ಎಲ್ಲಿ ನೋಡಿದರೂ ಕಸದ ರಾಶಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಮುಗಿದಿದೆ. ಈಗ ಅಲ್ಲಿ ಜನಸ್ತೋಮವೂ ಇಲ್ಲ. ಹೂವಿನ ಅಲಂಕಾರವೂ ಇಲ್ಲ. ಮಂಗಳವಾರ ಉದ್ಯಾನದಲ್ಲಿ ಕಂಡದ್ದು ಕಸ ಮತ್ತು ಅದರ ದುರ್ನಾತ ಮಾತ್ರ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಂಡಿದ್ದು, ಎಲ್ಲಿ ನೋಡಿದರೂ ಕಸದ ರಾಶಿಯೇ ಎದ್ದು ಕಾಣುತ್ತಿತ್ತು.
ತೋಟಗಾರಿಕೆ ಇಲಾಖೆ ಮತ್ತು ಸ್ವಯಂ ಸೇವಕರು ಪ್ರದರ್ಶನಕ್ಕೆ ಬರುವ ಜನರಿಗೆ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಬಾರಿ ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಮನಬಂದತೆ ಕಸ ಬಿಸಾಡಿ ಹೋಗಿದ್ದಾರೆ.
ಗಾಜಿನ ಮನೆಯ ಪಕ್ಕದಲ್ಲಿ ಅಳವಡಿ ಸಲಾಗಿದ್ದ ಅಂಗಡಿಗಳ ಸಾಲಿನಲ್ಲಿ ಪ್ಲಾಸ್ಟಿಕ್‌ಗಳು ಕುರುಹುಗಳಾಗಿ ಉಳಿದುಕೊಂಡಿವೆ. ಉದ್ಯಾನದ ಮೂಲೆಗಳಲ್ಲಿ ಒಟ್ಟುಗೂಡಿಸಿರುವ ಹಸಿ ಕಸ ಗುಡ್ಡದಂತೆ ಬಿದ್ದಿದೆ. ಆರ್.ವಿ. ಪಬ್ಲಿಕ್ ಶಾಲೆ ಸ್ವಯಂಪ್ರೇರಿತರಾಗಿ ಮಂಗಳವಾರ ಉದ್ಯಾನದಲ್ಲಿದ್ದ ಒಣ ಕಸ ಎತ್ತಿಹಾಕಿ ಶುಚಿಗೊಳಿಸಿದರು.
‘ಉದ್ಯಾನದಲ್ಲಿ ರಾಶಿ ರಾಶಿ ಕಸ ಹಾಗೇ ಬಿದ್ದಿದೆ. ಇಲಾಖೆ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಶೀಘ್ರವಾಗಿ ಸ್ವಚ್ಛಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಲಾಲ್‌ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಪಿ. ಸದಾಶಿವ ಅವರು ತಿಳಿಸಿದರು.
‘ಪ್ರದರ್ಶನ ಕೊನೆಯ ದಿನವನ್ನು ಹೊರತುಪಡಿಸಿ ಆಯಾ ದಿನದ ಕಸವನ್ನು ನಿಯಮಿತವಾಗಿ ಶುಚಿಗೊಳಿಸುತ್ತಿದ್ದೆವು. ಈಗಾಗಲೇ ನಾಲ್ಕು ಲಾರಿ ಕಸವನ್ನು ತೆರವುಗೊಳಿಸಿದ್ದೇವೆ. ಇದನ್ನು ಸ್ವಚ್ಛಗೊಳಿಸಲು ನಾಲ್ಕು ದಿನವಾದರೂ ಆಗುತ್ತದೆ’ ಎಂದು ಮೈಸೂರು ತೋಟಗಾರಿಕೆ ಸೊಸೈಟಿಯ ಅಧಿಕಾರಿ ವಿವರಿಸಿದರು.
ಹೆಜ್ಜೇನು ಕಡಿದವರ ಆರೋಗ್ಯ ಸ್ಥಿರ: ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ಭೇಟಿ ನೀಡಿದ್ದ ಇಬ್ಬರಲ್ಲ, ಒಟ್ಟು ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.
ಶಿವರಾಜು, ಹನುಮಂತೇಗೌಡ ಅವರೊಂದಿಗೆ ಜಿತೇಂದ್ರ ಕುಮಾರ್ ಮತ್ತು ಸೂರಜ್ ಎಂಬುವವರಿಗೂ ಸಹ ಹೆಜ್ಜೇನು ಕಡಿದಿದ್ದು, ಅವರಿಗೆ ಗಾಜಿನ ಮನೆಯ ಪಕ್ಕದಲ್ಲಿ ತೆರೆದಿದ್ದ ವೈದ್ಯಕೀಯ ಶಿಬಿರದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಯಿತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾದ ಶಿವರಾಜು, ಹನುಮಂತೇಗೌಡ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.