ಶುಕ್ರವಾರ, ಜನವರಿ 24, 2020
16 °C

ಅಯ್ಯಯ್ಯೋ ಎಂಜಿಲು!

ಡಾ. ಶಶಿಕಲಾ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಎಂಜಿಲೆಲೆಯ ಮೇಲೆ ಉರುಳಾಡುವ ಮಡೆ ಮಡೆಸ್ನಾನದ ಬಗ್ಗೆ ಎಷ್ಟೊಂದು ಚರ್ಚೆ, ವಾದ, ವಿವಾದಗಳು ಕೇಳಿಬರುತ್ತಿವೆ. ಇವನ್ನೆಲ್ಲ ನೋಡಿದಾಗ ಕೆಳಗಿನ ಘಟನೆಯೊಂದು ನನಗೆ ನೆನಪಿಗೆ ಬಂತು. (ಮಡೆ ಎಂದರೆ ತುಳು ಭಾಷೆಯಲ್ಲಿ ‘ಎಂಜಿಲು’ ಎಂದರ್ಥ)ಅದು 1920ರ ಆಸುಪಾಸು. ಅಮೆರಿಕದಲ್ಲಿ ಅನೇಕ ವಾಚ್ ಕಂಪೆನಿಗಳು ಕತ್ತಲಿನಲ್ಲೂ ಎದ್ದು ಕಾಣುವಂತಹ ವಾಚ್ ಡಯಲ್‌ನ್ನು ತಯಾರಿಸಲು ಮುಂದಾದವು. ಈ ಪ್ರಕ್ರಿಯೆಯಲ್ಲಿ ಡಯಲ್‌ನ ಅಂಕಿಗಳಿಗೆ ಜಿಂಕ್ ಸಲ್‌ಫೈಡ್ ಮಿಶ್ರಿತ ರೇಡಿಯಂ ಲೇಪಿಸಬೇಕಿತ್ತು. ಇದು ನಾಜೂಕಾದ ಕೆಲಸ. ಇದಕ್ಕಾಗಿ ಅನೇಕ ಹೆಣ್ಣು ಮಕ್ಕಳನ್ನು ನೇಮಿಸಿಕೊಳ್ಳಲಾಯಿತು. ಸಣ್ಣದಾದ ಬ್ರಷ್‌ನಿಂದ ಪೇಂಟ್ ಮಾಡುವ ಕೆಲಸ.ಹುಡುಗಿಯರು ಕೆಲಸ ಶುರು ಮಾಡಿದರು. ಪ್ರತಿ ಬಾರಿ ಪೇಂಟ್ ಬ್ರಷ್‌ನ ತುದಿಯನ್ನು ಚೂಪಾಗಿಸಲು ಅವರು ಅದನ್ನು ತಮ್ಮ ನಾಲಿಗೆಯ ಮೇಲಿಟ್ಟು ಎಂಜಿಲಿನಿಂದ ಬ್ರಷ್‌ನ ತುದಿಯನ್ನು ಮೊನಚಾಗಿಸುತ್ತಿದ್ದರು. ಈ ರೀತಿ ಮಾಡುತ್ತಿದ್ದವರ ದೇಹದೊಳಗೆ ರೇಡಿಯಂ ಪ್ರವೇಶ ಶುರುವಾಗಿತ್ತು. ಅದು ಮೂಳೆಗಳನ್ನು ಹೊಕ್ಕು ನಂತರ ಅವರಲ್ಲಿ ಮೂಳೆಯ ಕ್ಯಾನ್ಸರ್‌ಗೆ ಕಾರಣವಾಯಿತು!ನಮ್ಮಲ್ಲಿ ಸೂಜಿಗೆ ದಾರ ಪೋಣಿಸುವಾಗಲೂ ಎಷ್ಟೊಂದು ಜನ ದಾರದ ಕೊನೆಯನ್ನು ಮೊನಚಾಗಿಸಲು ಅದನ್ನು ಎಂಜಿಲಿ­ನಿಂದ ತಣಿಸುವುದಿಲ್ಲವೇ? ಹೋಗಲಿ ಬಿಡಿ, ಅದು ನಮ್ಮ ಎಂಜಿಲು, ನಿಮಗೇನು ತಕರಾರು ಎನ್ನುತ್ತೀರಾ? ಮೇಲಿನ ನಿದರ್ಶನದಿಂದ ನಮ್ಮ ಎಂಜಿಲೂ ನಮಗೆ ಮಾರಕ ಆಗಬಹುದು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈಗ ಸಮಸ್ಯೆ ಉಂಟಾಗಿರುವುದು ಮತ್ತೊಬ್ಬರ ಎಂಜಿಲು ಎಲೆಯ ಮೇಲಿನ ಉರುಳಾಟ!ಸ್ವಇಚ್ಛೆಯಿಂದ ಈ ರೀತಿ ಹೊರಳಾಡುವ ಭಕ್ತರ ಗುಂಪು ಮತ್ತು ಜಾತಿ ಭೇದದ ಚರ್ಚೆ ಒಂದೆಡೆಯಾದರೆ, ಕಡ್ಡಾಯವಾಗಿ ತಮ್ಮ ಎಂಜಿಲನ್ನು ಲೇಪಿಸಿ ಎಲ್ಲರಿಗೂ ಹಂಚುವ ಜನಸಮೂಹ ಇನ್ನೊಂದೆಡೆ. ಈ ಎರಡನೆಯ ವಿಷಯದಲ್ಲಿ ಜಾತಿ, ಮೇಲ್ಪಂಕ್ತಿ, ಕೆಳವರ್ಗ ಎಂಬೆಲ್ಲ ಭೇದಭಾವ ಇಲ್ಲ. ಉದಾಹರಣೆಗೆ ಬಸ್‌, ಸಿನಿಮಾ ಮತ್ತಿತರ ಕಡೆ ಟಿಕೆಟ್ ಕೊಡುವವರು, ಅಂಗಡಿಗಳಲ್ಲಿ, ವ್ಯವಹಾರಗಳಲ್ಲಿ ಹಣ ಎಣಿಸಿ  ಕೊಡುವವರು ಅವುಗಳ ಮೇಲೆ ತಮ್ಮ ಎಂಜಿಲನ್ನು ಸವರುವುದಿಲ್ಲವೇ? ಇಲ್ಲಿ ಅಂತಹ ಟಿಕೆಟ್ ಹಾಗೂ ಚಿಲ್ಲರೆ ಹಣ ಪಡೆಯುವುದು ನಮಗೆ ಅನಿವಾರ್ಯ. ಬೇಡ ಎನ್ನಲಾದೀತೆ?ಇದು ದಿನನಿತ್ಯ ನಡೆಯುವ ಬಲವಂತದ ಎಂಜಿಲು ಲೇಪನ. ಎಷ್ಟು ಜನ ಇಂತಹ ಎಂಜಿಲು ಲೇಪನವನ್ನು ಇಷ್ಟಪಡದಿದ್ದರೂ ‘ನಮಗೆ ಎಂಜಿಲು ಹಚ್ಚಿ ಟಿಕೆಟ್ ಕೊಡಬೇಡ’ ಎಂದು ದಿಟ್ಟವಾಗಿ ಹೇಳುತ್ತಾರೆ?ಪುಸ್ತಕದ ಹಾಳೆಗಳಿಗೆ ಎಂಜಿಲು ಹಚ್ಚಿ ಪುಟ ತಿರುವುವ ಸಾವಿರಾರು ಜನರನ್ನು ನೋಡುತ್ತೇವೆ. ವಿದ್ಯಾವಂತರು, ದೊಡ್ಡ ಹುದ್ದೆಯಲ್ಲಿ ಇರುವವರು, ಸಾಮಾನ್ಯ ಮನುಷ್ಯರು ಸೇರಿದಂತೆ ಯಾರ ನಡುವೆಯೂ ಈ ವಿಷಯದಲ್ಲಿ ಯಾವ ಭೇದವೂ ಇಲ್ಲ! ಕಿರುತೆರೆಯಲ್ಲಿ ಅತ್ಯಂತ ಪ್ರತಿಷ್ಠಿತ ಹಿರಿಯ ನಟರೊಬ್ಬರು ತಮ್ಮ ಷೋನಲ್ಲಿ ಈ ರೀತಿ ಮಾಡಿದ್ದು ಅನೇಕರಿಗೆ ಅಸಹ್ಯ ಭಾವನೆ ಉಂಟು ಮಾಡಿತ್ತು!ನಾವೆಲ್ಲ ಸಣ್ಣವರಿರುವಾಗ ಪೆನ್ಸಿಲ್, ಪೆನ್ನು ಬಾಯಲ್ಲಿ ಇಟ್ಟುಕೊಂಡರೆ ಅಥವಾ ಎಂಜಿಲನ್ನು ಯಾವುದೇ ರೀತಿ ಪುಸ್ತಕಕ್ಕೆ ಸೋಕಿಸಿದರೆ ಅಮ್ಮ ಬೈಯುತ್ತಿದ್ದರು. ಸರಸ್ವತಿಗೆ ಎಂಜಿಲು ಸೋಕಿದರೆ ವಿದ್ಯೆ ಹತ್ತದು ಎಂದು ಭಯಪಟ್ಟು ನಾವು ಅಮ್ಮನ ಮಾತು  ಪಾಲಿಸುತ್ತಿದ್ದೆವು. ಇದು ಯಾವ ಶಾಸ್ತ್ರ, ಸಂಪ್ರದಾಯದಲ್ಲಿ ಇತ್ತೋ ಆಗ ತಿಳಿಯುವ ಗೋಜಿಗೇ ಹೋಗಿರಲಿಲ್ಲ. ಆದರೆ ಈಗ ಮಾತ್ರ ಅದು ಆರೋಗ್ಯ ಶಾಸ್ತ್ರದಲ್ಲಿ ಇರುವುದಂತೂ ನಿಜ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಇತರರಿಗೆ ಸೋಂಕು ಹರಡದಂತೆ ತಡೆಯುವುದು ಸಹ ಪ್ರತಿಯೊಬ್ಬರ ಕರ್ತವ್ಯ ಅಲ್ಲವೇ?ಎಂಜಿಲಿನಿಂದ ಅನೇಕ ರೋಗಾಣುಗಳು ಒಬ್ಬರಿಂದ ಒಬ್ಬರಿಗೆ ಹರಡಿ ಸೋಂಕನ್ನು ಉಂಟು ಮಾಡುತ್ತವೆ. ಪೆನ್ಸಿಲ್‌ನ ಪೇಂಟ್‌ನಲ್ಲಿರುವ ಸೀಸ (ಲೆಡ್) ದೇಹವನ್ನು ಹೊಕ್ಕಾಗ, ಪೆನ್ಸಿಲ್ ಚುಚ್ಚಿದಾಗ, ಬಾಯೊಳಗೆ ಹೋದಾಗ ಆಗುವ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ಆಗೆಲ್ಲ ಪೆನ್ಸಿಲ್‌ನ್ನು ಕಚ್ಚಿ ನಮ್ಮ ಎಂಜಿಲನ್ನು  ಸರಸ್ವತಿಗೆ ತಾಕಿಸಬಾರದು ಎನ್ನುತ್ತಿದ್ದರೇನೋ? ಎಂಜಿಲಿನಲ್ಲಿರುವ ರೋಗಾಣುಗಳು ಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುವುದನ್ನು ತಡೆಗಟ್ಟಲು ಸಹ ಅಮ್ಮ ಕಲಿಸಿದ ಸಂಸ್ಕಾರ, ಸಂಸ್ಕೃತಿ ಎಷ್ಟು ಒಳ್ಳೆಯದು ಎಂಬುದು ಈಗ ತಿಳಿಯುತ್ತಿದೆ. ಇಂತಹ ಕಾರಣಗಳಿಂದಲೇ ಕೈಗಳ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ.ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡಲಾಗಿ ಕೈ ಹಿಡಿಯುತ್ತೇವೆ. ಕೈಗಳ ಮೇಲೆ ಬಿದ್ದ ಎಂಜಿಲಲ್ಲಿ ಎಷ್ಟೋ ಕ್ರಿಮಿಗಳಿರುತ್ತವೆ. ನೆಗಡಿ ಬಂದಾಗಲಂತೂ ಮೂಗನ್ನು ಒರೆಸಿಕೊಳ್ಳುತ್ತಲೇ ಇರುತ್ತೇವೆ. ಎಂಜಿಲು ಹಾಗೂ ಮೂಗಿನ ದ್ರವಗಳಿಂದ ಕೈಗೆ ಅಂಟಿದ ಬ್ಯಾಕ್ಟೀರಿಯ ಇನ್ನೊಬ್ಬರಿಗೆ ರವಾನೆಯಾಗುವುದು ಹೇಗೆ? ಅವರು ಮುಟ್ಟಿದಂತಹ ಪೆನ್, ಪೇಪರ್, ಬಾಗಿಲು, ಇತರ ವಸ್ತುಗಳನ್ನು ನಾವು ಮುಟ್ಟಿದಾಗ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅವರ ಕೈಗಳನ್ನು ಕುಲುಕಿ ಅವರನ್ನು ಬರಮಾಡಿಕೊಂಡಾಗ, ಪರಿಚಯಿಸಿಕೊಂಡಾಗ, ಧನ್ಯವಾದ ಅರ್ಪಿ­ಸು­ವಾಗ. ಸರ್ವೇ ಸಾಮಾನ್ಯವಾದ ನೆಗಡಿ ಸಹ ಈ ಮಾರ್ಗದಲ್ಲೂ ಹರಡಬಹುದು. ಅದಕ್ಕೇ ಅಲ್ಲವೇ ಎರಡೂ ಕೈಗಳನ್ನು ಜೋಡಿಸಿ ‘ನಮಸ್ಕಾರ’ ಎನ್ನುವ ನಮ್ಮ ಭಾರತೀಯ ಪದ್ಧತಿ ವೈಜ್ಞಾನಿಕವಾಗಿ ಎಷ್ಟು ಸುಂದರ ಹಾಗೂ ಆರೋಗ್ಯಕರ ಎನ್ನಿಸಿಕೊಂಡಿರುವುದು!ಊರೆಲ್ಲ ಎಲ್ಲೆಲ್ಲೂ ಎಂಜಿಲುಮಯ ಆಗುತ್ತಿದೆ. ಗುಟ್ಕಾ ತಿನ್ನುವ ಮಂದಿ ತಮ್ಮ ಆರೋಗ್ಯವನ್ನು ಬಲಿ ಕೊಟ್ಟುಕೊಳ್ಳುವುದರ ಜೊತೆಗೆ, ಎಲ್ಲೆಂದರಲ್ಲಿ ಕೆಂಪು ಬಣ್ಣದ ಎಂಜಿಲನ್ನು ಉಗುಳಿ ಪರಿಸರವನ್ನು ಸಹ ನಾಶ ಮಾಡುತ್ತಿದ್ದಾರೆ. ಇದೇ ರೀತಿ ರಸ್ತೆ, ಫುಟ್‌ಪಾತ್‌ ಎನ್ನದೆ ಸಿಕ್ಕಸಿಕ್ಕಲ್ಲೆಲ್ಲ ಉಗುಳುವವರು, ವೈರಿಯೊಡನೆ ಜಗಳ ಮಾಡಿ ಉಗಿಯುವವರು, ಜೋರಾಗಿ ಮಾತನಾಡುವಾಗ, ಪಾಠ ಮಾಡುವಾಗ ಎದುರಿಗೆ ಇರುವವರ ಮೇಲೆ ಎಂಜಿಲು  ಪ್ರೋಕ್ಷಣೆ ಮಾಡುವವರು ಮತ್ತೊಂದು ವರ್ಗದ ಜನ. ಇಂತಹವರನ್ನು ನೋಡಿಯೇ ಅಲ್ಲವೇ ‘ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಎನ್ನುವ ಮಾತು ಹುಟ್ಟಿಕೊಂಡಿರುವುದು.ಎಂಜಿಲು ಅನೇಕ ರೋಗಾಣುಗಳನ್ನು ಹರಡುವ ವಾಹಕ. ಉದಾಹರಣೆಗೆ ಹೆಪಟೈಟಿಸ್– ಎ, ಎಚ್1ಎನ್1, ಸಿ.ಎಂ.ವಿ. ವೈರಾಣುಗಳು ಈ ಮೂಲಕ ಹರಡುತ್ತವೆ. ಇಂತಹ ಅನಾಹುತಗಳನ್ನು ಎಲ್ಲರೂ ಒಗ್ಗೂಡಿ ತಪ್ಪಿಸಬೇಕಾಗಿದೆ. ಹೀಗಾಗಿ ಹಲವಾರು ವಿಧಾನಗಳ ಮೂಲಕ ತಮ್ಮ ಎಂಜಿಲನ್ನು ಕಡ್ಡಾಯವಾಗಿ ಎಲ್ಲರಿಗೂ ಸೋಕಿಸುವ ಪದ್ಧತಿಗಳನ್ನು ವಿರೋಧಿಸಿ, ಜನರಿಗೆ ಅರಿವು ಮೂಡಿಸಲು ಮುಂದಾಗಬೇಕಾಗಿದೆ.ಪುಟ ತಿರುವಲು, ನೋಟುಗಳನ್ನು ಎಣಿಸಲು ವೆಟ್‌ಪ್ಯಾಡ್‌ಗಳು ಲಭ್ಯವಿವೆ. ಸೂಜಿಗೆ ದಾರ ಪೋಣಿಸಲು ನೀಡಲ್ ಥ್ರೆಡರ್‌ಗಳಿವೆ. ಅದ್ಯಾವುದೂ ಬೇಡವೆಂದರೆ  ನೀರನ್ನಾದರೂ ಬಳಸಬಹುದಲ್ಲವೇ?ಪುಟಗಳನ್ನು ತಿರುವಲು ಎಂಜಿಲು ಹಚ್ಚುವವರು ಅದನ್ನು ತಮ್ಮ ಪುಸ್ತಕಕ್ಕಷ್ಟೇ ಸೀಮಿತ ಗೊಳಿಸುವುದಿಲ್ಲ. ಯಾವುದೇ ಪುಸ್ತಕ ಇರಲಿ, ಯಾರದೇ ಪುಸ್ತಕ ಇರಲಿ --ಎಲ್ಲವನ್ನೂ ರುಚಿ ನೋಡುವಂತೆ ಇರುತ್ತದೆ ಇವರ ಕ್ರಿಯೆ! ಯಾವುದೇ ಅಭ್ಯಾಸ, ಪದ್ಧತಿಯಂತಹ  ವಿಷಯಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ, ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡು  ಅಳವಡಿಸಿಕೊಳ್ಳುವುದನ್ನು ಆಧುನಿಕ ಪ್ರಪಂಚ ಅನುಸರಿಸಬೇಕಾಗಿದೆ.

 

ಪ್ರತಿಕ್ರಿಯಿಸಿ (+)