ಗುರುವಾರ , ಮೇ 26, 2022
32 °C

ನೀರಾವರಿ ಜಮೀನಿಗೂ ಭೂ ಚೇತನ

ಸುಭಾಸ.ಎಸ್.ಮಂಗಳೂರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿ ಜಮೀನಿಗೂ ಭೂ ಚೇತನ

ಮೈಸೂರು: ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ `ಭೂ ಚೇತನ~ವನ್ನು ಈ ಬಾರಿ ರಾಜ್ಯದ 30 ಜಿಲ್ಲೆಗಳಲ್ಲೂ ಆರಂಭಿಸುವ ಜೊತೆಗೆ ನೀರಾವರಿ ಪ್ರದೇಶವನ್ನೂ `ಭೂ ಚೇತನ~ ವ್ಯಾಪ್ತಿಗೆ ಒಳಪಡಿಸಲಾಗಿದೆ.ಖುಷ್ಕಿ ಪ್ರದೇಶದ ಬೆಳೆ ಇಳುವರಿ ಹೆಚ್ಚಿಸುವುದರೊಂದಿಗೆ ರೈತರ ಜೀವನ ಹಾಗೂ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ 2009ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಬಾರಿ ಖುಷ್ಕಿ ಪ್ರದೇಶದೊಂದಿಗೆ ನೀರಾವರಿ ಜಮೀನಿಗೂ ಯೋಜನೆಯನ್ನು ವಿಸ್ತರಿಸಿರುವುದು ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದೆ.ಜಿಲ್ಲೆಯಲ್ಲಿ 2.53 ಲಕ್ಷ ಹೆಕ್ಟೇರ್ ಪ್ರದೇಶವನ್ನು `ಭೂ ಚೇತನ~ ಯೋಜನೆಯಡಿ ಗುರುತಿಸಲಾಗಿದ್ದು, ಈ ಪೈಕಿ 1.95 ಲಕ್ಷ ಹೆಕ್ಟೇರ್ ಖುಷ್ಕಿ ಪ್ರದೇಶ ಹಾಗೂ 55 ಸಾವಿರ ಹೆಕ್ಟೇರ್ ಭತ್ತ (ನೀರಾವರಿ) ಹಾಗೂ 3 ಸಾವಿರ ಹೆಕ್ಟೇರ್ ಕಬ್ಬು (ನೀರಾವರಿ) ಬೆಳೆಯುವ ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು `ರೈತ ಅನುವುಗಾರ~ ಹಾಗೂ `ಮುಂದಾಳು ರೈತ~ರನ್ನು ನೇಮಕ ಮಾಡಲಾಗಿದೆ.ಪ್ರತಿ 500 ಹೆಕ್ಟೇರ್ ಭೂಮಿಗೆ ಒಬ್ಬ ರೈತ ಅನುವುಗಾರರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಎಂಟು ದಿನಗಳ ತರಬೇತಿ ನೀಡಲಾಗಿದೆ. ಅನುವುಗಾರ ಸ್ಥಳೀಯ ರೈತರಾಗಿರಬೇಕು, ಗುಂಪು ರಚನಾ ಸಾಮರ್ಥ್ಯವಿದ್ದು, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರಬೇಕು ಎಂಬ ಮಾನದಂಡ ಅನುಸರಿಸಲಾಗಿದೆ.ಪ್ರತಿ ರೈತ ಅನುವುಗಾರನಿಗೆ 5 ಮಂದಿ ಮುಂದಾಳು ರೈತರನ್ನು ಕೊಡಲಾಗಿದೆ. ಅನುವುಗಾರರಿಗೆ ಪ್ರತಿ ದಿನ 150 ರೂಪಾಯಿ ಹಾಗೂ ರೈತ ಮುಂದಾಳುವಿಗೆ 95 ರೂಪಾಯಿ ಗೌರವ ಧನ ನೀಡಲಾಗುತ್ತಿದೆ.ಜಿಲ್ಲೆಯ 7 ತಾಲ್ಲೂಕುಗಳಲ್ಲಿ 390 ರೈತ ಅನುವುಗಾರರು ಹಾಗೂ 1,950 ರೈತ ಮುಂದಾಳುಗಳನ್ನು ನೇಮಕ ಮಾಡಲಾಗಿದೆ. 33 ಕ್ಷೇತ್ರ ಪಾಠಶಾಲೆಗಳನ್ನು ಆರಂಭಿಸಲಾ ಗಿದ್ದು, 2,400 ಗೋಡೆ ಬರಹದ ಮೂಲಕ `ಭೂ ಚೇತನ~ ಯೋಜನೆ ಬಗ್ಗೆ ಪ್ರಚಾರ ಕೈಗೊಳ್ಳಲಾಗಿದೆ.ರೈತರಿಗೆ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲು 360 ಗೋದಾಮು ಬಾಡಿಗೆ ಹಿಡಿಯಲಾಗಿದ್ದು, 33 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು 19,500 ಟನ್ ಜಿಪ್ಸಂ, 975 ಟನ್ ಸತುವಿನ ಸಲ್ಫೇಟ್ ಹಾಗೂ 390 ಟನ್ ಬೋರಾನ್ ಸೇರಿದಂತೆ ಅಗತ್ಯ ಪೋಷಕಾಂಶಗಳ ವಿತರಣೆಗೆ ಕೃಷಿ ಇಲಾಖೆ ಮುಂದಾಗಿದ್ದು, ಶೇ 50ರ ರಿಯಾಯಿತಿಯಲ್ಲಿ ದರದಲ್ಲಿ ರೈತರಿಗೆ ನೀಡುತ್ತಿರುವುದು ವಿಶೇಷವಾಗಿದೆ.ಈ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, `ಭೂ ಚೇತನ ಉತ್ತಮ ಯೋಜನೆಯಾಗಿದ್ದು ಇದೇ ಮೊದಲ ಬಾರಿಗೆ ನೀರಾವರಿ ಜಮೀನಿಗೂ ವಿಸ್ತರಿಸಲಾಗಿದೆ.ಕಳೆದ ವರ್ಷ ಈ ಯೋಜನೆಯಿಂದ ಶೇ 20 ರಿಂದ 25ರಷ್ಟು ಹೆಚ್ಚುವರಿ ಇಳುವರಿ ಪಡೆಯಲಾಗಿದೆ. ಕ್ಷೇತ್ರ ಕೃಷಿ ಪಾಠಶಾಲೆ ಮೂಲಕ ವಾರಕ್ಕೊಂದು ಬಾರಿ ರೈತರಿಗೆ ಕೃಷಿ ಜಮೀನಿನಲ್ಲೇ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ರೋಗ ನಿರ್ವಹಣೆ, ಕೀಟಬಾಧೆ, ಬೆಳೆ ಹತೋಟಿ ಸೇರಿದಂತೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ~ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.