ಗುರುವಾರ , ಫೆಬ್ರವರಿ 25, 2021
20 °C
ವಿಮರ್ಶೆ

ಬುದ್ಧಿ, ವಿವೇಕ, ವಾಸ್ತವದೊಂದಿಗೆ ಹೆಣ್ಣಿನ ಸಂಘರ್ಷದ ಕಥನ

ಡಾ. ಎಂ.ಎಸ್. ಆಶಾದೇವಿ Updated:

ಅಕ್ಷರ ಗಾತ್ರ : | |

ಬುದ್ಧಿ, ವಿವೇಕ, ವಾಸ್ತವದೊಂದಿಗೆ ಹೆಣ್ಣಿನ ಸಂಘರ್ಷದ ಕಥನ

ಕನ್ನಡದ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಬರವಣಿಗೆಯಿಂದ ದೂರವುಳಿದಿದ್ದ ಕನ್ನಡದ ಮಹತ್ವದ ಲೇಖಕಿ ವೀಣಾ ಶಾಂತೇಶ್ವರ ಅತ್ಯುತ್ತಮ ಅನುವಾದ ಮೂಲಕ ತಮ್ಮ ಪುನರಾಗಮನವನ್ನು ಸಾರಿದ್ದಾರೆ. ಕವಿತಾ ಮಹಾಜನ ಅವರ ‘ಭಿನ್ನ’ ಕಾದಂಬರಿಯನ್ನು ವೀಣಾ ಅವರು ಕನ್ನಡಕ್ಕೆ ತಂದಿದ್ದಾರೆ.ಕವಿತಾ ಮಹಾಜನ ಒಂದು ರೀತಿಯಲ್ಲಿ ಮಹಾಶ್ವೇತಾದೇವಿಯವರ ಮಾದರಿಯ ಮುಂದುವರಿಕೆ ಎಂದೇ ಪರಿಗಣಿಸಬಹುದಾದ ಲೇಖಕಿ. ಲೇಖಕರ ಸಾಮಾಜಿಕ ಬದ್ಧತೆಯು ಅವರ ಮೂಲಗುಣಗಳಲ್ಲೊಂದಾಗಿರಬೇಕು ಎಂದು ನಂಬಿದ ಲೇಖಕಿ ಕವಿತಾ. ಮರಾಠಿಯಲ್ಲಿ ಬರೆಯುವ ಈ ಲೇಖಕಿಯ ಕೃತಿಗಳು ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಆದಿವಾಸಿಗಳ ಬದುಕಿನ ಅಪೂರ್ವ ಚಿತ್ರಣವೆಂದೇ ಖ್ಯಾತವಾಗಿರುವುದು ಇವರ ‘ಬ್ರ’ ಕಾದಂಬರಿ.ಲೇಖಕಿಯರೆಂದರೆ ಹೀಗಿರಬೇಕು ಎನ್ನುವ ಸ್ಥಾಪಿತ ಬೇಲಿಯನ್ನು ಕಿತ್ತೊಗೆದು ಹೆಣ್ಣನ್ನು ಅವಳ ನಿಜ–ಸುಳ್ಳುಗಳಲ್ಲಿ ಉತ್ಕಟವಾಗಿ ಬಯಲಾಗಿಸಿದವರು ವೀಣಾ ಶಾಂತೇಶ್ವರ. ಸ್ವತಃ ಇಂಥ ನಿಲುವಿನವರಾದ್ದರಿಂದಲೇ ವೀಣಾ ಅವರಿಗೆ ಹೆಣ್ಣು – ಅವಳ ಬದುಕು, ಅದನ್ನು ನಿರ್ಧರಿಸುವ ಇತರ ನೂರು ಹೊರಗಿನ ಅಂಶಗಳನ್ನು ಬಿಡಿಸಬರದಂತೆ ಹೆಣೆದಿರುವ ಕವಿತಾ ಮಹಾಜನ ಅವರ ‘ಭಿನ್ನ’ ಕಾದಂಬರಿ ಪ್ರಿಯವಾಗಿರಬೇಕು. ಮುನ್ನುಡಿಯಲ್ಲಿ ವೀಣಾ ಅವರು ತಾವು ‘ಬ್ರ’ವನ್ನು ಅನುವಾದಿಸಬೇಕಿಂದಿದ್ದಾಗಿಯೂ ಆದರೆ ಸ್ವತಃ ಕವಿತಾ ಅವರೇ ‘ಭಿನ್ನ’ವನ್ನು ಅನುವಾದಿಸಬೇಕೆಂದು ಬಯಸಿದ್ದಾಗಿ ಹೇಳಿದ್ದಾರೆ.ಹಾಗೆ ನೋಡಿದರೆ, ಅತ್ಯುತ್ತಮ ಕಲಾಕೃತಿಯಾಗಬೇಕು ಎನ್ನುವ ಸಾಹಿತ್ಯಕ ಹಂಬಲವನ್ನು ಮೀರಿಕೊಂಡ ಸ್ತ್ರೀಸಂಕಥನದ ನಿರೂಪಣೆಯಾಗಲು ‘ಭಿನ್ನ’ ಹೊರಟಿದೆ. ಇದೊಂದು ಮಹತ್ವದ ಅಂಶವೆಂದೇ ತೋರುತ್ತದೆ. ಕಲಾಕೃತಿಯ ಮಹತ್ವ ಮತ್ತು ಅವಕಾಶವನ್ನು ಈ ನಿರೂಪಣೆಗಳು ನಿರಾಕರಿಸುವುದಿಲ್ಲ.

ಆದರೆ ಅವುಗಳ ರಾಜಕೀಯ ಮತ್ತು ಸಾಮಾಜಿಕ ಪಾತ್ರವು ಅದಕ್ಕಿಂತ ಹೆಚ್ಚು ಮಹತ್ವದ್ದು ಮತ್ತು ತುರ್ತಿನದ್ದು ಎಂದು ಇವು ಗಾಢವಾಗಿ ನಂಬುತ್ತವೆ. ಅಭಿವ್ಯಕ್ತಿಯ ಹೊಸದಾರಿಯ ಹುಡುಕಾಟಗಳಾಗಿಯೂ ಇವುಗಳಿಗೆ ಮಹತ್ವದ ಸ್ಥಾನವಿದೆ.‘ಕೆಳಗೇಳು ಮಂಜಿನ ಶಿಖರಿ’ ಎನ್ನುವುದು ಮನೋವಿಜ್ಞಾನಿಗಳು ಸುಪ್ತಮನೋಲೋಕದ ಬಗ್ಗೆ ಹೇಳುವ ಮಾತುಗಳು. ಆದರೆ, ಹೆಣ್ಣಿನ ಸ್ಥಿತಿಗತಿಗಳಿಗೂ ಈ ಮಾತುಗಳು ಅನ್ವಯಿಸುತ್ತವೆ. ಬಗೆದಷ್ಟೂ ಅವಳ ಸ್ಥಿತಿಗತಿಗಳ ವಿಲಕ್ಷಣತೆಗಳು ನಮಗೆದುರಾಗುತ್ತಲೇ ಹೋಗುತ್ತವೆ. ಹೆಣ್ಣಿನ ತಲ್ಲಣಗಳ ಉಹಾತೀತ ಲೋಕವೊಂದು ‘ಭಿನ್ನ’ ಕಾದಂಬರಿಯಲ್ಲಿ ಅನಾವರಣವಾಗಿದೆ. ಆದರೆ ಈ ಅನಾವರಣ ಓದುಗರ ಮನಸ್ಸನ್ನು ಅದೆಷ್ಟು ತೀವ್ರವಾಗಿ ತಟ್ಟುತ್ತದೆ ಎಂದರೆ, ಕಾದಂಬರಿಯನ್ನು ಒಂದೇ ಓದಿಗೆ ಓದುವುದೇ ಅಸಾಧ್ಯ ಎನಿಸುವಷ್ಟು. ‘ಕರುಳು ಕತ್ತರಿಸುವ’ ಎನ್ನುವ ವಿಶೇಷಣ ಈ ಕಾದಂಬರಿಯ ಮಟ್ಟಿಗೆ ಅಕ್ಷರಶಃ ನಿಜವಾಗಿ ಬಿಡುತ್ತದೆ.ಏಡ್ಸ್ ಕಾಯಿಲೆ – ಹೆಣ್ಣು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸಂದರ್ಭಗಳ ಸುತ್ತ ಈ ಕಾದಂಬರಿಯಿದೆ. ಕಾದಂಬರಿಯ ಆರಂಭವೇ ನಮ್ಮನ್ನು ತನ್ಮಯತೆಗಿಂತ ಜಾಗೃತ ಸ್ಥಿತಿಯಲ್ಲಿ ಎದುರಾಗಬೇಕೆನ್ನುವ ಮನಸ್ಥಿತಿಯನ್ನು ಮೂಡಿಸುತ್ತದೆ.

ಇಲ್ಲಿ ಎಲ್ಲಾದರೂ ನನ್ನ

ವಿವೇಕ ಬುದ್ಧಿ ಹಾಜರಿದ್ದರೆ

ದಯವಿಟ್ಟು ಮೈಕ್

ಬಳಿ ಬರಬೇಕು

ಎನ್ನುವ ಅವಧೂತ ಕವಿ ಪರಳಕರ್ ಅವರ ಸಾಲು ಇಡೀ ಕಾದಂಬರಿಯ ಪರಿಪ್ರೇಕ್ಷ್ಯದಂತೆ ಕೆಲಸ ಮಾಡುತ್ತದೆ. ಕಾದಂಬರಿಯುದ್ದಕ್ಕೂ ಬುದ್ಧಿ ಮತ್ತು ವಿವೇಕಗಳು ಹಾಗೂ ವಾಸ್ತವದೊಂದಿಗೆ ಹೆಣ್ಣು ನಡೆಸುವ ಸಂಘರ್ಷವೇ ಹರಿದಿದೆ. ಮುಂಬೈಯಂಥ ನಗರಿಯಲ್ಲಿ ಹೆಣ್ಣುಮಕ್ಕಳ ಬದುಕಿನ ವಿವರಗಳು ನಮ್ಮನ್ನು ಆವರಿಸುತ್ತವೆ. ಅದನ್ನೊಂದು ಬದುಕು ಎಂದು ಕರೆಯಲು ಸಾಧ್ಯವೇ ಎಂದು ದಿಗಿಲು ಹುಟ್ಟಿಸುವಷ್ಟು ಅದು ಕೆಲಸ, ಕೆಲಸ, ಕೆಲಸ ಮತ್ತು ಕೆಲಸಗಳಲ್ಲಿ ಮುಳುಗಿಹೋಗಿದೆ. ಅಗಸರ ಕತ್ತೆಗಳಲ್ಲದೆ ಇನ್ನೇನೂ ನಮ್ಮ ನೆನಪಿಗೆ ಬರುವುದಿಲ್ಲ.

ಜೀತವಾದರೂ ಇದಕ್ಕಿಂಥ ವಾಸಿ ಎನಿಸುವಂಥ ಧಾವಂತ, ಜವಾಬ್ದಾರಿಗಳ ಬದುಕು. ಇಂಥ ಸನ್ನಿವೇಶದಲ್ಲಿ ತನಗೆ ಏಡ್ಸ್ ಇರಬಹುದೇ ಎಂದು ಆತಂಕಪಡುವ ಹೆಣ್ಣು, ಏಡ್ಸ್ ಚಿಕಿತ್ಸೆಗೆ ಒಳಗಾಗುವ ದೃಶ್ಯವಂತೂ ನಮ್ಮನ್ನು ಈ ತನಕ ನಾವು ಊಹಿಸಿಕೊಂಡಿರಲಾರದ ಲೋಕದ ದರ್ಶನ ಮಾಡಿಸುತ್ತದೆ.

ಇವಳನ್ನು ತಪಾಸಣೆಗೆ ಒಳಗು ಮಾಡುವ ವೈದ್ಯೆ ಕೇಳುವ ಪ್ರಶ್ನೆಗಳು ಆ ಹೆಣ್ಣಿನ ಮನಸ್ಸಿನಲ್ಲಿ ಉತ್ಪಾತಗಳನ್ನೇ ಸೃಷ್ಟಿಸುತ್ತವೆ. ಆದರೆ ಆಕೆಗೋ ಇದು ಆವತ್ತಿನ ನೂರಾರು ಕೇಸುಗಳಲ್ಲಿ ಒಂದು. ‘ರಿಪೋರ್ಟ್ ನೆಗೆಟಿವ್ ಆಗಲಿ ದೇವರೆ’ ಎನ್ನುವ ಅವಳ ಪ್ರಾರ್ಥನೆ ಫಲಿಸದೇ ಅವಳು ಏಡ್ಸ್ ರೋಗಿ ಎನ್ನುವುದು ಖಚಿತವಾದದ್ದೇ ಅವಳ ಬದುಕು ಸಂಪೂರ್ಣವಾಗಿ ತಲೆಕೆಳಗಾಗುತ್ತದೆ.ತನ್ನದಲ್ಲದ ತಪ್ಪಿಗೆ ಏಡ್ಸ್‌ಗೆ ತುತ್ತಾಗುವ ಆ ಮಹಿಳೆಯ ಸಂಸಾರದ ಕಥೆ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅವಳ ಗಂಡನ ಕಚ್ಚೆಹರುಕತನ, ಅದಕ್ಕಾಗಿ ಈ ಹೆಣ್ಣು, ಇವಳ ಮಕ್ಕಳು ನಿರಂತರವಾಗಿ ಅನುಭವಿಸಿದ ನರಕ... ಇವುಗಳೊಂದಿಗೇ ಏಡ್ಸ್ ಕಾರ್ಯಕರ್ತೆಯರು, ಅವರ ಬದುಕು, ಅದರ ಸುಖ–ದುಃಖಗಳಲ್ಲಿ ಕಾದಂಬರಿ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಕೆಳ ಮಧ್ಯಮ ಮತ್ತು ಕೆಳ ವರ್ಗಗಳ ಹೆಣ್ಣುಗಳ ಬದುಕೇ ಅನೇಕ ಬಾರಿ ಏಡ್ಸ್‌ನಂತೆ ಔಷಧಿಯೇ ಇಲ್ಲದ ಕಾಯಿಲೆ ಅಲ್ಲವೇ ಎನ್ನುವ ವಿಷಣ್ಣತೆ ಓದುಗರಲ್ಲಿ ಮೂಡುತ್ತಾ ಹೋಗುತ್ತಾ ಹೋಗುತ್ತದೆ.ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಲೇ ಹೆಣ್ಣುಮಕ್ಕಳು ತಮ್ಮ ಬದುಕು ಮತ್ತು ವ್ಯಕ್ತಿತ್ವಗಳೊಂದಿಗೆ ಒಂದು ಸ್ವಗತವನ್ನೂ ನಡೆಸುತ್ತಾ ಹೋಗುತ್ತಾರೆ. ಆ ಸ್ವಗತವು ನಿಧಾನವಾಗಿ ಲೋಕದೊಂದಿಗಿನ ಸಂವಾದವಾಗಿ ಬೆಳೆಯುತ್ತಾ ಹೋಗುವುದು ಈ ಕಾದಂಬರಿಯ ಬಹುಮುಖ್ಯ ಕೇಂದ್ರಗಳಲ್ಲೊಂದು.

ಈ ಇಡೀ ಪ್ರಕ್ರಿಯೆಯಲ್ಲಿ ಗಂಡಿನ ಪಾತ್ರ ಕ್ವಚಿತ್ತಾದದ್ದು. ಕೊನೆಗಾದರೂ ‘ಹೆಣ್ಣಿಗೆ ಹೆಣ್ಣೆ’ ಎನ್ನುವ ಅಂತಃಕರಣದ ಪ್ರಭಾವಳಿಯೊಂದು ಈ ಎಲ್ಲ ಹೆಣ್ಣುಮಕ್ಕಳನ್ನೂ ಬೆಸೆಯುತ್ತಾ ಹೋಗುತ್ತದೆ. ತಮ್ಮ ನೂರು ಜಗಳಗಳು, ಅಸೂಯೆ, ಕ್ಷುದ್ರತನಗಳು ಈ ಯಾವುದನ್ನೂ ಮುಚ್ಚಿಡದೆ, ಗೆಲ್ಲಲೂ ಆಗದೆ ಆದರೆ ಇವುಗಳ ಜೊತೆಯಲ್ಲೇ ಜೀವಜೀವಗಳ ಮಾನವ ಬಾಂಧವ್ಯದಲ್ಲಿ ಇವರು ತಮಗರಿವಿಲ್ಲದಂತೆಯೇ ಒಂದಾಗುತ್ತಾ ಹೋಗುತ್ತಾರೆ.

ಒಂದು ಘಟ್ಟದಲ್ಲಿ ಯಾರು ರೋಗಿ, ಯಾರು ಸ್ವಯಂಸೇವಕರು – ಎನ್ನುವ ಭೇದವೇ ಅಳಿಸಿಹೋದಂತೆ ಅವರು ಒಂದು ಕುಟುಂಬದ ಸದಸ್ಯರಂತೆ ಕಾಣಿಸುತ್ತಾ ಹೋಗುತ್ತಾರೆ.ಸಾಮಾಜಿಕವಾಗಿ ಒಂದು ಕಾಲದಲ್ಲಿ ಕುಷ್ಠ ರೋಗಕ್ಕಿದ್ದ ಕಳಂಕವೇ ಇಂದು ಏಡ್ಸ್‌ ಕಾಯಿಲೆಗಿದೆ. ಆದರೆ, ಇದಕ್ಕೊಳಗಾಗುವ ಹೆಣ್ಣುಗಳ ಸ್ಥಿತಿ ಮಾತ್ರ ಈ ತನಕ ಲೋಕ ಕಂಡರಿಯದ್ದು. ಒಂದು ನೋಟ, ಒಂದು ಮಾತಿನಲ್ಲಿ ಈ ರೋಗಿಗಳ ಆತ್ಮವಿಶ್ವಾಸ, ಬದುಕುವ ಹಕ್ಕು, ಜೀವನ ಪ್ರೀತಿ ಈ ಎಲ್ಲವನ್ನೂ ನಾಶ ಮಾಡಿಬಿಡಬಲ್ಲ ಸಾಮಾಜಿಕ ಸಂದರ್ಭಗಳನ್ನು ಈ ಕಾದಂಬರಿ ಅದರ ಸೂಕ್ಷ್ಮಾತಿಸೂಕ್ಷ್ಮ ವಿವರಗಳಲ್ಲಿ ಮಾಡಿಸುತ್ತದೆ.

ತಮ್ಮ ತಪ್ಪೇ ಇಲ್ಲದೆ ಈ ಕಾಯಿಲೆಗೆ ತುತ್ತಾದವರಿಗೂ ಆತ್ಮದ್ವೇಷ ಹುಟ್ಟಿಸಿಬಿಡಬಲ್ಲಷ್ಟು ಕ್ರೂರವಾದ ಈ ಸಂದರ್ಭಗಳನ್ನು, ದೃಷ್ಟಿಕೋನಗಳನ್ನು ‘ಭಿನ್ನ’ ಕಾದಂಬರಿ ಓದುಗರು ಬೆಚ್ಚಿಬೀಳುವ ಪರಿಯಲ್ಲಿ ತೋರಿಸುತ್ತಾ ಹೋಗುತ್ತದೆ. ನಮಗರಿವಿಲ್ಲದೆಯೇ ‘ಕುಷ್ಠರೋಗಿಗಳ ಸೇವೆ ದೇವರ ಸೇವೆಗಿಂತ ದೊಡ್ಡದು’ ಎನ್ನುವ ಗಾಂಧಿಯ ಮಾತುಗಳು ನೆನಪಾಗುತ್ತವೆ.ಅನುವಾದವಂತೂ, ಯಾವ ಸಂದೇಹವೂ ಇಲ್ಲದೆ ಕನ್ನಡದ ಅತ್ಯುತ್ತಮ ಅನುವಾದಗಳಲ್ಲಿ ಒಂದು ಎನಿಸುವಷ್ಟು ಪರಿಣಾಮಕಾರಿಯಾಗಿದೆ, ಸಹಜವಾಗಿದೆ. ಸ್ವತಃ ವೀಣಾ ಅತ್ಯಂತ ಸೂಕ್ಷ್ಮ ಸಂವೇದನೆಯ ಲೇಖಕಿಯಾಗಿರುವುದರಿಂದ ಪರಕಾಯ ಪ್ರವೇಶ ಮಾಡಿ ಇದರ ಅನುವಾದ ಮಾಡಿದ್ದಾರೆ. ಅಂದಹಾಗೆ, ಸ್ತ್ರೀಸಂಕಥನಕ್ಕೆ ಆದಿ ಅಂತ್ಯ ಎನ್ನುವುದಿಲ್ಲವಷ್ಟೇ. ಅದರ ನೂರಾರು ಮಜಲುಗಳು ಮತ್ತು ಮಗ್ಗಲುಗಳ ನಿರೂಪಣೆಯೇ ಸ್ತ್ರೀಸಂಕಥನ ಎನ್ನುವುದಾದರೆ ಈ ಅನುವಾದ ಅದರ ಒಂದು ಭಾಗ.‘ಭಿನ್ನ’ ಕಾದಂಬರಿ ಸ್ತ್ರೀಸಂಕಥನವನ್ನು ಮಾನವ ಸಂಕಥನದ ನೆಲೆಯಲ್ಲಿ ಮಂಡಿಸುವುದರಲ್ಲಿ ಯಶಸ್ವಿಯಾಗಿದೆ. ಇವನು, ಇವಳು ಏಡ್ಸ್ ರೋಗಿ ಎಂದು ಬೆರಳು ಮಾಡಿ ತೋರಿಸುತ್ತಿರುವಾಗ ಮಿಕ್ಕ ನಾಲ್ಕು ಬೆರಳುಗಳು ನಿನ್ನ ಪಾತ್ರ, ನಿನ್ನ ಜವಾಬ್ದಾರಿ, ನಿನ್ನ ಕರ್ತವ್ಯ ಏನು ಎನ್ನುವುದನ್ನೂ ಈ ಕಾದಂಬರಿ ಸ್ಪಷ್ಟವಾಗಿ ತೋರಿಸುತ್ತದೆ.ಕಾದಂಬರಿಯ ಕೊನೆಯಲ್ಲಿ ಏಡ್ಸ್ ಸಂತ್ರಸ್ತರಿಗಾಗಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ವಿಳಾಸವನ್ನು ಕೊಟ್ಟಿರುವುದು ಈ ಕಾದಂಬರಿಯ ಆಶಯ ಮತ್ತು ಗುರಿಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.