ಗುರುವಾರ , ಜೂನ್ 17, 2021
21 °C

ಗಲ್ಲುಶಿಕ್ಷೆ ಜೀವಾವಧಿಗೆ ಕೇಂದ್ರದ ಮನವಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ, ಐಎಎನ್‌ಎಸ್‌): ಕ್ಷಮಾದಾನ ಅರ್ಜಿಗಳ ಇತ್ಯರ್ಥ­ವನ್ನು  ಸರ್ಕಾರ ಕಾರಣವಿಲ್ಲದೇ ವಿಳಂಬ ಮಾಡಿದರೆ ಅಪರಾಧಿಗಳ ಗಲ್ಲುಶಿಕ್ಷೆ­ಯನ್ನು ಜೀವಾವಧಿಗೆ  ಪರಿವರ್ತಿಸ­ಬಹುದು ಎಂದು ಇದೇ ಜನವರಿ 21ರಂದು ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿ ಹಾಕಿದೆ.ಕೇಂದ್ರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ತಮ್ಮ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ ಮೂವರು  ನ್ಯಾಯ­ಮೂರ್ತಿಗಳು, ಕೇಂದ್ರದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದರು.ಭಯೋತ್ಪಾದನೆ  ನಿಗ್ರಹ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಶಿಕ್ಷೆಗೆ ಒಳಗಾದ ಅಪರಾಧಿಗಳು ಎಂಬ ತಾರತಮ್ಯವಿಲ್ಲದೆ  ಎಲ್ಲರಿಗೂ ಈ ತೀರ್ಪು ಅನ್ವಯಿಸಲಿದೆ ಎಂದು  ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ನ್ಯಾಯಪೀಠವು ಜ.21ರಂದು ತೀರ್ಪು ನೀಡಿತ್ತು.ನರಹಂತಕ ವೀರಪ್ಪನ್‌ ಸಹಚರರು ಸೇರಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 15 ಅಪರಾಧಿಗಳು ಈ ತೀರ್ಪಿನ ಲಾಭ ಪಡೆದು ಮರಣದಂಡನೆಯಿಂದ ಪಾರಾ­ಗಿದ್ದರು.  ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಿಗೂ ಇದರಿಂದ ಲಾಭವಾಗಿತ್ತು.

‘ಕ್ಷಮಾದಾನ ಅರ್ಜಿಗಳ ಇತ್ಯರ್ಥ ವಿಳಂಬದ ಕಾರಣಕ್ಕಾಗಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕು ಎಂಬು­ವುದು ಸಂವಿಧಾನದ 21ನೇ ಕಲಂಗೆ (ಬದುಕುವ ಹಕ್ಕು) ಸಂಬಂಧಿಸಿದೆ’ ಎಂದು ಕೇಂದ್ರ ಹೇಳಿದೆ.‘ಹೀಗಾಗಿ ಸಾಂವಿಧಾನಿಕ ಹಕ್ಕಿಗೆ ಸಂಬಂಧಿಸಿದ ಈ ಮಹತ್ವದ ಪ್ರಕರಣ­ವನ್ನು ಸಂವಿಧಾನದ 145 ವಿಧಿಯ ಪ್ರಕಾರ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಬೇಕಿತ್ತು’ ಎಂದು ವಾದಿಸಿದೆ.‘ಮೂವರು ನ್ಯಾಯಮೂರ್ತಿಗಳ ಪೀಠವು ತನ್ನ ವ್ಯಾಪ್ತಿ ಮೀರಿ ನೀಡಿರುವ ತೀರ್ಪು ನ್ಯಾಯ ಸಾಧುವಲ್ಲ’ ಎಂದು ಕೆೇಂದ್ರ ಸರ್ಕಾರ ಅರ್ಜಿಯಲ್ಲಿ ವಾದಿಸಿತ್ತು.‘ಕೇಂದ್ರದ ಮರು ಪರಿಶೀಲನಾ ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿ­ಸಿದ್ದೇವೆ. ಆದರೆ, ವಿಚಾರಣೆ ಕೈಗೆತ್ತಿಕೊಳ್ಳಲು ಇರ­ಬೇಕಾದ ಯಾವುದೇ ಅರ್ಹತೆ ಇರದ ಕಾರಣ ಅರ್ಜಿಯನ್ನು ವಜಾ ಗೊಳಿಸಲಾಗಿದೆ’ ಎಂದು ಮುಖ್ಯ ನ್ಯಾಯ­ಮೂರ್ತಿ ಪಿ.ಸದಾಶಿವಂ, ನ್ಯಾಯ­ಮೂರ್ತಿ­ಗಳಾದ ರಂಜನ್‌ ಗೋಗೊಯ್‌ ಮತ್ತು ಶಿವಕೀರ್ತಿ ಸಿಂಗ್‌ ಅವರ ಪೀಠ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.