ್ನು ಸ್ಥಾಪಿಸುವ ಭರವಸೆಯನ್ನೂ ಸಚಿವ ಜೈರಾಂ ರಮೇಶ್‌ ನೀಡಿದ್ದಾರೆ.

(ಲೇಖಕ: ‘ಪ್ರಜಾವಾಣಿ’ ಪ್ರತಿನಿಧಿ, ಹೈದರಾಬಾದ್)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.