ಗುರುವಾರ , ಏಪ್ರಿಲ್ 15, 2021
23 °C

ಅಳಿಸಲಾಗದ ಲಕ್ಷ್ಮಣ ರೇಖೆ

ಗೋಪಾಲಕೃಷ್ಣ ಹೆಗಡೆ Updated:

ಅಕ್ಷರ ಗಾತ್ರ : | |

ಇನ್ನು ಸಾಕು, ಜಾಗ ಖಾಲಿ ಮಾಡಿ~ ಎಂದು ಹೇಳುವ ಮೊದಲೇ ಆಟಕ್ಕೆ ವಿದಾಯ ಹೇಳಬೇಕು ಎಂಬ ಮಾತು ಕ್ರಿಕೆಟ್‌ನಲ್ಲಿದೆ. ಕಳೆದ ಎರಡು ದಶಕಗಳಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಕಂಡ ವಿಶ್ವಾಸಾರ್ಹ ಬ್ಯಾಟ್ಸಮನ್ ವಿ.ವಿ.ಎಸ್. ಲಕ್ಷ್ಮಣ್ ಹೊಸಬರಿಗೆ ದಾರಿ ಬಿಡಬೇಕು ಎಂಬ ಪಿಸುಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಲೇ ಇತ್ತು.ಸತತ ವೈಫಲ್ಯಗಳ ಸುಳಿಯಲ್ಲಿ ಸಿಕ್ಕಿಬಿದ್ದರೂ ಮರಳಿ ಎದ್ದುಬರುತ್ತೇನೆ ಎಂಬ ವಿಶ್ವಾಸದಲ್ಲೇ ಇದ್ದ ಲಕ್ಷ್ಮಣ್ ಈಗ ದಿಢೀರನೆ ನಿವೃತ್ತಿ ಘೋಷಿಸಿದ್ದಾರೆ. ಅದೂ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸಂದರ್ಭದಲ್ಲೇ ಅವರು ಬ್ಯಾಟ್ ಕೆಳಗಿಡುವುದಾಗಿ ಪ್ರಕಟಿಸಿದ್ದಾರೆ. 
ಹೈದರಾಬಾದ್‌ನಲ್ಲಿ ಕೊನೆಯ ಟೆಸ್ಟ್ ಆಡಲು ಸಾಧ್ಯವಾಗಲಿಲ್ಲ. ಕ್ಷಮೆ ಇರಲಿ

           -ವಿ.ವಿ.ಎಸ್. ಲಕ್ಷ್ಮಣ್

ನ್ಯೂಜಿಲೆಂಡ್ ವಿರುದ್ಧ ಈ ವಾರ ಆರಂಭವಾಗುವ ಎರಡು ಟೆಸ್ಟ್‌ಗಳ ಸರಣಿಗೆ ಅವರನ್ನು ಆರಿಸಲಾಗಿತ್ತು. ಮೊದಲ ಟೆಸ್ಟ್ ಹೈದರಾಬಾದ್‌ನಲ್ಲಿ, ಅಂದರೆ ಅವರ `ಮನೆಯಂಗಳ~ದಲ್ಲೇ ಬರುವ ಗುರುವಾರ ಆರಂಭವಾಗಲಿತ್ತು. ಆದರೆ, ನಿವೃತ್ತಿಯ ಬಗ್ಗೆ ಅವರು ಮೊದಲೇ ನಿರ್ಧರಿಸಿರಬೇಕು. ಮತ್ತೆ ವಿಫಲರಾದರೆ ತಂಡದಿಂದ ಹೊರಹಾಕುವರೆಂಬ ಅಳುಕೂ ಅವರಲ್ಲಿ ಮೂಡಿರಬೇಕು.ಈಗ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಯೇ ಇದೆ. ನೋಡಲು ಸೌಮ್ಯ ವ್ಯಕ್ತಿಯಾಗಿದ್ದರೂ ಬ್ಯಾಟಿಂಗ್‌ನಲ್ಲಿ ಉಕ್ಕಿನ ಮನುಷ್ಯನೇ ಆಗಿದ್ದ ಅವರ ನಿರ್ಗಮನದಿಂದ, ಭಾರತದ ಮಧ್ಯಮ ಕ್ರಮಾಂಕ ಇದ್ದಕ್ಕಿದ್ದಂತೆ ಖಾಲಿಯಾದಂತೆ ಅನಿಸುತ್ತಿದೆ. ಮೊದಲು ಸೌರವ್ ಗಂಗೂಲಿ ಹಾಗೂ ನಂತರ ರಾಹುಲ್ ದ್ರಾವಿಡ್ ವಿದಾಯ ಹೇಳಿದರು. ಮೂರನೇ ಕ್ರಮಾಂಕದಲ್ಲಿ ರಾಹುಲ್, ನಾಲ್ಕನೆಯದರಲ್ಲಿ ಸಚಿನ್, ಐದನೆಯವರಾಗಿ ಸೌರವ್ ಹಾಗೂ ಆರನೇ ಕ್ರಮಾಂಕದಲ್ಲಿ ಲಕ್ಷ್ಮಣ್ ಆಡುವವರೆಗೆ ಭಾರತದ ಮಧ್ಯಮ ಕ್ರಮಾಂಕ ವಿಶ್ವದಲ್ಲೇ ಶ್ರೇಷ್ಠ ಎಂದೆನಿಸಿಕೊಂಡಿತ್ತು. ಈಗ ಉಳಿದಿರುವವರು ಸಚಿನ್ ತೆಂಡೂಲ್ಕರ್ ಒಬ್ಬರೇ.ಹೈದರಾಬಾದ್ ಕ್ರಿಕೆಟ್ ಎಂದರೆ ಥಟ್ಟನೇ ನೆನಪಾಗುವ ಮೊದಲ ಹೆಸರು ಎಂ. ಎಲ್. ಜಯಸಿಂಹ. ನಂತರ ಮಹಮ್ಮದ್ ಅಜರುದ್ದೀನ್ ಹಾಗೂ ಲಕ್ಷ್ಮಣ್. ಈ ಮೂವರೂ ಮಧ್ಯಮ ಕ್ರಮಾಂಕದಲ್ಲೇ ಆಡಿದವರು. ಮೂವರ ವ್ಯಕ್ತಿತ್ವ ಭಿನ್ನವಾಗಿದ್ದರೂ ಆಟದ ಶೈಲಿ ಹೆಚ್ಚು ಕಡಿಮೆ ಒಂದೇ ರೀತಿಯದಾಗಿತ್ತು. ಸಿಂಹದಂತೆಯೇ ಬದುಕಿದ್ದ ಜೈ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಆಕರ್ಷಕ ಬ್ಯಾಟಿಂಗ್ ಜೊತೆ ಸ್ಫುರದ್ರೂಪಿಯೂ ಆಗಿದ್ದ ಅವರು ಎಷ್ಟು ಸುಂದರಿಯರ ಹೃದಯ ಕದ್ದಿದ್ದರೆಂಬುದಕ್ಕೆ ಲೆಕ್ಕವಿಲ್ಲ.ಅವರೊಡನೆಯ ಸಂಜೆ ಎಂದೂ ನೀರಸವಾಗಿರುತ್ತಿರಲಿಲ್ಲ. ಅಜರ್‌ಭಾಯ್ ಆಟವೂ ಆಕರ್ಷಕವೇ. ಆದರೆ ಅವರು ಮೈದಾನದೊಳಗೆ ಗಳಿಸಿದ ಹೆಸರನ್ನು ಹೊರಗೆ ಕಳೆದುಕೊಂಡರು. ಮೋಸದಆಟದ ಚಕ್ರವ್ಯೆಹ ಅವರನ್ನು ಬಲಿ ತೆಗೆದುಕೊಂಡಿತು. ಆದರೆ ಲಕ್ಷ್ಮಣ್ ಮಾತ್ರ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ವಿವಾದಕ್ಕೆ ಗುರಿಯಾಗಲಿಲ್ಲ. ಒಂದೇ ಒಂದು ಕಪ್ಪು ಚುಕ್ಕೆ ಅವರ ಅಂಗಿಯ ಮೇಲೆ ಇಲ್ಲ. ವಿಪರೀತ ದೈವಭಕ್ತ. ಅವರ ಕೋಣೆಯೊಳಗೆ ಹೊಕ್ಕರೆ ಇಡೀ ದೇಶದ ದೇವರುಗಳೆಲ್ಲ ಅಲ್ಲೇ ವಾಸವಾಗಿರುವಂತೆ ಭಾಸವಾಗುತ್ತದೆ ಎಂದು ಅವರನ್ನು ತೀರ ಹತ್ತಿರದಿಂದ ಬಲ್ಲ ಕ್ರಿಕೆಟ್ ಲೇಖಕರೊಬ್ಬರು ಹೇಳುತ್ತಿದ್ದರು.ಲಕ್ಷ್ಮಣ್ ತಮ್ಮ ತಂದೆ-ತಾಯಿಯ ಮಾತು ಕೇಳಿಬಿಟ್ಟಿದ್ದರೆ ಭಾರತ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿತ್ತು. ಇವರ ತಂದೆ ಡಾ. ಶಾಂತಾರಾಮ್ ಮತ್ತು ತಾಯಿ ಡಾ. ಸತ್ಯಭಾಮಾ ಅವರಿಗೆ ಮಗ ದೊಡ್ಡ ಡಾಕ್ಟರ್ ಆಗಬೇಕೆಂಬ ಕನಸು. ಆದರೆ ಮಗ ಸ್ಟೆಥೋಸ್ಕೋಪ್ ಬದಲು ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡ. ಇಬ್ಬರಿಗೂ ಮಾತು ಕೊಟ್ಟಂತೆ ಭಾರತ ತಂಡಕ್ಕೆ ಆಯ್ಕೆಯಾದ. ಎಪ್ಪತ್ತರ ದಶಕದಲ್ಲಿ ಭಾರತ ತಂಡದ `ಆಪದ್ಬಾಂಧವ~ ಎನಿಸಿಕೊಂಡಿದ್ದ ಜಿ.ಆರ್. ವಿಶ್ವನಾಥ್ ಅವರಂತೆಯೇ ಲಕ್ಷ್ಮಣ್ ಕೂಡ ಎದುರಾಳಿಗಳ ಗೆಲುವಿಗೆ ಅಡ್ಡಗೋಡೆಯಂತೆ ಗಟ್ಟಿಯಾಗಿ ನಿಂತು ಆಡಿದರು.ಅವರು ಆರಂಭಿಕ ಬ್ಯಾಟ್ಸಮನ್ ಆಗಿಯೇ ತಮ್ಮ  ಕ್ರಿಕೆಟ್ ಜೀವನ ಆರಂಭಿಸಿದರಾದರೂ ಕ್ರಮೇಣ ಮಧ್ಯಮ ಕ್ರಮಾಂಕಕ್ಕಿಳಿದರು. ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಅವರು ಆರಂಭಿಕ ಬ್ಯಾಟ್ಸಮನ್ ಆಗಿ ಗಳಿಸಿದ 167 ರನ್ನುಗಳ ಆಟ ಅವರ ಅತ್ಯುತ್ತಮ ಇನಿಂಗ್ಸ್‌ಗಳಲ್ಲೊಂದು. 2001 ರಲ್ಲಿ ಕೋಲ್ಕತ್ತದಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಭಾರತ ಫಾಲೋಆನ್ ಆದಾಗ, ಆಸ್ಟ್ರೇಲಿಯದ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಲಕ್ಷ್ಮಣ್ ಬರೀ ಆಪದ್ಬಾಂಧವನಾಗದೇ ಗೆಲುವಿನ ರೂವಾರಿಯೂ ಆದರು. ರಾಹುಲ್ ಬದಲು ಮೂರನೇ ಕ್ರಮಾಂಕದಲ್ಲಿ ಆಡಿ 281 ರನ್ ಗಳಿಸಿದರು. ಆರನೇ ಕ್ರಮಾಂಕದಲ್ಲಿ ಆಡಿದ ರಾಹುಲ್ ಜೊತೆ ಅವರು ಸೇರಿಸಿದ 376 ರನ್‌ಗಳ ಜೊತೆಯಾಟ ಕಾಂಗರೂಗಳ ಬಾಲ ತಿರುಚಿದಂತೆಯೇ ಆಗಿತ್ತು.ಅವರ ಮೇಲೆ ಟೆಸ್ಟ್ ಆಟಗಾರನೆಂದೇ ಮುದ್ರೆ ಒತ್ತಲಾಗಿತ್ತು. ಟೆಸ್ಟ್‌ಗಳಲ್ಲಿಯ ಅವರ 45.97 ರನ್‌ಗಳ ಸರಾಸರಿ ಅವರನ್ನು ಅಗ್ರಮಾನ್ಯ ಆಟಗಾರರ ಸಾಲಿನಲ್ಲೇ ನಿಲ್ಲಿಸುತ್ತದೆ. ಅವರು 83 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದರಾದರೂ, ಒಂದೇ ಒಂದು ವಿಶ್ವ ಕಪ್ ಟೂರ್ನಿಯಲ್ಲೂ ಆಡುವ ಅವಕಾಶ ಅವರಿಗೆ ಸಿಗಲೇ ಇಲ್ಲ. ಎರಡು ವರ್ಷಗಳ ಹಿಂದಿನ ಇಂಗ್ಲೆಂಡ್ ಪ್ರವಾಸ ಹಾಗೂ 2011-12 ರ ಆಸ್ಟ್ರೇಲಿಯ ಪ್ರವಾಸದಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ.ಅವರ ಆಟದ ದಿನಗಳು ಮುಗಿದವು ಎಂಬ ಟೀಕೆ ಆರಂಭವಾಗಿದ್ದೇ ಆಗ. ಆದರೆ ಪ್ರತಿಯೊಬ್ಬ ಕ್ರೀಡಾಪಟುವಿಗೂ ಕೊನೆಯ ಅವಕಾಶವೊಂದರಲ್ಲಿ ಪ್ರಯತ್ನಿಸುವ ಮನಸ್ಸಿರುತ್ತದೆ. 37 ವರ್ಷ ವಯಸ್ಸಿನ ಲಕ್ಷ್ಮಣ್ ಕೂಡ ಅಂಥ ಅವಕಾಶಕ್ಕೆ ಕಾಯುತ್ತಿದ್ದರೆಂದು ಕಾಣುತ್ತದೆ. ಆದರೆ ಅದು ಒದಗಿ ಬಂದರೂ `ಇನ್ನು ಬೇಡ~ ಎಂದು ಅವರು ನಿವೃತ್ತಿಯಾಗಿದ್ದಾರೆ. ಹರಿಯುವ ನೀರಿನಂತೆ ಹೊಸ ಆಟಗಾರರು ಬಂದೇ ಬರುತ್ತಾರೆ. ಆದರೆ ಲಕ್ಷ್ಮಣ್ ಅವರ ಹೆಸರು ಕಾಲಕಾಲಕ್ಕೆ ನೆನಪಾಗುತ್ತಲೇ ಇರುತ್ತದೆ. ಭಾರತದ ಕ್ರಿಕೆಟ್‌ನಲ್ಲಿ ಅವರು ಮೂಡಿಸಿರುವ ಲಕ್ಷ್ಮಣ ರೇಖೆಯನ್ನು ಅಳಿಸುವುದು ಅಷ್ಟು ಸುಲಭ ಅಲ್ಲ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.