ಸೋಮವಾರ, ಜನವರಿ 20, 2020
29 °C

ಆಫ್ರಿಕನ್ ಸಂಸ್ಕೃತಿಯ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಫ್ರಿಕನ್ ಜನರು ತುಂಬಾ ಬಲಿಷ್ಠರು. ಗಟ್ಟಿಗುಂಡಿಗೆ ಉಳ್ಳವರು. ಒರಟು ಜನರಾದರೂ ಇವರೊಳಗೊಂದು ಸಂಸ್ಕೃತಿಯ ಸೊಗಡಿದೆ. ಜನಪದದ ಲಾಲಿತ್ಯವಿದೆ. ಇವರ ವಿಶಿಷ್ಟ ಸಂಪ್ರದಾಯ ಹಾಗೂ ಆಚರಣೆಗಳು ಇತರರನ್ನು ಸೆಳೆಯುತ್ತವೆ.

ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 50ಕ್ಕೂ ಹೆಚ್ಚಿನ ಆಫ್ರಿಕನ್ ವಿದ್ಯಾರ್ಥಿಗಳು ಸೇರಿಕೊಂಡು `ತಾಂಜೇನಿಯನ್ ಸ್ಟುಡೆಂಟ್ ಅಸೋಸಿಯೇಶನ್~ ರಚಿಸಿಕೊಂಡಿದ್ದಾರೆ.  ಈ ಸಂಘದಲ್ಲಿ ಕ್ರಿಯಾಶೀಲಾ ವಿದ್ಯಾರ್ಥಿಗಳ ಒಂದು ದೊಡ್ಡ ದಂಡಿದೆ. ಇವರು ಪ್ರತಿವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಬಾರಿ ತಾಂಜೇನಿಯಾ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಸ್ತು ಪ್ರದರ್ಶನ ಅಲ್ಲಿನ ಸಂಸ್ಕೃತಿಯನ್ನು ಅನಾವರಣಗೊಳಿಸಿತು. ಸ್ಥಳೀಯರಿಗೆ ತಮ್ಮ ದೇಶದ ಸಂಸ್ಕೃತಿ ಪರಿಚಯಿಸುವುದು ಈ ವಸ್ತುಪ್ರದರ್ಶನದ ಮುಖ್ಯ ಉದ್ದೇಶವಾಗಿತ್ತು.

ವಿಭಿನ್ನ ಕೇಶ ವಿನ್ಯಾಸ ಹಾಗೂ ವಸ್ತ್ರ ಧರಿಸಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿದಾಗ ಅಲ್ಲೊಂದು ಪುಟ್ಟ ಆಫ್ರಿಕಾವೇ ಮೈದಳೆದಿದೆ ಎಂಬಂತೆ ಭಾಸವಾಗುತ್ತಿತ್ತು. ತಾಂಜೇನಿಯಾ ವಿದ್ಯಾರ್ಥಿಗಳು ತಮ್ಮ ದೇಶದ ಭೌಗೋಳಿಕ ರಚನೆ, ಸಂಸ್ಕೃತಿ, ಸಂಪ್ರದಾಯ, ಆಹಾರ ಕ್ರಮ, ವಸ್ತ್ರ ವಿನ್ಯಾಸ, ನೃತ್ಯ ಪ್ರಕಾರ ಹೀಗೆ ಎಂಟಕ್ಕೂ ಅಧಿಕ ವಿಚಾರಗಳನ್ನು ವಸ್ತುಪ್ರದರ್ಶನದಲ್ಲಿ ತಿಳಿಸಿಕೊಟ್ಟರು.

ವಸ್ತು ಪ್ರದರ್ಶನದಲ್ಲಿ ಎಂಟು ಸ್ಟಾಲ್‌ಗಳಿದ್ದವು. ಇಲ್ಲಿ ಕರಕುಶಲ ವಸ್ತುಗಳು, ವಿವಿಧ ಬಗೆಯ ತಿನಿಸುಗಳು, ಕಪ್ಪೆಚಿಪ್ಪಿನಿಂದ ತಯಾರಾದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು ತಯಾರಿಸಿದ್ದ ಪೋಸ್ಟರ್‌ಗಳಲ್ಲಿ ಆ ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸ್ಥಿತಿ, ಜನಜೀವನವನ್ನು ಸಾರುವ ವಿವರಗಳಿದ್ದವು. ಕೊನೆಯಲ್ಲಿ ಕಿನ್ಯಾ, ಜಂಜಿಬಾರ್ ಮತ್ತು ಪೂರ್ವ ಆಫ್ರಿಕಾದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ್ದು ಎಲ್ಲರ ಮನಸೆಳೆಯಿತು. 

ಪ್ರತಿಕ್ರಿಯಿಸಿ (+)