ಸೋಮವಾರ, ಮಾರ್ಚ್ 1, 2021
30 °C

ತೊಗಲು ಗೊಂಬೆಗಳ ಹೊಸಪರ್ವ

ದಯಾನಂದ Updated:

ಅಕ್ಷರ ಗಾತ್ರ : | |

ತೊಗಲು ಗೊಂಬೆಗಳ ಹೊಸಪರ್ವ

ಎಲ್ಲವನ್ನೂ ಏಕರೂಪಗೊಳಿಸುವ ಆಧುನಿಕ ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ಬಹುತ್ವವೇ ಅಭಿವೃದ್ಧಿಗೆ ತೊಡಕು! ಉತ್ಪಾದನೆ ಕೇಂದ್ರಿತ ಆಧುನಿಕ ಅರ್ಥವ್ಯವಸ್ಥೆ ಮನುಷ್ಯನನ್ನು ಕೇವಲ ಉತ್ಪಾದಕ ಮತ್ತು ಉಪಭೋಗಿಯಾಗಿ ಮಾತ್ರ ನೋಡುತ್ತದೆ. ಆಧುನಿಕತೆಯ ಈ ಪ್ರಕ್ರಿಯೆಯಲ್ಲಿ ಹೆಚ್ಚು ಬಳಲಿದ್ದು ಜನಪದ ಕಲೆಗಳು ಹಾಗೂ ಜನಪದ ಕಲಾವಿದರು.ಸಂಸ್ಕೃತಿ ಮತ್ತು ಮನರಂಜನೆಗಳು ಒಟ್ಟೊಟ್ಟಿಗೆ ಬೆಸೆದುಕೊಂಡಿರುವ ಜನಪದ ಕಲೆಗಳು ಅನ್ಯ ಸಂಸ್ಕೃತಿಯ ಅನುಕರಣೆ ಹಾಗೂ ಮನರಂಜನೆಯ ಆಧುನಿಕ ಮಾಧ್ಯಮಗಳ ಅಬ್ಬರದ ಇಂದಿನ ದಿನಗಳಲ್ಲಿ ಮಂಕಾಗಿವೆ. ಹೀಗೆ ಹಿನ್ನೆಲೆಗೆ ಸರಿದಿರುವ ಜನಪದ ಕಲೆಗಳಲ್ಲಿ ತೊಗಲುಗೊಂಬೆ ಆಟವೂ ಒಂದು. ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ತೊಗಲುಗೊಂಬೆಯಾಟವನ್ನು ಮುನ್ನೆಲೆಗೆ ತರುವ ಪ್ರಯತ್ನ ಇತ್ತೀಚೆಗೆ ಆಗುತ್ತಿದೆ. ಬಿದಿರಿನ ಬುಟ್ಟಿಗಳಲ್ಲಿ ಮಲಗಿದ್ದ ತೊಗಲುಗೊಂಬೆಗಳಿಗೆ ಮತ್ತೆ ಬೆಳಕು ನೀಡುವ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.ಜನಪದ ರಂಗಕಲೆಯಾದ ತೊಗಲುಗೊಂಬೆಯಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರಾಣಿಗಳ ಚರ್ಮದ ಮೇಲೆ ಚಿತ್ರ ಬಿಡಿಸುವ ಪೂರ್ವಜರ ಪ್ರಯತ್ನದಲ್ಲೇ ತೊಗಲುಗೊಂಬೆಯಾಟಕ್ಕೆ ಬೀಜರೂಪ ದೊರಕಿರಬೇಕು. ಕ್ರಮೇಣ ಅದು ಸ್ಥಳೀಯ ಜನಪದ ರಂಗಕಲೆಗಳ ಪ್ರಭಾವದಿಂದ ‘ಆಟ’ದ ಸ್ವರೂಪ ಪಡೆದುಕೊಂಡಿರಬಹುದು. ರಂಗದ ಮುಂದೆ ಬಿಳಿಯ ಪರದೆ ಮಾತ್ರ ಉಳಿದು ಕ್ರಿಯೆ ಎಲ್ಲಾ ಮುಚ್ಚಿದ ಹಿಂಬದಿಯ ವೇದಿಕೆಯೊಳಗೆ ನಡೆಯುವ ನೆರಳಿನಾಟ ಇದು.ಗೊಂಬೆರಾಮರು ಅಥವಾ ಕಿಳ್ಳೇಕ್ಯಾತರ ಕುಟುಂಬದ ಸದಸ್ಯರೇ ಮೇಳವಾಗಿ, ಕುಸುರಿ ಕೆಲಸ ಹಾಗೂ ಬಣ್ಣಗಳಿಂದ ಸಿಂಗಾರಗೊಂಡ ಚರ್ಮದ ಗೊಂಬೆಗಳನ್ನು ಕುಣಿಸುವ ಕಲಾವಿದರಾಗಿ ಪ್ರದರ್ಶನ ನಡೆಸುತ್ತಾರೆ. ಪುರಾಣ, ರಾಮಾಯಣ, ಮಹಾಭಾರತದ ಪ್ರಸಂಗಗಳೇ ತೊಗಲುಗೊಂಬೆಯಾಟಕ್ಕೆ ಮುಖ್ಯ ಕಥಾವಸ್ತುಗಳು. ಒಳಗಿನ ವೇದಿಕೆಯಲ್ಲಿ ಉರಿಯುವ ಪ್ರಕಾಶಮಾನ ದೀಪ ಹಾಗೂ ಮುಂದಿನ ಪಾರದರ್ಶಕ ಪರದೆಯ ನಡುವೆ ಗೊಂಬೆಗಳನ್ನು ಕುಣಿಸಿ, ಗೊಂಬೆಯ ಬಣ್ಣದ ನೆರಳು ಪರದೆಯ ಮೇಲೆ ಬೀಳುವಂತೆ ಮಾಡುವ ಈ ಆಟಕ್ಕೆ ನೆರಳುಗೊಂಬೆಯಾಟ ಎಂಬ ಹೆಸರೂ ಇದೆ.ಹೊಳೆನೀರಿಗೆ ಗೊಂಬೆಗಳು

ದಶಕದ ಹಿಂದಿನವರೆಗೂ ನಮ್ಮ ಹಳ್ಳಿಗಳಲ್ಲಿ ಮನರಂಜನೆಯ ಮುಖ್ಯ ಮಾಧ್ಯಮಗಳಲ್ಲಿ ಒಂದಾಗಿದ್ದ ತೊಗಲುಗೊಂಬೆಯಾಟ ದಿನಕಳೆದಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದಂಥ ಸ್ಥಿತಿ ನಿರ್ಮಾಣವಾಯಿತು. ತೊಗಲುಗೊಂಬೆಯಾಡಿಸುವ ಗೊಂಬೆರಾಮರು ಈ ಆಟದಿಂದ ಇನ್ನು ಹೊಟ್ಟೆ ಹೊರೆಯುವುದು ಕಷ್ಟ ಎನಿಸಿ ಬಹುಪಾಲು ತೊಗಲುಗೊಂಬೆಗಳನ್ನು ಹೊಳೆ ನೀರಿಗೆ ಬಿಟ್ಟು, ಇತರೆ ಕಸುಬುಗಳ ಕಡೆಗೆ ಮುಖ ಮಾಡಿದ್ದನ್ನು ನೋಡಿದರೆ ಈ ಜನಪದ ಕಲೆಗೆ ಒದಗಿದ್ದ ಹೀನಾಯ ಸ್ಥಿತಿ ಎಂಥದ್ದು ಎಂಬುದು ಗೊತ್ತಾಗುತ್ತದೆ.ಸಾಮಾಜಿಕ ಸ್ಥಿತ್ಯಂತರದ ಕಾರಣದಿಂದಲೂ ತೊಗಲುಗೊಂಬೆಯಾಟ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಗೊಂಬೆರಾಮರಿಗೆ ದೇವಾಲಯ ಪ್ರವೇಶವಿದ್ದ ಮಾತ್ರಕ್ಕೆ ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವಿತ್ತು ಎಂದು ನಂಬುವಂತಿಲ್ಲ. ರಾತ್ರಿ ಆಟಗಳನ್ನು ಪ್ರದರ್ಶಿಸುತ್ತಿದ್ದ ಈ ಕಲಾವಿದರು ಹಗಲು ಪದಗಳನ್ನು ಹಾಡುತ್ತಾ ಹಳ್ಳಿಯ ಬೀದಿಗಳಲ್ಲಿ ಭಿಕ್ಷೆ ಪಡೆಯುತ್ತಿದ್ದರು. ಚರಿಗೆ ಮುಗಿದ ಮೇಲೆ ಬೇಟೆಯಾಡುವ ಅಭ್ಯಾಸವೂ ಗೊಂಬೆರಾಮರಿಗಿತ್ತು. ಗೊಂಬೆರಾಮರ ಹೆಣ್ಣುಮಕ್ಕಳ ಮೇಲೆ ಊರ ಪ್ರಮುಖರು ‘ಕಣ್ಣು ಹಾಕುವುದು’ ಹಿಂದೆ ಸಾಮಾನ್ಯವಾಗಿತ್ತು. ವರ್ಷಗಳು ಕಳೆದಂತೆ ಈ ರೀತಿಯ ಬದುಕು ಎಷ್ಟು ಸರಿ ಎಂದು ಆ ಸಮುದಾಯದ ಜನರಿಗೇ ಅನಿಸಿರಬೇಕು.ನಗರೀಕರಣದ ಕಾರಣದಿಂದ ಪಟ್ಟಣಗಳೂ ನಗರಗಳಾಗಿ ಬೆಳೆದ ಮೇಲೆ ಕೂಲಿನಾಲಿ ಮಾಡಿ ಬದುಕು ಕಟ್ಟಿಕೊಳ್ಳಲು ಈ ಜನ ಮುಂದಾದರು. ಕ್ರಮೇಣ ತಮ್ಮ ಸಮುದಾಯದ ಗುರುತನ್ನೇ ಮುಚ್ಚಿಡುವ ಮನೋಭಾವ ಗೊಂಬೆರಾಮರಲ್ಲಿ ಬೆಳೆಯುತ್ತಾ ಬಂತು.

ಕೇವಲ ಗೊಂಬೆರಾಮರಷ್ಟೇ ಅಲ್ಲ ದೊಂಬಿದಾಸ, ಹೆಳವ, ಕಿನ್ನರಿಜೋಗಿ ಮುಂತಾದವರು ಇಂದು ವಿವಿಧ ಕ್ಷೇತ್ರಗಳ ವಿವಿಧ ಹುದ್ದೆಗಳಲ್ಲಿದ್ದರೂ ತಮ್ಮ ಮೂಲವನ್ನು ಬಹಿರಂಗ ಪಡಿಸಲು  ಹಿಂಜರಿಯುತ್ತಾರೆ. ತಮ್ಮ ಗುರುತನ್ನು ಹೇಳಿಕೊಂಡರೆ ಎಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡುತ್ತದೆಯೋ ಎಂಬ ಅಳಕು ಇದಕ್ಕೆ ಕಾರಣ.ಬಹುಪಾಲು ಜನಪದ ಕಲೆಗಳು ಜಾತಿ ಆಧಾರಿತವಾದ್ದರಿಂದ ತಮ್ಮ ಜಾತಿಯನ್ನು ಗುರುತಿಸಿಕೊಳ್ಳಲು ಬಯಸದ ಆ ಸಮುದಾಯದ ಮುಂದಿನ ಪೀಳಿಗೆಯವರಿಗೆ ರಕ್ತಗತವಾಗಿ ಬಂದ ಕಲೆಯೂ ಬೇಡವಾಯಿತು. ಆಧುನಿಕ ಶಿಕ್ಷಣ ಹಾಗೂ ಮೀಸಲಾತಿ ಸೌಲಭ್ಯದಿಂದ ಬೆಳವಣಿಗೆ ಕಾಣುತ್ತಿರುವ ಈ ಅಲೆಮಾರಿ ಸಮುದಾಯಗಳ ಜನ ಸಾಮಾನ್ಯವಾಗಿಯೇ ತಮ್ಮ ಪಾರಂಪರಿಕ ಕಲೆ ಹಾಗೂ ಕಸುಬನ್ನು ಮರೆಯಲು ಮುಂದಾಗಿದ್ದಾರೆ. ಹೀಗಾಗಿ ಜಾತಿ ಕೇಂದ್ರಿತವಾದ ಕಲೆಯನ್ನು ಕಲಾಕೇಂದ್ರಿತಗೊಳಿಸುವ ಅಗತ್ಯವಿದೆ.ಹೊಸಬೆಳಕಿನಲ್ಲಿ ಆಟ

ಈಗಲೂ ಆಟ ನಡೆಸುವ ಅಳಿದುಳಿದ ಕಲಾವಿದರು ಹಾಗೂ ಕಲಾತಂಡಗಳನ್ನು ಗುರುತಿಸಿ ಅವರಿಗೆ ಗೌರವ ಹಾಗೂ ಗೌರವ ಸಂಭಾವನೆ ನೀಡಿ ತೊಗಲುಗೊಂಬೆಯಾಟವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಆರಂಭವಾಗಿದೆ. ‘ಇಷ್ಟೂ ದಿನ ಜಾತಿ ಕೇಂದ್ರಿತವಾಗಿದ್ದ ಜನಪದ ಕಲೆಗಳು ಹವ್ಯಾಸದ ಕಾರಣದಿಂದಾದರೂ ಮೊದಲುಗೊಂಡು ಮುಂದೆ ಕಲಾಕೇಂದ್ರಿತ ವಾಗಬೇಕು. ಸಮಾಜ ಈ ಕಲೆಗಳ ಕಾರಣಕ್ಕಾಗಿ ಕಲಾವಿದರನ್ನು ಸಾಮಾಜಿಕವಾಗಿ ಕೀಳಾಗಿ ನೋಡುವ ಮನೋಭಾವ ಆಗಲಾದರೂ ಬದಲಾಗಬಹುದು. ಈ ಸಾಮಾಜಿಕ ತೊಡಕು ನಿವಾರಣೆಯಾಗದ ಹೊರತು ಜನಪದ ಕಲೆಗಳ ಮೇಲೆ ಕರಿನೆರಳು ಇದ್ದಿದ್ದೇ’ ಎಂಬುದು ತೊಗಲುಗೊಂಬೆಯಾಟದ ಕಲಾವಿದರೂ ಆಗಿರುವ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಬೆಳಗಲ್‌ ವೀರಣ್ಣ ಅವರ ಆತಂಕ.‘ತೊಗಲುಗೊಂಬೆಯಾಟದ ಇತಿಹಾಸ, ಈ ವಿಶಿಷ್ಟ ಕಲೆಯ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಮೊದಲಿಗೆ ಅವರಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು. ಎಲ್ಲ ಜಾತಿಗಳ ಯುವಕರೂ ಸೇರಿ ತೊಗಲುಗೊಂಬೆ ತಯಾರಿಕೆ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು. ಹಾಗಾದಾಗ ಮಾತ್ರ ಈ ಕಲೆಗಂಟಿರುವ ಜಾತಿಯ ಕೊಳೆ ತೊಳೆಯಲು ಸಾಧ್ಯ’  ಎಂಬುದು ಅವರ ಅಭಿಪ್ರಾಯ.

ಜನಪದ ಉತ್ಸವ ಕಲೆಗಳು ಮತ್ತು ಆಚರಣೆ ಕಲೆಗಳಿರುವ ಪ್ರೋತ್ಸಾಹ ತೊಗಲುಗೊಂಬೆಯಾಟಕ್ಕೆ ಸಿಕ್ಕಿಲ್ಲ. ಡೊಳ್ಳು ಕುಣಿತ, ಪಟದ ಕುಣಿತ, ನಂದಿಕೋಲು ಕುಣಿತ, ಗೊರವರ ಕುಣಿತದ ಕಲಾತಂಡಗಳಿಗೆ ಮೆರವಣಿಗೆ ಹಾಗೂ ಸಮಾರಂಭಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ. ಇನ್ನು ಆಚರಣೆ ಕಲೆಗಳಾದ ನಾಗನೃತ್ಯ, ಭೂತದ ಕೋಲ, ಕರಗ, ಕಲಶದ ಕುಣಿತ, ವೀರಗಾಸೆ ಕಲೆಗಳು ಕಲೆಯ ಎಲ್ಲೆ ಮೀರಿ ‘ದೈವಿಕ ಸ್ವರೂಪ’ ಪಡೆದುಕೊಂಡು ಮತ್ತೊಂದು ರೀತಿಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಈ ರೀತಿಯ ಆಧಾರ ತೊಗಲುಗೊಂಬೆಯಾಟಕ್ಕಿಲ್ಲ.ಹಳ್ಳಿಗಳನ್ನು ಕೇಂದ್ರೀಕರಿಸಿ ತೊಗಲುಗೊಂಬೆಯಾಟವನ್ನು ಪುನರುಜ್ಜೀವಗೊಳಿಸುವುದು ಸದ್ಯಕ್ಕೆ ಸಾಧ್ಯವಿಲ್ಲವೆಂದು ತೋರುತ್ತದೆ. ಹೀಗಾಗಿ ನಗರಗಳಲ್ಲಿ ತೊಗಲುಗೊಂಬೆಯಾಟವನ್ನು ಬೆಳೆಸುವ ಪ್ರಯೋಗಗಳಿಗೆ ಅಕಾಡೆಮಿ ಹಾಗೂ ಸರ್ಕಾರ ಮುಂದಾಗಬೇಕು. ಮನರಂಜನೆಗಾಗಿ ಹಪಹಪಿಸುವ ನಗರದ ಜನ ತೊಗಲುಗೊಂಬೆಯಾಟವನ್ನು ಬೇಗನೆ ಒಪ್ಪಿಕೊಂಡಾರು. ನಗರಗಳ ಕಲಾಕ್ಷೇತ್ರ, ರಂಗಮಂದಿರಗಳಲ್ಲಿ ತೊಗಲುಗೊಂಬೆಯಾಟಕ್ಕೆ ಹೆಚ್ಚು ಹೆಚ್ಚು ವೇದಿಕೆ ಸಿಕ್ಕರೆ ಈ ಕಲೆಯನ್ನು ಜೀವಂತವಾಗಿರಿಸಿಕೊಳ್ಳಬಹುದು ಎಂದು ತೋರುತ್ತದೆ.‘ವಿದ್ಯಾರ್ಥಿಗಳು ಹಾಗೂ ಯುವಕರಿಗೆ ತೊಗಲುಗೊಂಬೆಯಾಟದ ಬಗ್ಗೆ ತರಬೇತಿ ನೀಡಬೇಕು. ಕಲಾತಂಡಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರಿಂದ ಸಾಧ್ಯವಾದಷ್ಟೂ ಹೆಚ್ಚಿನ ಯುವಕರಿಗೆ ತೊಗಲುಗೊಂಬೆಯಾಟದ ತರಬೇತಿ ಕೊಡಿಸಿದರೆ ಈ ಕಲೆ ಉಳಿಯುತ್ತದೆ’ ಎಂಬ ಆಶಾವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರದ್ದು.

‘ಚೀನಾದಲ್ಲಿ ತೊಗಲುಗೊಂಬೆಯಾಟಕ್ಕೆ ಹೆಚ್ಚಿನ ಪ್ರೋತ್ಸಾಹವಿದೆ. ಅಲ್ಲಿ ತೊಗಲುಗೊಂಬೆಯಾಟಕ್ಕೆ ಪಂಡಿತ ಹಾಗೂ ಪಾಮರರ ಬೆಂಬಲವಿದೆ. ಅದೇ ರೀತಿ ನಮ್ಮಲ್ಲೂ ತೊಗಲುಗೊಂಬೆಯಾಟಕ್ಕೆ ಬೆಂಬಲ, ಪ್ರೋತ್ಸಾಹ ಸಿಗಬೇಕು. ಆ ನಿಟ್ಟಿನಲ್ಲಿ ಅಕಾಡೆಮಿ, ವಿಶ್ವವಿದ್ಯಾಲಯಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು’ ಎಂಬುದು ಅವರ ಅಭಿಮತ.

ಉಸಿರು ತುಂಬುವ ಕೆಲಸ

ತೊಗಲುಗೊಂಬೆಯಾಟದ ಬಗ್ಗೆ ಸ್ವತಃ ಕಲಾವಿದರೆ ಅನಾಸಕ್ತಿ ತೋರುತ್ತಿದ್ದುದನ್ನು ನಾಲ್ಕು ದಶಕಗಳ ಹಿಂದೆಯೇ ಗುರುತಿಸಿದ್ದ ಜನಪದ ತಜ್ಞ ಎಂ.ಎಸ್‌.ನಂಜುಂಡರಾವ್‌ ಅವರು ರಾಜ್ಯ ಹಾಗೂ ಆಂಧ್ರಪ್ರದೇಶದ ಹಲವು ಗ್ರಾಮಗಳನ್ನು ಸುತ್ತಿ ಸಾವಿರಾರು ತೊಗಲುಗೊಂಬೆಗಳನ್ನು ಸಂಗ್ರಹಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿರುವ ಈ ತೊಗಲುಗೊಂಬೆಗಳು ರಾಜ್ಯದ ಜನಪದ ಕಲೆಯ ಅಮೂಲ್ಯ ಆಸ್ತಿ. ಈ ಗೊಂಬೆಗಳನ್ನು ಬಳಸಿಕೊಂಡು ಈ ಕಲೆಯನ್ನು ಪ್ರಚಾರ ಪಡಿಸುವ ಕಾರ್ಯ ಹೆಚ್ಚಾಗಬೇಕು.‘ತೊಗಲುಗೊಂಬೆ ಹಬ್ಬದ ನೆವದಲ್ಲಿ ತೊಗಲುಗೊಂಬೆಯಾದ ಬಗ್ಗೆ ಅನನ್ಯವಾದ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಕೇಂದ್ರ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ದೇಶದ ವಿವಿಧ ಮಹಾನಗರಗಳಲ್ಲಿ ತೊಗಲುಗೊಂಬೆಗಳ ಪ್ರದರ್ಶನ ಹಾಗೂ ಆಟ ನಡೆಸುವ ಉದ್ದೇಶ ಚಿತ್ರಕಲಾ ಪರಿಷತ್ತಿಗಿದೆ. ದೇಶದ ವಿವಿಧ ಭಾಗಗಳಲ್ಲಿ ನಮ್ಮ ತೊಗಲುಗೊಂಬೆಯಾಟಕ್ಕೆ ಪ್ರಚಾರ ಸಿಕ್ಕರೆ ಸಹಜವಾಗಿಯೇ ಈ ಕಲೆಗೆ ಪ್ರೋತ್ಸಾಹ ಹೆಚ್ಚಾಗಲಿದೆ’ ಎನ್ನುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌.ತೊಗಲುಗೊಂಬೆಯಾಟ ಉಳಿಸಲು ಬೀಜರೂಪದಲ್ಲಿರುವ ಈ ಎಲ್ಲ ಪ್ರಯತ್ನಗಳು ಯಶಸ್ವಿಯಾದರೆ ಈ ವಿಶಿಷ್ಟ ಕಲೆಗೆ ಉತ್ತಮ ಭವಿಷ್ಯ ಸಿಗಬಹುದೆಂಬ ಆಶಾವಾದವನ್ನು ಮಾತ್ರ ಸದ್ಯಕ್ಕೆ ಉಳಿಸಿಕೊಳ್ಳಬಹುದು.

ಗೊಂಬೆಗಳಿಗೆ ಶೈಕ್ಷಣಿಕ ಚೌಕಟ್ಟು

ತೊಗಲುಗೊಂಬೆಯಾಟದ ಅಧ್ಯಯನಕ್ಕಾಗಿ ಜಾನಪದ ವಿಶ್ವವಿದ್ಯಾಲಯದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಲು ಸಿದ್ಧತೆ ನಡೆದಿದೆ. ತೊಗಲುಗೊಂಬೆಗಳ ಸಂಗ್ರಹ ಹಾಗೂ ಕಲಾವಿದರಿಂದ ಪ್ರದರ್ಶನಗಳನ್ನು ಆಯೋಜಿಸುವ ಕೆಲಸ ವಿಶ್ವವಿದ್ಯಾಲಯದಿಂದ ನಡೆಯುತ್ತಿದೆ. ಕಲಾವಿದರು ಹಾಗೂ ಸಂಶೋಧಕರು ಒಟ್ಟುಗೂಡಿ ಈ ಕಲೆಯನ್ನು ಮುನ್ನೆಲೆಗೆ ತರುವ ಪ್ರಯತ್ನವೂ ವಿಶ್ವವಿದ್ಯಾಲಯದಿಂದ ಆಗುತ್ತಿದೆ.

–ಪ್ರೊ.ಅಂಬಳಿಕೆ ಹಿರಿಯಣ್ಣ, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಸಮುದಾಯದ ಸಹಭಾಗಿತ್ವ

ತೊಗಲುಗೊಂಬೆಯಾಟದ ಉಳಿವು ಹಾಗೂ ಪ್ರೋತ್ಸಾಹದ ಬಗ್ಗೆ ಕೇವಲ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರುವುದು ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಗ್ರಾಮ ಹಾಗೂ ನಗರ ಪ್ರದೇಶದ ಎಲ್ಲರೂ ತೊಗಲುಗೊಂಬೆಯಾಟದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆಟಕ್ಕೆ ಪ್ರೋತ್ಸಾಹ ನೀಡಬೇಕು. ಅಪರೂಪದ ಜನಪದ ರಂಗಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿಕೊಳ್ಳಲು ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ.

–ಬೆಳಗಲ್‌ ವೀರಣ್ಣ, ತೊಗಲುಗೊಂಬೆಯಾಟದ ಹಿರಿಯ ಕಲಾವಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.