ಬುಧವಾರ, ಮಾರ್ಚ್ 3, 2021
25 °C

ಬ್ಯಾಡಗಿ ಬಂದ್‌ ಸಂಪೂರ್ಣ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ ಬಂದ್‌ ಸಂಪೂರ್ಣ ಯಶಸ್ವಿ

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಗಜೇಂದ್ರಗಡ-–ಸೊರಬ ರಾಜ್ಯ ಹೆದ್ದಾರಿಯ ವಿಸ್ತರಣೆಗೆ ಆಗ್ರಹಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೋಮವಾರ ನಡೆಸಿದ ‘ಬ್ಯಾಡಗಿ ಬಂದ್‌’ ಸಂಪೂರ್ಣ ಯಶಸ್ವಿಯಾಯಿತು.ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚಿದ್ದು ಸರ್ಕಾರಿ ಬಸ್‌ ಹಾಗೂ ಆಟೋ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹೋಟೆಲ್‌ ಹಾಗೂ ದಿನಸಿ ಅಂಗಡಿಗಳು ಮುಚ್ಚಿದ್ದರಿಂದ ದೂರದ ಪ್ರಯಾಣಿಕರು ತುಂಬಾ ಪ್ರಯಾಸ ಪಡಬೇಕಾಯಿತು.ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನೆಹರೂ ವೃತ್ತ, ಮುಖ್ಯ ರಸ್ತೆಯ ಮೂಲಕ ಹಾಯ್ದು ತಹಶೀಲ್ದಾರ್‌ ಕಾರ್ಯಾಲಯದ ಆವರಣ ತಲುಪಿತು. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ ಅವರನ್ನು ಅಮಾನತುಗೊಳಿಸಬೇಕು ಹಾಗೂ 2ನೇ ಹಂತದ ವಿಸ್ತರಣಾ ಕಾಮಗಾರಿಯನ್ನು ಕೆಸಿಸಿ ಬ್ಯಾಂಕ್‌ನಿಂದ ಆರಂಭವಾಗಬೇಕೆಂದು ಘೋಷಣೆ ಕೂಗಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮಧ್ಯಸ್ಥಿಕೆ ವಹಿಸಿ ಮುಖ್ಯ ರಸ್ತೆ ವಿಸ್ತರಣಾ ಕಾರ್ಯವನ್ನು ಬೇಗ ಆರಂಭಿಸುವಂತೆ ಆಗ್ರಹಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಮುಖ್ಯ ರಸ್ತೆ ವಿಸ್ತರಣೆಗೆ ಆಗ್ರಹಿಸಿದರು. ರಾಜ್ಯ ಹೆದ್ದಾರಿ 2ನೇ ಹಂತದ ಕಾಮಗಾರಿ ಕೆಸಿಸಿ ಬ್ಯಾಂಕ್‌ನಿಂದ ಆರಂಭವಾಗಬೇಕು ಎಂದು ಒತ್ತಾಯಿಸಿದರು. ಮುಖ್ಯ ರಸ್ತೆ ವಿಸ್ತರಣೆಯಾಗುವವರೆಗೆ ಹೋರಾಟ ನಿಲ್ಲುವುದಿಲ್ಲವೆಂದು ಅಧಿಕಾರಿಗಳನ್ನು ಎಚ್ಚರಿಸಿದರು.ಪಟ್ಟಣದ ಮುಖ್ಯರಸ್ತೆಯನ್ನು ಹೆದ್ದಾರಿ ನಿಯಮದಂತೆಯೇ ವಿಸ್ತರಣೆಯಾಗಬೇಕು. ವಿಳಂಬ ಧೋರಣೆ ಅನುಸರಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು  ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಹೇಳಿದರು.

ಮುಖಂಡರಾದ ಎಂ.ಬಿ.ಹಲಗೇರಿ, ಬಸವರಾಜ ಸಂಕಣ್ಣನವರ, ಮಹೇಶ ಉಜನಿ, ಚಿಕ್ಕಪ್ಪ ಛತ್ರದ, ಚಂದ್ರು ಛತ್ರದ, ಎಸ್‌.ಎನ್‌.ಚನ್ನಗೌಡ್ರ, ರವಿ ಪೂಜಾರ, ಈರಣ್ಣ ಬಣಕಾರ, ವೀರೇಶ ಮತ್ತಿಹಳ್ಳಿ, ಬಾಬು ಬಡಿಗೇರ, ಅಜೀಜ ಬಿಜಾಪುರ, ಮಂಜುನಾಥ ಪೂಜಾರ, ಪಾಂಡುರಂಗ ಸುತಾರ, ಸಂಜೀವ ಮಡಿವಾಳರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.