ಗುರುವಾರ , ಮೇ 19, 2022
25 °C

ಮಕ್ಕಳೇ, ನೀವು ಲೇಖಕರಾಗಬೇಕೇ?

-ಪೂರ್ಣಿಮಾ ಆಗುಂಬೆ Updated:

ಅಕ್ಷರ ಗಾತ್ರ : | |

ಬರವಣಿಗೆ ಒಂದು ಕಲೆ. ಸಮಾಜಕ್ಕೆ ಸಹಕಾರಿ ಆಗುವಂತಹ ಸಂಗತಿಗಳನ್ನು ಪ್ರಬಲ ಮಾಧ್ಯಮವಾದ ಪತ್ರಿಕೆ ಅಥವಾ ನಿಯತಕಾಲಿಕಗಳ ಮೂಲಕ ಸಹೃದಯರಿಗೆ ತಲುಪಿಸಿದಾಗ ಸಿಗುವ ತೃಪ್ತಿ ಅವರ್ಣನೀಯ, ಅವಿಸ್ಮರಣೀಯ.

ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ ಕುಂಠಿತ ಆಗಿರುವುದಕ್ಕೆ ಅನೇಕ ಕಾರಣಗಳಿವೆ. ಆದರೂ `ಲೇಖನ' ಬರೆಯುವುದು ಹವ್ಯಾಸವಾಗಿ ಮಾರ್ಪಟ್ಟರೆ ಭವಿಷ್ಯದಲ್ಲಿ ಅವರಿಗೆ ಬಹಳ ಉಪಯೋಗವಿದೆ.ಪ್ರತಿ ಮಗುವಿನಲ್ಲೂ `ಪ್ರತಿಭೆ' ಮನೆ ಮಾಡಿರುತ್ತದೆ. ಪಟ್ಟಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಶಿಕ್ಷಿತ ಕುಟುಂಬ ವರ್ಗ ಹೆಚ್ಚಾಗಿರುವುದರಿಂದ ಅವರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಾರೆ. ಆದರೆ ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ, ಆಸಕ್ತಿ, ಆಕಾಂಕ್ಷೆಗಳಿದ್ದರೂ ಅದನ್ನು ಗುರುತಿಸುವವರಿಲ್ಲದೇ ಎಲೆಮರೆಯ ಕಾಯಿಯಂತೆ ಮರೆಯಾಗಿರುತ್ತಾರೆ.ಪತ್ರಿಕೆಗಳಲ್ಲಿ ಪ್ರಕಟವಾದ ಉಪಯುಕ್ತ ಲೇಖನಗಳನ್ನು ಓದಿದಾಗ ತಾನೂ ಈ ರೀತಿಯ ವೈಜ್ಞಾನಿಕ, ವೈಚಾರಿಕ ಲೇಖನಗಳನ್ನು ಬರೆಯಬೇಕೆಂಬ ಹಂಬಲ ಅವರಲ್ಲಿ ಹುಟ್ಟುವುದು ಸಹಜ. ನಿಖರವಾದ ಮಾಹಿತಿ ಅವರಿಗೆ ಲಭ್ಯವಾದಲ್ಲಿ ಮುಂದೆ ಗ್ರಾಮೀಣ ಪ್ರದೇಶಗಳಿಂದಲೂ ಅತ್ಯುತ್ತಮ ಲೇಖಕರು, ಅಂಕಣಕಾರರು, ವಿಮರ್ಶಕರು ನಮ್ಮ ಸಮಾಜಕ್ಕೆ ಸಿಗಬಹುದು ಎಂಬುದು ಶುದ್ಧ ಮನಸ್ಸಿಗರ ಅಭಿಲಾಷೆ.

ಹೀಗೆ ಲೇಖನ ಬರೆಯಲು ಆಸಕ್ತಿ ಇರುವವರು ಅನುಸರಿಸಬೇಕಾದ ಸರಳ ಮಾರ್ಗಗಳು ಇಲ್ಲಿವೆ:ವಿಷಯದ ಆಯ್ಕೆ

ಮೊದಲನೆಯದಾಗಿ, ಸಮಾಜಕ್ಕೆ ಸದುಪಯೋಗ ಆಗುವಂತಹ, ಸಂದೇಶ ನೀಡುವಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗುರು ಹಿರಿಯರಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ. ನಿಮ್ಮ ಆಯ್ಕೆಯ ವಿಷಯ ಜಾಳಾಗಿರದೆ ಯಾವಾಗಲೂ ಗಟ್ಟಿಯಾಗಿರಲಿ.ಭಾಷೆ

ಭಾಷೆಯ ಮೇಲೆ ಸಂಪೂರ್ಣ ಹಿಡಿತ ಇರಲಿ. ಗುಣಮಟ್ಟ ಅತ್ಯುತ್ತಮ ಆಗಿರಲಿ. ಮೌಲ್ಯಾಧಾರಿತ ಶಬ್ದಗಳನ್ನು ಬಳಸಿ ವಾಕ್ಯ ರಚಿಸಿ. ಶಬ್ದಗಳಿಗೆ ಅರ್ಥ ಬೇಕಾದರೆ ನಿಘಂಟಿನ ಸಹಾಯ ಪಡೆಯಿರಿ. ಲೇಖನ ಯಾವಾಗಲೂ ಸ್ವಾರಸ್ಯಕರ ಆಗಿರಬೇಕು. ಅನಗತ್ಯ ವಾಕ್ಯಗಳನ್ನು ಬಳಸಿ ನೀರಸಗೊಳಿಸಬೇಡಿ. ಬೇರೆ ಭಾಷೆಯ ಲೇಖನವನ್ನು ಅನುವಾದ ಮಾಡಲು ಇಚ್ಛಿಸಿದರೆ, ಮೂಲ ಲೇಖಕರ ಅನುಮತಿ ಪಡೆಯಬೇಕಾದುದು ಬಹಳ ಮುಖ್ಯ. ಅನುಮತಿ ಪಡೆಯದೇ ಅನುವಾದ ಮಾಡುವುದು ತಪ್ಪು.ನಿಯಮ

ನಮ್ಮ ಬದುಕಿಗೊಂದು ನಿಯಮ ಹೇಗಿರುತ್ತದೋ ಹಾಗೆಯೇ ಲೇಖನ ಬರೆಯುವಾಗಲೂ ಕೆಲವು ನಿಯಮಗಳನ್ನು ಅನುಸರಿಸಲೇ ಬೇಕಾಗುತ್ತದೆ. ಲೇಖನ ಬರೆಯುವ ಮೊದಲು ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಳ್ಳಿ.

1. ವಿಷಯದ ಬಗ್ಗೆ ಪೀಠಿಕೆ: ಐದಾರು ವಾಕ್ಯಗಳಲ್ಲಿ ಪೀಠಿಕೆ ನೀಡಿ `ಪ್ಯಾರಾ'ಗಳ ಮೂಲಕ ಮುಂದಿನ ವಿವರ ನೀಡುತ್ತಾ ಹೋಗಿ.

2. ವಿಷಯದ ವಿವರಣೆ: ಮುಖ್ಯವಾಗಿ ಲೇಖನದ ಪ್ರಯೋಜನವೇನು ಎಂದು ವಿವರಿಸುತ್ತಾ ಉಳಿದವುಗಳನ್ನು ಪ್ರಸ್ತಾಪಿಸಿ. ಮಧ್ಯದಲ್ಲಿ ಉತ್ತಮ ವಾಕ್ಯಗಳನ್ನು `ಕೋಟ್' ಮಾಡಿ. ಅಗತ್ಯ ಇದ್ದರೆ ಚಿತ್ರ ಬಳಸಿ.

3. ನಿಮ್ಮ ಅನಿಸಿಕೆ, ಆಕಾಂಕ್ಷೆ, ತೀರ್ಮಾನ ಕೇವಲ ಮೂರ್ನಾಲ್ಕು ವಾಕ್ಯಗಳಲ್ಲಿ ಇರುವಂತೆ ಸಂಕ್ಷಿಪ್ತಗೊಳಿಸಿ.

4. ಮೊದಲ ಪ್ರತಿ ಓದಿ, ತಿದ್ದುಪಡಿ ಬೇಕಿದ್ದರೆ ಮಾಡಿ. ಪುಟದ ಒಂದೇ ಬದಿಯಲ್ಲಿ ಸ್ಪಷ್ಟವಾಗಿ, ಸುಂದರವಾಗಿ ತಪ್ಪಿಲ್ಲದೇ `ಮೂಲ ಪ್ರತಿ' ಸಿದ್ಧಪಡಿಸಿ ಸೂಕ್ತವಾದ ಒಂದು `ಶೀರ್ಷಿಕೆ'ಯನ್ನು ನೀವೇ ನೀಡಿ.ಸ್ಫೂರ್ತಿ

ಒಂದು ಪಾತ್ರ, ವ್ಯಕ್ತಿ, ಸಾಹಿತ್ಯ ಅಥವಾ ಪ್ರಕೃತಿಯನ್ನೇ `ಸ್ಫೂರ್ತಿ'ಯಾಗಿ ಮನದಲ್ಲಿ ಸ್ಥಾಪಿಸಿಕೊಳ್ಳಿ. ಈ ಸ್ಫೂರ್ತಿಯ ಚಿಲುಮೆಗಳು ನಿಮ್ಮ ಮನಸ್ಸಿನೊಡನೆ ಮಾತನಾಡುತ್ತಾ ಮೆದುಳಿಗೆ ಸಂದೇಶ ನೀಡಿ ನಿಮ್ಮ ಬರವಣಿಗೆಗೆ ಸಹಕರಿಸುತ್ತವೆ.ಮುದ್ರಣಾಲಯದೆಡೆಗೆ

ಹೀಗೆ ಅಚ್ಚುಕಟ್ಟಾಗಿ ಲೇಖನವನ್ನು ಸಿದ್ಧಪಡಿಸಿಕೊಂಡ ನಂತರ ಅದನ್ನು ಯಾವ ಪತ್ರಿಕೆಗೆ, ಯಾವ ವಿಭಾಗಕ್ಕೆ ಕಳುಹಿಸಬೇಕೆಂದು ಸರಿಯಾಗಿ ತೀರ್ಮಾನಿಸಿಕೊಳ್ಳಿ. ಪ್ರತಿ ಪತ್ರಿಕೆಯ ಕೊನೆಯ ಪುಟದ ಕೆಳಭಾಗದಲ್ಲಿ ಅದರ ಸಂಪೂರ್ಣ ವಿಳಾಸ ಪ್ರಕಟವಾಗಿರುತ್ತದೆ. ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಸಹ ಸಂಪೂರ್ಣ ವಿಳಾಸವಿದ್ದು `ಪರಿವಿಡಿ'ಯಲ್ಲಿ ವಿಭಾಗಗಳ ಪರಿಚಯ ಇರುತ್ತದೆ. ನೀವು ಬರೆದ ಲೇಖನ ಯಾವ ವಿಭಾಗಕ್ಕೆ ಹೆಚ್ಚು ಸೂಕ್ತ ಎಂದು ನಿರ್ಧರಿಸಿ, ಲೇಖನದ ಮೊದಲ ಪುಟದಲ್ಲಿ ಸಂಪಾದಕರಿಗೆ ಒಂದು ಪತ್ರ ಬರೆಯಿರಿ.ನಿಮ್ಮ ಪತ್ರ ಈ ರೀತಿ ಇರಲಿ

ಗೌರವಾನ್ವಿತ ಸಂಪಾದಕರಿಗೆ,

ಮಾನ್ಯರೆ,

ನಾನು ನಿಮ್ಮ ಪತ್ರಿಕೆಯ ಈ ವಿಭಾಗಕ್ಕೆ ........ ನನ್ನ ಲೇಖನ ಕಳುಹಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ. ಪ್ರಕಟಿಸಲು ಯೋಗ್ಯವಿದ್ದಲ್ಲಿ ಪ್ರಕಟಿಸಿ. ಸಾಧ್ಯವಾಗದೇ ಇದ್ದಲ್ಲಿ ನಾನು ಅಂಚೆ ಚೀಟಿ ಇಟ್ಟು ಕಳುಹಿಸಿದ ಸ್ವವಿಳಾಸದ ಅಂಚೆ ಲಕೋಟೆಯಲ್ಲಿಟ್ಟು ದಯವಿಟ್ಟು ಹಿಂದಿರುಗಿಸಿ (ಪ್ರಕಟವಾಗದೇ ವಾಪಸ್ ಬಂದ ಲೇಖನವನ್ನು ಬೇರೆ ಪತ್ರಿಕೆಗೆ ಕಳುಹಿಸಬಹುದು)

ನಿಮ್ಮ ಪ್ರೀತಿ, ವಿಶ್ವಾಸ, ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ.

     ವಂದನೆಗಳೊಂದಿಗೆ,

ಇಂತಿ, ತಮ್ಮ ಅಭಿಮಾನಿ

ಹೀಗೆ ಬರೆದು ನಿಮ್ಮ ಸಹಿ ಹಾಕಿ. ಎಡಭಾಗದಲ್ಲಿ ನಿಮ್ಮ ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಸ್ಥಳ ಮತ್ತು ದಿನಾಂಕ ಬರೆದು ಸರಿಯಾದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಿ. ನಿಮ್ಮ ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಇದ್ದಲ್ಲಿ, ಗುರುಗಳ ಮಾರ್ಗದರ್ಶನ ಪಡೆದು ಇ-ಮೇಲ್ ಕೂಡಾ ಮಾಡಬಹುದು.ಹೀಗೆ ಸಿದ್ಧವಾದ ಲೇಖನ ಸಂಪಾದಕರ ಕೈ ಸೇರಿ ಅದು ಉಪಯುಕ್ತ ಮಾಹಿತಿ ನೀಡುವಂತಹ ಲೇಖನವೆಂದು ಅವರು ತೀರ್ಮಾನಿಸಿದರೆ  ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಆದರೆ ಅವರಿಗೂ ಕೆಲವು ತಿಂಗಳ ಕಾಲಾವಕಾಶ ನೀಡಬೇಕಾಗುತ್ತದೆ. ಪ್ರಕಟವಾದುದಕ್ಕೆ ಸಂಭಾವನೆಯನ್ನೂ ನೀಡುತ್ತಾರೆ.ಜಾಣ ಮಕ್ಕಳೇ... ಇನ್ನೇಕೆ ತಡ? ಬರೆಯಲು ಶುರು ಮಾಡಿ. ಓದುಗ ವೃಂದವನ್ನು ಸೃಷ್ಟಿಸಿಕೊಂಡು ನಮ್ಮ ರಾಜ್ಯ, ದೇಶವೇ ಹೆಮ್ಮೆ ಪಡುವಂತಹ ಬರಹಗಾರರಾಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.