ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತನದತ್ತ ಮಲ್ಯ ಉದ್ಯಮ ಸಾಮ್ರಾಜ್ಯ

Last Updated 5 ಮೇ 2015, 19:30 IST
ಅಕ್ಷರ ಗಾತ್ರ

ಮದ್ಯದ ದೊರೆ ವಿಜಯ್‌ ಮಲ್ಯ ಕಟ್ಟಿದ ಸಾಮ್ರಾಜ್ಯ ದಿನೆ ದಿನೇ ಕುಸಿಯುತ್ತಾ ಸಾಗಿದೆ. ಕೂಡಿಟ್ಟ  ಸಂಪತ್ತು ಮಂಜಿನಂತೆ ಕರಗುತ್ತಿದೆ. ಸ್ವತ್ತುಗಳು ಒಂದೊಂದಾಗಿ ಅವರ ಕೈತಪ್ಪಿ ಹೋಗುತ್ತಿವೆ.

ಒಂದು ಕಾಲದಲ್ಲಿ ಅವರು ಮುಟ್ಟಿದ್ದಲ್ಲೆವೂ ಚಿನ್ನ ವಾಗುತ್ತಿತ್ತು. ಇದರಿಂದಾಗಿಯೇ ಅವರು ‘ಕಿಂಗ್‌ ಆಫ್‌ ಗುಡ್‌ ಟೈಮ್ಸ್‌’ ಎಂದು ಖ್ಯಾತರಾಗಿದ್ದರು. ಅದೇ ಮಲ್ಯ ಈಗ ಕೈಇಟ್ಟ ಕಡೆಗೆಲ್ಲ ಚಿನ್ನವೂ ಕಬ್ಬಿಣವಾಗತೊಡಗಿದೆ. 

ವಿಜಯ್‌ ಮಲ್ಯ ಯಾವಾಗ ವಿಮಾನದ ರೆಕ್ಕೆ ಹಿಡಿದರೋ ಅಂದೇ ಅವರ ನಸೀಬು ಕೈಕೊಟ್ಟಿತು. ಪತನದ ಕ್ಷಣ ಆರಂಭವಾಯಿತು. ಅಲ್ಲಿಯವರೆಗೂ ಉದ್ಯಮ ಕ್ಷೇತ್ರದಲ್ಲಿ ಹಿನ್ನಡೆ ಕಾಣದ ಮಲ್ಯ ಮೊದಲ ಬಾರಿಗೆ ಸೋಲಿನ ರುಚಿ ಅನುಭವಿಸಬೇಕಾಯಿತು. ನಷ್ಟ ಎಂದರೆ ಏನೆಂದೇ ತಿಳಿಯದ ಅವರು ಭಾರಿ ಪ್ರಮಾಣ ದಲ್ಲಿ ನಷ್ಟ ಅನುಭವಿಸಬೇಕಾಯಿತು.

ಮಲ್ಯ ಕಟ್ಟಲೆತ್ನಿಸಿದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆ ಅವರದೇ ಉದ್ಯಮಗಳ ಭದ್ರಕೋಟೆಗೆ ಡಿಕ್ಕಿ ಹೊಡೆದು ಮಲ್ಯ ಸಾಮ್ರಾಜ್ಯದ ಅವನತಿಗೆ ನಾಂದಿ ಹಾಡಿತು. ಅಲ್ಲಿ ವರೆಗೂ ಅದೃಷ್ಟದ ಸಂಕೇತವಾಗಿದ್ದ ‘ಕಿಂಗ್‌ಫಿಶರ್‌’ ಎಂಬ ಪುಟ್ಟ ಮಿಂಚುಳ್ಳಿ ಹಕ್ಕಿ, ಮಲ್ಯ ಮೇಲೆ ಹೊರಿಸಿದ ₨7 ಸಾವಿರ ಕೋಟಿಗಳಷ್ಟು ಬೃಹತ್‌ ಸಾಲದ ಹೊರೆ ಯನ್ನು ಇಳಿಸಲು ಮಲ್ಯ ಅವರಿಗೆ ಇನ್ನೂ  ಸಾಧ್ಯವಾಗಿಲ್ಲ.

ಯಾರ ಬಳಿ ಎಂದಿಗೂ ‘ಕ್ಷಮೆ’ ಕೇಳದ ಮಲ್ಯ ಅವರು, ಮುಷ್ಕರ ನಿರತ ತಮ್ಮದೇ ಸಂಸ್ಥೆಯ ಪೈಲಟ್‌ ಮತ್ತು ಸಿಬ್ಬಂದಿಯ ಕ್ಷಮೆ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿ ಮೊದಲ ಬಾರಿಗೆ ಸೃಷ್ಟಿಯಾಯಿತು.

ಅಪ್ಪ ವಿಠಲ ಮಲ್ಯ ಅವರ ಅಕಾಲಿಕ ಮರಣದಿಂದ 28ನೇ ವಯಸ್ಸಿಗೆ ದೇಶದ ಅತಿ ದೊಡ್ಡ ಮದ್ಯ ಸಾಮ್ರಾಜ್ಯ ‘ಯುನಿಟೈಡ್‌ ಬ್ರಿವರೇಜಸ್‌’ (ಯು.ಬಿ) ಸಮೂಹ ಒಡೆತನ ವಿಜಯ್ ಮಲ್ಯ ಅವರ ಕೈಸೇರಿತ್ತು.

ಅಪ್ಪ ಕಟ್ಟಿದ ಸಾಮ್ರಾಜ್ಯವನ್ನು ಮಲ್ಯ ಅವರು 1983ರಿಂದ ಏಕಾಂಗಿಯಾಗಿಯೇ ದೇಶ, ವಿದೇಶಗಳಲ್ಲಿ ವಿಸ್ತರಿಸಿದರು. ಮದ್ಯ ತಯಾರಿಕೆ-ಮಾರಾಟಕ್ಕೇ ಸೀಮಿತ ವಾಗಿದ್ದ ವ್ಯವಹಾರವನ್ನು ರಿಯಲ್‌ ಎಸ್ಟೇಟ್‌, ರಸ ಗೊಬ್ಬರ ತಯಾರಿಕೆ, ಜೈವಿಕ ತಂತ್ರಜ್ಞಾನ, ಕ್ರೀಡೆ, ಕಟ್ಟಡ ನಿರ್ಮಾಣ, ಪತ್ರಿಕೋದ್ಯಮ, ಕುದುರೆ ರೇಸ್‌, ಔಷಧ ತಯಾರಿಕೆ ಕ್ಷೇತ್ರಗಳಿಗೂ ವಿಸ್ತರಿಸಿದರು. ಯು.ಬಿ ಸಮೂಹದ ಕಿಂಗ್‌ಫಿಶರ್‌ ಬಿಯರ್ 52 ರಾಷ್ಟ್ರಗಳಲ್ಲಿ ಜನಪ್ರಿಯವಾಗುವಂತೆ ಮಾಡಿದರು. ಅಷ್ಟೇ ಅಲ್ಲದೆ, ದೇಶ, ವಿದೇಶಗಳ ಮದ್ಯ ತಯಾರಿಕಾ ಕಂಪೆನಿಗಳನ್ನು ಯುಬಿ ತೆಕ್ಕೆಗೆ ತೆಗೆದುಕೊಂಡು ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ನಡೆದರು.

ಆದರೆ, ಎಲ್ಲದಕ್ಕೂ ಕೊನೆ ಇರುತ್ತದೆ. ಅದು ಮಲ್ಯ ಅವರಿಗೂ ಅನ್ವಯಿಸುತ್ತದೆ.  ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮತ್ತು ರಾಜಕೀಯ ಕ್ಷೇತ್ರ ಅವರಿಗೆ ಕೈಕೊಟ್ಟವು.   ವಿಲಾಸಿ ಜೀವನಶೈಲಿ ಮತ್ತು ಶೋಕಿ ಅವರ ಪತನಕ್ಕೆ ಮೊದಲ ಅಡಿಗಲ್ಲಿಟ್ಟವು.

ಐಪಿಎಲ್‌ ಕ್ರಿಕೆಟ್‌ ತಂಡ, ಮದ್ಯದ ಕಂಪೆನಿ, ವಿಮಾನಗಳನ್ನು ಕೊಂಡುಕೊಳ್ಳುವಂತೆಯೇ ಅವರು ಸುಬ್ರಮಣಿಯನ್‌ ಸ್ವಾಮಿ ಅವರಿಂದ ಜನತಾ ಪಕ್ಷವನ್ನು  ಖರೀದಿಸಿದರು. ಆದರೆ, ಅದು ಅವರಿಗೆ ಗೆಲವು ತಂದುಕೊಡಲಿಲ್ಲ. ರಾಜ್ಯಸಭೆ ಸದಸ್ಯರಾಗಿದ್ದು ಬಿಟ್ಟರೆ ಮಲ್ಯ ಅವರಿಗೆ ರಾಜಕೀಯ ಪಕ್ಷದ ನಾಯಕತ್ವದಿಂದ ಹೆಚ್ಚಿನ ಲಾಭವೇನೂ ಆಗಲಿಲ್ಲ.

ದೇಶದ ವಿಮಾನಯಾನ ಕ್ಷೇತ್ರ ಸಂಕಷ್ಟದಲ್ಲಿದ್ದರೂ ಸ್ವಂತ ವಿಮಾನಯಾನ ಸಂಸ್ಥೆ ಕಟ್ಟುವ ಆಲೋಚನೆ ಅವರ ತಲೆ ಹೊಕ್ಕಿತು. ಹಿತೈಷಿಗಳ ಸಲಹೆ ಕಡೆಗಣಿಸಿ ಅವರು 2005ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಆರಂಭಿಸಿಯೇ ಬಿಟ್ಟರು.  ಅದಾದ ಕೆಲವು ತಿಂಗಳಲ್ಲೇ ಏರ್‌ಡೆಕ್ಕನ್‌ ವಿಮಾನಯಾನ ಸಂಸ್ಥೆಯನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಅವಸಾನದ ಆರಂಭ
ಅಲ್ಲಿಯವರೆಗೂ ದೇಶ-ವಿದೇಶಗಳ ಕಂಪೆನಿಗಳನ್ನು ಖರೀದಿಸುತ್ತಾ ಯಾವ ಅಡೆತಡೆಯೂ ಇಲ್ಲದೇ ಸಾಗಿದ್ದ ಮಲ್ಯ  ಅವರ ಯಶಸ್ವಿ ಮತ್ತು ಐಷಾರಾಮಿ ಬದುಕು ಅಲ್ಲಿಂದ ‘ಯೂ ಟರ್ನ್‌’ ತೆಗೆದುಕೊಂಡಿತು.

ಏರ್‌ಲೈನ್ಸ್‌ ಆರಂಭಿಸಲು ಮಾಡಿದ ₨8 ಸಾವಿರ ಕೋಟಿ ಸಾಲ ಹಿಂದಿರುಗಿಸಲು ಆಗಲಿಲ್ಲ. ಅದುವೇ ಅವರಿಗೆ ಮುಳುವಾಯಿತು. ಸಾಮ್ರಾಜ್ಯ ಕೈಜಾರಿ ಹೋಗಲು ಆರಂಭಿಸಿತು. ಅದನ್ನು ತಡೆಯಲು ಅವರಿಂದ ಸಾಧ್ಯವಾಗಲೇ ಇಲ್ಲ. ಸಾಲ ಪಡೆಯಲು ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಗೋವಾ, ಮುಂಬೈನಲ್ಲಿನ ಆಸ್ತಿಗಳನ್ನು ಬ್ಯಾಂಕ್‌ಗಳು ಸ್ವಾಧೀನಪಡಿಸಿಕೊಂಡವು.

ಒಂದು ಕಾಲಕ್ಕೆ ಮಲ್ಯ ಸಿರಿವಂತಿಕೆ ಸಂಕೇತವಾಗಿದ್ದ ಜೆಟ್‌ ವಿಮಾನ ಗುಜರಿ ಪಾಲಾಯ್ತು. ಸಾಲ ತೀರಿಸಲು ಅವರು ಜೆಟ್‌ ವಿಮಾನವನ್ನು ₨22 ಲಕ್ಷಕ್ಕೆ ಮಾರಾಟ ಮಾಡಿದರು.

ಇದಕ್ಕೂ ಮೊದಲು ಅವರು ಏರ್‌ಲೈನ್ಸ್‌ ಕಚೇರಿಗಳನ್ನು ಮಾರಾಟ ಮಾಡಿದ್ದರು. ಸಿಬ್ಬಂದಿಗೆ ನೀಡಬೇಕಾದ ವೇತನ ಮತ್ತು ಸೇವಾ ತೆರಿಗೆಯ ದೊಡ್ಡ ಮೊತ್ತ ಬಾಕಿಯಾಯಿತು.

ಎಸ್‌ಬಿಐ ಸೇರಿದಂತೆ ದೇಶದ 17 ಬ್ಯಾಂಕ್‌ಗಳಲ್ಲಿ ಮಾಡಿದ್ದ ಒಟ್ಟು ಎಂಟು ಸಾವಿರ ಕೋಟಿ ರೂಪಾಯಿ ಸಾಲ ಮರು ಪಾವತಿಗೆ ಬ್ಯಾಂಕ್‌ಗಳು ಬೆನ್ನು ಬಿದ್ದವು. ಹೊಸ ಸಾಲವೂ ಹುಟ್ಟಲಿಲ್ಲ. ಇದರ ಪರಿಣಾಮ ಮಲ್ಯ ಒಡೆತನದ ಕಂಪೆನಿಯ  ಮದ್ಯದ ಬ್ರಾಂಡ್‌ ಹಾಗೂ ಷೇರುಗಳ ಮೌಲ್ಯ ಕುಸಿಯತೊಡಗಿತು. ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿಗಳು ನಡೆದವು.  ಮಲ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದ್ದ ಕಿಂಗ್‌ಫಿಶರ್‌  ಕೊನೆ ಸ್ಥಾನಕ್ಕೆ ಕುಸಿಯಿತು. ಏರ್‌ಲೈನ್ಸ್ ಉದ್ಯಮದಲ್ಲಿ ಮಲ್ಯ ಅವರ ಲೆಕ್ಕಾಚಾರ ಸಂಪೂರ್ಣ  ಕೈಕೊಟ್ಟಿತು.

ರಾಜ್ಯಸಭೆ ಸದಸ್ಯ, ಮದ್ಯದ ದೊರೆ, ಉದ್ಯಮಿ, ಐಪಿಎಲ್‌ ತಂಡದ ಒಡೆಯ, ಅಂತರರಾಷ್ಟ್ರೀಯ ಫಾರ್ಮುಲಾ ಒನ್‌ ಕಾರ್‌ ರೇಸ್‌ ತಂಡ ‘ಫೋರ್ಸ್‌  ಇಂಡಿಯಾ’ ಮಾಲೀಕ ದೊಡ್ಡ ಸಾಲಗಾರ ಎನಿಸಿಕೊಂಡರು.  ಅವರ ಕಂಪೆನಿಗಳು ಒಂದೊಂದಾಗಿ ದಿವಾಳಿಯತ್ತ ಸಾಗಿದವು. 

ಈ ನಡುವೆ ಅಧಿಕಾರ ದುರುಪಯೋಗ ಹಾಗೂ ಅವ್ಯವಹಾರದ ಕಾರಣ ನೀಡಿ ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವಂತೆ ಬ್ರಿಟನ್‌ ಮೂಲದ ಪಾಲುದಾರ ಸಂಸ್ಥೆ ‘ಡಿಯಾಜಿಯೊ’ ಮಲ್ಯ ಅವರಿಗೆ ಸೂಚಿಸಿದೆ. ಇದರಿಂದ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಇದು ಇತ್ತೀಚಿನ ಬೆಳವಣಿಗೆ.
ಯುನೈಟೆಡ್‌ ಸ್ಪಿರಿಟ್ಸ್ ಬಹುತೇಕ ಷೇರುಗಳನ್ನು ಡಿಯಾಜಿಯೊ ಖರೀದಿಸಿದ ಕಾರಣ ಅದರ ಸಂಪೂರ್ಣ ನಿಯಂತ್ರಣ  ಆ ಕಂಪೆನಿಯ ಹಿಡಿತದಲ್ಲಿದೆ. ಮಲ್ಯ ಡಿಯಾಜಿಯೊ ಹೇಳಿದಂತೆ ಕೇಳುವುದು ಅನಿವಾರ್ಯ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಯುಬಿ ಸಮೂಹದ ಆಡಳಿತ ಚುಕ್ಕಾಣಿ ಹಿಡಿದು ಮುನ್ನಡೆಸುವ ಮೂಲಕ ದೇಶದ ಉದ್ಯಮ ಕ್ಷೇತ್ರದಲ್ಲಿ ಅಚ್ಚರಿ ಪಡುವಂತಹ ಸಾಧನೆ ಮಾಡಿ ತೋರಿದ ವಿಜಯ ಮಲ್ಯ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕನ್ನಡಿಗ ಉದ್ಯಮಿ.  

ಎಲ್ಲ ಸವಾಲು ಎದುರಿಸಿ ಬೂದಿಯಿಂದ ಎದ್ದು ಬರುವ ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ಮೇಲೆದ್ದು ಬರುವ ಶಕ್ತಿ, ಸಾಮರ್ಥ್ಯ ಅವರಲ್ಲಿದೆ. ಆದರೆ, ಹೇಗೆ ಎದ್ದು ಬರುತ್ತಾರೆ? ಎನ್ನುವುದೇ ಈಗಿನ ಕುತೂಹಲ.

ಶೋಕಿಲಾಲ...
ಮಾರುಕಟ್ಟೆಗೆ ಬರುವ ಹೊಸ ವಿದೇಶಿ ಕಾರುಗಳ ಖರೀದಿ, ಕುದುರೆ ತಳಿ ಸುಧಾರಣೆ, ರೇಸ್‌, ಅರೆನಗ್ನ ಸ್ತ್ರೀಯರ ವರ್ಣರಂಜಿತ ಕ್ಯಾಲೆಂಡರ್‌, ಬಾಲಿವುಡ್‌ ನಟ, ನಟಿಯರು ಮತ್ತು ರೂಪದರ್ಶಿಯರ ‘ಆತ್ಮೀಯ’ ನಂಟು, ರಾಯಲ್‌ ಚಾಲೆಂಜರ್ಸ್‌ ಐಪಿಎಲ್‌ ಕ್ರಿಕೆಟ್‌ ತಂಡ, ಮೋಹನ್‌ ಬಗಾನ್‌ ಮತ್ತು ಈಸ್ಟ್‌ ಬೆಂಗಾಲ್‌ ಫುಟ್‌ಬಾಲ್ ತಂಡಗಳ ಒಡೆತನ, ದೊಡ್ಡ ಔತಣಕೂಟಗಳು, ದೇಶ, ವಿದೇಶಗಳಲ್ಲಿ ವೈಭವೋಪೇತ ಬಂಗಲೆಗಳು, ಖಾಸಗಿ ದ್ವೀಪ ಖರೀದಿ... ಹೀಗೆ ಹತ್ತು, ಹಲವು  ವಿಶಿಷ್ಟ ಹಾಗೂ ವಿಚಿತ್ರ ಹವ್ಯಾಸಗಳಿಂದಲೂ ಮಲ್ಯ ಈ ಹಿಂದೆ ಸುದ್ದಿ ಮಾಡಿದ್ದರು. ಈಗ ಒಂದೊಂದಾಗಿ ಅವನ್ನು ಕಳೆದುಕೊಳ್ಳುತ್ತಲೂ ಸುದ್ದಿಗೆ ಗ್ರಾಸ ಒದಗಿಸುತ್ತಿದ್ದಾರೆ.

ಮಲ್ಯ ಏನೇ ಮಾಡಿದರೂ ಅದು ಸುದ್ದಿಯಾಗುತಿತ್ತು. ಕಿವಿಯಲ್ಲಿ ವಜ್ರದೋಲೆ, ಕೊರಳಲ್ಲಿ ದಪ್ಪ ಚಿನ್ನದ ಚೈನು, ಸುತ್ತಲೂ ಮೋಹಕ ಬೆಡಗಿಯರು, ಬಿಳಿ ಫ್ರೆಂಚ್‌ ಗಡ್ಡ ಇತ್ಯಾದಿ... ವರ್ಣರಂಜಿತ ವ್ಯಕ್ತಿತ್ವದಿಂದ ಅವರು ಉದ್ಯಮವನ್ನು ಮೀರಿ ಆಕರ್ಷಣೆ ಗಳಿಸಿದ್ದವರು.

ಟಿಪ್ಪೂ ಖಡ್ಗ ಮತ್ತು ಗಾಂಧಿ ಕನ್ನಡಕ
ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ  ಮೈಸೂರು ಹುಲಿ ಟಿಪ್ಪು ಸುಲ್ತಾನನ ಖಡ್ಗವನ್ನು ನಾಲ್ಕು ಕೋಟಿ ಕೊಟ್ಟು ಖರೀದಿಸಿದ್ದ ಮಲ್ಯ ಮರಳಿ ಅದನ್ನು ಭಾರತಕ್ಕೆ ತಂದು ದೇಶಪ್ರೇಮ ಮೆರೆದಿದ್ದರು.  ಅದಾದ ನಂತರ ನ್ಯೂಯಾರ್ಕ್‌ನಲ್ಲಿ  ನಡೆದ ಹರಾಜಿನಲ್ಲಿ ಮಹಾತ್ಮ ಗಾಂಧಿ ಅವರ ಕನ್ನಡಕ, ಕೈಬರಹದ ಲೇಖನಗಳನ್ನು  ₨9 ಕೋಟಿಗೆ ಖರೀದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ವರ್ಣಮಯ ಕ್ಯಾಲೆಂಡರ್‌
ಬಿಕಿನಿ ಬೆಡಗಿಯರ ವರ್ಣರಂಜಿತ ಚಿತ್ರಗಳಿಂದ ಗಮನಸೆಳೆಯುವ ಕಿಂಗ್ ಫಿಶರ್ ಕ್ಯಾಲೆಂಡರ್ ಮಲ್ಯ ಅವರ ಅಭಿರುಚಿ ಮತ್ತು ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದವು.  ಅದಕ್ಕಾಗಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಲೂ ಹಿಂದೆಮುಂದೆ ನೋಡುತ್ತಿರಲಿಲ್ಲ.   ಕ್ಯಾಲೆಂಡರ್ ರೂಪಿಸುವುದು ಮಲ್ಯ ಅವರ ಹವ್ಯಾಸಗಳಲ್ಲಿ ಒಂದಾಗಿತ್ತು. ಬಿಕಿನಿ ಚೆಲುವೆಯರ ಜತೆ ಪೋಸು ಕೊಡುವುದು ಅವರ ಖಯಾಲಿಯಾಗಿತ್ತು.
ದುಂದು ವೆಚ್ಚ, ಆಡಂಬರ, ಸಂಪತ್ತಿನ ಪ್ರದರ್ಶನದಲ್ಲಿ ಯಾರೊಬ್ಬರ ಹಿತವೂ ಅಡಗಿರುವುದಿಲ್ಲ
–ರಿಚರ್ಡ್ ಬ್ರಾನ್ಸನ್,
 ವರ್ಜಿನ್ ಅಟ್ಲಾಂಟಿಕ್, ವರ್ಜಿನ್ ರೆಕಾರ್ಡ್ಸ್, ಸಂಸ್ಥೆ ಒಡೆಯ 

ನನಗೀಗ ಬುದ್ಧಿ ಬಂದಿದೆ.  ನಾನೀಗ ಸಾಕಷ್ಟು ಪಾಠ ಕಲಿತಿದ್ದೇನೆ. ಒಣ ಆಡಂಬರ, ದೌಲತ್ತು, ಶ್ರೀಮಂತಿಕೆಯ ಪ್ರದರ್ಶನ ನಿಜಕ್ಕೂ ಒಳ್ಳೆಯದಲ್ಲ ಎಂಬ ಸತ್ಯ ಅರಿವಾಗಿದೆ. ಅದರಲ್ಲೂ ಭಾರತದಂಥ ದೇಶದಲ್ಲಂತೂ ಇದು  ಅತ್ಯಂತ ಅಪಾಯಕಾರಿ ಪ್ರವೃತ್ತಿ!
–ವಿಜಯ್‌ ಮಲ್ಯ,  ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT