ಮಂಗಳವಾರ, ಜೂನ್ 22, 2021
27 °C

ಬಿಸಿಲ ಬೇಗೆ ದೂರ ಮಾಡುವ ಕಲ್ಲಂಗಡಿ-ಕರಬೂಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲ ಬೇಗೆ ದೂರ ಮಾಡುವ ಕಲ್ಲಂಗಡಿ-ಕರಬೂಜ

ಹೊನ್ನಾಳಿ: ಬೇಸಿಗೆಯ ತಾಪಮಾನದಿಂದ ಕೊಂಚ ರಕ್ಷಣೆ ಬೇಕಾದರೆ ಮನುಷ್ಯ ಹಣ್ಣುಗಳ ಮೊರೆ ಹೋಗುತ್ತಾನೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಬೇಸಿಗೆಯಲ್ಲಿ ಮನುಷ್ಯನಿಗೆ ಹಿತಕರ ಅನುಭವ ನೀಡುತ್ತವೆ.

ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಇಡೀ ರಾಜ್ಯದಲ್ಲೇ ತನ್ನ ವಿಶಿಷ್ಟ ರುಚಿ ಮತ್ತು ಬಣ್ಣದಿಂದಾಗಿ ಪ್ರಸಿದ್ಧಿ ಪಡೆದಿವೆ.ಈ ಹಣ್ಣುಗಳನ್ನು ರೈತರು ತುಂಗಭದ್ರಾ ನದಿಯ ದಂಡೆಯಲ್ಲಿ ಬೆಳೆಯುತ್ತಾರೆ. ಮೊದಲೆಲ್ಲಾ ರೈತರು ಸಾವಯವ ಪದ್ಧತಿಯಲ್ಲಿ ಹಣ್ಣು ಬೆಳೆಯುತ್ತಿದ್ದರು. ಆದರೆ, ಇದೀಗ ಬದಲಾದ ಕಾಲಮಾನಕ್ಕೆ ತಕ್ಕಂತೆ ರೈತರು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳ ಮೊರೆ ಹೋಗಲೇಬೇಕಾಗಿದೆ. ಆದರೂ, ರುಚಿಕರ ಹಣ್ಣುಗಳ ಉತ್ತಮ ಇಳುವರಿ ದೊರೆಯುತ್ತದೆ.ರಾಜ್ಯ ಹೆದ್ದಾರಿ ಬಳಿ ಹೊನ್ನಾಳಿಯ ತುಂಗಭದ್ರಾ ನದಿ ಸಮೀಪ ರಾಶಿಗಟ್ಟಲೇ ಕರಬೂಜ ಹಣ್ಣು ಸುರಿದುಕೊಂಡು ರೈತರು ವ್ಯಾಪಾರ ಮಾಡುತ್ತಾರೆ. ಈ ದಾರಿಯಲ್ಲಿ ಕಾರು ಇತರೆ ವಾಹನಗಳಲ್ಲಿ ತೆರಳುವ ಜನರು ಹಣ್ಣುಗಳಿಂದ ಆಕರ್ಷಿತರಾಗಿ ಖರೀದಿಸಿಯೇ ಮುಂದೆ ಸಾಗುತ್ತಾರೆ.ಹೊನ್ನಾಳಿಯ ಕಲ್ಲಂಗಡಿ-ಕರಬೂಜ ಹಣ್ಣುಗಳಿಗೆ ಹೊರ ರಾಜ್ಯ, ಜಿಲ್ಲೆಗಳಲ್ಲಿಯೂ ಅಪಾರ ಬೇಡಿಕೆ ಇದೆ. ಸಗಟು ದರದಲ್ಲಿ ಇಲ್ಲಿಂದ ಹಣ್ಣುಗಳನ್ನು ಖರೀದಿಸಿ ವ್ಯಾಪಾರಿಗಳು ಅಧಿಕ ಲಾಭ ಗಳಿಸಿದ ಉದಾಹರಣೆಗಳೂ ಇಲ್ಲದಿಲ್ಲ.

ದೇಹದಲ್ಲಿ ನಿರ್ಜಲೀಕರಣವಾದರೆ, ಅದರಿಂದ ಮುಕ್ತಿ ಹೊಂದಲು ವೈದ್ಯರು ಹಣ್ಣುಗಳ ಸೇವೆನೆಗೆ ಸಲಹೆ ನೀಡುತ್ತಾರೆ. ಅದರಲ್ಲೂ ಕಲ್ಲಂಗಡಿ-ಕರಬೂಜ ಹಣ್ಣುಗಳು ನಿರ್ಜಲೀಕರಣ ಸಮಸ್ಯೆಗೆ ರಾಮಬಾಣ.ಕಲ್ಲಂಗಡಿ-ಕರಬೂಜ ಹಣ್ಣುಗಳಲ್ಲಿ ಮ್ಯಾಗ್ನೀಷಿಯಂ, ಪೊಟ್ಯಾಷಿಯಂ, ಕ್ಯಾಲ್ಷಿಯಂ, ಪ್ರೋಟೀನ್‌ಗಳು ಹೇರಳ ಪ್ರಮಾಣದಲ್ಲಿ ಇರುವುದರಿಂದ ಮನುಷ್ಯನ ದೇಹಕ್ಕೆ ಬೇಸಿಗೆಯಲ್ಲಿ ಇವು ಅತ್ಯುಪಯುಕ್ತ ಎಂದು ಡಾ.ಎನ್.ಕೆ. ಲಿಂಗರಾಜ್ ಹೇಳುತ್ತಾರೆ.ಪ್ರಕೃತಿ ಮನುಷ್ಯನ ಆರೋಗ್ಯ ರಕ್ಷಣೆಗೆ ಕಾಲ ಕಾಲಕ್ಕೆ ಹಣ್ಣುಗಳು ಲಭ್ಯವಾಗುವ ವ್ಯವಸ್ಥೆ ಮಾಡಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ-ಕರಬೂಜ ದೊರೆಯುವ ವ್ಯವಸ್ಥೆ ಇದೆ. ಇದರಿಂದ ಮನುಷ್ಯನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.