ಕುಡಿಯುವ ನೀರು ಪೂರೈಕೆಗೆ ಆಗ್ರಹ

ಚಿಂತಾಮಣಿ: ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ನಗರದ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದ ಸ್ಥಳೀಯರು ಗುರುವಾರ ರಸ್ತೆ ತಡೆ ನಡೆಸಿದರು.
ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಇಲ್ಲದೆ ತಪತೇಶ್ವರ ಕಾಲೊನಿ ಮತ್ತು ವಿನಾಯಕ ನಗರದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಅನೇಕ ಬಾರಿ ಮನವಿಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿದಾಗ ಕೇವಲ ಭರವಸೆಗಳನ್ನು ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಹೇಳಿದರು.
ಮಹಿಳೆಯರು ಸೇರಿದಂತೆ ನೂರಾರು ಜನರು ಶ್ರೀನಿವಾಸಪುರ ಮತ್ತು ಕೋಲಾರಕ್ಕೆ ಹೋಗುವ ರಸ್ತೆಯಲ್ಲೇ ಬಿಂದಿಗೆಗಳೊಂದಿಗೆ ಕುಳಿತು ಘೋಷಣೆ ಕೂಗಿದರು.
‘ಬಹುತೇಕ ದಲಿತರು ಮತ್ತು ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಎಂಬುದು ಮಾಯವಾಗಿದೆ. ಅಧಿಕಾರಿಗಳು, ನಗರಸಭೆ ಸದಸ್ಯರು ಗಮನ ಹರಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ಟೀಕಿಸಿದರು.
ರಸ್ತೆ ತಡೆಯಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಕೇಳುವುದು ಸೂಕ್ತ, ರಸ್ತೆ ತಡೆ ನಡೆಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮನವಿ ಮಾಡಿದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ನಗರಸಭೆ ಎದುರು ಹಲ ಬಾರಿ ಪ್ರತಿಭಟನೆ ನಡೆಸಲಾಗಿದೆ, ಮೌಖಿಕ, ಲಿಖಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಅದಕ್ಕೂ ಸ್ಪಂದಿಸದ ಕಾರಣ ರಸ್ತೆ ತಡೆ ನಡೆಸುತ್ತಿರುವುದಾಗಿ ಪೊಲೀಸರಿಗೆ ಹೇಳಿದರು.
ನಗರಸಭೆ ಸದಸ್ಯ ಆರ್.ಪ್ರಕಾಶ್, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ವಿಷಯ ಇಷ್ಟೊಂದು ತೀವ್ರವಾಗಿರುವುದು ಗಮನಕ್ಕೆ ಬಂದಿರಲಿಲ್ಲ. ನಾಳೆಯಿಂದಲೇ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಂಗಮ್ಮ, ವಿಜಯನರಸಿಂಹ, ಗಂಗಾಧರ, ಮರಿಯಮ್ಮ, ಮುನಿಯಪ್ಪ, ಪ್ರಕಾಶ್, ನಾಗಮ್ಮ, ರಮೇಶ್, ಮಾರಪ್ಪ, ಪದ್ಮಾವತಿ, ಯರ್ರಮ್ಮ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.