ಮಂಗಳವಾರ, ಜನವರಿ 21, 2020
29 °C

ಉಡುಪಿ: ಕೃಷ್ಣಮಠದತ್ತ ನುಗ್ಗಲೆತ್ನಿಸಿದ ಪ್ರತಿಭಟನಾಕಾರರಿಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಾತಿ ವ್ಯವಸ್ಥೆ ವಿಷ ಬೀಜದ ಫಲವಾಗಿ ಎಲ್ಲ ದೇವಾಲಯ ಮತ್ತು ಮಠಗಳಲ್ಲಿ ಅಸ್ತಿತ್ವದಲ್ಲಿರುವ ಪಂಕ್ತಿಭೇದ ಹಾಗೂ ಜಾತಿಭೇದವನ್ನು ತೊಡೆದುಹಾಕಬೇಕು. ಎಲ್ಲ ಜಾತಿಗಳ ಸಹಭೋಜನ ಆಚರಣೆಗೆ ತರಬೇಕು, ಜಾತಿಗಳ ನಡುವೆ ಸಮಾನತೆ ಬರಬೇಕು ಎಂದು ಆಗ್ರಹಿಸಿ ಸಿಪಿಎಂ ರಾಜ್ಯ ಸಮಿತಿ ವತಿಯಿಂದ ಇಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.ಅಜ್ಜರಕಾಡುವಿನಲ್ಲಿನ ಗಾಂಧಿ ಪ್ರತಿಮೆ ಹಾಗೂ ಹುತಾತ್ಮರ ಸ್ಮಾರಕದ ಬಳಿ ಮಧ್ಯಾಹ್ನ 12 ಗಂಟೆಗೆ ರಾಜ್ಯ ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿಯೇ ಭೋಜನ ಮುಗಿಸಿ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ತೆರಳಿ ಪ್ರತಿಭಟಿಸಲು ಯತ್ನಿಸಿದಾಗ ಪೊಲೀಸರು ತಡೆದರು.ಸಂಸ್ಕೃತ ಕಾಲೇಜು ಬಳಿಯೇ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಕೃಷ್ಣಮಠದ ಮುಂಭಾಗ ಪ್ರತಿಭಟನೆಗೆ ಯೋಜಿಸಿದ್ದ ಕಾರ್ಯಕರ್ತರು, ಮುಖಂಡರು ಪೊಲೀಸರ ಜತೆ ಜಟಾಪಟಿ ನಡೆಸಿದರು. ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುವ ಯತ್ನ ನಡೆಸಿದರು. ಮುಂದೆ ನುಗ್ಗಲು ಯತ್ನಿಸಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು. ಧಿಕ್ಕಾರ ಕೂಗಿದ ಪ್ರತಿಭಟನಾಕರರು ಸ್ವಯಂ ಬಂಧನಕ್ಕೊಳಗಾದರು. ಸ್ವಲ್ಪ ಸಮಯದ ನಂತರ ಪೊಲೀಸರು ಬಿಡುಗಡೆ ಮಾಡಿದರು.ಕೆಳಜಾತಿಯವರಿಗೆ ಕೃಷ್ಣನ ದರ್ಶನ ನಿರಾಕರಿಸಿದ್ದಕ್ಕಾಗಿ ಕನಕನ ಕಿಂಡಿ ರೂಪುಗೊಂಡ ಪ್ರಕರಣ ಜಾತಿ ಭೇದದ ವಿರುದ್ಧದ ಜ್ವಲಂತ ಉದಾಹರಣೆ. ಆದರೂ ಉಡುಪಿ ಕೃಷ್ಣಮಠದಲ್ಲಿ ಪಂಕ್ತಿಭೇದ, ಜಾತಿಭೇದ ಮುಂದುವರಿದಿವೆ. ಇದು ಮಾನವೀಯತೆಗೆ ಹಾಗೂ ದೇಶದ ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬ್ರಾಹ್ಮಣರ ಎಂಜಲೆಲೆಗಳ ಮೇಲೆ ಉರುಳಾಡುವ ಮಡೆಮಡೆ ಸ್ನಾನ ಸೇವೆ ಮತ್ತು ಅದರ ವಿರುದ್ಧ ಮನವಿ ಸಲ್ಲಿಸಲು ಬಂದವರ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರತಿಭಟನಾಕಾರರು ಖಂಡಿಸಿದರು. ಪೇಜಾವರ ವಿಶ್ವೇಶತೀರ್ಥರೇ ತಮ್ಮ ಮಠದಲ್ಲಿ ಮೊದಲು ಪಂಕ್ತಿಭೇದ ನಿಷೇಧಿಸುವ ಮೂಲಕ ಮಾದರಿಯಾಗಬೇಕು ಎಂದೂ ಒತ್ತಾಯಿಸಲಾಯಿತು. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳ ಬಳಿಯೂ ಇದೇ ರೀತಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು.ಮೈಸೂರು, ಹಾಸನ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಪ್ರತಿಭಟನಾಕಾರರು ಪ್ರತಿಭಟನೆ ಮುಗಿದ ಬಳಿಕ ತಂಡೋಪತಂಡವಾಗಿ ಶ್ರೀಕೃಷ್ಣಮಠದತ್ತ ತೆರಳಿ ಕೃಷ್ಣನ ದರ್ಶನ ಪಡೆದರು.ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಕೇಂದ್ರ ಸಮಿತಿ ಸದಸ್ಯರಾದ ವಿ.ಜಿ.ಕೆ, ಜಿ.ಎನ್.ನಾಗರಾಜ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಶಂಕರ್, ಪಿ.ವಿಶ್ವನಾಥ್ ರೈ, ಕೆ.ನೀಲಾ, ಪ್ರಸನ್ನ ಕುಮಾರ್, ಕೆ.ಆರ್.ಶ್ರೇಯಾನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)