ಮಂಗಳವಾರ, ಮೇ 24, 2022
30 °C

ನಿರಂಜನ ಯಾನ ಜಾಲಿಡೇಸ್‌ನಿಂದ ಪ್ರಬುದ್ಧತೆ ಕಡೆಗೆ

-ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನಿರಂಜನ ಯಾನ ಜಾಲಿಡೇಸ್‌ನಿಂದ ಪ್ರಬುದ್ಧತೆ ಕಡೆಗೆ

ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ ಅನುಭವ ಜೊತೆಗಿತ್ತು. ತಕ್ಕಮಟ್ಟಿಗೆ ಜನರೂ ಗುರುತಿಸಿದ್ದರು. ನಾಯಕನಾಗುವ ಉಮೇದಿಗೆ ಸರಿಯಾಗಿ ಅನೇಕ ಕಥೆಗಳೂ ಎದುರು ಹರಡಿಕೊಂಡಿದ್ದವು. ಅದರೆ ಯಾವ ಕಥೆಯೂ ರುಚಿಸಿರಲಿಲ್ಲ. ಬದುಕಿಗಾಗಿ ಸ್ವಂತ ಕಂಪೆನಿಯಿತ್ತು, ಹೀಗಾಗಿ ಆತುರ ತೋರಲಿಲ್ಲ.ತಮಿಳಿನ ನಿರ್ದೇಶಕರೊಬ್ಬರು `ನಿಮಗಾಗಿ ಕಥೆಯೊಂದಿದೆ' ಎಂದು ಕರೆದರು. ಕಥೆ ಕೇಳಲು ಚೆನ್ನೈಗೆ ತೆರಳಿದ್ದಾಗ ಆಗಷ್ಟೇ ಬಿಡುಗಡೆಯಾಗಿದ್ದ ತಮಿಳು ಚಿತ್ರವೊಂದರ ಸೀಡಿ ಸಿಕ್ಕಿತು. ಕುತೂಹಲದಿಂದ ನೋಡಿದವರು ತಡಮಾಡಲಿಲ್ಲ. ನಿಮ್ಮ ಚಿತ್ರ ಹಾಗೆಯೇ ಇರಲಿ ಎಂದು ಸೀಡಿಯನ್ನೆತ್ತಿಕೊಂಡು ಬೆಂಗಳೂರಿಗೆ ಮರಳಿದರು.ಆಪ್ತರ ವಲಯಕ್ಕೆ ಸಿನಿಮಾ ತೋರಿಸಿದರು. ಹಣ ಹೂಡಲು ನಾಲ್ವರು ಪರಿಚಯಸ್ಥರೇ ಮುಂದೆ ಬಂದರು. ಈ ಮೂಲಕ ಜಗತ್ತಿನ ಗಮನ ಸೆಳೆದ ಚಿತ್ರವೊಂದು ಕನ್ನಡಕ್ಕೆ ಬರುವಂತಾಯಿತು.`ಕೇಸ್ ನಂ 18/9' ಚಿತ್ರ ರೂಪುಗೊಂಡ ಜೊತೆಯಲ್ಲಿ, ತಾವು ನಾಯಕನಟನಾದ ಖುಷಿಯನ್ನು ಹಂಚಿಕೊಂಡರು ನಿರಂಜನ್ ಶೆಟ್ಟಿ. ಸಿನಿಮಾ ರಂಗವೇ ಬೇಡ ಎಂಬ ಭಾವನೆ ಹೊಂದಿರುವವರಲ್ಲೂ ಸಿನಿಮಾ ಮಾಡಬೇಕೆಂದು ಪ್ರೇರಣೆ ಹುಟ್ಟಿಸುವ ಕಥೆ ಈ ಚಿತ್ರದ್ದು ಎನ್ನುವ ಬಣ್ಣನೆ ಅವರದು.ಮೂಲತಃ ಉಡುಪಿಯವರಾದ ನಿರಂಜನ್ ಸಿನಿರಸಿಕರಿಗೆ ಪರಿಚಿತರಾಗಿದ್ದು `ಜಾಲಿಡೇಸ್' ಚಿತ್ರದ ಮೂಲಕ. `ಚಿತ್ರ', `ತುಂಟಾಟ', `ಸ್ಪರ್ಶ', `ನಮ್ಮ ಬಸವ', `ಮಿಲನ' ಮುಂತಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಹುಟ್ಟಿ ಬೆಳೆದ ವಾತಾವರಣ, ಓದು, ಉದ್ಯೋಗ, ಹವ್ಯಾಸ ಪ್ರತಿಯೊಂದರದ್ದೂ ಒಂದೊಂದು ದಿಕ್ಕು.ಎರಡು ವಿಭಿನ್ನ ಬಣ್ಣದ ಲೋಕಗಳ ನಂಟು ಬೆಳೆಸಿಕೊಂಡವರು ನಿರಂಜನ್. ಬಾಲ್ಯದಿಂದಲೂ ಚಿತ್ರಕಲೆಯ ಹುಚ್ಚು. ಈಗ ಸಂಸದರಾಗಿರುವ ಜಯಪ್ರಕಾಶ್ ಹೆಗ್ಡೆ ಮತ್ತು ನಿರಂಜನ್‌ರ ತಂದೆ ಆತ್ಮೀಯರು. ಒಮ್ಮೆ ಜಯಪ್ರಕಾಶ್ ಹೆಗ್ಡೆ ಅವರ ಚಿತ್ರ ಬರೆದ ನಿರಂಜನ್ ಅದನ್ನು ಅವರಿಗೆ ಕಾಣಿಕೆಯಾಗಿ ನೀಡಿದ್ದು ಬದುಕಿನ ದಿಕ್ಕು ಬದಲಿಸಿತು. ಬೆಂಗಳೂರಿಗೆ ನಿರಂಜನ್‌ರನ್ನು ಕರೆತಂದ ಜಯಪ್ರಕಾಶ್, ಚಿತ್ರಕಲಾ ಪರಿಷತ್ತಿನಲ್ಲಿ ಸೀಟು ಕೊಡಿಸಿದರು.ಕಲೆ ಮತ್ತು ಸಾಹಿತ್ಯದ ಸಹವಾಸ ರಂಗಭೂಮಿಯತ್ತಲೂ ಅವರನ್ನು ಎಳೆದುತಂದಿತು. ಕಲಾಕ್ಷೇತ್ರ ಸಿನಿಮಾರಂಗದ ಹಾದಿಯನ್ನು ತೋರಿಸಿತು. ಓದಿನ ನಡುವೆ ನಟನೆಯ ಗೀಳನ್ನು ಮುಂದುವರಿಸಿದ ನಿರಂಜನ್ ಎಂಎಫ್‌ಎ ಪದವಿ ಪೂರೈಸಿದರು. ಸಿನಿಮಾ ಆಸಕ್ತಿ ಜಾಹೀರಾತು ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಪ್ರೇರಣೆ ನೀಡಿತು.`ವಜಿಕ್ಕು ಎನ್ 18/9' ಎಂಬ ತಮಿಳು ಚಿತ್ರದ ಕನ್ನಡ ಅವತರಣಿಕೆ `ಕೇಸ್ ನಂ...'. `ವಜಿಕ್ಕು ಎನ್ 18/9' ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಿನಿಮಾ. ಕನ್ನಡದ ಪರಿಸರಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು, ಹಾಡುಗಳನ್ನು ಸಹ ಅಳವಡಿಸಲಾಗಿದೆ. ವ್ಯಾಪಾರೀ ಅಂಶಗಳಿರುವ ಕಲಾತ್ಮಕ ಸ್ವರೂಪದ ಚಿತ್ರವಿದು ಎನ್ನುತ್ತಾರೆ ನಿರಂಜನ್.ಚಿತ್ರದಲ್ಲಿ ನಿರಂಜನ್ ಪುಟ್ಟ ಹೋಟೆಲ್‌ನ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಾಸ್ತವಕ್ಕೆ ಹತ್ತಿರವಾಗಿರಲಿ ಎಂದು ಹೋಟೆಲ್ ಕಾರ್ಮಿಕರ ಜೀವನಶೈಲಿಯನ್ನು ಹತ್ತಿರದಿಂದ ನೋಡಿ ತಮ್ಮನ್ನು ಪಾತ್ರಕ್ಕೆ ಒಗ್ಗಿಸಿಕೊಂಡಿದ್ದಾರೆ. ದೇಹದ ತೂಕವನ್ನು 70ರಿಂದ 58 ಕೆ.ಜಿ.ಗೆ ಇಳಿಸಿಕೊಂಡಿದ್ದಾರೆ.ಮಂಡ್ಯದಿಂದ ಬೆಂಗಳೂರಿಗೆ ಬರುವ ಅವಿದ್ಯಾವಂತ ಹುಡುಗನಿಗೆ, ಮನೆಯೊಂದರಲ್ಲಿ ಕೆಲಸ ಮಾಡುವ ಯುವತಿ ಮೇಲೆ ಪ್ರೇಮಾಂಕುರವಾಗುತ್ತದೆ. ಅದರ ನಡುವೆಯೇ ಈ ಮುಗ್ಧ ಹುಡುಗ ತನಗೆ ಸಂಬಂಧವಿಲ್ಲದ ಅಪರಾಧ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅದೇ `ಕೇಸ್ ನಂ 18/9'ರ ತಿರುಳು. ನಿರಂಜನ್ ಪ್ರಕಾರ ಇದು ಮಹಿಳಾ ಪ್ರಧಾನ ಚಿತ್ರ. ಹೆಣ್ಣಿನ ಹೋರಾಟದ ಬದುಕಿನ ಚಿತ್ರಣ ಇದರಲ್ಲಿದೆಯಂತೆ.ನಿರಂಜನ್‌ಗೆ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ. ಚಿತ್ರದಲ್ಲಿ ಇನ್ನೊಂದು ಜೋಡಿಯೂ ಇದೆ. ಅದು ನವನಟ ಅಭಿ ಮತ್ತು ಶ್ವೇತಾ ಪಂಡಿತ್ ಅವರದ್ದು. ಹಳ್ಳಿ ಮತ್ತು ನಗರಗಳ ಬದುಕಿನ ವೈರುಧ್ಯಗಳನ್ನು ಬಿಂಬಿಸುವ ಈ ಪಾತ್ರಗಳು ಕೇವಲ ಸಿನಿಮಾಕ್ಕೆ ಸೀಮಿತವಲ್ಲ. ಅದರಾಚೆಗಿನ ವಾಸ್ತವ ಬದುಕನ್ನೂ ವಿಶ್ಲೇಷಣೆಗೆ ಹಚ್ಚುತ್ತವೆ ಎಂಬ ಅಭಿಪ್ರಾಯ ಅವರದು.ನಾಯಕನಾಗಿ ನಟಿಸುವಂತೆ ಬಂದಿದ್ದ ಹಲವು ಅವಕಾಶಗಳನ್ನು ನಿರಂಜನ್ ಕಥೆಯಲ್ಲಿ ಹೊಸತನವಿಲ್ಲದ ಕಾರಣಕ್ಕೆ ತಿರಸ್ಕರಿಸಿದ್ದರು. ಕಥೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎನ್ನುವ ಅವರು, ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಅವು ಜನರ ಮನದಲ್ಲಿ ಉಳಿಯುವಂಥ ಚಿತ್ರಗಳಾಗಬೇಕು ಎನ್ನುತ್ತಾರೆ. ಅವರ ಮುಂದಿನ ಹೆಜ್ಜೆ `ಕೇಸ್ ನಂ...' ಚಿತ್ರಕ್ಕೆ ಸಿಗುವ ಜನರ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.