ಬುಧವಾರ, ಮೇ 25, 2022
29 °C

ಆಲಮಟ್ಟಿಯಲ್ಲಿ ಮಳೆ: ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಆಲಮಟ್ಟಿ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಭಾರಿ ಮಳೆ ಸುರಿದಿದ್ದು, ಹೊಲ ಗದ್ದೆಗಳಲ್ಲಿ ನೀರು ನಿಂತು ರೈತರಲ್ಲಿ ಹರ್ಷ ಮೂಡಿಸಿದೆ.ಭಾನುವಾರ ಆಲಮಟ್ಟಿಯಲ್ಲಿ 74.6 ಎಂ.ಎಂ. ಮಳೆಯಾಗಿದ್ದು, ಈ ಮಳೆಯಿಂದ ಹಿಂಗಾರು ಬೆಳೆ ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ.ಆಲಮಟ್ಟಿ ಸುತ್ತಮುತ್ತಲಿನ ನಿಡಗುಂದಿ, ಅರಳದಿನ್ನಿ, ಬೇನಾಳ, ವಂದಾಲ ಗ್ರಾಮದಲ್ಲಿಯೂ ಮಳೆಯಾಗಿದೆ. ಆಲಮಟ್ಟಿ ಡ್ಯಾಂಸೈಟ್‌ದಲ್ಲಂತೂ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲಾ ವಸಾಹತುಗಳು ಸೋರಿದ್ದು, ಅನೇಕ ಮನೆಗಳ ಕೋಣೆಗಳು ಕುಸಿದಿವೆ.ರಾತ್ರಿಯಿಡಿ ಆಲಮಟ್ಟಿಯ ವಸಾಹತುಗಳಲ್ಲಿ ವಾಸಿಸುವ ನೌಕರರು ಸೋರುವ ಮಾಳಿಗೆಯಿಂದ ಜಾಗರಣೆ ಮಾಡಿದ್ದಾರೆ. ಮನೆಯೊಳಗೆ ಹೊಕ್ಕ  ನೀರನ್ನು ಹೊರಕ್ಕೆ ಹಾಕುವುದರಲ್ಲಿ ಸುಸ್ತಾದರು. ನೀರಿಲ್ಲದೇ ಕಮರುತ್ತಿದ್ದ ತೊಗರಿ ಬೆಳೆಗೆ ಈ ಮಳೆ ಜೀವ ನೀಡಿದ್ದಲ್ಲದೇ, ಹಿಂಗಾರು ಬೆಳೆ ಜೋಳ ಬೆಳೆಯಲು ಈ ಮಳೆ ಅನುಕೂಲವಾಗಿದೆ.ಆಲಮಟ್ಟಿಯಲ್ಲಿ 74.6 ಎಂ.ಎಂ, ಆರೇಶಂಕರದಲ್ಲಿ 39.8 ಎಂ.ಎಂ, ಹೂವಿನಹಿಪ್ಪರಗಿಯಲ್ಲಿ 18 ಎಂ.ಎಂ, ಬಸವನಬಾಗೇವಾಡಿಯಲ್ಲಿ 4.8 ಎಂ.ಎಂ, ಮಟ್ಟಿಹಾಳದಲ್ಲಿ 5 ಎಂ.ಎಂ. ಮಳೆಯಾಗಿದೆ.ಆಲಮಟ್ಟಿ ಅಣೆಕಟ್ಟಿಗೂ ನೀರು: ಕಳೆದ ಒಂದು ವಾರದಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕ್ಷೀಣಿಸಿತ್ತು. ಭಾನುವಾರದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ 10,697 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 12,000 ಕ್ಯೂಸೆಕ್ ನೀರನ್ನು ಕೆ.ಪಿ.ಸಿ.ಎಲ್. ಮೂಲಕ ನಾರಾಯಣಪೂರ ಜಲಾಶಯಕ್ಕೆ ಹರಿದು ಬಿಡಲಾಗುತ್ತಿದೆ.519.6 ಮೀ ಎತ್ತರದ ಜಲಾಶಯದಲ್ಲಿ 519.46 ಮೀ ವರೆಗೆ ನೀರು ಸಂಗ್ರಹವಾಗಿದೆ.ಹೆಚ್ಚಿದ ವಿದ್ಯುತ್ ಉತ್ಪಾದನೆ: ಆಲಮಟ್ಟಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ಕೆ.ಪಿ.ಸಿ.ಎಲ್. ಮೂಲಕ 12,000 ಕ್ಯೂಸೆಕ್ ನೀರು ಹರಿದು ಬಿಟ್ಟಿರುವುದರಿಂದ ಆಲಮಟ್ಟಿಯಲ್ಲಿ ವಿದ್ಯುತ್ ಉತ್ಪಾದನೆಯೂ ಹೆಚ್ಚಳವಾಗಿದೆ. ವಿದ್ಯುದಾಗಾರದ ಮೂರು ಘಟಕಗಳಿಂದ ನಿತ್ಯ 2.2 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.