ಗುರುವಾರ , ಮೇ 19, 2022
23 °C

ಕ್ರಿಕೆಟ್: ಇಂಗ್ಲೆಂಡ್ ತಂಡವನ್ನು ಹಿಂದಿಕ್ಕುವ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಇಂಗ್ಲೆಂಡ್ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಹಿಂದೆ ಹಾಕುವುದಕ್ಕೆ ಭಾರತಕ್ಕೆ ಅವಕಾಶವೊಂದು ಕಾಯ್ದಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಉತ್ತಮ ಅಂತರದಲ್ಲಿ ವಿಜಯ ಸಾಧಿಸಿದಲ್ಲಿ ಬಡ್ತಿ ಸಿಗುವುದು ಖಾತ್ರಿ.ಸದ್ಯ ಐದನೇ ಸ್ಥಾನದಲ್ಲಿರುವ ಭಾರತವು ಇಂಗ್ಲೆಂಡ್‌ಗಿಂತ ಕೇವಲ ಒಂದು ಪಾಯಿಂಟ್‌ನಿಂದ ಹಿಂದಿದೆ. ತನ್ನದೇ ನಾಡಿನಲ್ಲಿ ಆಡುವ ಸರಣಿಯಲ್ಲಿ ಯಶಸ್ಸು ಪಡೆದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಬಹುದು. ಇಂಗ್ಲೆಂಡ್ ಪ್ರವಾಸ ಕಾಲದಲ್ಲಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ನಿರಾಸೆ ಹೊಂದಿದ  ದೋನಿ ಪಡೆಯು ತಾಯ್ನಾಡಿನಲ್ಲಿ ಮಾನ ಕಾಪಾಡಿಕೊಳ್ಳಬೇಕು.ಇಂಗ್ಲೆಂಡ್ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡಿದೆ. ಅದು ಅಭ್ಯಾಸ ಪಂದ್ಯಗಳಲ್ಲಿಯೂ ವ್ಯಕ್ತವಾಗಿದೆ. ಭಾರತದಲ್ಲಿನ ಪಿಚ್‌ಗಳಿಗೆ ಹೊಂದಿಕೊಂಡು ಆಡುವುದು ಕೂಡ ಅವರಿಗೆ ಕಷ್ಟವೆನಿಸುತ್ತಿಲ್ಲ. ಆದ್ದರಿಂದ ತಿರುಗೇಟು ನೀಡಿ ವಿಜಯ ಸಾಧಿಸುವುದು ಆತಿಥೇಯರಿಗೆ ಸುಲಭವಲ್ಲ.ಶ್ರೇಯಾಂಕನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಂದಿನ ಬುಧವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಹೋರಾಡಲಿದೆ.ಐಸಿಸಿಯ ವಾರ್ಷಿಕ ಪ್ರಶಸ್ತಿಯಲ್ಲಿ ಸರ್ ಗ್ಯಾರಿ ಸೋಬರ್ಸ್ ಟ್ರೋಫಿ  ಪಡೆದಿರುವ ಇಂಗ್ಲೆಂಡ್‌ನ ಜೊನಾಥನ್ ಟ್ರಾಟ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದಲ್ಲಿ ಇನ್ನಷ್ಟು ಶ್ರೇಯಾಂಕ ಪಾಯಿಂಟ್‌ಗಳು ಅವರ ಖಾತೆಗೆ ಸೇರಲಿವೆ.ಭಾರತದ ಮೂವರು ಬ್ಯಾಟ್ಸ್ ಮನ್‌ಗಳು ಮೊದಲ ಹದಿನೈದರ ಪಟ್ಟಿಯಲ್ಲಿದ್ದಾರೆ. ಮಹೇಂದ್ರ ಸಿಂಗ್ ದೋನಿ ಅವರು ಐದನೇ ಸ್ಥಾನದಿಂದ ಮೇಲೇರಲು ಪ್ರಯತ್ನ ಮಾಡಬೇಕಿದೆ. ಹಾಗೆ ಮಾಡಿದಲ್ಲಿ ತಂಡಕ್ಕೂ ಪ್ರಯೋಜನವಾಗುವುದು.ಬೌಲಿಂಗ್ ವಿಭಾಗದಲ್ಲಿ ಉತ್ತಮ ಶ್ರೇಯಾಂಕ ಹೊಂದಿರುವ ಆಶಿಶ್ ನೆಹ್ರಾ, ಜಹೀರ್ ಖಾನ್, ಇಶಾಂತ್ ಶರ್ಮ ಹಾಗೂ ಹರಭಜನ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ತಂಡಕ್ಕೆ ಲಭ್ಯರಾಗಿಲ್ಲ. 21ನೇ ಸ್ಥಾನದಲ್ಲಿರುವ ಪ್ರವೀಣ್ ಕುಮಾರ್ ಅವರು ಸದ್ಯ ಭಾರತ ತಂಡದಲ್ಲಿರವ ಉನ್ನತ ಶ್ರೇಯಾಂಕ ಹೊಂದಿದ ಬೌಲರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.