ಮಂಗಳವಾರ, ಮೇ 24, 2022
30 °C

ಕಿತ್ತೂರು ಉತ್ಸವ: ಕಾಟಾಚಾರದ ಸಿದ್ಧತೆ

ಪ್ರಜಾವಾಣಿ ವಾರ್ತೆ / ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಬೆಳಗಾವಿ:  ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಇನ್ನು ಆರೇ ದಿನಗಳು ಉಳಿದಿವೆ. ಆದರೂ ಆಮಂತ್ರಣ ಪತ್ರಿಕೆ ಮುದ್ರಣವಾಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಅತಿಥಿಗಳಿಗಾಗಿ, ಕಲಾವಿದರಿಗಾಗಿ ಹುಡುಕಾಟ ಮುಂದುವರಿದಿದೆ.

ಚೆನ್ನಮ್ಮನ ಕಿತ್ತೂರು ಉತ್ಸವ ಪ್ರತಿ ವರ್ಷ ಅ.23 ರಿಂದ ಮೂರು ದಿನ ನಡೆಯುತ್ತದೆ. ದಿನಾಂಕದಲ್ಲಿ        ಯಾವುದೇ ಬದಲಾವಣೆಯಾಗುವುದಿಲ್ಲ. ನಿಗದಿತ ದಿನಾಂಕ ಗೊತ್ತಿದ್ದರೂ ತಯಾರಿಗಳು ಮಾತ್ರ ಕೊನೆ ಗಳಿಗೆಯಲ್ಲಿ ಆರಂಭವಾಗುತ್ತವೆ.

ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ನಡೆಯುವ ಮೊದಲ ಪೂರ್ವಭಾವಿ ಸಭೆಯಲ್ಲಿ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆಯಿಸುವಲ್ಲಿಂದ ಚರ್ಚೆ ಆರಂಭವಾಗುತ್ತದೆ. ಆದರೆ ಚರ್ಚೆಯ ನಂತರದ ಪ್ರಕ್ರಿಯೆಗಳು ಚುರುಕಾಗಿ ನಡೆಯುವುದಿಲ್ಲ. ಪರಿಣಾಮ ಅತಿಥಿಗಳು ಲಭ್ಯವಾಗುವುದಿಲ್ಲ.

ಜಿಲ್ಲಾ ಮಟ್ಟದ ಅಧಿಕಾರಿಯದ್ದೇ ತಿಂಗಳ ವೇಳಾಪಟ್ಟಿ ಮುಂಚೆಯೇ ನಿಗದಿಯಾಗಿರುತ್ತದೆ. ಇನ್ನು ರಾಷ್ಟ್ರಪತಿ, ಕೇಂದ್ರ ಸಚಿವರಂತವರದ್ದೂ ಹೇಗಿರಬೇಡ. ಕೊನೆ ಗಳಿಗೆಯ ಕರೆಗೆ ಅವರು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿಯವರೇ ಅತಿಥಿಗಳಾಗುತ್ತಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಕವಿ ಡಾ.ಚಂದ್ರಶೇಖರ ಅವರನ್ನು ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ಆದರೆ ಆಗ ಅವರು ವಿದೇಶದಲ್ಲಿರುವುದರಿಂದ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.  ಈಗ ಮುಖ್ಯಮಂತ್ರಿಗಳನ್ನೇ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಕೇಂದ್ರದ ಪ್ರವಾಸೋದ್ಯಮ ಸೇರಿದಂತೆ ವಿವಿಧ ಸಚಿವರನ್ನು ಆಹ್ವಾನಿಸುವ ಮಾತುಗಳು ಕೇಳಿ ಬಂದಿದ್ದವು. ಕೆಲವರಿಗೆ ಆಹ್ವಾನವೇ ತಲುಪಿಲ್ಲ. ಇನ್ನು ಕೆಲವರು ಬರಲಾಗುವುದಿಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ.

ಸಮಾರೋಪ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ಆದರೆ ಅವರು ಈಗ ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಕಾರಾಗೃಹ ಸೇರಿರುವುದರಿಂದ ಅವರ ಬದಲಾಗಿ ಯಾರನ್ನು ಆಹ್ವಾನಿಸಬೇಕು ಎಂಬ ಪ್ರಶ್ನೆ ಎದ್ದಿದೆ. ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಸ್ಥಳೀಯ ಕಲಾವಿದರ ಪಟ್ಟಿ ಹೆಚ್ಚು-ಕಡಿಮೆ ಅಂತಿಮಗೊಂಡಿದೆ.

ಆದರೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರ ಪಟ್ಟಿ ಅಂತಿಮಗೊಂಡಿಲ್ಲ. ತಂಡಗಳನ್ನು ಕಟ್ಟಿಕೊಂಡು ರಾಜ್ಯ ಮಟ್ಟದಲ್ಲಿ ತಿರುಗಾಡುವ ವಿವಿಧ ತಂಡಗಳನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಕೆಲವು ತಂಡಗಳು ಈಗಾಗಲೇ ಆ ದಿನದಂದು ಬೇರೆಡೆ ಕಾರ್ಯಕ್ರಮ ಒಪ್ಪಿಕೊಂಡಿದ್ದರೆ, ಇನ್ನು ಕೆಲವು ತಂಡಗಳ ಸಂಭಾವನೆ ವಿಷಯದಲ್ಲಿ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಮಾತುಕತೆಗಳು ಮುಂದುವರೆದಿವೆ.

ಇನ್ನು ಕಾಮಗಾರಿಗಳ ವಿಷಯದಲ್ಲಿಯೂ ಇದೇ ನೀತಿ ಅನುಸರಿಸಲಾಗುತ್ತಿದೆ. ಈಗಷ್ಟೇ ವಿವಿಧ ರಸ್ತೆಗಳನ್ನು ದುರಸ್ತಿಮಾಡುವ, ಕೋಟೆ ಆವರಣ ಸ್ವಚ್ಛಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ.

ಉತ್ಸವಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 80 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಇನ್ನು 20 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕಿದೆ. ಅದ್ದೂರಿಯಾಗಿ ಮಾಡಬೇಕು ಎನ್ನುವುದು ಶಾಸಕರ ಕನಸು ಕೂಡಾ ಆಗಿದೆ. ಅದಕ್ಕಾಗಿ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಆದರೆ ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ.

ಕಿತ್ತೂರು ಕೋಟೆ ರಕ್ಷಿಸಬೇಕು. ಚೆನ್ನಮ್ಮಳ ವಂಶಸ್ಥರಿಗೆ ಗೌರವ ಸಲ್ಲಿಸಬೇಕು. ಕಿತ್ತೂರನ್ನು ಪ್ರವಾಸಿ ತಾಣವಾಗಿಸಬೇಕು. ಉತ್ಸವವನ್ನು ಅದ್ದೂರಿಯಾಗಿ, ಸುವ್ಯವಸ್ಥೆಯಿಂದ ಆಚರಿಸಬೇಕು ಎನ್ನುವುದು ಕಿತ್ತೂರು ಸಂರಕ್ಷಣಾ ಸ್ಮಾರಕ ಸಮಿತಿ ಅಧ್ಯಕ್ಷ ಪ್ರಮೋದ್ ಮುತಾಲಿಕ ಅವರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.