ಭಾನುವಾರ, ಜೂನ್ 13, 2021
26 °C
ಪ್ರೊ.ಎಂ.ಎಸ್‌.ಸ್ವಾಮಿನಾಥನ್‌ ಒತ್ತಾಯ

ಅಪೌಷ್ಟಿಕತೆ ನಿವಾರಣೆಗೆ ಗಮನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಗಮನ ನೀಡಬೇಕು’ ಎಂದು ಹಿರಿಯ ಕೃಷಿ ವಿಜ್ಞಾನಿ ಪ್ರೊ.ಎಂ.ಎಸ್‌.­ಸ್ವಾಮಿನಾಥನ್‌ ಹೇಳಿದರು. ಎಂ.ಎಂ ಆಕ್ಟೀವ್‌ ಸೈ– ಟೆಕ್‌ ಕಮ್ಯುನಿಕೇಷನ್ಸ್‌ ಸಂಸ್ಥೆ ನಗರ­ದಲ್ಲಿ ಬುಧವಾರ ಆಯೋಜಿಸಿದ್ದ ‘9ನೇ ನ್ಯೂಟ್ರಾ ಇಂಡಿಯಾ’ ಸಮ್ಮೇಳ­ನ­ದಲ್ಲಿ ಅವರು ಮಾತನಾಡಿದರು.‘ಭಾರತದ 200 ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ ಎಂದು ಪೌಷ್ಟಿಕತೆ ಸವಾಲುಗಳ ಕುರಿತ ರಾಷ್ಟ್ರೀಯ ಪರಿಷತ್‌ (ಎನ್‌ಸಿಐಎನ್‌ಸಿ) ಹೇಳಿದೆ. ಕಳೆದ ವರ್ಷ ಯುನಿಸೆಫ್‌ ನೀಡಿರುವ ಅಂಕಿಅಂಶಗಳ ಪ್ರಕಾರ ದಕ್ಷಿಣ ಏಷ್ಯಾದ ಶೇ 39 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತ­ವಾಗಿದೆ. ಹೀಗಾಗಿ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.‘ಪೌಷ್ಟಿಕಾಂಶದ ಬಗ್ಗೆ ಇರುವ ಪಾರಂಪರಿಕ ಜ್ಞಾನ­ವನ್ನು ರಕ್ಷಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ದೇಶದ ಗೃಹ ವಿಜ್ಞಾನ ಕಾಲೇಜುಗಳನ್ನು ಬಳಸಿಕೊಳ್ಳ­ಬೇಕು. ಯುವ­ಜನತೆ ಕೃಷಿಯಲ್ಲಿ ತೊಡ­ಗಿಸಿ­ಕೊಳ್ಳ­ಬೇಕು. ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯವಾಗಬೇಕು’ ಎಂದರು.

ಸಮ್ಮೇಳನದ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಪೌಷ್ಟಿಕ ವಿಜ್ಞಾನ ಒಕ್ಕೂಟದ (ಐಯುಎನ್‌ಎಸ್‌) ಉಪಾಧ್ಯಕ್ಷ ಡಾ.ವಿ.ಪ್ರಕಾಶ್‌ ಮಾತನಾಡಿ, ‘ದೇಶದಲ್ಲಿ ಪ್ರತಿ ನಿಮಿಷಕ್ಕೆ ಮೂರು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯಕರ ಭಾರತಕ್ಕಾಗಿ ಪೌಷ್ಟಿಕತೆ ಅಗತ್ಯ’ ಎಂದರು.ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸ್ವಾಮಿನಾಥನ್‌ ಅವರಿಗೆ ‘ಜೀವಮಾನದ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಿದರು.

ಪೌಷ್ಟಿಕಾಂಶದ ಮಾತ್ರೆ ಅಗತ್ಯವಿಲ್ಲ

ಕೇಂದ್ರ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಟಿ­ಕಾಂಶದ ಮಾತ್ರೆ ನೀಡುವ ಬದಲಿಗೆ ಪೌಷ್ಟಿಕವಾದ ಊಟ ನೀಡಲು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಅಪೌಷ್ಟಿ­ಕತೆಯ ಸಮಸ್ಯೆ ಗುಣಮಟ್ಟದ ಆಹಾರದಿಂದ ನಿವಾರಣೆ­­ಯಾಗಬೇಕು. ಭವಿಷ್ಯದಲ್ಲಿ ಪೌಷ್ಟಿಕಾಂಶ­ಯುಕ್ತ ಆಹಾರ ಭದ್ರತೆ ರೂಪಿಸಲು ಕೇಂದ್ರ ಸರ್ಕಾರ ಗಮನ ನೀಡಬೇಕು ಎಂದು ಸ್ವಾಮಿನಾಥನ್‌ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.